Connect with us

ಬೆಂಗಳೂರು

ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಪ್ರಮಾಣ ವಚನ

Published

on

ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್
ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಪಕ್ಷದ ಮುಖಂಡ ಎಚ್ ಪಿ ಸುದಾಮ್ ದಾಸ್ ಪ್ರಮಾಣವಚನ ಸ್ವೀಕರಿಸಿದರು. 

ವಿಧಾನಸೌಧ ಬಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಅವರು ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನ ಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಹಲವು ಶಾಸಕರು ಭಾಗವಹಿಸಿದ್ದರು.

ಮಾಜಿ ಸಚಿವರಾದ ಎಂ.ಆರ್‌. ಸೀತಾರಾಂ, ಉಮಾಶ್ರೀ ಹಾಗೂ ಮಾಜಿ ಐಆರ್‌ಎಸ್‌ ಅಧಿಕಾರಿ ಎಚ್‌.ಪಿ. ಸುಧಾಮ್‌ ದಾಸ್‌ ಅವರನ್ನು ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರಲ್ಲಿ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷದೊಳಗೇ ಬಹಳ ವಿರೋಧವಿತ್ತು

ಸಚಿವರಾದ ಡಾ.ಜಿ. ಪರಮೇಶ್ವರ್‌, ಕೆ.ಎಚ್‌. ಮುನಿಯಪ್ಪ, ಆರ್‌.ಬಿ. ತಿಮ್ಮಾಪುರ, ಡಾ.ಮಹದೇವಪ್ಪ ಅವರು ