ಅಪರಾಧ
ಕೋರ್ಟ್ವರೆಗೂ ಉಪ್ಪಿನ ಕಾಯಿ ಗಲಾಟೆ: ‘ಏನೇ ಮರೆತ್ರೂ, ಊಟದ ಜೊತೆ ಉಪ್ಪಿನಕಾಯಿ ಮರೀಬಾರ್ದು’: ಇಲ್ಲಾಂದ್ರೆ ಹೀಗಾಗುತ್ತೆ! – Missing Pickle case
ವಿಲ್ಲುಪುರಂ (ತಮಿಳುನಾಡು): ಚಿಕ್ಕ ತಪ್ಪನ್ನು ದೊಡ್ಡದೆಂದು ಭಾವಿಸಿ ರಂಪ ಮಾಡುವುದೇಕೆ ಎಂದು ನಾವು ಕೆಲವು ಘಟನೆಗಳನ್ನು ಹಗುರವಾಗಿ ಪರಿಗಣಿಸುತ್ತೇವೆ. ಆದರೆ, ಕೆಲವರು ಮಾತ್ರ ಅದೆಷ್ಟೇ ಚಿಕ್ಕದಾಗಿರಲಿ ಆದ ತಪ್ಪನ್ನು ಸರಿಪಡಿಸುವವರೆಗೂ ಬಿಡುವುದಿಲ್ಲ. ಅದನ್ನು ಕೋರ್ಟ್ ಕಟಕಟೆಗೂ ತಂದು ನ್ಯಾಯ ಧಕ್ಕಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.
ಹೋಟೆಲ್ವೊಂದು ಆರ್ಡರ್ ಮಾಡಿದ ಊಟದಲ್ಲಿ ಉಪ್ಪಿನಕಾಯಿ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಅದರ ವಿರುದ್ಧ ಕೇಸ್ ಜಡಿದಿದ್ದಾನೆ. ಗ್ರಾಹಕರ ವ್ಯಾಜ್ಯ ಪರಿಹಾರ ಕೇಂದ್ರದಿಂದ ತನಗೆ ಸಿಗಬೇಕಾದ ನ್ಯಾಯವನ್ನು ಪಟ್ಟುಬಿಡದೇ ಪಡೆದುಕೊಂಡಿದ್ದಾನೆ. ವ್ಯಕ್ತಿಯನ್ನು ತಾತ್ಸಾರವಾಗಿ ಕಂಡಿದ್ದ ಹೋಟೆಲ್ ಮಾಲೀಕ ದಂಡಕ್ಕೆ ಗುರಿಯಾಗಿ ಪೇಚು ಮೋರೆ ಹಾಕುವಂತಾಗಿದೆ.
ಪ್ರಕರಣವೇನು?: ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿ ನಿವಾಸಿಯಾದ ಆರೋಗ್ಯಸ್ವಾಮಿ ಎಂಬುವವರು 2022 ರಲ್ಲಿ ದತ್ತಿ ಕಾರ್ಯಕ್ರಮ ನಡೆಸಿದ್ದರು. ಅದರಲ್ಲಿ 25 ವೃದ್ಧರಿಗೆ ಊಟ ಕೊಡಿಸಿದ್ದರು. ಊಟಕ್ಕಾಗಿ ಸಮೀಪದ ಹೋಟೆಲ್ನಲ್ಲಿ 25 ಪೊಟ್ಟಣಗಳ ಆಹಾರವನ್ನು ಆರ್ಡರ್ ಮಾಡಿದ್ದರು. ಹೋಟೆಲ್ ಊಟವೊಂದಕ್ಕೆ 70 ರೂಪಾಯಿ, 10 ರೂಪಾಯಿ ಪಾರ್ಸೆಲ್ ಶುಲ್ಕ ವಿಧಿಸಿತ್ತು. ಅದರಂತೆ ಆರೋಗ್ಯಸ್ವಾಮಿ ಅವರು 25 ಪೊಟ್ಟಣಗಳಿಗೆ 2 ಸಾವಿರ ರೂಪಾಯಿ ಪಾವತಿ ಮಾಡಿದ್ದರು. ಆದರೆ, ಇದಕ್ಕೆ ಬಿಲ್ ನೀಡದೇ, ಕೈಬರಹದಲ್ಲಿ ಬರೆದ ಚೀಟಿಯನ್ನು ಕೊಡಲಾಗಿತ್ತು.
