ಅಪರಾಧ
ರೇಣುಕಾಸ್ವಾಮಿ ಹತ್ಯೆ ಪ್ರಕರಣ; SPP ಬದಲಾವಣೆಗೆ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಸ್ಪಿಪಿ ಬದಲಾವಣೆ ಮಾಡುವೇದೆ ಸರ್ಕಾರದ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರ ನೇಮಿಸಿರುವ ಎಸ್ಪಿಪಿ ಪ್ರಸನ್ನಕುಮಾರ್ ಅವರನ್ನು ಬದಲಿಸುವಂತೆ ಯಾವುದೇ ಒತ್ತಡಗಳೂ ಬರುತ್ತಿಲ್ಲ. ಯಾವುದೇ ಸಚಿವರು, ಶಾಸಕರೂ ಒತ್ತಡ ಹಾಕಿಲ್ಲ, ಯಾವುದೇ ಒತ್ತಡಕ್ಕೂ ನಾವು ಮಣಿಯುವುದೂ ಇಲ್ಲ. ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರೂ ಕೂಡ ಮಾತನಾಡಿದ್ದು, ಆರೋಪಿ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲ ಎಸ್ಪಿಪಿ ಪ್ರಸನ್ನಕುಮಾರ್ ಅವರನ್ನು ಬದಲಾವಣೆ ಮಾಡಿದರೂ ತಪ್ಪಿಲ್ಲ. ಎಸ್ಪಿಪಿ ಬದಲಾವಣೆ ಆಗಬೇಕಾದರೂ ಒಂದು ಕಾರಣ ಇರಲಿದೆ. ಮುಖ್ಯಮಂತ್ರಿಗಳಾಗಲಿ ಅಥವಾ ನಾನಾಗಲಿ, ಕಾನೂನು ಸಲಹೆ ಪಡೆದು ನಿರ್ಧಾರ ತೀರ್ಮಾನಿಸುತ್ತೇವೆ. ಯಾರನ್ನೇ ನೇಮಿಸಿದರೂ ಕಾನೂನು ಪ್ರಕಾರವೇ ಮಾಡಬೇಕು ಎಂದು ಹೇಳಿದರು. ದರ್ಶನ್ ತಪ್ಪೊಪ್ಪಿಕೊಂಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ. ಅಂತಹ ಚಿಂತನೆ ಕೂಡ ಸರ್ಕಾರದ ಮುಂದೆ ಇಲ್ಲ. ಯಾವುದೇ ಮುಲಾಜು, ಒತ್ತಡ ಇಲ್ಲದೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ದರ್ಶನ್ ಮ್ಯಾನೇಜರ್ ನಾಪತ್ತೆ ಬಗ್ಗೆ ಯಾವ ಮಾಹಿತಿ ಬಂದಿಲ್ಲ. ದರ್ಶನ್ ಇದರಲ್ಲಿ ಭಾಗಿಯಾಗಿದ್ದರೆ ಅದಕ್ಕೆ ಸರ್ಕಾರ ಕೂಡ ತನಿಖೆಗೆ ಅನುಮತಿ ಕೊಡಲಿದೆ. ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.