Connect with us

ದೇಶ

ವಾಲ್ಮೀಕಿ ನಿಗಮದಲ್ಲಿ ಅಕ್ರಮ; ಸಿಬಿಐನಿಂದ ತನಿಖೆ ತೀವ್ರಗೊಳಿಸಿ – ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ

Published

on

ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಶಾಮೀಲಾಗಿದೆ ಎನ್ನಲಾಗಿದೆ. ಯೂನಿಯನ್ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳ ಪಾತ್ರದ ತನಿಖೆಯಾಗಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ಮಾಡಿಸಿ ಹಗರಣದಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಬೇಕು. ಅವರ ಕುಟುಂಬಕ್ಕೆ ನೆರವು ಖಾತ್ರಿಪಡಿಸಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕ್ರಮವಹಿಸಬೇಕು. ಸರ್ಕಾರದ ವಿವಿಧ ಅಭಿವೃದ್ಧಿ ನಿಧಿಗಳ ಮೇಲ್ವಿಚಾರಣೆ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ‌.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಬಹುಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ನಾಗೇಂದ್ರ ವಿರುದ್ಧ ಆರೋಪ ಕೇಳಿಬಂದಿದೆ. ಪರಿಣಾಮವಾಗಿ ಅವರು ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಜೊತೆಗೆ ನಿಗಮದ ಅಧ್ಯಕ್ಷರಾದ, ಶಾಸಕ ಬಸನಗೌಡ ದದ್ದಲ್‌ ವಿರುದ್ಧವೂ ಆರೋಪವಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನಸುಕಿನ ವೇಳೆ ಇಬ್ಬರೂ ನಾಯಕರು ಹಾಗೂ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ ಪರಿಶೀಲಿಸಿದೆ. ಜೊತೆಗೆ ನಿಗಮದ ಅಧಿಕಾರಿಗಳ ಮನೆಗಳ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ

ದೇಶ

Iran-ಅಮೆರಿಕ ಯುದ್ಧ ಆತಂಕ: ಮಂಗಳೂರಿನಲ್ಲಿ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ, ಭಾರತದ ಇಂಧನ ಭದ್ರತೆಗೆ ONGC ಮಹತ್ವದ ನಿರ್ಧಾರ

Published

on

ನವದೆಹಲಿ: ಇರಾನ್-ಅಮೆರಿಕ (Iran-USA War) ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆಯೇ, ಭಾರತ ತನ್ನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲೂ ತೈಲ ಕೊರತೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಮಂಗಳೂರಿನಲ್ಲಿ (Mangaluru) ಮತ್ತೊಂದು ಬೃಹತ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (Strategic Petroleum Reserve – SPR) ನಿರ್ಮಾಣಕ್ಕೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ತಾತ್ವಿಕ ಅನುಮೋದನೆ ನೀಡಿದೆ.

ಹೊಸದಾಗಿ ನಿರ್ಮಾಣವಾಗಲಿರುವ ಈ ಸಂಗ್ರಹಾಗಾರವು 1.75 MMT ಸಾಮರ್ಥ್ಯ ಹೊಂದಿದ್ದು, ದೇಶದ ತುರ್ತು ತೈಲ ಸಂಗ್ರಹ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಸುಮಾರು 1.28 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸಬಹುದಾದ ಈ ಯೋಜನೆ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಇಂಧನ ಸುರಕ್ಷತೆಗೆ ದೊಡ್ಡ ಬಲವಾಗಲಿದೆ.

ಪ್ರಸ್ತುತ ಭಾರತದಲ್ಲಿ ಮಂಗಳೂರು, ಪಾದೂರು (ಉಡುಪಿ) ಹಾಗೂ ವಿಶಾಖಪಟ್ಟಣಂನಲ್ಲಿ ಒಟ್ಟು 5.33 MMT ಸಾಮರ್ಥ್ಯದ ಭೂಗತ ತೈಲ ಸಂಗ್ರಹಾಗಾರಗಳಿವೆ. ಈಗ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನಿರ್ಮಾಣವಾಗುವ ಈ ಯೋಜನೆಯಿಂದ ದೇಶದ ತುರ್ತು ತೈಲ ಬ್ಯಾಕಪ್ ಮತ್ತಷ್ಟು ಬಲಿಷ್ಠವಾಗಲಿದೆ.

ಇದುವರೆಗೆ ದೇಶದ ತುರ್ತು ತೈಲ ಸಂಗ್ರಹಾಗಾರಗಳನ್ನು Indian Strategic Petroleum Reserves Limited (ISPRL) ನಿರ್ಮಿಸುತ್ತಿತ್ತು. ಆದರೆ, ಮೊದಲ ಬಾರಿಗೆ ONGC ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಮಂಗಳೂರಿನಲ್ಲಿ ಈಗಾಗಲೇ MRPL ಸಂಸ್ಥೆಯು ದಿನಕ್ಕೆ ಸುಮಾರು 3 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಶುದ್ಧೀಕರಿಸುವ ಸಾಮರ್ಥ್ಯದ ರಿಫೈನರಿ ಹೊಂದಿದೆ. ಹೊಸ ಸಂಗ್ರಹಾಗಾರವನ್ನು ಇದೇ ಮೂಲಸೌಕರ್ಯಕ್ಕೆ ಸಂಪರ್ಕಿಸುವ ಯೋಜನೆ ರೂಪಿಸಲಾಗಿದ್ದು, ವಾಣಿಜ್ಯ ಬಳಕೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ONGC ಕೋರಿದೆ.

