Connect with us

ಬೆಂಗಳೂರು

ಮತ್ತೆ ಪಾದಯಾತ್ರೆ ರಾಜಕೀಯದ ಸದ್ದು: ಪ್ರಮುಖ ಪಾದಯಾತ್ರೆಗಳ ಹಿಂದಿರುವ ರಾಜಕೀಯ ಲಾಭ – ನಷ್ಟದ ಲೆಕ್ಕಾಚಾರವೇನು? – BJP JDS padayatra

Published

on

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆ ರಾಜಕೀಯ ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರವಾಗಿ ಬಿಜೆಪಿ – ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು- ಮೈಸೂರು ವರೆಗೆ ಪಾದಯಾತ್ರೆಗೆ ಉದ್ದೇಶಿಸಿದೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಪಾದಯಾತ್ರೆ ನಡೆಯಲಿದೆ.

ಅಷ್ಟಕ್ಕೂ ಕರ್ನಾಟಕ ರಾಜಕೀಯದಲ್ಲಿ ಪಾದಯಾತ್ರೆ ಪೊಲಿಟಿಕ್ಸ್ ಇದೇ ಮೊದಲಲ್ಲ. ಈವರೆಗೆ ಕರುನಾಡು ಕಂಡಿರುವ ಪ್ರಮುಖ ಪಾದಯಾತ್ರೆ ಪೊಲಿಟಿಕ್ಸ್ ಮತ್ತು ಅದರಿಂದ ಪಕ್ಷಗಳು ರಾಜಕೀಯ ಲಾಭ ನಷ್ಟಕ್ಕೆ ಸಾಕ್ಷಿಯಾಗಿದೆ. ದೋಸ್ತಿಗಳು ಆ.3 ರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಏಳು ದಿನಗಳ ಪಾದಯಾತ್ರೆಗೆ ನಿರ್ಧರಿಸಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹಗರಣಗಳ ಆರೋಪವನ್ನು ಜನರ ಮುಂದೆ ಕೊಂಡೊಯ್ಯಲು ದೋಸ್ತಿಗಳು ಮುಂದಾಗಿದ್ದಾರೆ.

ರಾಜ್ಯ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ಪೊಲಿಟಿಕ್ಸ್ ಇದೇ ಮೊದಲಲ್ಲ. ಈ ಮುಂಚೆನೂ ಕೆಲ ಪ್ರಮುಖ ಪಾದಯಾತ್ರೆಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಆ ಮೂಲಕ ಪಾದಯಾತ್ರೆ ನಡೆಸಿದ ಪಕ್ಷಗಳಿಗೆ ಚುನಾವಣೆಗಳಲ್ಲಿ ರಾಜಕೀಯ ಲಾಭವನ್ನೂ ಒದಗಿಸಿಕೊಟ್ಟಿದೆ. ರಾಜ್ಯದಲ್ಲಿ ನಡೆದ ನಿರ್ಣಾಯಕ ಪಾದಯಾತ್ರೆ ಮತ್ತ ಅದರ ಲಾಭ ನಷ್ಟ ಲೆಕ್ಕಾಚಾರದ ಹಿನ್ನೋಟ ಇಲ್ಲಿದೆ.

ದೇವೇಗೌಡರ ಪಾದಯಾತ್ರೆ ಪೊಲಿಟಿಕ್ಸ್: ಹೆಚ್.ಡಿ. ದೇವೇಗೌಡರ 2001ರಲ್ಲಿ ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆತಟ್ಟಿ ಪಾದಯಾತ್ರೆಯ ಹೋರಾಟಕ್ಕೆ ಇಳಿದಿದ್ದರು. ನೀರಾ ತೆಗೆವ ವಿವಾದಲ್ಲಿ ಇಬ್ಬರು ರೈತರು ಪೊಲೀಸರು ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದರು. ಆ ವೇಳೆ ತೆಂಗಿಗೆ ನುಸಿರೋಗ ಹೆಚ್ಚಿದ್ದರಿಂದ ನೀರಾ ತೆಗೆಯುವ ವಿಚಾರ ಮುನ್ನೆಲೆಗೆ ಬಂದಿತ್ತು. ಇದೇ ವಿಚಾರವಾಗಿ ನಡೆದ ರೈತರ ಹೋರಾಟದ ಮೇಲೆ ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಗೋಲಿಬಾರ್‌ ನಡೆದು, ಇಬ್ಬರು ರೈತರು ಮೃತಪಟ್ಟಿದ್ದರು.

