Connect with us

ಆರೋಗ್ಯ

Zika Virus: ರಾಜ್ಯಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸಲಹೆ – ZIKA VIRUS Advisory to States

Published

on

ನವದೆಹಲಿ: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿ ಸಲಹೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆ ಎಲ್ಲಾ ರಾಜ್ಯಗಳು ನಿರಂತರವಾಗಿ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ತಿಳಿಸಿದ್ದಾರೆ.

ಝಿಕಾ ಸೋಂಕು ಗರ್ಭಿಣಿ ಭ್ರೂಣದ ಮೈಕ್ರೊಸೆಫಾಲಿ (ತಲೆಗಾತ್ರ ಕಡಿಮೆ) ಮತ್ತು ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗುವ ಹಿನ್ನೆಲೆ ಅಗತ್ಯ ಮೇಲ್ವಿಚಾರಣೆಯೊಂದಿಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚಿಸಲಾಗಿದೆ. ಝಿಕಾ ವೈರಸ್​ ಸೋಂಕಿತ ಪ್ರದೇಶಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವುದು. ಇಂತಹ ಪ್ರದೇಶಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನೀಡುವಂತೆ, ಗರ್ಭಿಣಿಯರಲ್ಲಿ ಝಿಕಾ ಸೋಂಕು ದೃಢಪಟ್ಟರೆ, ಕೇಂದ್ರ ಸರ್ಕಾರದ ಮಾರ್ಗಸೂಚನೆ ಅನುಸಾರ ಕ್ರಮ ನಡೆಸುವಂತೆ ಕೂಡ ರಾಜ್ಯಗಳಿಗೆ ಒತ್ತಾಯಿಸಲಾಗಿದೆ.

ಏಡಿಸ್​ ಸೊಳ್ಳೆಗಳಿಂದ ಪ್ರದೇಶಗಳು ಮುಕ್ತವಾಗಿರುವಂತೆ ನೋಡಿಕೊಳ್ಳುವ ಜೊತೆಗೆ ಈ ಕುರಿತು ಮೇಲ್ವಿಚಾರಣೆಗೆ ನೋಡಲ್​ ಅಧಿಕಾರಿಗಳನ್ನು ನೇಮಿಸಬೇಕು. ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಆಸ್ಪತ್ರೆಗಳ ಕುರಿತು ಅವರು ಸಲಹೆ ನೀಡಬೇಕು. ಜನನಿಬಿಡ ಪ್ರದೇಶ, ಮನೆ ಸುತ್ತಮುತ್ತ, ಕಾರ್ಯ ಸ್ಥಳ, ಶಾಲೆ, ಕಟ್ಟಡ ನಿರ್ಮಾಣ ಸ್ಥಳಗಳು, ಸಂಸ್ಥೆ ಸುತ್ತಮುತ್ತ ಝಿಕಾ ಸೋಂಕಿನ ಕುರಿತು ಹೆಚ್ಚಿನ ಕಣ್ಗಾವಲುವಹಿಸಿ, ಅಗತ್ಯ ಕ್ರಮಕ್ಕೆ ಮುಂದಾಗಬೇಕು.

ಜೊತೆಗೆ ರಾಜ್ಯಗಳು ಸಾಮಾಜಿಕ ಜಾಲತಾಣ ಮತ್ತಿತರ ವೇದಿಕೆ ಬಳಕೆ ಮಾಡಿಕೊಂಡು ಝಿಕಾ ವೈರಸ್​ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮದ ಅರಿವು ಮೂಡಿಸಬೇಕು. ಈ ಮೂಲಕ ಸೋಂಕಿನ ಕುರಿತು ಸಮುದಾಯದಲ್ಲಿ ಮೂಡಿರುವ ಆತಂಕ ತಗ್ಗಿಸುವ, ಅರಿವು ಮೂಡಿಸಬೇಕು. ಝಿಕಾ ಕೂಡ ಇತರೆ ಸೋಂಕಿನಂತೆ ಯಾವುದೇ ಲಕ್ಷಣ ಅಥವಾ ಸೌಮ್ಯ ಲಕ್ಷಣ ಹೊಂದಿದ್ದು, ಈ ಕುರಿತು ಜನರಿಗೆ ತಿಳಿಸಬೇಕು.

ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಝಿಕಾ ವೈರಸ್​ ಸೋಂಕು ಮಗುವಿನ ಮೈಕ್ರೊಸೆಫಾಲಿಗೆ ಸಂಬಂಧಿಸಿದೆ. 2016ರಿಂದ ಮೈಕ್ರೋಸೆಫಾಲಿ ಸಂಬಂಧಿತ ಝಿಕಾ ಸೋಂಕು ದೇಶದಲ್ಲಿ ಕಂಡು ಬಂದಿರಲಿಲ್ಲ.

ಸೂಕ್ತ ಸಮಯದಲ್ಲಿ ಪತ್ತೆ ಮತ್ತು ನಿಯಂತ್ರಣದ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಕಣ್ಗಾವಲು ವಹಿಸುವಂತೆ ಸಲಹೆ ನೀಡಲಾಗಿದ್ದು, ಎಲ್ಲಾ ಮಟ್ಟದಲ್ಲಿ ಸಿದ್ಧತೆ ಲಭ್ಯವಾಗಿರುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ಐಡಿಎಸ್​ಪಿ ಮತ್ತು ಎನ್​ಸಿವಿಬಿಡಿಸಿ ಕಾರ್ಯಕ್ರಮಗಳ ಮೂಲಕ ಪ್ರಕರಣದ ತಕ್ಷಣ ಪತ್ತೆಗೆ ಮುಂದಾಗಬೇಕು. ರಾಷ್ಟ್ರೀಯ ವೈರಾಲಾಜಿ ಸಂಸ್ಥೆ (ಎನ್​ಐವಿ), ಪುಣೆಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ಮತ್ತು ದೆಹಲಿಯ ಐಸಿಎಂಆರ್​ನಿಂದ ಕೆಲವು ಆಯ್ದ ಸಂಶೋಧನಾ ಮತ್ತು ಪತ್ತೆ ಕೇಂದ್ರದಲ್ಲಿ ಝಿಕಾ ಸೋಂಕಿನ ಪರೀಕ್ಷೆ ನಡೆಸಬಹುದಾಗಿದೆ.

ಝಿಕಾ ವೈರಸ್​ ಕುರಿತು: ಡೆಂಗ್ಯೂ ಮತ್ತು ಚಿಗನ್​ಗುನ್ಯಾನಂತೆ ಏಡಿಸ್​ ಸೊಳ್ಳೆಯಿಂದ ಹರಡುವ ಸೋಂಕು ಇದಾಗಿದೆ. ಇದು ಮಾರಣಾಂತಿಕ ಸೋಂಕು ಅಲ್ಲ. ಆದರೆ, ಝಿಕಾ ಮೈಕ್ರೊಸೆಫಾಲಿಯೊಂದಿಗೆ ಸಂಬಂಧ ಹೊಂದಿದ್ದಲ್ಲಿ, ಇದು ಗರ್ಭಿಣಿಯರ ಭ್ರೂಣದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

2016ರಲ್ಲಿ ಗುಜರಾತ್​​ನಲ್ಲಿ ಮೊದಲ ಬಾರಿಗೆ ಝಿಕಾ ಸೋಂಕು ಪತ್ತೆಯಾಗಿತ್ತು. ತಮಿಳುನಾಡು, ಮಧ್ಯಪ್ರದೇಶಮ ರಾಜಸ್ಥಾನ್​, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಕರ್ನಾಟಕದಲ್ಲೂ ಇದರ ವರದಿಯಾಗಿದೆ. ಈ ವರ್ಷ ಜುಲೈ 2ರ ವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 8 ಪ್ರಕರಣ ವರದಿಯಾಗಿದೆ.

ಆರೋಗ್ಯ

10 ವರ್ಷಗಳ ಸಂಶೋಧನೆಗೆ ಫಲ! Wockhardt ಔಷಧಿಗೆ ಅಮೆರಿಕದ ಗ್ರೀನ್ ಸಿಗ್ನಲ್

Published

on

ನವದೆಹಲಿ: ವಿಶ್ವದ ಔಷಧಾಲಯ (Pharmacy of the World) ಎಂದೇ ಗುರುತಿಸಿಕೊಂಡಿರುವ ಭಾರತವು ಇದೀಗ ಔಷಧ ಸಂಶೋಧನಾ ಕ್ಷೇತ್ರದಲ್ಲೂ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈ ಮೂಲದ Wockhardt ಅಭಿವೃದ್ಧಿಪಡಿಸಿರುವ ‘ಜೈನಿಚ್’ (Zaynich) ಎಂಬ ಹೊಸ ಆ್ಯಂಟಿಬಯಾಟಿಕ್‌ಗೆ ಅಮೆರಿಕದ ಕಠಿಣ ಔಷಧ ನಿಯಂತ್ರಣ ಸಂಸ್ಥೆಯಾದ U.S. Food and Drug Administration ಅನುಮೋದನೆ ನೀಡಿದೆ.

