ಆರೋಗ್ಯ
ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಚಿಕಿತ್ಸೆಗೆ ಸರ್ಕಾರದಿಂದಲೇ ದರ ನಿಗದಿ: ಸಚಿವ ದಿನೇಶ್ ಗುಂಡೂರಾವ್ – Legislative Session
ಬೆಂಗಳೂರು: ಡೆಂಗ್ಯೂ ಅನ್ನು ಗಂಭೀರವಾಗಿ ಪರಿಗಣಿಸಿ ನೋಟಿಫೈ ಡಿಸೀಜ್ ಎಂದು ಘೋಷಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವೇ ದರ ನಿಗದಿಪಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಬದಲು ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ ಬಾರಿ 25 ಸಾವಿರ ಇದ್ದರೆ ಈ ಬಾರಿ 60 ಸಾವಿರ ದಾಟಿದೆ, ಡೆಂಗ್ಯೂ ಅನ್ನು ನೋಟಿಫೈ ಡಿಸೀಜ್ ಎಂದು ಘೋಷಿಸಿದ್ದೇವೆ ಎಂದರು.
ಡೆಂಗ್ಯೂ ಪ್ರಕರಣದ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಮಾಡುತ್ತಿಲ್ಲ, ಗಂಭೀರವಾಗಿ ಪರಿಗಣಿಸಿದ್ದೇವೆ. ಕೋವಿಡ್ ರೀತಿ ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ. ಒಂದೇ ಏರಿಯಾದಲ್ಲಿ ಎರಡು ಡೆಂಗ್ಯೂ ಕಂಡರೆ ಆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಿದ್ದೇವೆ. ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ಎಲ್ಲಾ ಜಿಲ್ಲೆಗಳಲ್ಲಿಯೂ ಪರೀಕ್ಷೆ ಸರಿಯಾಗಿ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ, ಪರೀಕ್ಷೆ ಇದ್ದು, ಖಾಸಗಿಯಲ್ಲಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಆರೋಪಿಗಳ ವಿರುದ್ಧ ಪಿಸಿಪಿಎನ್ಡಿಟಿ(PCPNDT) ಕೇಸ್: ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪಿಸಿಪಿಎನ್ಡಿಟಿ (PCPNDT) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತಮ ವಕೀಲರ ನಿಯೋಜನೆ ಮೂಲಕ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಮತ್ತು ಬಿಜೆಪಿ ಸದಸ್ಯ ಸಿಟಿ ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಎಲ್ಲ ಕ್ರಮ ವಹಿಸಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ರೀತಿಯ ಅಗತ್ಯ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಹಿಡಿಯಬೇಕಿದ್ದು, ಆ ಕೆಲಸ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ತೃಪ್ತರಾಗದ ಸದಸ್ಯ ಯುಬಿ ವೆಂಕಟೇಶ್, ಸರ್ಕಾರದ ಉತ್ತರ ಸರಿಯಾಗಿಯೇ ಇದೆ ಆದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಕ್ಷೆ ಹೆಚ್ಚು ಮಾಡಿ ಭಯ ಹುಟ್ಟಿಸಿ ಮಟ್ಟ ಹಾಕಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ನಾವು ಕೇಸ್ ಹಾಕುತ್ತೇವೆ, ಕೋರ್ಟ್ನಲ್ಲಿ ಅವರಿಗೆ ಜಾಮೀನು ಸಿಗಲಿದೆ, ಜಾಮೀನು ಸಿಗಲು ಕಷ್ಟವಾಗುವ ಕಲಂ ಅಡಿಯಲ್ಲಿ ಕೇಸ್ ಹಾಕಬೇಕಿದೆ. ಪಿಸಿಪಿಎನ್ಡಿಟಿ (PCPNDT) ಕಾಯ್ದೆಯಡಿ ಕ್ರಮ ವಹಿಸಲಿದ್ದೇವೆ. ಆರೋಪಿಗಳನ್ನು ಹಿಡಿಯುವವರೆಗೂ ನಾವು ಗಟ್ಟಿಯಾಗಿರುತ್ತೇವೆ. ಆದರೆ ನಂತರ ಅವರು ಜಾಮೀನು ತರುತ್ತಾರೆ, ಇಲ್ಲಿ ನಾವು ಗಟ್ಟಿಯಾಗಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ಮೊದಲು ಪೊಲೀಸರು ಕೇಸ್ ಬುಕ್ ಮಾಡುತ್ತಿದ್ದರು ಆದರೆ ಈಗ ನಾವು ಆರೋಗ್ಯ ಇಲಾಖೆ ಸಕ್ಷಮ ಪ್ರಾಧಿಕಾರವಾಗಿದ್ದು ಅದರಿಂದ ದೂರು ಕೊಡಿಸಲಿದ್ದೇವೆ ಎಂದು ತಿಳಿಸಿದರು.
