ದೇಶ

ಕೇವಲ 6 ಗಂಟೆಯಲ್ಲಿ 300 ಮಿ.ಮೀ ಮಳೆ – ಮಹಾಮಳೆಗೆ ಮುಳುಗಿದ ಮುಂಬೈ

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ (Mumbai) ಮಹಾಮಳೆಗೆ ಮುಳುಗಿದೆ. ಮಧ್ಯರಾತ್ರಿ 1 ಗಂಟೆಯಿಂದ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 300 ಮಿ.ಮೀ ಮಳೆಯಾಗಿದೆ.

ಕೇವಲ 6 ಗಂಟೆಯ ಅವಧಿಯಲ್ಲಿ ಸುರಿದ 300 ಮಿ.ಮೀ ಮಳೆಗೆ (Heavy Rain) ಮುಂಬೈ ನಗರದ ಹಲವೆಡೆಯಲ್ಲಿ ನೀರು ನಿಂತಿದೆ. ರಸ್ತೆ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 50ಕ್ಕೂ ಹೆಚ್ಚು ವಿಮಾನಗಳ ಸೇವೆ (Flight Service Cancelled) ರದ್ದಾಗಿದೆ.

ಮುಂಬೈ, ಥಾಣೆ ಪಾಲ್ಘರ್ ಮತ್ತು ಕೊಂಕಣ ಬೆಲ್ಟ್‌ಗೆ ಭಾರತೀಯ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ನೀಡಿದೆ. ವಿಕ್ರೋಲಿಯ ವೀರ್ ಸಾವರ್ಕರ್ ಮಾರ್ಗ್ ಮುನ್ಸಿಪಲ್ ಸ್ಕೂಲ್ ಮತ್ತು ಎಂಸಿಎಂಸಿಆರ್ ಪೊವಾಯಿಯಲ್ಲಿ ಕಳೆದ 24 ಗಂಟೆಗಳಲ್ಲಿ 315 ಮಿ.ಮೀ ಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.

ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ಫ್ಲೈಟ್‌ ಸ್ಟೇಟಸ್‌ ಚೆಕ್‌ ಮಾಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿವೆ. ಮುಂಬೈಯ ಹಲವು ಪ್ರದೇಶಗಳಲ್ಲಿ ಸೊಂಟದವರೆಗೆ ನೀತು ನಿಂತಿದೆ. ಮುಂಬೈ ನಗರದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಸಮುದ್ರ ಅಲೆಗಳ ಮಟ್ಟ ಏರಿಕೆ ಆಗುತ್ತಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ 4.4 ಮೀಟರ್‌ ಎತ್ತರಕ್ಕೆ ಏರುವ ಸಾಧ್ಯತೆಯಿದೆ. ಹೀಗಾಗಿ ಯಾರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮುಂಬೈ ಸಬ್‌ಅರ್ಬನ್‌ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ದೂರದ ಊರುಗಳಿಗೆ ತೆರಳುವ ರೈಲುಗಳಿಗೆ ಸಮಸ್ಯೆಯಾಗಿದೆ. ಹಲವು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ಇಂದು ಮತ್ತೆ ಮುಂಬೈ ಮಹಾನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

Trending

Exit mobile version