ಭಾರತೀಯ ಔಷಧ ಕಂಪನಿಯೊಂದು ಸಂಪೂರ್ಣವಾಗಿ ಸಂಶೋಧಿಸಿ, ಅಭಿವೃದ್ಧಿಪಡಿಸಿ, ಜಾಗತಿಕ ಮಾರುಕಟ್ಟೆಗೆ ತಂದ ಮೊದಲ New Chemical Entity (NCE) ಎಂಬ ಹೆಗ್ಗಳಿಕೆಗೆ ಜೈನಿಚ್ ಪಾತ್ರವಾಗಿದೆ. ಈ ಔಷಧಿ ಔಷಧ ನಿರೋಧಕ (Drug-Resistant) ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಂಕೀರ್ಣ ಮೂತ್ರನಾಳದ ಸೋಂಕುಗಳ (UTI) ಚಿಕಿತ್ಸೆಗೆ ಬಳಸಲಾಗುತ್ತದೆ.

ಜೈನಿಚ್ ವಿಶೇಷತೆ ಏನು?

ಸಾಮಾನ್ಯ ಆ್ಯಂಟಿಬಯಾಟಿಕ್‌ಗಳಿಗಿಂತ ಭಿನ್ನವಾಗಿ, ಜೈನಿಚ್ ಎರಡು ಪ್ರಮುಖ ಅಂಶಗಳ ಸಂಯೋಜನೆಯಾಗಿದೆ. ಈಗಾಗಲೇ ಬಳಕೆಯಲ್ಲಿರುವ Cefepime ಮತ್ತು ವಾಕ್ಹಾರ್ಡ್ ಕಂಡುಹಿಡಿದ ಹೊಸ ಅಣು Zidebactam ಸೇರಿ ಬ್ಯಾಕ್ಟೀರಿಯಾದ ಜೀವಕೋಶ ಗೋಡೆಯ ನಿರ್ಮಾಣವನ್ನು ಎರಡು ಹಂತಗಳಲ್ಲಿ ತಡೆಯುತ್ತವೆ. ಇದರಿಂದ ಔಷಧ ನಿರೋಧಕ ಬ್ಯಾಕ್ಟೀರಿಯಾಗಳನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಕ್ಲಿನಿಕಲ್ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು

530 ರೋಗಿಗಳ ಮೇಲೆ ನಡೆಸಿದ ಮೂರನೇ ಹಂತದ ಪರೀಕ್ಷೆಯಲ್ಲಿ ಜೈನಿಚ್ ಪಡೆದ ರೋಗಿಗಳಲ್ಲಿ 89% ಮಂದಿಗೆ ಸೋಂಕು ಸಂಪೂರ್ಣ ಗುಣಮುಖವಾಗಿದೆ. ಹೋಲಿಕೆಗೆ, ಸಾಮಾನ್ಯವಾಗಿ ಬಳಸುವ ಆ್ಯಂಟಿಬಯಾಟಿಕ್ Meropenem ಬಳಕೆ ಮಾಡಿದವರಲ್ಲಿ ಈ ಪ್ರಮಾಣ 68.4% ಮಾತ್ರ ದಾಖಲಾಗಿದೆ.

ಭಾರತಕ್ಕೆ ಏಕೆ ಮಹತ್ವ?

ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ವಿಶ್ವದ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಜಾಗತಿಕವಾಗಿ ಸುಮಾರು 12.7 ಲಕ್ಷ ಸಾವುಗಳಿಗೆ ಇದು ನೇರ ಕಾರಣವಾಗುತ್ತಿದೆ. ಭಾರತದಲ್ಲಿಯೂ ಲಕ್ಷಾಂತರ ಜನರು ಔಷಧ ನಿರೋಧಕ ಸೋಂಕುಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಜೈನಿಚ್ ಅಭಿವೃದ್ಧಿಯು ಭಾರತೀಯ ವಿಜ್ಞಾನಿಗಳ ಸಂಶೋಧನಾ ಸಾಮರ್ಥ್ಯಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟಿದ್ದು, ದೇಶವನ್ನು ಕೇವಲ ಜೆನೆರಿಕ್ ಔಷಧ ತಯಾರಕ ರಾಷ್ಟ್ರವಲ್ಲ, ಹೊಸ ಔಷಧ ಕಂಡುಹಿಡಿಯುವ ರಾಷ್ಟ್ರವಾಗಿಯೂ ಗುರುತಿಸುವಂತೆ ಮಾಡಿದೆ.

