Connect with us

ಬೆಂಗಳೂರು

ಮುಡಾ ನಿವೇಶನ ಹಂಚಿಕೆ ಕಾನೂನುಬದ್ಧ, ಬಿಜೆಪಿ-ಜೆಡಿಎಸ್‌ನಿಂದ ನನ್ನ ತೇಜೋವಧೆ ಯತ್ನ: ಸಿದ್ದರಾಮಯ್ಯ – CM Siddaramaiah

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಕಾನೂನುಬದ್ಧವಾಗಿದ್ದು, ಇದರಲ್ಲಿ ನನ್ನ ಹಾಗೂ ನನ್ನ ಪತ್ನಿ ಪಾತ್ರ ಇಲ್ಲ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಇಂದು ವಿಧಾನಸೌಧದಲ್ಲಿ ದಾಖಲೆ ಸಮೇತವಾಗಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿಎಂ, ಬಿಜೆಪಿ-ಜೆಡಿಎಸ್ ರಾಜಕೀಯವಾಗಿ ಹತಾಶರಾಗಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಾರೆ. ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಸಹಿಸಲು ಆಗುತ್ತಿಲ್ಲ.‌ ಕಲಾಪದ ಎರಡು ವಾರಗಳು ಒಂದೇ ವಿಚಾರ ಪ್ರಸ್ತಾಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರ ಬಿಟ್ಟರೆ ರಾಜ್ಯದ ಸಮಸ್ಯೆ ಬಗ್ಗೆ ಚಕಾರ ಎತ್ತಿಲ್ಲ. ಪ್ರವಾಹದ ಬಗ್ಗೆ ವಿಪಕ್ಷಗಳು ಯಾರೂ ಮಾತನಾಡಿಲ್ಲ. ಇದನ್ನೆಲ್ಲಾ ನೋಡಿದರೆ ಸಿಎಂ, ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂಬ ಉದ್ದೇಶ ಇದೆ ಅನ್ನಿಸುತ್ತೆ. ಇದು ಕಾನೂನುಬದ್ಧವಾಗಿದೆ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನ. ಬಿಜೆಪಿ-ಜೆಡಿಎಸ್ ಗೆ ಎರಡನೇ ಸರಿ ಸಿಎಂ ಆಗುವುದನ್ನು ಸಹಿಸಲು ಆಗುತ್ತಿಲ್ಲ ಎಂದರು.

ಶಾಸಕನಾಗಿ, ಮಂತ್ರಿಯಾಗಿ, ಸಿಎಂ ಆಗಿ ಸುಮಾರು 40 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇಂದಿನವರೆಗೆ ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ-ಜೆಡಿಎಸ್ ದ್ವೇಷದಿಂದ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿದರೂ ಹೆಚ್ಚು ಸ್ಥಾನ ಗೆಲ್ಲಲು ಆಗಿಲ್ಲ. ಜನರ ವಿಶ್ವಾಸ ಗಳಿಸಲು ಅವರು ವಾಮಮಾರ್ಗ ಬಳಸುತ್ತಿದ್ದಾರೆ ಎಂದು ಟೀಕಿಸಿದರು.

2-8-1935ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಜಮೀನನ್ನು ಹರಾಜು ಮಾಡಿಸಲಾಯ್ತು. 1 ರೂಪಾಯಿಗೆ ನಿಂಗ ಬಿನ್ ಜವರಗೆ ಹರಾಜು ಮಾಡಲಾಯ್ತು ಎಂದು ತಿಳಿಸಿದರು.

ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಸ್ವಯಾರ್ಜಿತ ಜಮೀನಾಗಿರುವುದರಿಂದ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.

10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ ಮಂಜುನಾಥಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. 3ನೆಯವರು ದೇವರಾಜು ಎನ್ನುವವರು ಎಂದು ವಿವರಿಸಿದರು.

ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464ರ 3-16 ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ಅವರ ಮೂರನೆ ಮಗ ಜೆ.ದೇವರಾಜು ನಮೂನೆ 19ರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಜಮೀನು ನಿಂಗ ಬಿನ್ ಜವರ ಅವರಿಗೆ ಸೇರಿದ್ದು, ಅವರು ಫೌತಿಯಾಗಿ ನಮಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು ಸರ್ವೆ ನಂ. 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮ ತಕರಾರು ಏನೂ ಇರುವುದಿಲ್ಲವೆಂದು ಸಹಿ ಹಾಕಿದ್ದರು ಎಂದು ತಿಳಿಸಿದರು.

ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ. ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿಜೆಪಿಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಂಧಪಟ್ಟಿದ್ದಲ್ಲ. ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿಲ್ಲ. ಆಗ, ಜಿ.ದೇವರಾಜು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ. ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದಾರೆ. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದಾರೆ. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ ಎಂದು ವಿವರಿಸಿದರು.

ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಸದರಿ ಶಿಫಾರಸ್ಸನ್ನು ಆಧರಿಸಿ, ಭೂಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ಬಾಲಸುಬ್ರಮಣ್ಯನ್ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಡಿನೋಟಿಫೈ ಮಾಡಿದೆ.

ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು-ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುತ್ತದೆ ಎಂದು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984ರಿಂದ ಒಟ್ಟು 13 ಬಡಾವಣೆಗಳಲ್ಲಿ 235-30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈಬಿಡಲಾಗಿದೆ. ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ 15-7-2005ರಲ್ಲಿ ಭೂಪರಿವರ್ತನೆಯಾಗಿವೆ. ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ.

ಇದಾದ ಮೇಲೆ 23-6-2014ರಲ್ಲಿ ಮತ್ತು 25-10-2021ರಲ್ಲಿ ಭೂಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ. ನನ್ನ ಪತ್ನಿ ತನ್ನ ನಿವೇಶನ/ಜಾಗ ಕೊಡಿ ಎಂದು ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ. ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ. ಭೂಸ್ವಾಧೀನ ಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ.50:50ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು 14-9-2020ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ ಎಂದು ತಿಳಿಸಿದರು.

ಇದೆಲ್ಲ ಆದ ಮೇಲೆ ನನ್ನ ಪತ್ನಿ 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ. ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು 30-12-2021 ರಂದು ಕೆಸರೆ ಗ್ರಾಮದ ಸ.ನಂ. 464ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ ಎಂದು ತಿಳಿಸಿದರು.

ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ಜಸ್ಟೀಸ್ ಪಿ.ಎನ್. ದೇಸಾಯಿಯವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ. ಬಿಜೆಪಿ, ಜೆಡಿಎಸ್ ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಮನೆ ಮುರುಕರು: ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ?. ಮಂಜುನಾಥರನ್ನು ಸುಳ್ಳು ಹೇಳಿ, ಎತ್ತಿ ಕಟ್ಟಿ ಕೈಯಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಹತಾಶೆಯಿಂದ ರಾಜಕೀಯ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಮನೆ ಮುರುಕರು ಎಂದು ಬಿಜೆಪಿಯವರನ್ನು ಕರೆಯಬೇಕು. ಈವರೆಗೆ 50:50ರಡಿ 909 ನಿವೇಶನ ಹಂಚಿಕೆ ಆಗಿರುತ್ತದೆ. 109 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಒಟ್ಟು 1,328 ನಿವೇಶನಗಳನ್ನು ಮುಡಾ ಹಂಚಿಕೆ ಮಾಡಿದೆ. ವಿಜಯನಗರ ಬಡಾವಣೆಯಲ್ಲಿ 125 ಸೈಟ್ ಗಳನ್ನು ಬೇರೆ ಬೇರೆಯವರಿಗೆ ಕೊಡಲಾಗಿತ್ತು. ಇದರಲ್ಲಿ ನನ್ನದಾಗಲಿ, ನನ್ನ ಪತ್ನಿದಾಗಲಿ ಯಾವ ಪಾತ್ರವೂ ಇಲ್ಲ. ಇದರಲ್ಲಿ ನಮ್ಮದೇನು ತಪ್ಪಿಲ್ಲ. ಸಿದ್ದರಾಮಯ್ಯ ಅವರು ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸುತ್ತಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮಲ್ಲಿ ಅನೇಕರು ಟವೆಲ್ ಹಾಕಿದ್ದಾರೆ: ಸಿಎಂ ಕುರ್ಚಿಗೆ ಟವಲ್ ಹಾಕಿದವರಿಂದಲೇ ಷಡ್ಯಂತ್ರ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮಲ್ಲಿ ಸಿಎಂ ಆಗುವ ಅನೇಕ ಅರ್ಹ ವ್ಯಕ್ತಿಗಳಿದ್ದಾರೆ ಎಂದು ಡಿಕೆಶಿ ಕಡೆ ನೋಡಿದ ಸಿಎಂ ಸಿದ್ದರಾಮಯ್ಯ, ಯಾರು ಅಂತ ಕುಮಾರಸ್ವಾಮಿಯನ್ನೇ ಕೇಳಿ ಎಂದು ಸೂಚ್ಯವಾಗಿ ತಿಳಿಸಿದರು.