ಡಿಹೆಚ್ಒ ಮೂಲಕ ಕೇಸ್ ಬುಕ್ ಮಾಡುತ್ತೇವೆ. ಈಗಾಗಲೇ 23 ಆಸ್ಪತ್ರೆ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಮೈಸೂರಿನ ಮಾತಾ ಆಸ್ಪತ್ರೆ ಪರವಾನಗಿ ರದ್ದು ಮಾಡಿದ್ದೇವೆ. ಕೋರ್ಟ್ ಮುಖಾಂತರ ಪ್ರಕರಣಗಳು ತೀರ್ಮಾನವಾಗಲಿದೆ. ಫಾಲೋಅಪ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಒಳ್ಳೆಯ ವಕೀಲರ ನೇಮಕಕ್ಕೂ ಸೂಚಿಸಲಾಗಿದೆ. ಭ್ರೂಣ ಹತ್ಯೆ ಕೊಲೆಗೆ ಸಮಾನ ಎನ್ನುವ ಕುರಿತು ಕಾನೂನು ತರಲು ಹಿಂದೆ ಚಿಂತನೆ ಇತ್ತು, ಈಗ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ ಎಂದರು.
ಪಶು ಔಷಧ ಮನುಷ್ಯರಿಗೆ ನೀಡಲ್ಲ: ಪಶುಗಳಿಗೆ ನೀಡಿವ ಔಷಧವನ್ನು ಮನುಷ್ಯರಿಗೆ ನೀಡಲ್ಲ. ಔಷಧಗಳ ಲೇಬಲ್ ದೋಷದಿಂದಾಗಿ ಆ ಔಷಧ ವಾಪಸ್ ಕಳಿಸಲಾಗಿದೆಯೇ ಹೊರತು ಔಷಧಿಯಲ್ಲಿ ಯಾವುದೇ ಲೋಪವಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಗಳಿಗೆ ಕೊಡುವ ಔಷಧ ನಾವು ಜನರಿಗೆ ಕೊಟ್ಟಿಲ್ಲ, ಸರಬರಾಜುದಾರರು ಲೋಗೋಗ್ರಾಂನಲ್ಲಿ ಎ.ಹೆಚ್.ಡಿ.ಹೆಚ್ ಇಲಾಖೆ ಎಂದು ಬಂದಿದೆ. ಇದನ್ನು ಕೂಡಲೇ ಏಳು ಪ್ರಯೋಗಾಲಯಕ್ಕೆ ಕಳಿಸಿ ಪರಿಶೀಲಿಸಲಾಗಿದ್ದು, ಔಷಧದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಲೇಬಲ್ ಸಮಸ್ಯೆ ಅಷ್ಟೆ, ಆದರೂ ದಂಡ ಹಾಕಿ ಮರು ಪೂರೈಕೆಗೆ ಸೂಚಿಸಲಾಗಿದೆ. ಮನುಷ್ಯರಿಗೆ ಕೊಡುವ ಔಷಧವೇ ಅದು, ನಾವು ಕೂಡ ಮನುಷ್ಯರಲ್ಲವೇ ಮನುಷ್ಯರಿಗೆ ಪಶುಗಳ ಔಷಧಿ ಕೊಡುತ್ತೇವಾ? ಯಾವ ಕಾರಣಕ್ಕೂ ಪಶು ಔಷಧಿ ನಮ್ಮ ಜನರಿಗೆ ಕೊಟ್ಟಿಲ್ಲ, ಲೇಬಲ್ ಕಾರಣಕ್ಕೆ ವಾಪಸ್ ಕಳಿಸಲಾಗಿದೆ. ಔಷಧದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಆರೋಗ್ಯ
Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?
ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.
ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.
ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ
WHO ಎಚ್ಚರಿಕೆ ಬಳಿಕ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ; ವಿಜಯವಾಡದಲ್ಲಿ ಕ್ಯಾಂಪ್
ವಿಜಯವಾಡ: ಜಾಗತಿಕ ಮಟ್ಟದಲ್ಲಿ ಎಬೋಲಾ ವೈರಸ್ ಕುರಿತ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ವಿಜಯವಾಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಎಬೋಲಾ ತಪಾಸಣಾ ಶಿಬಿರ ಆರಂಭಿಸಿದೆ. ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಆಂಧ್ರ ಸರ್ಕಾರ ನಿಯೋಜಿಸಿರುವ ವೈದ್ಯಕೀಯ ತಂಡಗಳು ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ, ಆರೋಗ್ಯ ಲಕ್ಷಣಗಳ ಪರಿಶೀಲನೆ ಹಾಗೂ ಶಂಕಿತ ಸೋಂಕಿನ ಗುರುತು ಪತ್ತೆ ಕಾರ್ಯ ನಡೆಸುತ್ತಿವೆ. ಜ್ವರ, ವಾಂತಿ, ದೌರ್ಬಲ್ಯ ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದು ಕೇವಲ ಮುನ್ನೆಚ್ಚರಿಕಾ ಕ್ರಮವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಹೊರಡಿಸಿರುವ ಆರೋಗ್ಯ ಎಚ್ಚರಿಕೆ ಹಿನ್ನೆಲೆಯಲ್ಲಿ ನಿಗಾ ಕ್ರಮ ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮಾಜಿ WHO ಮುಖ್ಯ ವಿಜ್ಞಾನಿ Soumya Swaminathan ಭಾರತವು ಎಬೋಲಾ ವಿರುದ್ಧದ ಸಂಶೋಧನೆ, ಲಸಿಕೆ ಅಭಿವೃದ್ಧಿ ಹಾಗೂ ರೋಗ ಪತ್ತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ. WHO ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದೊಂದಿಗೆ ಭಾರತ ಹೆಚ್ಚಿನ ಸಂಶೋಧನೆ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದ ಕೆಲವು ಭಾಗಗಳಲ್ಲಿ ಎಬೋಲಾ ಸೋಂಕು ಹೆಚ್ಚಳ ಕಂಡುಬಂದಿದೆ. WHO ಮಹಾನಿರ್ದೇಶಕ Tedros Adhanom Ghebreyesus ನೀಡಿರುವ ಮಾಹಿತಿಯಂತೆ, ಕಾಂಗೋದಲ್ಲಿ ಈಗಾಗಲೇ 101 ಪ್ರಕರಣಗಳು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನೂರಾರು ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ.
ಎಬೋಲಾ ವೈರಸ್ನ ‘ಬುಂಡಿಬುಗ್ಯೋ’ ರೂಪಾಂತರಿ ತಳಿಯು ಪತ್ತೆ ಹಾಗೂ ಚಿಕಿತ್ಸೆ ಕಾರ್ಯಕ್ಕೆ ಸವಾಲು ಎಸೆದಿರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿವೆ.