ಸವಾಲು ಇನ್ನೂ ಉಳಿದಿದೆ

ತಜ್ಞರ ಪ್ರಕಾರ, ಔಷಧ ಕಂಡುಹಿಡಿಯುವುದು ಒಂದು ಹಂತವಾದರೆ, ಅದು ಸಾಮಾನ್ಯ ರೋಗಿಗಳಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಜೈನಿಚ್ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ರೋಗಿಗಳಿಗೆ ಶೀಘ್ರ ಲಭ್ಯವಾಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

Continue Reading

ಆರೋಗ್ಯ

ಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು

Published

on

ಬೇಸಿಗೆಯ ಉರಿ ಬಿಸಿಯನ್ನು ಎದುರಿಸಲು ಭಾರತೀಯರು ತಲೆಮಾರುಗಳಿಂದ ಸಾಂಪ್ರದಾಯಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ Narendra Modi ಅವರು ದೇಶದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇವು ಕೇವಲ ಪಾನೀಯಗಳಲ್ಲ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಅವರು ಹೇಳಿದರು.

ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಪಾನೀಯಗಳಲ್ಲಿ ಆಮ್ ಪನ್ನಾ ಪ್ರಮುಖವಾಗಿದೆ. ಕಚ್ಚಾ ಮಾವು, ಬೆಲ್ಲ ಅಥವಾ ಸಕ್ಕರೆ, ಪುದೀನ, ಜೀರಿಗೆ ಹಾಗೂ ಕಪ್ಪು ಉಪ್ಪಿನಿಂದ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೈಡ್ರೇಶನ್ ಕಾಪಾಡಲು ಸಹಕಾರಿ.

ಲಸ್ಸಿ ಮತ್ತು ಮಜ್ಜಿಗೆ (ಚಾಸ್) ಕೂಡ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯಕರ ಪಾನೀಯಗಳಾಗಿವೆ. ಮೊಸರು ಆಧಾರಿತ ಈ ಪಾನೀಯಗಳು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತವೆ.

ಪಶ್ಚಿಮ ಭಾರತದ ಕರಾವಳಿ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಕೋಕಂ ಶರಬತ್ ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಅದರ ವಿಶಿಷ್ಟ ಸಿಹಿ-ಹುಳಿ ರುಚಿಗೆ ಹೆಸರುವಾಸಿಯಾಗಿದೆ.

ಬಿಹಾರ ಮತ್ತು ಜಾರ್ಖಂಡ್ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಸಟ್ಟು ಶರಬತ್ ಪ್ರೋಟೀನ್, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ದಕ್ಷಿಣ ಭಾರತದ ಪಾನಕಂ ಮತ್ತು ನೀರ್ ಮೋರ್ ಕೂಡ ಬೇಸಿಗೆಯ ಜನಪ್ರಿಯ ಪಾನೀಯಗಳಾಗಿವೆ. ಬೆಲ್ಲ, ಶುಂಠಿ ಹಾಗೂ ನಿಂಬೆರಸದಿಂದ ತಯಾರಾಗುವ ಪಾನಕಂ ಶಕ್ತಿದಾಯಕವಾಗಿದ್ದರೆ, ಮಜ್ಜಿಗೆ ಆಧಾರಿತ ನೀರ್ ಮೋರ್ ಜೀರ್ಣಕ್ರಿಯೆಗೆ ನೆರವಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಈ ಸಾಂಪ್ರದಾಯಿಕ ಪಾನೀಯಗಳು ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಬೇಸಿಗೆಯ ಉಷ್ಣತೆಯಿಂದ ರಕ್ಷಿಸಲು ಸಹಕಾರಿ. ಆದ್ದರಿಂದ ಮಾರುಕಟ್ಟೆಯ ಕೃತಕ ಪಾನೀಯಗಳಿಗಿಂತ ದೇಶಿ ಪಾನೀಯಗಳೇ ಆರೋಗ್ಯಕ್ಕೆ ಹೆಚ್ಚು ಲಾಭದಾಯಕವೆಂದು ಅಭಿಪ್ರಾಯ ವ್ಯಕ್ತವಾಗಿದೆ.

Continue Reading

ಆರೋಗ್ಯ

Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?

Published

on

ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.

ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.

ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Continue Reading

Trending