MRPL ಷೇರುಗಳಲ್ಲಿ ಭಾರಿ ಏರಿಕೆ

ಈ ಘೋಷಣೆಯ ಬಳಿಕ ONGC ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಷೇರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಷೇರುಗಳು ಸುಮಾರು 9% (₹12.17) ಏರಿಕೆಯಾಗಿದ್ದು, ಮಾರುಕಟ್ಟೆ ತಜ್ಞರ ಪ್ರಕಾರ ₹165 ಮಟ್ಟ ದಾಟಿದರೆ ಮುಂದಿನ ದಿನಗಳಲ್ಲಿ ₹190 ರಿಂದ ₹200ರವರೆಗೆ ಏರಿಕೆ ಕಾಣುವ ಸಾಧ್ಯತೆಯಿದೆ.

ತುರ್ತು ತೈಲ ಸಂಗ್ರಹ ಏಕೆ ಅಗತ್ಯ?

ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿದೆ. ಯುದ್ಧ, ಜಾಗತಿಕ ಬಿಕ್ಕಟ್ಟು ಅಥವಾ ಪೂರೈಕೆ ವ್ಯತ್ಯಯದ ಸಂದರ್ಭದಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗದಂತೆ ತಡೆಯಲು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ ಭಾರತದ ತುರ್ತು ತೈಲ ಸಂಗ್ರಹವು ಸುಮಾರು 9 ದಿನಗಳ ಅವಶ್ಯಕತೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಾಮರ್ಥ್ಯವನ್ನು 15 MMTಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ತನ್ನ ಸದಸ್ಯ ರಾಷ್ಟ್ರಗಳು ಕನಿಷ್ಠ 90 ದಿನಗಳ ತೈಲ ಸಂಗ್ರಹ ಹೊಂದಿರಬೇಕೆಂದು ಶಿಫಾರಸು ಮಾಡಿದೆ.

ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಈ ಹೊಸ ಯೋಜನೆ ಭವಿಷ್ಯದ ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Continue Reading

ದೇಶ

ಅಶೋಕ್ ರೈ ಕಂಬಳಕ್ಕೆ ಸಿದ್ಧ, ಯದುವೀರ್-ಪ್ರತಾಪ್ ಸಿಂಹ ವಿರೋಧ; ದಸರಾದಲ್ಲಿ ಹೊಸ ವಿವಾದ

Published

on

ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಸಿದ್ಧತೆಗಳು ಆರಂಭವಾಗುತ್ತಿದ್ದಂತೆಯೇ ಈ ಬಾರಿ ದಸರಾ ಕಾರ್ಯಕ್ರಮದಲ್ಲಿ ಕಂಬಳ (Kambala) ಆಯೋಜನೆ ಮಾಡುವ ವಿಚಾರ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪುತ್ತೂರು ಶಾಸಕ ಅಶೋಕ್ ರೈ (Ashok Rai) ಕಂಬಳ ಆಯೋಜನೆಗೆ ಸಿದ್ಧತೆ ಆರಂಭಿಸಿರುವುದಾಗಿ ತಿಳಿಸಿದ್ದರೆ, ಮತ್ತೊಂದೆಡೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮಹೋತ್ಸವದ ಸಿದ್ಧತೆ ಕುರಿತು ಚರ್ಚೆ ನಡೆಯಿತು. ಆಗಸ್ಟ್ 26ರಂದು ಗಜಪಯಣ ಆರಂಭವಾಗಲಿದ್ದು, ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 21ರಂದು ವಿಜಯದಶಮಿಯಂದು ಮಧ್ಯಾಹ್ನ 4:10ಕ್ಕೆ ಮೀನಾ ಲಗ್ನದಲ್ಲಿ ಐತಿಹಾಸಿಕ ಜಂಬೂ ಸವಾರಿ ನಡೆಯಲಿದೆ.