ಕಾರ್ಯಕ್ರಮದಂದು 25 ಆಹಾರ ಪೊಟ್ಟಣಗಳನ್ನು ಹೋಟೆಲ್ನವರು ಪೂರೈಕೆ ಮಾಡಿದ್ದರು. ಪಾರ್ಸೆಲ್‌ಗಳಲ್ಲಿ ಊಟದ ಜೊತೆಗೆ ನೀಡುವುದಾಗಿ ತಿಳಿಸಿದ್ದ ಉಪ್ಪಿನಕಾಯಿ ಇರಲಿಲ್ಲ. ಈ ಬಗ್ಗೆ ಹೋಟೆಲ್ಗೆ ದೂರು ನೀಡಲಾಗಿದೆ. ಆರೋಗ್ಯಸ್ವಾಮಿ ಅವರು ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಉಪ್ಪಿನಕಾಯಿಯನ್ನು ನೀಡಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ನೀಡದ ಉಪ್ಪಿನಕಾಯಿ ಒಂದು ಪ್ಯಾಕೆಟ್ಗೆ 1 ರೂಪಾಯಿ ದರದಲ್ಲಿ 25 ರೂಪಾಯಿ ಮರಳಿಸುವಂತೆ ಆರೋಗ್ಯಸ್ವಾಮಿ ಕೋರಿದ್ದರು. ಆದರೆ, ರೆಸ್ಟೋರೆಂಟ್ ಮಾಲೀಕರು ಇದನ್ನು ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಆರೋಗ್ಯಸ್ವಾಮಿ ಅವರು, ವಿಲ್ಲುಪುರಂ ಜಿಲ್ಲಾ ಗ್ರಾಹಕರ ಕುಂದುಕೊರತೆ ಕೇಂದ್ರಕ್ಕೆ ದೂರು ನೀಡಿದ್ದಾರೆ. ತಮಗಾದ ಅನ್ಯಾಯವನ್ನು ಸಮಿತಿಯ ಮುಂದೆ ಮಂಡಿಸಿಡಿದ್ದಾರೆ. ವಿಚಾರಣೆ ನಡೆಸಿದ ಸಮಿತಿಯು, ಎರಡೂ ಕಡೆಯ ವಾದವನ್ನು ಆಲಿಸಿ ಆರೋಗ್ಯಸ್ವಾಮಿ ಪರವಾಗಿ ತೀರ್ಪು ನೀಡಿದೆ.
ತೀರ್ಪು ಏನು?: ಊಟದ ಜೊತೆಗೆ ಉಪ್ಪಿನಕಾಯಿ ನೀಡುವುದಾಗಿ ಒಪ್ಪಿಕೊಂಡಿದ್ದ ಹೋಟೆಲ್, ಅದನ್ನು ನೀಡುವಲ್ಲಿ ವಿಫಲವಾದ ಕಾರಣ ಸೇವೆಯಲ್ಲಿ ಕೊರತೆಯಾಗಿದೆ. ಆರೋಗ್ಯಸ್ವಾಮಿ ಅವರಿಗೆ ಉಂಟಾದ ಅಡಚಣೆಗಾಗಿ ಹೋಟೆಲ್ ಮಾಲೀಕರು 30 ಸಾವಿರ ದಂಡ, ವ್ಯಾಜ್ಯದ ವೆಚ್ಚವಾಗಿ 5 ಸಾವಿರ ಮತ್ತು ಉಪ್ಪಿನಕಾಯಿ ಪ್ಯಾಕೆಟ್ಗೆ 25 ರೂಪಾಯಿಯನ್ನು ಪಾವತಿಸಬೇಕು. ಖರೀದಿಗೆ ಮೂಲ ರಸೀದಿ ನೀಡುವಂತೆ ಆದೇಶಿಸಿದೆ. ದಂಡದ ಮೊತ್ತವನ್ನು ರೆಸ್ಟೋರೆಂಟ್ ಮಾಲೀಕರು 45 ದಿನಗಳ ಒಳಗೆ ಪಾವತಿಸಬೇಕು. ಇಲ್ಲವಾದಲ್ಲಿ ತಿಂಗಳಿಗೆ ಶೇಕಡಾ 9 ರಷ್ಟು ಬಡ್ಡಿ ದರದೊಂದಿಗೆ ಹೆಚ್ಚುವರಿ ದಂಡವಾಗಿ ನೀಡಬೇಕು ಎಂದು ಸೂಚಿಸಿದೆ.