ಈ ಸನ್ನಿವೇಶವನ್ನು ಬುದ್ದಿವಂತಿಕೆಯಿಂದ ಬಳಸಿಕೊಂಡ ದೊಡ್ಡಗೌಡರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಸ್‌.ಎಂ. ಕೃಷ್ಣ ಸರಕಾರದ ವಿರುದ್ಧ ಪಾದಯಾತ್ರೆ ಸಂಘಟಿಸಿ ಅದರ ಅಲೆಯಲ್ಲಿ ಚುನಾವಣೆ ಗೆದ್ದು ಬಂದಿದ್ದರು. ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ವರೆಗೆ ದೇವೇಗೌಡರು 2001ರ ಅ.28ರಿಂದ ನ.1ರ ವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಒಟ್ಟು ಐದು ದಿನಗಳ ಕಾಲ ಸುಮಾರು 80 ಕಿ.ಮೀ. ಕ್ರಮಿಸಿ ಪಾದಯಾತ್ರೆ ನಡೆಸಿ, ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.

ಇನ್ನು 2013ರಲ್ಲಿ ಫೆ.12ರಂದು ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ವರಿಷ್ಠ ದೇವೇಗೌಡರು ಬೆಂಗಳೂರು ನಗರದಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಬನ್ನಪ್ಪ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡಗೌಡರು ನಗರದಲ್ಲಿ ಪಾದಯಾತ್ರೆ ನಡೆಸಿದ್ದರು.

ಜೆಡಿಎಸ್​ಗೆ ಲಾಭ ತಂದು ಕೊಟ್ಟ ಪಾದಯಾತ್ರೆ: ದೇವೇಗೌಡರು ಕಾಂಗ್ರೆಸ್ ಸರ್ಕಾರದ ಗೋಲಿಬಾರ್ ವಿರುದ್ಧ ನಡೆಸಿದ ಪಾದಯಾತ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಭರ್ಜರಿ ರಾಜಕೀಯ ಲಾಭವನ್ನು ಕೊಟ್ಟಿತು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಿತ್ತು. ಎಸ್.ಎಂ. ಕೃಷ್ಣ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ‌ ಅಲೆಯ ಜೊತೆಗೆ ದೊಡ್ಡಗೌಡರು ನಡೆಸಿದ ಪಾದಯಾತ್ರೆ ಹೋರಾಟವೂ ಜೆಡಿಎಸ್​ಗೆ ಭಾರೀ ಲಾಭ ತಂದು ಕೊಟ್ಟಿತು. 2004 ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 58 ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ 37 ಸ್ಥಾನಗಳನ್ನು ಗೆದ್ದು ಪಾದಯಾತ್ರೆ ಪೊಲಿಟಿಕ್ಸ್ ಶಕ್ತಿಯನ್ನು ತೋರಿಸಿಕೊಟ್ಟಿತು.

1999ರಲ್ಲಿ ಹಳೆ ಮೈಸೂರು ಭಾಗದಲ್ಲಿ 3 ಸ್ಥಾನ ಗೆದ್ದಿದ್ದ ಜೆಡಿಎಸ್ 2004ರಲ್ಲಿ 37 ಸ್ಥಾನ ಗೆದ್ದು ಬೀಗಿತು. 1999 ಚುನಾವಣೆಯಲ್ಲಿ 11.45% ರಷ್ಟು ಇದ್ದ ಜೆಡಿಎಸ್​ನ ಮತ ಪ್ರಮಾಣ 2004 ಚುನಾವಣೆಯಲ್ಲಿ 21.10%ಗೆ ಏರಿಕೆ ಕಂಡಿತ್ತು. ಇದರಿಂದ ಪಕ್ಷಕ್ಕೆ ಮೈತ್ರಿ ಸರ್ಕಾರ ನಡೆಸಲು ಸಾಧ್ಯವಾಯಿತು. ಅದೇ ರೀತಿ 2013ರಲ್ಲಿ ಕುಡಿಯುವ ನೀರು ಸಂಬಂಧ ಬೆಂಗಳೂರಲ್ಲಿ ಮಾಡಿದ ಪಾದಯಾತ್ರೆಯಿಂದಲೂ ಜೆಡಿಎಸ್​ಗೆ ಪರೋಕ್ಷವಾಗಿ ಪಕ್ಷ ಸಂಘಟನೆಗೆ ಬಲ ನೀಡಿತು. 2013 ಚುನಾವಣೆಯಲ್ಲಿ ಜೆಡಿಎಸ್ ಬೆಂಗಳೂರು ನಗದರಲ್ಲಿ ಮೊದಲ ಬಾರಿಗೆ 3 ಸ್ಥಾನವನ್ನು ಗೆಲ್ಲುವಂತಾಯಿತು.