ನ್ಯಾಯಾಂಗ ತನಿಖೆಯಲ್ಲಿ ಎಲ್ಲವೂ ತನಿಖೆ: 14.7.2024ರಂದು ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ಮಾಡಿದ್ದೇವೆ. ಮುಡಾದಲ್ಲಿ ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಲೋಕಸಭೆಯ ಹೊರಗಡೆ ಬಿಜೆಪಿ ಸಂಸದರು ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕಕ್ಕೆ ಇಷ್ಟು ಅನ್ಯಾಯ ವಾಗಿದೆ ಒಂದು ದಿನವಾದರೂ ಪ್ರತಿಭಟನೆ ಮಾಡಿದ್ದಾರಾ?. ಐದು ವರ್ಷ 25 ಜನ ಬಿಜೆಪಿ ಎಂಪಿಗಳಿದ್ದರು ಆಗ ಪ್ರತಿಭಟನೆ ಮಾಡಿಲ್ಲ. ಈ ವಿಚಾರ ಪ್ರಸ್ತಾಪ ಮಾಡಿಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಿಲ್ಲ ಎಂದು ಟೀಕಿಸಿದರು.

ಕಣ್ಣು ತಪ್ಪಿನಿಂದ ಆಸ್ತಿ ವಿವರ ಸಲ್ಲಿಸಿಲ್ಲ: ಈ ಜಮೀನಿನ ವಿವರವನ್ನು 2013ರ ಅಫಿಡವಿಟ್ ನಲ್ಲಿ ಮಾಹಿತಿ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, ಕಣ್ಣು ತಪ್ಪಿನಿನಿಂದ ಮಾಹಿತಿ ನೀಡಿಲ್ಲ. ಆದರೆ ನಂತರ ಲೋಕಾಯುಕ್ತಕ್ಕೆ ಸಲ್ಲಿಸಿದ ಆಸ್ತಿ ವಿವರದ ಮಾಹಿತಿ ಅಫಿಡವಿಟ್ ನಲ್ಲಿ ಈ ಜಮೀನಿನ ಮಾಹಿತಿಯನ್ನು ಉಲ್ಲೇಖ ಮಾಡಿದ್ದೇನೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.

ಬೆಂಗಳೂರು

ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!

ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿದೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.

ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

Continue Reading

ಬೆಂಗಳೂರು

ವೇತನ ವಿವಾದದಲ್ಲಿ ಸಿಎಂ ಸ್ಪಷ್ಟನೆ: 14 ತಿಂಗಳ ಹಿಂಬಾಕಿಗೆ ಮಾತ್ರ ಸರ್ಕಾರ ಸಿದ್ಧ

ಬೆಂಗಳೂರು: ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “ಈ ಬೇಡಿಕೆ ಸಮಂಜಸವಲ್ಲ. ಸರ್ಕಾರ ಕೇವಲ 14 ತಿಂಗಳ ಹಿಂಬಾಕಿಗೆ ಸಿದ್ಧ” ಎಂದು ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ತಿಳಿಸಿದ್ದಾರೆ.

2020ರಿಂದ 2023ರ ಫೆಬ್ರವರಿವರೆಗಿನ ಬಾಕಿ ವೇತನ ಪಾವತಿಗೆ ನೌಕರ ಸಂಘಗಳು ಒತ್ತಾಯಿಸಿದ್ದರೊಂದಿಗೆ, 2024ರಿಂದ ನೂತನ ವೇತನವನ್ನೂ ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ಹಿಂದಿನ ಸರ್ಕಾರದ ಆದೇಶಗಳ ದೋಷಗಳನ್ನು ಪರಿಗಣಿಸಿ 14 ತಿಂಗಳ ವೇತನ ಹಿಂಬಾಕಿಗೆ ಸಮ್ಮತಿಯಿದೆ,” ಎಂದು ಸ್ಪಷ್ಟಪಡಿಸಿದರು.

ವೇತನ ಪರಿಷ್ಕರಣೆ ಪಶ್ಚಾತ್ಪಟ
2016ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 12.5% ವೇತನ ಹೆಚ್ಚಳ ಜಾರಿಗೆ ಬಂದಿತ್ತು. ಆದರೆ 2020ರ ಕೋವಿಡ್ ಕಾರಣದಿಂದ ಆ ವೇಳೆಗೆ ಯಾವುದೇ ಪರಿಷ್ಕರಣೆ ಆಗಿರಲಿಲ್ಲ. ನಂತರದ ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀನಿವಾಸ ಮೂರ್ತಿ ಸಮಿತಿ ಶಿಫಾರಸ್ಸಿನಂತೆ 2022ರ ಜೂನ್‌ 01ರಿಂದ 2023ರ ಫೆಬ್ರವರಿವರೆಗೆ ಹಿಂಬಾಕಿ ಪಾವತಿ ಮಾಡಲು ತೀರ್ಮಾನಿಸಲಾಗಿತ್ತು.

ಸರ್ಕಾರದ ಆರ್ಥಿಕ ಹೊಣೆಗಾರಿಕೆ
ಸಿದ್ದರಾಮಯ್ಯ ಅವರು ಹೇಳಿದ್ದಾರೆ: “ನಾವು ಅಧಿಕಾರಕ್ಕೆ ಬಂದಾಗ ನಿಗಮಗಳಿಗೆ ಒಟ್ಟಾರೆ ₹4000 ಕೋಟಿ ಸಾಲ ಇತ್ತು. 2018 ರಲ್ಲಿ ಈ ಮೊತ್ತ ಕೇವಲ ₹14 ಕೋಟಿ ಮಾತ್ರ ಇತ್ತು. ಯಾವುದೇ ನಿಗಮ ಲಾಭದಲ್ಲಿ ಇಲ್ಲ.” ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಘದ ಚುನಾವಣೆ ಮತ್ತು ಮುಂದಿನ ಕ್ರಮ
ಸಾರಿಗೆ ನೌಕರರ ಸಂಘದ ಚುನಾವಣೆ ಹಾಗೂ ಬೇಡಿಕೆಗಳ ಕುರಿತಂತೆ ಸರ್ಕಾರ ಪರಿಶೀಲನೆ ನಡೆಸಲಿದ್ದು, ಮಾತುಕತೆ ಮೂಲಕ ಎಲ್ಲ ಅಹವಾಲುಗಳನ್ನು ಬಗೆಹರಿಸಲು ಸಿದ್ಧವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

Continue Reading

ಬೆಂಗಳೂರು

ಸಾರಿಗೆ ನೌಕರರ ಮುಷ್ಕರ ಆರಂಭ: ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ – “ಹಠವಿಲ್ಲದೆ ಸಹಕಾರ ನೀಡಿ”

ಬೆಂಗಳೂರು: ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರು ಮುಷ್ಕರಕ್ಕೆ (Transport Employees Strike) ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಸಾರಿಗೆ ನೌಕರರು ಕೇಳಿರುವ ಬೇಡಿಕೆಯಲ್ಲಿ ತಪ್ಪಿಲ್ಲ. ಆದರೆ ಸರ್ಕಾರದ ಪರಿಸ್ಥಿತಿಯನ್ನೂ ಅವರು ಗಮನದಲ್ಲಿಟ್ಟುಕೊಳ್ಳಬೇಕು. ಹಠವಿಲ್ಲದೆ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ನೌಕರರೊಂದಿಗೆ ಸಭೆ ನಡೆಸಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದಾರೆ.

“ಸಾರ್ವಜನಿಕರ ಹಿತವೇ ಮೊದಲಾದ್ದು. ಕೆಲವು ನೌಕರರು ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಅವರಿಗೆ ಅಭಿನಂದನೆ” ಎಂದು ಡಿಸಿಎಂ ಹೇಳಿದ್ದಾರೆ.

ಇತ್ತ, ಹಳದಿ ಮೆಟ್ರೊ ಮಾರ್ಗದ (Yellow Metro Line) ಉದ್ಘಾಟನೆಯ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, “ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 10ರಂದು ಬರುವ ಸಾಧ್ಯತೆ ಇದೆ. ನಾವು ಈಗಾಗಲೇ ತಯಾರಿ ಪರಿಶೀಲನೆ ಆರಂಭಿಸಿದ್ದೇವೆ. ಕಾರ್ಯಕ್ರಮದ ಅಧಿಕೃತ ಸಮಯ ಇನ್ನೂ ಘೋಷಣೆಯಾಗಿಲ್ಲ” ಎಂದು ತಿಳಿಸಿದ್ದಾರೆ.

ಇದೇ ದಿನ ಬಿಜೆಪಿ ವತಿಯಿಂದ ರೈಲ್ವೆ ಸಂಬಂಧಿತ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Continue Reading

Trending