Connect with us

ಚುನಾವಣೆ

ಶ್ರೀರಾಮನ ನೆಲೆವೀಡು ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಇಲ್ಲಿವೆ ಕಾರಣಗಳು!

Published

on

ಉತ್ತರ ಪ್ರದೇಶ : 2024ರ ಲೋಕಸಭಾ ಚುನಾವಣೆಯಲ್ಲಿ ಹಲವೆಡೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಈ ಪೈಕಿ ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿ ಗೆಲ್ಲಲೇಬೇಕಿದ್ದ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಈ ಮೂಲಕ ಬಿಜೆಪಿಗೆ ಹಿನ್ನಡೆಯಾಗಿದೆ.

ರಾಮನಗರಿ ಅಯೋಧ್ಯೆಯಿಂದ ಬಿಜೆಪಿ ಸೋಲು ಕಂಡಿದ್ದೇಕೆ ಎಂಬುದು ಈಗ ಎಲ್ಲೆಡೆ ಚರ್ಚೆಯ ವಿಷಯ. ಬಿಜೆಪಿಯ ಈ ಸೋಲಿಗೆ ಹಲವು ವಿಚಾರಗಳನ್ನು ಪಟ್ಟಿ ಮಾಡಲಾಗುತ್ತಿದೆ. ಈ ಪೈಕಿ ಒಬಿಸಿ, ದಲಿತರು, ಮುಸ್ಲಿಮರ ಒಳಏಟು ಪ್ರಮುಖವು.

ಲೋಕಸಭೆಯ ಒಟ್ಟು 543 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಅಂದರೆ 80 ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಿಂದ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಸುಲಭ. ಹಾಗಾಗಿ ರಾಜಕೀಯ ಪಕ್ಷಗಳು ಉತ್ತರ ಪ್ರದೇಶದಿಂದ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಪ್ರಯತ್ನ ನಡೆಸುತ್ತಿರುತ್ತವೆ. ಅದರ ಭಾಗವಾಗಿ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳ ಪೈಕಿ ಕ್ರಮವಾಗಿ 71 ಮತ್ತು 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರ ಪರಿಣಾಮ, ಅಂದುಕೊಂಡಂತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೇರಿತ್ತು.

ಆದರೆ, ಪ್ರಸ್ತುತ ಚುನಾವಣೆಯಲ್ಲಿ ಶ್ರೀರಾಮನ ನೆಲೆವೀಡು ಅಯೋಧ್ಯೆ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಘಾತಕಾರಿ ಸೋಲಾಗಿದೆ. ರಾಮ ಮಂದಿರ ನಿರ್ಮಾಣವಾದ ಕೇವಲ ನಾಲ್ಕು ತಿಂಗಳಲ್ಲೇ ಈ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ 54,567 ಮತಗಳಿಂದ ಸೋಲಿಸಿದ್ದಾರೆ. ಅವಧೇಶ್ 554,289 ಮತಗಳನ್ನು ಪಡೆದರೆ ಲಲ್ಲು 4,99,722 ಮತಗಳನ್ನು ಪಡೆದರು. ಲಲ್ಲು ಸಿಂಗ್ 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಈ ಕ್ಷೇತ್ರ ಗೆದ್ದಿದ್ದರು.

