ಬೆಂಗಳೂರು
ಮಾನವ-ಆನೆ ಸಂಘರ್ಷ ರಾಜ್ಯವೊಂದರ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ: ಸಚಿವ ಈಶ್ವರ್ ಖಂಡ್ರೆ – Minister Ishwar Khandre
ಬೆಂಗಳೂರು: “ಮಾನವ-ಆನೆ ಸಂಘರ್ಷ ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ. ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅರಣ್ಯ ಇಲಾಖೆಯು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಈ ಸಮ್ಮೇಳನದ ವಿಷಯವೇ ಒಂದು ಮಹತ್ವದ ಸವಾಲನ್ನು ಪ್ರಚುರಪಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದೆ. ವಿಶಾಲವಾದ ದಟ್ಟ ಅಡವಿಗಳು, ಪ್ರಾಣಿ ಸಂಕುಲ, ಸಸ್ಯ ಸಂಕುಲ, ಕೀಟ ಸಂಕುಲ ಮತ್ತು ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ. ಕರ್ನಾಟಕದಲ್ಲಿ ಸುಮಾರು 43,382 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಅಂದರೆ ನಮ್ಮ ಭೌಗೋಳಿಕ ಭೂಭಾಗದ ಶೇ.22ರಷ್ಟು ಹಸಿರು ಹೊದಿಕೆ ಇದೆ” ಎಂದು ಮಾಹಿತಿ ನೀಡಿದರು.
ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇವೆ. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ. ಅರಣ್ಯಗಳು ನಾನಾ ರೂಪದಲ್ಲಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ಅನುಕೂಲತೆ ಕಲ್ಪಿಸಿವೆ. ಕರ್ನಾಟಕದಲ್ಲಿ, ಈ ನೈಸರ್ಗಿಕ ಸಂಪನ್ಮೂಲಗಳ ನಿರ್ಣಾಯಕ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ” ಎಂದರು.
ಆನೆ ಸಂಖ್ಯೆಯಲ್ಲಿ ರಾಜ್ಯ ಪ್ರಥಮ: “ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.
ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಪ್ರತಿಯೊಂದು ಜೀವವೂ ಅಮೂಲ್ಯ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿ” ಎಂದು ಆಶಿಸಿದರು.
ಆದಿವಾಸಿಗಳ ಕೊಡುಗೆ ಅಪಾರ: “ಮಾನವ-ವನ್ಯಜೀವಿ ಸಂಘರ್ಷದಲ್ಲಿ, ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ.” ಎಂದು ಆತಂಕ ವ್ಯಕ್ತಪಡಿಸಿದರು.
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ: “ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಮೊದಲ ಆದ್ಯತೆ. ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಕರ್ನಾಟಕ ರಾಜ್ಯವು ಈ ಸವಾಲನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ” ಎಂದರು.
“ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು. ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ” ಎಂದು ವಿವರಿಸಿದರು.
ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಕೇರಳ, ತಮಿಳುನಾಡು ಮತ್ತು ಒಡಿಶಾದ ಅರಣ್ಯ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ದೇಶ
Cockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಇದೀಗ Bengaluru City Police ದೊಡ್ಡ ಶಾಕ್ ನೀಡಿದೆ. ಮೇ 24ರಂದು ಟೌನ್ ಹಾಲ್ ಬಳಿ ಆಯೋಜಿಸಲು ಯೋಜಿಸಲಾಗಿದ್ದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್‌ಗಳಲ್ಲಿ, ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ಬಳಿ ಮಾನವ ಸರಪಳಿ ನಿರ್ಮಿಸಲು ಕರೆ ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮನವಿ ಪೊಲೀಸ್ ಇಲಾಖೆಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದರೂ ಟೌನ್ ಹಾಲ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Town Hall Bengaluru ಬಳಿ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆಗಳಿಗೆ ಅನುಮತಿ ನೀಡಬಾರದು ಎಂಬ High Court of Karnataka ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ Freedom Park ಹೊರತುಪಡಿಸಿ ನಗರದ ಬೇರೆ ಭಾಗಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು Abhijeet Dipke ಸ್ಥಾಪಿಸಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಪಕ್ಷದ ಎಕ್ಸ್ ಖಾತೆ ಒಂದೇ ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿತ್ತು. ನಂತರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆಯ ಮೇರೆಗೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ Surya Kant ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮೀಮ್ಸ್ ಮತ್ತು ಟ್ರೋಲಿಂಗ್‌ಗಳ ನಡುವೆ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಆಗಿತ್ತು.
ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಗೆ 5 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಸೇರಿದ್ದು, ವೆಬ್‌ಸೈಟ್‌ನಲ್ಲಿ ಲಕ್ಷಾಂತರ ಮಂದಿ ನೋಂದಾಯಿಸಿಕೊಂಡಿದ್ದರು. ಇದೀಗ ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
ತೈಲ ದರ ಮತ್ತೆ ಏರಿಕೆ! 10 ದಿನಗಳಲ್ಲಿ ಮೂರನೇ ಬಾರಿ ಶಾಕ್ ಕೊಟ್ಟ ಪೆಟ್ರೋಲ್-ಡೀಸೆಲ್
ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 91 ಪೈಸೆವರೆಗೆ ಹೆಚ್ಚಿಸಿದ್ದು, ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ 10 ದಿನಗಳಲ್ಲಿ ಇದು ಮೂರನೇ ಬಾರಿಗೆ ಇಂಧನ ದರ ಏರಿಕೆಯಾಗಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಪರಿಷ್ಕೃತ ದರದ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.51 ರೂ.ಗೆ ಏರಿಕೆಯಾದರೆ, ಡೀಸೆಲ್ ದರ 92.49 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 108.09 ರೂ. ಹಾಗೂ ಡೀಸೆಲ್ ದರ 95.99 ರೂ. ಆಗಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈ ನಗರಗಳಲ್ಲಿಯೂ ಇಂಧನ ದರಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಮೇ 15ರಂದು ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಲಾಗಿತ್ತು. ಬಳಿಕ ಮೇ 19ರಂದು 90 ಪೈಸೆ ಹೆಚ್ಚಿಸಲಾಗಿದ್ದು, ಇದೀಗ ಮತ್ತೆ 91 ಪೈಸೆ ಏರಿಕೆ ಮಾಡಲಾಗಿದೆ. ಈ ಮೂಲಕ ಎರಡು ವಾರಗಳಲ್ಲಿ ಒಟ್ಟು 5 ರೂ.ವರೆಗೆ ಇಂಧನ ದರ ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಭಾರತ ತನ್ನ ಕಚ್ಚಾ ತೈಲದ ಅವಶ್ಯಕತೆಗಳ ಶೇ 85ರಷ್ಟು ಆಮದು ಮಾಡಿಕೊಳ್ಳುವುದರಿಂದ ಅಂತಾರಾಷ್ಟ್ರೀಯ ಬೆಲೆ ಏರಿಳಿತದ ನೇರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೆ ಬೀಳುತ್ತಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್ ದಾಟಿರುವುದು ತೈಲ ಕಂಪನಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದರ ಪರಿಣಾಮವಾಗಿ ದಿನನಿತ್ಯದ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡುಬರುವ ಆತಂಕ ಎದುರಾಗಿದೆ.
ದೇಶ
ವಿಕಾಸ ದಶಕೋತ್ಸವ 2026: ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ
ತುಮಕೂರು/ಗುಬ್ಬಿ: ಸಮಾನ ಮನಸ್ಕ ಮಾಧ್ಯಮ ಮಿತ್ರರ ಸಂಘಟನೆಯಾದ ‘ವಿಕಾಸ’ ಸಂಸ್ಥೆ ತನ್ನ ಯಶಸ್ವಿ ಹತ್ತು ವರ್ಷಗಳ ಪಯಣವನ್ನು ಸಂಭ್ರಮಿಸುವ ಅಂಗವಾಗಿ ‘ವಿಕಾಸ ದಶಕದ ಸಂಭ್ರಮ: 2026’ ಹಾಗೂ ತುಮಕೂರು ಜಿಲ್ಲಾ ಸಮಾವೇಶವನ್ನು ಆಯೋಜಿಸಿದೆ. ಮೇ 24, 2026ರ ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಗುಬ್ಬಿಯ ಪ್ರಸಿದ್ಧ ಶ್ರೀ ಚಿದಂಬರ ಆಶ್ರಮದ ಆವರಣದಲ್ಲಿ ಈ ಭವ್ಯ ಸಮಾವೇಶ ನಡೆಯಲಿದೆ ಎಂದು ತುಮಕೂರು ಜಿಲ್ಲಾ ಸಂಚಾಲಕರಾದ ಭಾರತೀಶ ರಾವ್ ಹೊನ್ನಾಳಿ ಹಾಗೂ ಸುರೇಶ್ ವತ್ಸ ತಿಳಿಸಿದ್ದಾರೆ.