ಎಸ್.ಎಂ. ಕೃಷ್ಣರಿಂದ ಕಾವೇರಿ ಪಾದಯಾತ್ರೆ: 2002ರಲ್ಲಿ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಪಾದಯಾತ್ರೆಯ ಮೊರೆ ಹೋಗಿದ್ದರು. ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ ಎಸ್.ಎಂ. ಕೃಷ್ಣ ಪಾದಯಾತ್ರೆ ಕೈಗೊಂಡು ಕಾವೇರಿ ಪ್ರಾಂತ್ಯದ ಜನರ ಮನಗೆಲ್ಲುವ ಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ನೀರು ಹಂಚಿಕೆ ವಿಚಾರ ಸುಪ್ರೀಂ ಕೋರ್ಟ್‌ ಮುಂದೆ ಇದ್ದಿದ್ದರಿಂದ ಈ ಪಾದಯಾತ್ರೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಎಸ್.ಎಂ. ಕೃಷ್ಣ ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 2002 ಅ.7ರಿಂದ ಅ.11 ರವರೆಗೆ ಆರು ದಿನಗಳ ಪಾದಯಾತ್ರೆ ಕೈಗೊಂಡಿದ್ದರು. ಬೆಂಗಳೂರಿನ ರಾಜರಾ ಜೇಶ್ವರಿ ನಗರದಿಂದ ಮಂಡ್ಯದ ವರೆಗೆ 100 ಕಿ.ಮೀ. ದೂರ ಪಾದಯಾತ್ರೆ ನಡೆಸಿದ್ದರು. ಆ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿದ್ದರು. ಆದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಇದರಿಂದ ಹೆಚ್ಚಿನ ರಾಜಕೀಯ ಲಾಭ ಲಭಿಸಲಿಲ್ಲ. ಬಲವಾದ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ ಆ ಚುನಾವಣೆಯಲ್ಲಿ ಸೋಲು ಕಂಡಿತ್ತು.

ಸಿದ್ದರಾಮಯ್ಯರ ಬಳ್ಳಾರಿ ಪಾದಯಾತ್ರೆ: ಬಳ್ಳಾರಿಯಲ್ಲಿ ಬಿಜೆಪಿಯ ರೆಡ್ಡಿ ಹಾಗೂ ಶ್ರೀರಾಮುಲು ಪ್ರಾಬಲ್ಯದ ವಿರುದ್ದ ತೊಡೆತಟ್ಟಿ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಈ ಐತಿಹಾಸಿಕ ಪಾದಯಾತ್ರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇದು 2013ರಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿತು.

2010ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಆಗ ಅಧಿಕಾರದಲ್ಲಿ ಪ್ರಾಬಲ್ಯ ಹೊಂದಿದ್ದು ಗಣಿಧಣಿಗಳಾದ ಜನಾರ್ದನ್ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು. ರಾಜ್ಯ ವಿಧಾನಸಭೆಯಲ್ಲಿ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ದರು. ವಿಧಾನಸಭೆಯಲ್ಲೇ ಬಳ್ಳಾರಿ ಗಣಿಧಣಿಗಳ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಭುಜತಟ್ಟಿ, ನಾವು ಬಳ್ಳಾರಿಗೆ ಬಂದೇ ಬರುತ್ತೇವೆ. ನಡೆದುಕೊಂಡೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಪ್ರತಿ ಸವಾಲು ಹಾಕಿದ್ದರು. ಆಗ ಹುಟ್ಟಿದ್ದೇ ಬಳ್ಳಾರಿ ಪಾದಯಾತ್ರೆ. 2010ರ ಜುಲೈ 25 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಯಿತು. ಬೆಂಗಳೂರಿನಿಂದ ಬಳ್ಳಾರಿಗೆ ಹೊರಟ ಪಾದಯಾತ್ರೆ ಸಮಾರೋಪ ಆಗಿದ್ದು ಆಗಸ್ಟ್ 8 ರಂದು. ಅಂದು ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಗಣಿಧಣಿಗಳು ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಬ್ಬರಿಸಿದ್ದರು.

ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ: 2013ರಲ್ಲಿ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆ ನಡೆಸಿದ್ದರು. ಕೃಷ್ಣಾದ ಎ ಮತ್ತು ಬಿ ಸ್ಕೀಮ್‌ನಡಿ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಸರಕಾರ ವೈಫಲ್ಯ ಹಾಗೂ ನೀರಾವರಿ ಯೋಜನೆಗೆ ಅನುಷ್ಠಾನದಲ್ಲಿನ ವೈಫಲ್ಯ ವಿರೋಧಿಸಿ ಚುನಾವಣಾ ಪೂರ್ವ ಜ.7 ರಿಂದ 14 ರವರೆಗೆ ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂಬ ಯಾತ್ರೆ ಕೈಗೊಂಡಿತ್ತು. ಕೃಷ್ಣ ಯೋಜನೆಯಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳದೇ ಇರುವುದರಿಂದ 259 ಟಿಎಂಸಿ ನೀರು ಆಂಧ್ರಕ್ಕೆ ಹೋಗುತ್ತಿದೆ. ಅಲ್ಲಿನ ನೀರಾವರಿ ಯೋಜನೆಗೆ 17 ಸಾವಿರ ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿದ್ದ ಬಿಜೆಪಿ, ಕೇವಲ 500 ಕೋಟಿ ರೂ. ನೀಡಿದೆ ಎಂಬ ಪ್ರಮುಖ ಅಜೆಂಡಾದೊಂದಿಗೆ ಪಾದಯಾತ್ರೆ ನಡೆಸಲಾಗಿತ್ತು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಜೆಟ್‌ನಲ್ಲಿ ಇದಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಲಾಗುವುದೆಂಬ ಭರವಸೆಯೊಂದಿಗೆ ಪಾದಯಾತ್ರೆ ನಡೆಸಿತ್ತು. ಹೊಸಪೇಟೆಯಿಂದ ಆರಂಭಗೊಂಡು ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳದ ಮಾರ್ಗವಾಗಿ ಕೂಡಲಸಂಗಮದಲ್ಲಿ ಸಮಾರೋಪಗೊಂಡು ಸುಮಾರು 140 ಕಿ.ಮೀ ಪಾದಯಾತ್ರೆ ನಡೆಸಲಾಯಿತು.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಮೇಕೆದಾಟು ಪಾದಯಾತ್ರೆ. 2022ರಂದು ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿಗಾಗಿ ಆಗ್ರಹಿಸಿ ಮಾಡಿದ ಪಾದಯಾತ್ರೆ. ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡಿತ್ತು. ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9, 2022 ರಿಂದ ಆರಂಭವಾದ ಪಾದಯಾತ್ರೆ ಎರಡು ಹಂತಗಳಲ್ಲಿ ನಡೆಸಲಾಗಿತ್ತು. ಐದು ದಿನಗಳ ಕಾಲ ಪಾದಯಾತ್ರೆ ನಡೆಸಿ ಕೋವಿಡ್ ನಿಯಮಾವಳಿ ಹಿನ್ನೆಲೆ ನಿಲ್ಲಿಸಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಫೆ.27 ರಿಂದ ಮರು ಆರಂಭಿಸಿ ಮಾ.2, 2022ಕ್ಕೆ ಮುಕ್ತಾಯವಾಗಿತ್ತು. 165 ಕಿ.ಮೀ. ಕ್ರಮಿಸಿ 9 ದಿನಗಳ ಪಾದಯಾತ್ರೆ ನಡೆಸಲಾಗಿತ್ತು.