ಆರೋಗ್ಯ
ಇನ್ಸುಲಿನ್ಗೆ ಗುಡ್ಬೈ? ಸಕ್ಕರೆ ನಿಯಂತ್ರಣಕ್ಕೆ ಬಂದಿದೆ ‘ಓಬೆಡಾ’ ಮಾತ್ರೆ!
ಬೆಂಗಳೂರು: ಜಾಗತಿಕ ಖ್ಯಾತಿಯ ಔಷಧ ತಯಾರಿಕಾ ಸಂಸ್ಥೆಯಾದ Dr. Reddy’s Laboratories ಭಾರತದಲ್ಲಿ ಟೈಪ್-2 ಮಧುಮೇಹ ರೋಗಿಗಳಿಗಾಗಿ ‘ಓಬೆಡಾ’ (Obeda) ಎಂಬ ಹೊಸ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಔಷಧವು ‘ಓರಲ್ ಸೆಮಾಗ್ಲುಟೈಡ್ ಬಯೋಸಿಮಿಲರ್’ ರೂಪದಲ್ಲಿದ್ದು, ಬಾಯಿಯ ಮೂಲಕ ಸೇವಿಸಬಹುದಾದ ಮಧುಮೇಹ ನಿಯಂತ್ರಣ ಟ್ಯಾಬ್ಲೆಟ್ ಆಗಿದೆ.
ಇತ್ತೀಚೆಗೆ ಇದೇ ಸಂಸ್ಥೆ ಭಾರತ ಮತ್ತು ಕೆನಡಾದಲ್ಲಿ ಸೆಮಾಗ್ಲುಟೈಡ್ ಇಂಜೆಕ್ಷನ್ ಬಿಡುಗಡೆ ಮಾಡಿದ್ದರೆ, ಇದೀಗ ಅದೇ ಔಷಧಿಯನ್ನು ಮಾತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ರೋಗಿಗಳಿಗೆ ಹೆಚ್ಚು ಸುಲಭ ಮತ್ತು ಅನುಕೂಲಕರ ಚಿಕಿತ್ಸೆಯನ್ನು ಒದಗಿಸಲು ಮುಂದಾಗಿದೆ.
ಭಾರತದಲ್ಲಿ ಮಧುಮೇಹದ ಆತಂಕಕಾರಿ ಚಿತ್ರಣ
Indian Council of Medical Research ನಡೆಸಿದ ‘ಇಂಡಿಯಾಬ್’ ಅಧ್ಯಯನದ ಪ್ರಕಾರ, ಭಾರತದಲ್ಲಿ 10.1 ಕೋಟಿಗೂ ಅಧಿಕ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೊತೆಗೆ ಸುಮಾರು 13.6 ಕೋಟಿ ಜನರು ಪ್ರೀ-ಡಯಾಬಿಟಿಕ್ ಸ್ಥಿತಿಯಲ್ಲಿದ್ದು, ಭವಿಷ್ಯದಲ್ಲಿ ಮಧುಮೇಹಕ್ಕೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹೊಟ್ಟೆ ಬೊಜ್ಜು ಮತ್ತು ಜೀವನಶೈಲಿ ಬದಲಾವಣೆಗಳು ಮಧುಮೇಹ ಪ್ರಕರಣಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
‘ಓಬೆಡಾ’ ಮಾತ್ರೆ ಹೇಗೆ ಕೆಲಸ ಮಾಡುತ್ತದೆ?