ಆದರೆ, ಈ ಬಾರಿ ಬಿಜೆಪಿ ಅತಿಯಾದ ಆತ್ಮವಿಶ್ವಾಸ, ಬೇಡದ ಹೇಳಿಕೆಗಳು ಹಾಗು ಅಭಿವೃದ್ಧಿ ಹೆಸರಲ್ಲಿ ಮಾಡಿದ ಯಡವಟ್ಟುಗಳು ಸೋಲಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದಷ್ಟೇ ಅಲ್ಲದೇ, ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಯೋಧ್ಯೆ ಅತೀ ಹೆಚ್ಚು ಒಬಿಸಿ ಮತದಾರರನ್ನು ಹೊಂದಿದೆ. ಯಾದವರು, ದಲಿತ ಮತ್ತು ಮುಸ್ಲಿಂ ಸಮುದಾಯ ಇಲ್ಲಿ ನಿರ್ಣಾಯಕ. ದಲಿತರ ಪೈಕಿ ಪಾಸಿ ಸಮುದಾಯ ಗರಿಷ್ಠ ಮತದಾರರನ್ನು ಹೊಂದಿದೆ. ಗೆದ್ದ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯದಿಂದ ಬಂದವರು. ಈ ಸಮುದಾಯಗಳು ತಮ್ಮನ್ನು ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರದಿಂದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಆಪ್ತ ಅವಧೇಶ್ ಪ್ರಸಾದ್ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಫೈಜಾಬಾದ್ ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಒಂಭತ್ತು ಕ್ಷೇತ್ರಗಳಲ್ಲೂ ಅಖಿಲೇಶ್ ಯಾದವ್ ಆಪ್ತರೇ ಸ್ಪರ್ಧಿಸಿದ್ದು ಅವರಿಗೆ ಇನ್ನೂ ವರದಾನವಾಗಿದೆ. ಈ ಪೈಕಿ ನಾಲ್ವರು ಮುಸ್ಲಿಮ್ ಮತ್ತು ಐದು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಯಾದವೇತರ ಮತದಾರರನ್ನು ಗೆಲ್ಲಲು ಅಮಿತ್ ಶಾ ಹಾಕಿಕೊಂಡ ಯೋಜನೆ ಕೈ ಹಿಡಿಯದೇ ಇರುವುದು ಮತ್ತು ಅತಿಯಾದ ಆತ್ಮವಿಶ್ವಾಸ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೀಸಲಾತಿರಹಿತ ಸ್ಥಾನದಲ್ಲಿ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಸಮಾಜವಾದಿ ಪಕ್ಷದ ನಿರ್ಧಾರ ಕೆಲಸ ಮಾಡಿದೆ ಎನ್ನುತ್ತಾರೆ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಅಸೋಸಿಯೇಟ್ ಪ್ರೊಫೆಸರ್ ಪ್ರಶಾಂತ್ ತ್ರಿವೇದಿ.

ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹೇಳಿದ್ದರು. ಈ ವಿಚಾರವನ್ನು ಅವಧೇಶ್ ಪ್ರಸಾದ್ ತಮ್ಮ ಚುನಾವಣಾ ಪ್ರಚಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು.

ಇದಲ್ಲದೇ, ಅಯೋಧ್ಯೆಯ ಅಭಿವೃದ್ಧಿಗಾಗಿ ಜಮೀನು ಒತ್ತುವರಿ, ಮನೆಗಳನ್ನು ಕೆಡವಿದ್ದು, ನಾಗರಿಕರು ಮತ್ತು ವ್ಯಾಪಾರಿಗಳ ಸ್ಥಳಾಂತರ, ಪ್ರಶ್ನೆ ಪತ್ರಿಕೆಗಳ ಸೋರಿಕೆ, ನಿರುದ್ಯೋಗ, ಅಯೋಧ್ಯೆಗೆ ಭೇಟಿ ನೀಡಿದವರಿಗೆ ವಿಶೇಷ ಸವಲತ್ತುಗಳನ್ನು ನೀಡದಿರುವುದು, ಹೊರಗಿನಿಂದ ಬರುವ ಉದ್ಯಮಿಗಳು ಲಾಭ ಪಡೆಯುತ್ತಿದ್ದಾರೆಂಬ ಚರ್ಚೆಗಳು ಸ್ಥಳೀಯರನ್ನು ಚಿಂತೆಗೀಡು ಮಾಡಿದ್ದವು. ಬಹುಪಾಲು ಯುವ ಮತದಾರರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆಯಿಂದ ಬೇಸತ್ತು ಹೋಗಿದ್ದರು. ದೇವಸ್ಥಾನ ಮತ್ತು ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲವೂ ಬಿಜೆಪಿ ಸೋಲಿಗೆ ಕಾರಣಗಳೆಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆ

TN 2026 ಟೀಸರ್‌ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ

Published

on

By

ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಸಿನಿಮಾ TN 2026 – ತಂಗೈ ನಚ್ಚಥಿರಂ ಟೀಸರ್ ಏಪ್ರಿಲ್ 2ರಂದು ಬಿಡುಗಡೆಯಾದ ಬಳಿಕ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ನಟ Nataraj (Natti) ಅಭಿನಯಿಸಿರುವ “ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್” ಎಂಬ ಪಾತ್ರ ರಾಜಕೀಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಟೀಸರ್ ವೈರಲ್ ಆದ ತಕ್ಷಣ, Tamilaga Vettri Kazhagam (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ Vijay ಅವರನ್ನು ಗುರಿಯಾಗಿಸಿಕೊಂಡು ಟೀಸರ್ ರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಅವರ ನಡಿಗೆ ಮತ್ತು ಜನರತ್ತ ಕೈ ಬೀಸುವ ಶೈಲಿಯನ್ನು ಅನುಕರಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ನಟ Redin Kingsley ಅವರ ಪಾತ್ರವೊಂದು ವೇದಿಕೆಯಲ್ಲಿ “ಹೇ ಮೂವಿ-ಬಾಯ್…” ಎಂದು ಗೇಲಿ ಮಾಡುವ ಸಂಭಾಷಣೆ ಕೂಡ ಟೀಕೆಗೆ ಗುರಿಯಾಗಿದೆ.

ಟೀಸರ್ ಕೊನೆಯಲ್ಲಿ ಕೇಳಿಬರುವ “ಓಂ ಶಕ್ತಿ ಪರಾಶಕ್ತಿ” ಘೋಷಣೆ ಕೂಡ ವಿಜಯ್ ಇತ್ತೀಚೆಗೆ ರಾಜಕೀಯ ವೇದಿಕೆಯಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ Aadhav Arjun, “ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು Dravida Munnetra Kazhagam (ಡಿಎಂಕೆ) ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ” ಎಂದು ಆರೋಪಿಸಿದ್ದಾರೆ. ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

Umapathy Ramaiah ನಿರ್ದೇಶನದ ಈ ಚಿತ್ರದಲ್ಲಿ Thambi Ramaiah, M. S. Bhaskar, Ilavarasu, Yashika Aannand ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ಚುನಾವಣೆ

“ನಾಲ್ಕು ಮದುವೆಗೆ ಬ್ರೇಕ್” – ಶಾ ಘೋಷಣೆ ಸಂಚಲನ

Published

on

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯ ಕಾವು ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಗೃಹ ಸಚಿವ Amit Shah ಮಹತ್ವದ ಘೋಷಣೆ ಮಾಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಗೋಲ್ಪಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶಾ, “ಅಕ್ರಮ ನುಸುಳುಕೋರರು ನಾಲ್ಕು ಮದುವೆಯಾಗುವುದನ್ನು ತಡೆಯಲು ಯುಸಿಸಿ ಅಗತ್ಯ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು. ಪ್ರಧಾನಿ Narendra Modi ಮತ್ತು ಅಸ್ಸಾಂ ಮುಖ್ಯಮಂತ್ರಿ Himanta Biswa Sarma ಬುಡಕಟ್ಟು ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದ್ದಾರೆ ಎಂದರು.

ಬುಡಕಟ್ಟು ಪ್ರದೇಶಗಳಲ್ಲಿ ಯುಸಿಸಿ ಜಾರಿಯಾಗುವುದಿಲ್ಲ ಎಂಬುದನ್ನು ಶಾ ಸ್ಪಷ್ಟಪಡಿಸಿ, ಕಾಂಗ್ರೆಸ್ ಹರಡುತ್ತಿರುವ ಗಾಳಿಸುದ್ದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಬುಡಕಟ್ಟು ಪ್ರದೇಶಗಳನ್ನು ಯುಸಿಸಿಯಿಂದ ಹೊರಗಿಡಲಾಗುತ್ತದೆ” ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “70 ವರ್ಷ ಆಡಳಿತ ನಡೆಸಿದರೂ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯಾಗಿಸಲು ಸಾಧ್ಯವಾಗಲಿಲ್ಲ. ಆದರೆ ಮೋದಿ ನಾಯಕತ್ವದಲ್ಲಿ ಅದು ಸಾಧ್ಯವಾಯಿತು” ಎಂದು ಟೀಕಿಸಿದರು.