ಬೆಂಗಳೂರು ನಗರಕ್ಕೆ ನೀರು ಒದಗಿಸಬಹುದಾದ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ವಿಳಂಬ ಮಾಡುತ್ತಿವೆ ಎನ್ನುವುದು ಕಾಂಗ್ರೆಸ್‌ನ ಪ್ರಧಾನ ಆರೋಪವಾಗಿತ್ತು. ಮೇಕೆದಾಟು ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಸೇರಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಂಗಳೂರಿನ‌ ಬಸವನಗುಡಿಯಲ್ಲಿ ಸಮಾರೋಪಗೊಂಡಿದ್ದ ಮೇಕೆದಾಟು ಪಾದಯಾತ್ರೆ ರಾಜಕೀಯ ಲೆಕ್ಕಾಚಾರ ಹೊಂದಿತ್ತು.‌

ಪಾದಯಾತ್ರೆಯಿಂದ ಗದ್ದುಗೆ ಹಿಡಿದ ಕಾಂಗ್ರೆಸ್: ಬಳ್ಳಾರಿ ಪಾದಯಾತ್ರೆ ಹಾಗೂ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಮೂಲಕ ಕಾಂಗ್ರೆಸ್ 2013ರ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಪರಿಣಾಮ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಚಿಗುರೊಡೆದಿತ್ತು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4 ರಿಂದ 6 ಸ್ಥಾನಗಳಿಗೆ ಏರಿಕೆ ಕಂಡಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಬಹುಮತದ ಗೆಲುವು ಸಾಧಿಸಿತ್ತು.

ತನ್ನ ಮತ ಪ್ರಮಾಣವನ್ನು ಶೇ 36.76ಗೆ ಏರಿಕೆ ಮಾಡಿತ್ತು. ತಮ್ಮ ಪಾದಯಾತ್ರೆಗಳ ಮೂಲಕ ಕಾಂಗ್ರೆಸ್ 2013ರಲ್ಲಿ ಮುಂಬೈ ಕರ್ನಾಟಕ‌ ಭಾಗದಲ್ಲಿನ 56 ಸ್ಥಾನಗಳ ಪೈಕಿ 34 ಸ್ಥಾನ ಗೆದ್ದಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ 19 ಸ್ಥಾನದಲ್ಲಿ ಗೆದ್ದು ಬೀಗಿತ್ತು. ಅದೇ ರೀತಿ ಮಧ್ಯ ಕರ್ನಾಟಕ ಭಾಗದಲ್ಲಿ 32 ಸ್ಥಾನಗಳ ಪೈಕಿ 18 ಸೀಟು ಗೆದ್ದಿತ್ತು. ಆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 40 ಸ್ಥಾನಕ್ಕೆ ಕುಸಿತ ಕಂಡಿತು.

ಮೇಕೆದಾಟು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಡಿಕೆಶಿಗೆ ಬೆಂಗಳೂರು ಸೇರಿದಂತೆ ರಾಮನಗರದ ಮಟ್ಟಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ‌ ಫಲಿತಾಂಶ ನೀಡಿತ್ತು. ಮೇಕೆದಾಟು ಪಾದಯಾತ್ರೆ ಬಂದ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಸಫಲವಾಗಿತ್ತು.‌

ದೇಶ

ವೀಕೆಂಡ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಧರ್ಮಸ್ಥಳ, ಕುಕ್ಕೆ ದರ್ಶನಕ್ಕೆ ಬಂಪರ್ ಆಫರ್

Published

on

ಬೆಂಗಳೂರು: ವೀಕೆಂಡ್ ಬಂದರೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಯೋಜನೆ ಮಾಡುವ ಬೆಂಗಳೂರಿಗರಿಗೆ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಟ್ರಾಫಿಕ್ ಸಮಸ್ಯೆ, ವಸತಿ ವ್ಯವಸ್ಥೆಯ ಚಿಂತೆ ಮತ್ತು ದೇವಸ್ಥಾನಗಳಲ್ಲಿ ದೀರ್ಘ ಸರತಿ ಸಾಲಿನ ತೊಂದರೆಗಳನ್ನು ತಪ್ಪಿಸಲು ವಿಶೇಷ ಪ್ರವಾಸ ಪ್ಯಾಕೇಜ್ ಪರಿಚಯಿಸಲಾಗಿದ್ದು, ಕೇವಲ ₹3,350ರಿಂದಲೇ ಈ ಯಾತ್ರೆಯನ್ನು ಅನುಭವಿಸುವ ಅವಕಾಶ ಕಲ್ಪಿಸಲಾಗಿದೆ.

ಈ ಎರಡು ದಿನಗಳ ಪ್ರವಾಸದಲ್ಲಿ ಭಕ್ತರು Sri Kshetra Dharmasthala, Soutadka Mahaganapathi Temple ಹಾಗೂ Kukke Subrahmanya Temple ದರ್ಶನ ಪಡೆಯಬಹುದು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ವಿಶೇಷ ವಿಐಪಿ ದರ್ಶನ ವ್ಯವಸ್ಥೆಯೂ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ. ಪ್ರೀಮಿಯಂ ಪ್ಯಾಕೇಜ್ ಆಯ್ಕೆ ಮಾಡಿದವರಿಗೆ ಹೆಚ್ಚುವರಿಯಾಗಿ Rama Kshetra ಭೇಟಿ ನೀಡುವ ಅವಕಾಶವೂ ದೊರೆಯಲಿದೆ.

ಪ್ರವಾಸಿಗರಿಗಾಗಿ ಬಜೆಟ್ ಹಾಗೂ ಪ್ರೀಮಿಯಂ ಎಂಬ ಎರಡು ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಬಜೆಟ್ ಪ್ಯಾಕೇಜ್‌ನಲ್ಲಿ ಎಸಿ ಡಿಲಕ್ಸ್ ಬಸ್ ಪ್ರಯಾಣ, ಕನ್ಯಾಡಿಯಲ್ಲಿ ವಸತಿ ಮತ್ತು ವಿಶೇಷ ದರ್ಶನ ಸೌಲಭ್ಯ ಲಭ್ಯವಿದ್ದು, ದರ ₹3,350ರಿಂದ ಆರಂಭವಾಗುತ್ತದೆ. ಪ್ರೀಮಿಯಂ ಪ್ಯಾಕೇಜ್‌ನಲ್ಲಿ ನಿಡ್ಲೆಯಲ್ಲಿ ವಾಸ್ತವ್ಯ, ವಿಐಪಿ ದರ್ಶನ ಹಾಗೂ ಉಚಿತ ಉಪಹಾರ ಸೇರಿದ್ದು, ದರ ₹4,150ರಿಂದ ಆರಂಭವಾಗುತ್ತದೆ.

ಈ ವಿಶೇಷ ಪ್ರವಾಸವು ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಆರಂಭವಾಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ವೇಳೆ ಸಾಂಪ್ರದಾಯಿಕ ಉಡುಪು ಧರಿಸುವುದು ಕಡ್ಡಾಯವಾಗಿದ್ದು, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಕೈಗೆಟುಕುವ ದರದಲ್ಲಿ ಅನುಭವಿಸಲು ಬಯಸುವವರಿಗೆ ಈ ಪ್ಯಾಕೇಜ್ ಉತ್ತಮ ಅವಕಾಶವಾಗಿದೆ.