ಅಪರಾಧ
ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!
ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್‌ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್‌ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.
ಮೊದಲಿಗೆ ಎರಡು ಟಿಕೆಟ್‌ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.
ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.
ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್‌ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಅಪರಾಧ
ಶಿಡ್ಲಘಟ್ಟದಲ್ಲಿ ರೌಡಿ ಶೀಟರ್‌ಗಳಿಗೆ ಕಟ್ಟೆಚ್ಚರ: ಗೈರುಹಾಜರಾದರೆ ಕಠಿಣ ಕ್ರಮ
ಶಿಡ್ಲಘಟ್ಟ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ರೌಡಿ ಶೀಟರ್‌ಗಳ ಮೇಲೆ ನಿಗಾವಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ರೌಡಿ ಶೀಟರ್‌ಗಳ ಪರೇಡ್
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಶುಕ್ರವಾರ ರೌಡಿ ಶೀಟರ್‌ಗಳ ಪರೇಡ್ ನಡೆಯಿತು. ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್‌ಗಳನ್ನು ಕಡ್ಡಾಯವಾಗಿ ಹಾಜರುಪಡಿಸಿ ಪರಿಶೀಲನೆ ನಡೆಸಲಾಯಿತು.
ಗೈರುಹಾಜರಾದರೆ ಕಾನೂನು ಕ್ರಮ
ಪರೇಡ್‌ಗೆ ಗೈರುಹಾಜರಾಗುವ ರೌಡಿ ಶೀಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಮುರಳಿಧರ್ ಎಚ್ಚರಿಕೆ ನೀಡಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಕ್ರಮ
ಶಿಡ್ಲಘಟ್ಟ ನಗರ, ಗ್ರಾಮಾಂತರ ಹಾಗೂ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವುದು ಪ್ರಮುಖ ಗುರಿಯಾಗಿದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಭದ್ರತೆ
ಇಂತಹ ನಿಯಮಿತ ಪರೇಡ್‌ಗಳ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವುದು ಪೊಲೀಸರ ಉದ್ದೇಶವಾಗಿದೆ.
ಅಧಿಕಾರಿಗಳ ಉಪಸ್ಥಿತಿ
ಈ ಸಂದರ್ಭದಲ್ಲಿ ಸಿಪಿಐ ಆನಂದ್, ಪಿಎಸ್‌ಐ ವೇಣುಗೋಪಾಲ್, ಸುನಿಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಅಪರಾಧ
ಕಲಬುರಗಿಯಲ್ಲಿ ಭೀಕರ ಹತ್ಯೆ: ಮಾಜಿ ಸಚಿವರ ಸಂಬಂಧಿ ಫೈನಾನ್ಸ್ ಕಚೇರಿಯಲ್ಲೇ ಕೊಚ್ಚಿ ಕೊಲೆ
ಕಲಬುರಗಿ: ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಫೈನಾನ್ಸ್ ಕಚೇರಿಯಲ್ಲೇ ಹತ್ಯೆ
ಪಿ & ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಘಟನೆದಲ್ಲಿ 45 ವರ್ಷದ ಅನೀಲ್ ರಾಠೋಡ್ ಎಂಬವರು ಸಾವನ್ನಪ್ಪಿದ್ದಾರೆ. ಅವರು ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.