ಕಳೆದ ಒಂದು ದಶಕದಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ‘ವಿಕಾಸ’ ಸಂಸ್ಥೆ, ರಾಜ್ಯದ ವಿವಿಧ ಜಿಲ್ಲೆಗಳ ಮಾಧ್ಯಮ ಮಿತ್ರರನ್ನು ಒಂದೇ ವೇದಿಕೆಗೆ ತರಲು ಯಶಸ್ವಿಯಾಗಿದೆ. ಪತ್ರಿಕೋದ್ಯಮ, ಡಿಜಿಟಲ್ ಮೀಡಿಯಾ, ವ್ಯಂಗ್ಯಚಿತ್ರ, ವರದಿಗಾರಿಕೆ ಸೇರಿದಂತೆ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರನ್ನು ಒಗ್ಗೂಡಿಸಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂಸ್ಥೆಯ ವಿಶೇಷತೆ.
ಗಣ್ಯರಿಂದ ಉದ್ಘಾಟನೆ
ವಿಕಾಸದ ಗೌರವಾಧ್ಯಕ್ಷ ಬಿ.ಎಲ್. ಹನುಮಂತ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾವೇಶವನ್ನು ಖ್ಯಾತ ವೈದಿಕ ಜ್ಯೋತಿಷಿ ಹಾಗೂ ರಾಜಗುರು ದ್ವಾರಕಾನಾಥ ಗುರೂಜಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸೊಗಡು ಶಿವಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಎಸ್.ಆರ್. ಶ್ರೀನಿವಾಸ್ (ವಾಸು), ವಿಜಯವಾಣಿ ಹಿರಿಯ ಉಪ ಪ್ರಧಾನ ಸಂಪಾದಕ ರಾಘವೇಂದ್ರ ಗಣಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ, ಖ್ಯಾತ ವಾಗ್ಮಿ ವೈ.ವಿ. ಗುಂಡುರಾವ್, ಆರ್ಟ್ ಆಫ್ ಲಿವಿಂಗ್ ಟ್ರಸ್ಟಿ ರಂಗನಾಥ ಪ್ರಸಾದ್, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಗುಬ್ಬಿ ಶ್ರೀ ಚಿದಂಬರ ಆಶ್ರಮದ ಅಧ್ಯಕ್ಷ ಸಚ್ಚಿದಾನಂದ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸ ಮತ್ತು ಚರ್ಚಾಗೋಷ್ಠಿ
ಸಮಾವೇಶದ ಅಂಗವಾಗಿ ‘ಆಧುನಿಕ ಸಮಾಜಕ್ಕೆ ಮನುಸ್ಮೃತಿಯ ಅವಶ್ಯಕತೆ’ ವಿಷಯದ ಕುರಿತು ಡಾ. ರಾಘವೇಂದ್ರ ಭಟ್ಟ ಉಪನ್ಯಾಸ ನೀಡಲಿದ್ದು, ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮಂಜುನಾಥ ಸ್ವಾಮಿ ಉಪಸ್ಥಿತರಿರಲಿದ್ದಾರೆ.
ಇನ್ನೊಂದು ವಿಶೇಷ ಚರ್ಚಾಗೋಷ್ಠಿಯಲ್ಲಿ ‘ಮಾಧ್ಯಮ ಕ್ಷೇತ್ರದ ಭವಿಷ್ಯ’ ಕುರಿತು ಡಾ. ಆಶಾ ಕೃಷ್ಣಸ್ವಾಮಿ, ಡಾ. ನಂದಿನಿ ಲಕ್ಷ್ಮೀಕಾಂತ್ ಹಾಗೂ ಉದಯ ಕಾಲ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಪಿ. ರಾಜೇಂದ್ರ ವಿಚಾರ ಮಂಡನೆ ನಡೆಸಲಿದ್ದಾರೆ.
ಹಿರಿಯ ಪತ್ರಕರ್ತರಿಗೆ ಸನ್ಮಾನ
‘ನಮ್ಮ ಹಿರಿಯರು – ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಹಿರಿಯ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ಅಂಕಣಕಾರ ತುರುವೇಕೆರೆ ಪ್ರಸಾದ್, ಹಿರಿಯ ಪತ್ರಕರ್ತರಾದ ಕರ್ಣಂ ರಮೇಶ್, ಸೊಗಡು ಸತ್ಯಣ್ಣ, ಆರ್. ಲಕ್ಷ್ಮಣ್, ಸಿ.ಟಿ. ಜೋಶಿ, ಜಿ.ಎಂ. ಜಗನ್ನಾಥ್, ಎಸ್.ಎನ್. ರಾಜಗೋಪಾಲ್ ಸೇರಿದಂತೆ ಹಲವು ಮಾಧ್ಯಮ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತದೆ.
ವಿಕಾಸ ಸ್ಮಾರಕ ಪ್ರಶಸ್ತಿ ಪ್ರದಾನ
‘ವಿಕಾಸ ಸ್ಮಾರಕ ಪ್ರಶಸ್ತಿ – 2026’ಗೆ ಕೆ.ಬಿ. ಚಂದ್ರಮೌಳಿ, ಎಸ್.ಎನ್. ಪ್ರಸನ್ನ ಮೂರ್ತಿ, ವಾಸುದೇವ ಜಹಗೀರದಾರ್, ಕೃಷ್ಣಮೂರ್ತಿ ಚಿ.ಸು., ಸಿ.ಡಿ. ರವಿ, ಆರ್.ಎಸ್. ಅಯ್ಯರ್, ಎನ್.ಎಸ್. ಮಾರುತಿ ಪ್ರಸಾದ್, ಭಾನುಪ್ರಶಾಂತ, ಶ್ರೀನಿವಾಸ್ ಮೂರ್ತಿ, ಗುರುದತ್ತ ಹಾಗೂ ನಾಗಭೂಷಣ ಎಸ್. ಆಯ್ಕೆಯಾಗಿದ್ದಾರೆ.
ಇದೇ ವೇಳೆ ಲೇಖಕ ಪ್ರಕಾಶ್ ನಾಡಿಗ್ ಅವರಿಗೆ ‘ದಿ. ಸುಬ್ಬರಾಯರು ಸ್ಮಾರಕ ವಿಕಾಸ ಪ್ರಶಸ್ತಿ – 2025’ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎನ್. ವೆಂಕಟನಾರಾಯಣ, ವಾಮಾನಾಚಾರ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ಎಸ್. ಸುದರ್ಶನ್ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದ ಯಶಸ್ಸಿಗಾಗಿ ವಿಕಾಸದ ಪ್ರಧಾನ ಸಂಚಾಲಕ ಬಿ.ವಿ. ಗೋಪಿನಾಥ್, ರಾಜ್ಯಾಧ್ಯಕ್ಷ ಶ್ರೀನಾಥ್ ಜೋಶಿ, ಹಿರಿಯ ಉಪಾಧ್ಯಕ್ಷ ಬಿ.ಎನ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್, ಖಜಾಂಚಿ ಬಿ.ಎನ್. ಮುರಳಿ ಪ್ರಸಾದ್, ಕಾರ್ಯದರ್ಶಿ ಗೋದಾವರಿ ಡಿ.ಎಸ್. ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
-
ದೇಶ23 hours agoCockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
-
ದೇಶ23 hours agoಮೋದಿ ಸರ್ಕಾರದ 2025 ರಿಪೋರ್ಟ್ ಕಾರ್ಡ್ ಬಿಡುಗಡೆ! ಯಾವ ಸಚಿವಾಲಯ ಟಾಪ್, ಯಾವುದು ಹಿಂದುಳಿತು?
-
ಕ್ರೀಡೆ23 hours agoಕೃಣಾಲ್ ಪಾಂಡ್ಯ ಬೌಲಿಂಗ್ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್
-
ದೇಶ24 hours agoಲಡಾಖ್ನಲ್ಲಿ ಸೇನಾ ಹೆಲಿಕಾಪ್ಟರ್ ಪತನ! ಕೂದಲೆಳೆ ಅಂತರದಲ್ಲಿ ಪಾರಾದ ಅಧಿಕಾರಿಗಳ ಸೆಲ್ಫಿ ವೈರಲ್