ಸಭೆಯಲ್ಲಿ ಕಂಬಳ ಆಯೋಜನೆ ವಿಚಾರವೂ ಪ್ರಸ್ತಾಪವಾಗಿದ್ದು, ಅಂತಿಮ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅಶೋಕ್ ರೈ ಅವರ ಪ್ರಕಾರ, ಕಂಬಳ ಆಯೋಜನೆಗೆ ಸುಮಾರು ₹5 ರಿಂದ ₹6 ಕೋಟಿ ವೆಚ್ಚವಾಗಲಿದ್ದು, ಜುಲೈ 15ರಿಂದಲೇ ಸಿದ್ಧತೆ ಆರಂಭಿಸಲು ಯೋಜಿಸಲಾಗಿದೆ. ಕಂಬಳದ ಮೂಲಕ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಆದರೆ, ಯದುವೀರ್ ಒಡೆಯರ್ ದಸರಾದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ದಸರಾ, ಕಂಬಳ ಮತ್ತು ಇತರೆ ಜಾತ್ರೆಗಳಿಗೆ ತಮ್ಮದೇ ಆದ ವೈಶಿಷ್ಟ್ಯವಿದ್ದು, ಪ್ರತಿಯೊಂದು ಆಚರಣೆಯೂ ತನ್ನ ಸಾಂಪ್ರದಾಯಿಕ ಸ್ವರೂಪದಲ್ಲೇ ನಡೆಯಬೇಕು ಎಂದು ಹೇಳಿದ್ದಾರೆ. ಕಂಬಳದ ಬಗ್ಗೆ ವಿರೋಧವಿಲ್ಲದಿದ್ದರೂ ದಸರಾದ ಮೂಲ ಪರಂಪರೆಯಲ್ಲಿ ಬದಲಾವಣೆ ಬೇಡ ಎಂಬುದು ಅವರ ನಿಲುವಾಗಿದೆ.

Continue Reading

ದೇಶ

ಬೆಂಗಳೂರು ಗ್ರಾಮಾಂತರದಲ್ಲಿ ರಸ್ತೆ ಕಾಮಗಾರಿ ಸ್ಥಗಿತ: ಡಾಂಬರು ದರ 40% ಏರಿಕೆ

Published

on

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಕರ್ನಾಟಕದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಮೇಲೂ ನೇರ ಪರಿಣಾಮ ಬೀರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (Bengaluru Rural) ಸುಮಾರು 98 ಕಿಲೋಮೀಟರ್ ರಸ್ತೆ ಕಾಮಗಾರಿಗಳು ಡಾಂಬರು (Bitumen) ಕೊರತೆ ಹಾಗೂ ಬೆಲೆ ಏರಿಕೆಯಿಂದ ಸ್ಥಗಿತಗೊಂಡಿವೆ.

ಲೋಕೋಪಯೋಗಿ ಇಲಾಖೆ ಮೂಲಗಳ ಪ್ರಕಾರ, ಮಧ್ಯಪ್ರಾಚ್ಯದಿಂದ ಭಾರತಕ್ಕೆ ಆಮದಾಗುವ ಬಿಟುಮೆನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಾಗಣೆ ವೆಚ್ಚವೂ ಗಣನೀಯವಾಗಿ ಹೆಚ್ಚಿದೆ. ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮ ಕಳೆದ ಎರಡು ತಿಂಗಳಲ್ಲಿ ಡಾಂಬರು ದರವು ಶೇ.35 ರಿಂದ 40ರಷ್ಟು ಏರಿಕೆಯಾಗಿದೆ. ಮೇ ತಿಂಗಳಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ ₹52 ಸಾವಿರ ಇದ್ದ VG-30 ದರ್ಜೆಯ ಡಾಂಬರು ಇದೀಗ ₹72 ಸಾವಿರ ದಾಟಿದ್ದರೆ, VG-40 ದರ ₹78 ಸಾವಿರಕ್ಕೆ ಏರಿಕೆಯಾಗಿದೆ.

ದರ ಏರಿಕೆಯಿಂದ ಈಗಾಗಲೇ ಟೆಂಡರ್ ಪಡೆದಿರುವ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹8 ರಿಂದ ₹10 ಲಕ್ಷ ವೆಚ್ಚವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಸರ್ಕಾರ ದರ ಪರಿಷ್ಕರಣೆ ಮಾಡಬೇಕು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಆಮದು ಸುಂಕ ಕಡಿಮೆ ಮಾಡಬೇಕು ಅಥವಾ ಸಬ್ಸಿಡಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಧ್ಯಪ್ರಾಚ್ಯದ ಪರಿಸ್ಥಿತಿ ಶೀಘ್ರ ಸುಧಾರಿಸದಿದ್ದರೆ, ಮುಂಗಾರು ಬಳಿಕವೂ ರಸ್ತೆ ಕಾಮಗಾರಿಗಳನ್ನು ಪುನರಾರಂಭಿಸುವುದು ಕಷ್ಟವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಂಚಾರ ತೊಂದರೆ ಹೆಚ್ಚುವುದರ ಜೊತೆಗೆ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಆತಂಕ ಎದುರಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಂಜಿತ್ ಕುಮಾರ್, “ಡಾಂಬರು ಲಭ್ಯವಾಗದ ಕಾರಣ 98 ಕಿ.ಮೀ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಬೆಲೆ ಏರಿಕೆ ಹಾಗೂ ನಿರಂತರ ಮಳೆಯೂ ಕಾಮಗಾರಿಗೆ ಅಡ್ಡಿಯಾಗಿದೆ. ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

Continue Reading

Trending