Continue Reading

ದೇಶ

ಇತಿಹಾಸ, ಸಂಸ್ಕೃತಿ ಮತ್ತು ಆರೋಗ್ಯದ ಸಂಗಮ: ಬೆಂಗಳೂರಿನಲ್ಲಿ ಹೆರಿಟೇಜ್ ಹಬ್ಬ

Published

on

ಬೆಂಗಳೂರು: ನಗರದ ಸಾಂಸ್ಕೃತಿಕ ವೈಭವ, ಪರಂಪರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಇದೇ ಜೂನ್ 14ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಬೆಂಗಳೂರು ಹೆರಿಟೇಜ್ ಹಬ್ಬ’ ಅದ್ದೂರಿಯಾಗಿ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಗರದ ಐತಿಹಾಸಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 5 ಗಂಟೆಗೆ ಶಂಖನಾದ, ಗಂಗಾ ಆರತಿ, ಮ್ಯಾರಥಾನ್, ಜುಂಬಾ ಹಾಗೂ ಯೋಗ ಪ್ರದರ್ಶನಗಳೊಂದಿಗೆ ಆರಂಭವಾಗಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ವಿಶೇಷ ಹಬ್ಬದಲ್ಲಿ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಯದುವೀರ್, ಹಿರಿಯ ಚಲನಚಿತ್ರ ನಟ ಸಿಹಿಕಹಿ ಚಂದ್ರು, ಬೆಂಗಳೂರು ನಗರ ಗಣ್ಯರ ರಕ್ಷಣಾ ವಿಭಾಗದ ಉಪ ಪೊಲೀಸ್ ಆಯುಕ್ತ ಮಂಜುನಾಥ್ ಬಾಬು, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಗರುಡ ಪ್ರತಿಷ್ಠಾನದ ಮೇದಿನಿ ಗರುಡಾಚಾರ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಡಾ. ಸಿ.ಎ. ಕಿಶೋರ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪ್ರತಿಷ್ಠಿತ ಬಿ.ಎನ್.ಎಂ.ಐ.ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ರಾವ್ ಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎನ್.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ವಿಕಸನ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಬೆಂಗಳೂರು ನಗರದ ಪರಂಪರೆ, ಸಂಸ್ಕೃತಿ ಹಾಗೂ ಆರೋಗ್ಯ ಜಾಗೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ‘ಬೆಂಗಳೂರು ಹೆರಿಟೇಜ್ ಹಬ್ಬ’ ಸಾರ್ವಜನಿಕರ ಗಮನ ಸೆಳೆದಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.

Continue Reading

ದೇಶ

‘ನನಗೆ ಡಬಲ್ ಸಮಾಧಾನ ಸಿಕ್ಕಿದೆ’: ಸಿಎಂ ಹುದ್ದೆ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

Published

on

ಬೆಂಗಳೂರು: ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ Siddaramaiah ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳನ್ನು ಸಚಿವ Satish Jarkiholi ತಳ್ಳಿಹಾಕಿದ್ದು, ಕೆಲ ಐಟಿ ಸೆಲ್‌ಗಳು ಅನಗತ್ಯವಾಗಿ ಈ ವಿಚಾರವನ್ನು ದೊಡ್ಡದಾಗಿಸಿವೆ ಎಂದು ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೂ ಸಿದ್ದರಾಮಯ್ಯ ಅವರಿಗೂ ಭಿನ್ನಾಭಿಪ್ರಾಯ ಇದೆ ಎಂದು ಯಾರು ಹೇಳಿದರು? ಈ ಬಗ್ಗೆ ನಾನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಿದ್ದೇನೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಕೆಲವರು ಹೆಚ್ಚಿನ ಪ್ರಚಾರ ನೀಡಿ ಅನಗತ್ಯ ಚರ್ಚೆಗೆ ಕಾರಣರಾಗಿದ್ದಾರೆ” ಎಂದು ಹೇಳಿದರು.

ಅಹಿಂದ ಸಂಘಟನೆ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಅದು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಪಕ್ಷದ ಹೊರತಾಗಿಯೂ ಸಾಮಾಜಿಕ ಸಂಘಟನೆಯಾಗಿ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು. “ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅಧ್ಯಕ್ಷರಾಗಿಯೇ ಪಕ್ಷದ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಅಧಿಕಾರ ಸಿಗಲೇಬೇಕು. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದವರಿಗೆ ಪಕ್ಷ ಸೂಕ್ತ ಜವಾಬ್ದಾರಿ ನೀಡಿದೆ” ಎಂದು ಹೇಳಿದರು.

2028ರ ನಾಯಕತ್ವದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ. ಮಗು ಹುಟ್ಟುವ ಮುನ್ನವೇ ಅದರ ಬಗ್ಗೆ ಚರ್ಚೆ ಮಾಡುವಂತಾಗಿದೆ. ನನಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದ್ದು, ಅದರಿಂದ ಸಮಾಧಾನವಾಗಿದೆ” ಎಂದರು.

ಇದೇ ವೇಳೆ ಕ್ರೀಡಾ ಖಾತೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಅವರು, “ಕ್ರೀಡಾ ಇಲಾಖೆ ನೀಡಿದ್ದರೆ ರಾಜ್ಯವನ್ನು ಕ್ರೀಡೆಯಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಲು ಪ್ರಯತ್ನಿಸುತ್ತಿದ್ದೆವು. ಆ ಖಾತೆಗಾಗಿ ಬೇಡಿಕೆಯನ್ನೂ ಇಟ್ಟಿದ್ದೆ” ಎಂದು ತಿಳಿಸಿದರು.

Continue Reading

Trending