ಹಣಕಾಸು ವ್ಯವಹಾರವೇ ಕಾರಣ?
ಘಟನೆ ನಡೆದ ರಾತ್ರಿ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಅನೀಲ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಹಣಕಾಸಿನ ವಿಚಾರಕ್ಕೆ ಜಗಳ ತೀವ್ರಗೊಂಡಿದ್ದು, ಬಳಿಕ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದು ಪರಾರಿಯಾಗಿದ್ದಾರೆ. ಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾವು
ಹಠಾತ್ ದಾಳಿ ನಡೆದಾಗ ಅನೀಲ್ ರಾಠೋಡ್ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕಚೇರಿ ಬಾಗಿಲು ಬಳಿ ಅವರನ್ನು ಬೆನ್ನಟ್ಟಿ ಕೊಚ್ಚಿ ಕೊಲೆ ಮಾಡಲಾಗಿದೆ.
ಪೊಲೀಸರ ತನಿಖೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಬಳಸಿಕೊಂಡು ಸಾಕ್ಷ್ಯ ಸಂಗ್ರಹಿಸಲಾಗಿದೆ. ಹಂತಕರ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಕುಟುಂಬದ ಆರೋಪ
ಮೃತನ ಕುಟುಂಬಸ್ಥರು, “ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಜೀವ ಬೆದರಿಕೆ ಇದೆ ಎಂದು ಮೊದಲು ಹೇಳಿಕೊಂಡಿದ್ದ” ಎಂದು ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಅಪರಾಧ
ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಹತ್ಯೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಈ ಪ್ರಕರಣದ ನಿಖರ ಕಾರಣ ತನಿಖೆಯ ಬಳಿಕವೇ ಬಹಿರಂಗವಾಗಲಿದೆ.
-
ಚುನಾವಣೆ20 hours agoDavangere By Election 2026 : 25 ಅಭ್ಯರ್ಥಿಗಳ ಕಣ: ಮುಸ್ಲಿಂ ಅಭ್ಯರ್ಥಿಗಳೇ ಗೇಮ್ಚೇಂಜರ್?
-
ದೇಶ21 hours agoX ನಲ್ಲಿ ವೈರಲ್ ಆದ CA ಕಥೆ: ನಂಬಲೇಬೇಕಾ ಅಥವಾ ಕೇವಲ ಕಥೆಯಾ?
-
ದೇಶ18 hours agoಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್?: AI ರೇಸ್ನಲ್ಲಿ ಟೆಕ್ ದೈತ್ಯರ ಹೊಸ ಹೆಜ್ಜೆ
-
ದೇಶ20 hours agoಗಡಿಯಲ್ಲಿ ಹಾವು-ಮೊಸಳೆ ಕಾವಲು?: ಬಿಎಸ್ಎಫ್ ಹೊಸ ಯೋಜನೆ ಚರ್ಚೆಯಲ್ಲಿ
-
ಚುನಾವಣೆ21 hours agoಎಐಎಡಿಎಂಕೆ vs ಡಿಎಂಕೆ: ಸೀಟ್ ಶೇರಿಂಗ್ನಲ್ಲಿ ಭಾರಿ ಪೈಪೋಟಿ
-
ದೇಶ22 hours agoತಾಲಿಬಾನ್ ವಿರುದ್ಧ ಪಾಕಿಸ್ತಾನದ ಆಪರೇಷನ್: ನೂರಾರು ಉಗ್ರರು ಸಾವು
-
ದೇಶ23 hours agoಇರಾನ್ಗೆ ಟ್ರಂಪ್ ಮತ್ತೊಂದು ಗಡುವು: 24 ಗಂಟೆ ವಿಸ್ತರಣೆ ಘೋಷಣೆ
-
ದೇಶ18 hours agoವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ
