ದೇಶ
ಆರ್ಡರ್ ಮಾಡಿದ್ದು ಗೇಮಿಂಗ್ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್ ಓಪನ್ ಮಾಡಿದ ಯುವತಿ ಜಸ್ಟ್ ಮಿಸ್!

ಗೇಮಿಂಗ್ ಆಡಲು ಬಳಕೆ ಮಾಡುವ ಎಕ್ಸ್ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದ ಯುವತಿ, ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಶಾಕ್ ಆಗಿದ್ದಾರೆ. ತಾವು ಮಾಡಿದ್ದ ಆರ್ಡರ್ ಬಾಕ್ಸ್ನಲ್ಲಿ ಹಾವು ನೋಡಿ ಯುವತಿ ಬೆಚ್ಚಿಬಿದ್ದ ಘಟನೆ ನಗರದಲ್ಲಿ ನಡೆದಿದೆ. ಸರ್ಜಾಪುರದಲ್ಲಿ ವಾಸವಾಗಿರುವ ಯುವತಿ ಎರಡು ದಿನದ ಹಿಂದೆ ಎಕ್ಸ್ಬಾಕ್ಸ್ ಕಂಟ್ರೋಲರ್ (Xbox Controller) ಆರ್ಡರ್ ಮಾಡಿದ್ದರು. ಆರ್ಡರ್ ತಲುಪಿದ ಕೆಲ ನಿಮಿಷದಲ್ಲಿ ಬಾಕ್ಸ್ ಓಪನ್ ಮಾಡಿದ್ದಾರೆ. ತಕ್ಷಣ ಒಳಗಡೆ ಇದ್ದ ಹಾವು ಹೊರಬಂದಿದೆ. ಇದರಿಂದ ಯುವತಿ ಬೆಚ್ಚಿಬಿದ್ದಿದ್ದಾರೆ. ಆನ್ಲೈನ್ ಡೆಲಿವರಿ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅದೃಷ್ಟವಶಾತ್, ವಿಷಪೂರಿತ ಹಾವು ಪ್ಯಾಕೇಜಿಂಗ್ ಟೇಪ್ಗೆ ಅಂಟಿಕೊಂಡಿತ್ತು. ಇದರಿಂದ ಬಾಕ್ಸ್ ಓಪನ್ ಮಾಡಿದ ಯುವತಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆಘಾತದ ಹೊರತಾಗಿಯೂ, ಅವರು ಘಟನೆಯ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಹಾವು ಸ್ಪೆಕ್ಟಾಕಲ್ಡ್ ಕೋಬ್ರಾ ಎಂದು ಗುರುತಿಸಲಾಗಿದೆ. ಇದು ಕರ್ನಾಟಕಕ್ಕೆ ಸ್ಥಳೀಯವಾಗಿರುವ ಅತ್ಯಂತ ವಿಷಕಾರಿ ಹಾವಿನ ಜಾತಿಯಾಗಿದೆ. ಅದನ್ನು ಸೆರೆಹಿಡಿದು ನಂತರ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.