‘ಓಬೆಡಾ’ ಔಷಧವು ಜಿಎಲ್ಪಿ-1 ಆರ್ಎ (GLP-1 RA) ವರ್ಗಕ್ಕೆ ಸೇರಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವೈದ್ಯರ ಸಲಹೆಯಂತೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮದ ಜೊತೆಗೆ ಈ ಮಾತ್ರೆಯನ್ನು ಸೇವಿಸಿದರೆ:
- ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ
- ತೂಕ ಇಳಿಕೆಗೆ ಸಹಕಾರಿ
- ದೀರ್ಘಕಾಲೀನ ಮಧುಮೇಹ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ
- HbA1c ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ
ಕ್ಲಿನಿಕಲ್ ಟ್ರಯಲ್ನಲ್ಲಿ ಯಶಸ್ಸು
Central Drugs Standard Control Organisation ಅನುಮತಿಯೊಂದಿಗೆ 288 ಮಧುಮೇಹ ರೋಗಿಗಳ ಮೇಲೆ ನಡೆದ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳಲ್ಲಿ ‘ಓಬೆಡಾ’ ಉತ್ತಮ ಫಲಿತಾಂಶ ನೀಡಿದೆ ಎಂದು ಕಂಪನಿ ತಿಳಿಸಿದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ತೂಕ ಇಳಿಕೆ ಹಾಗೂ ಸುರಕ್ಷಿತ ಬಳಕೆಯಲ್ಲಿ ಈ ಔಷಧ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ.
ಬೆಲೆ ಎಷ್ಟು?
‘ಓಬೆಡಾ’ ದಿನಕ್ಕೊಮ್ಮೆ ಸೇವಿಸುವ ಮಾತ್ರೆಯಾಗಿದ್ದು, ಮೂರು ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದೆ:
- 3 mg – ₹99
- 7 mg – ₹135
- 14 mg – ₹225
ಕಂಪನಿ ಹೇಳಿದ್ದೇನು?
M. V. Ramana ಮಾತನಾಡಿ, “ಮಧುಮೇಹ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ. ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಅವರಿಗೆ ಸೂಕ್ತ ಆಯ್ಕೆಯನ್ನು ಒದಗಿಸುವುದು ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.
1984ರಲ್ಲಿ ಸ್ಥಾಪನೆಯಾದ Dr. Reddy’s Laboratories ಜಠರ, ಹೃದಯ, ಮಧುಮೇಹ, ಕ್ಯಾನ್ಸರ್ ಮತ್ತು ಚರ್ಮರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಫಾರ್ಮಾ ಕಂಪನಿಯಾಗಿ ಗುರುತಿಸಿಕೊಂಡಿದೆ.
-
ದೇಶ6 hours agoಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
-
ದೇಶ10 hours agoಬಸ್ ಕಂಡಕ್ಟರ್ನಿಂದ ಸೂಪರ್ ಸ್ಟಾರ್ ತನಕ: ರಜನಿಕಾಂತ್ ಅಪರೂಪದ ಫೋಟೋ ವೈರಲ್
-
ಬೆಂಗಳೂರು7 hours ago“ನಾಳೆ ಎಲ್ಲ ಹೇಳುತ್ತೇನೆ”: ರಾಜಕೀಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಸ್ಪೆನ್ಸ್ ಉತ್ತರ!
-
ಕ್ರೀಡೆ7 hours ago“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
-
ದೇಶ9 hours agoಸಿಎಂ ಬದಲಾವಣೆಯ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಶಾಕ್?
-
ದೇಶ9 hours agoಅಯ್ಯನ ಕೆರೆ ಕಲುಷಿತಗೊಳಿಸಲು ಯತ್ನ: ಸಿಬ್ಬಂದಿಯ ದಿಟ್ಟ ಕ್ರಮಕ್ಕೆ ಭಾರಿ ಮೆಚ್ಚುಗೆ
-
ಅಪರಾಧ10 hours agoಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ: ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ!
-
ಕ್ರೀಡೆ9 hours ago‘ಈ ಸಲ ಕಪ್ ನಮ್ದೇ’ ಘೋಷಣೆ ಜೋರಾಗಿದೆ: ಆರ್ಸಿಬಿ ಫೈನಲ್ಗೆ ಎಂಟ್ರಿ