Assam ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡು ಅವಧಿಗೆ ಮುಖ್ಯಮಂತ್ರಿ ಆಗಿರುವ ಹಿಮಂತ ಬಿಸ್ವಾ ಶರ್ಮಾ ಮತ್ತೆ ಅಧಿಕಾರಕ್ಕೇರಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಮರುಪಡೆಯಲು ಹೋರಾಟ ನಡೆಸುತ್ತಿದೆ.

ಒಟ್ಟಿನಲ್ಲಿ, ಯುಸಿಸಿ ವಿಚಾರ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿದ್ದು, ಅಸ್ಸಾಂ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Continue Reading

ಚುನಾವಣೆ

‘ಸಿಂಗಂ’ ಅಣ್ಣಾಮಲೈ ನಡೆಗೆ ಅಭಿಮಾನಿಗಳ ಸಲಾಂ

Published

on

By

ಕಣ್ಣೂರು: ತಮಿಳುನಾಡಿನಲ್ಲಿ ಬಿಜೆಪಿ ಪ್ರಚಾರಕ್ಕೆ ಸಂಪೂರ್ಣ ಶಕ್ತಿ ಹಾಕುವುದಾಗಿ K. Annamalai ಘೋಷಿಸಿದ್ದು, ಅವರ ಪಕ್ಷನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ನೀಡಿದ ಜವಾಬ್ದಾರಿಯಂತೆ ರಾಜ್ಯದ ಮೂಲೆಮೂಲೆಗೂ ತೆರಳಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ನನ್ನ ಕರ್ತವ್ಯ. 7ರಿಂದ 23ರವರೆಗೆ ತಮಿಳುನಾಡಿನಾದ್ಯಂತ ಪ್ರಚಾರ ನಡೆಸುತ್ತೇನೆ” ಎಂದು ಸ್ಪಷ್ಟಪಡಿಸಿದರು. ಪುದುಚೇರಿ ಮತ್ತು ಕೇರಳದಲ್ಲಿಯೂ ಪ್ರಚಾರದ ಹೊಣೆಗಾರಿಕೆ ನೀಡಲಾಗಿದೆ ಎಂದೂ ಹೇಳಿದರು.

ಟಿಕೆಟ್ ಸಿಗದಿದ್ದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಪಕ್ಷದ ಪರವಾಗಿ ನಿಂತಿರುವ ಅಣ್ಣಾಮಲೈ ನಡೆ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. Bharatiya Janata Party ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರದಿದ್ದರೂ, ಪ್ರಚಾರಕ್ಕೆ ಸಜ್ಜಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ.

ಅಣ್ಣಾಮಲೈ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಅವರನ್ನು “ಸಿಂಗಂ” ಎಂದು ಕೊಂಡಾಡುತ್ತಿದ್ದು, ಪಕ್ಷನಿಷ್ಠೆ ಮತ್ತು ಶಿಸ್ತಿನ ಉದಾಹರಣೆಯಾಗಿ ಗುರುತಿಸಿದ್ದಾರೆ. ಇತ್ತೀಚಿನ ರಾಜಕೀಯದಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷಾಂತರ ಮಾಡುವ ಪ್ರವೃತ್ತಿ ಹೆಚ್ಚಿರುವ ನಡುವೆಯೇ, ಅವರ ನಿಲುವು ವಿಭಿನ್ನವಾಗಿ ಕಾಣುತ್ತಿದೆ.

ಒಟ್ಟಿನಲ್ಲಿ, ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರೂ ಪಕ್ಷವನ್ನು ಬಲಪಡಿಸುವತ್ತ ಅಣ್ಣಾಮಲೈ ಗಮನ ಹರಿಸಿರುವುದು ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Continue Reading

Trending