ಗಣರಾಜ್ಯೋತ್ಸವದಂದು ಮೋದಿ ಸಂದೇಶ: ವಿಕಸಿತ ಭಾರತದ ಸಂಕಲ್ಪ |

ದೇಶ

ಗಣರಾಜ್ಯೋತ್ಸವದಂದು ಮೋದಿ ಸಂದೇಶ: ವಿಕಸಿತ ಭಾರತದ ಸಂಕಲ್ಪ

Published

on

ನವದೆಹಲಿ: ಇಂದು ಭಾರತ 77ನೇ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಭವ್ಯವಾಗಿ ಆಚರಿಸುತ್ತಿದೆ. ದೆಹಲಿಯ ಕರ್ತವ್ಯಪಥದಲ್ಲಿ ಹತ್ತಾರು ವಿಶೇಷತೆಗಳೊಂದಿಗೆ ಗಣರಾಜ್ಯೋತ್ಸವದ ಪಥಸಂಚಲನ ನಡೆಯಲಿದ್ದು, ರಾಷ್ಟ್ರದ ಪ್ರಜಾಪ್ರಭುತ್ವದ ಶಕ್ತಿ, ಸೇನಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ವೈಭವ ಅನಾವರಣಗೊಳ್ಳಲಿದೆ.

ಗಣರಾಜ್ಯೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿದ್ದು, “ಗಣರಾಜ್ಯೋತ್ಸವದಂದು ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ” ಎಂದು ತಿಳಿಸಿದ್ದಾರೆ.

ಈ ಬಾರಿ ‘ವಂದೇ ಮಾತರಂ’ ಪರಿಕಲ್ಪನೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು, ವಂದೇ ಮಾತರಂ ಗೀತೆಯ 150 ವರ್ಷಗಳ ಸಂಭ್ರಮವೂ ಇದರ ಭಾಗವಾಗಿದೆ. ಬೆಳಿಗ್ಗೆ 10:30ಕ್ಕೆ ಪಥಸಂಚಲನ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ.

ವಿದೇಶಿ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ಲೇನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಭಾಗವಹಿಸಲಿದ್ದು, 21 ಗನ್ ಸೆಲ್ಯೂಟ್ ಮತ್ತು ಗಾರ್ಡ್ ಆಫ್ ಹಾನರ್ ಮೂಲಕ ಗೌರವಿಸಲಾಗುತ್ತದೆ.

ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶನ ಪಥಸಂಚಲನದಲ್ಲಿ ಕಾಣಿಸಿಕೊಳ್ಳಲಿದ್ದು, ಆಧುನಿಕ ಶಸ್ತ್ರಾಸ್ತ್ರಗಳು, ಡ್ರೋನ್‌ಗಳು, ಟ್ಯಾಂಕ್‌ಗಳು, ಕ್ಷಿಪಣಿಗಳು ಹಾಗೂ ವಿಮಾನ–ಹೆಲಿಕ್ಯಾಪ್ಟರ್‌ಗಳ ವೈಮಾನಿಕ ಪ್ರದರ್ಶನ ಗಮನ ಸೆಳೆಯಲಿದೆ. ವಾಯುಪಡೆಯ ನಿವೃತ್ತ ಸೈನಿಕರ ವಿಶೇಷ ಟ್ಯಾಬ್ಲೋ ಕೂಡ ಭಾಗವಾಗಲಿದೆ.

ಈ ಬಾರಿಯ ಪಥಸಂಚಲನದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಇಲಾಖೆಗಳಿಂದ ಒಟ್ಟು 30 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಭಾರತದ ಸಂಸ್ಕೃತಿ, ಪರಂಪರೆ, ನಾವೀನ್ಯತೆ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸಲಿದೆ. ಸುಮಾರು 2500 ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಕೆಂಪುಕೋಟೆಯಲ್ಲಿ ಭಾರತ ಪರ್ವ, ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ, ಪ್ರಾಜೆಕ್ಟ್ ವೀರ್ ಗಾಥಾ 5.0 ಹಾಗೂ ಪ್ರಧಾನಮಂತ್ರಿಯವರ ಎನ್‌ಸಿಸಿ ರ್ಯಾಲಿ ನಡೆಯಲಿದೆ.

Trending

Exit mobile version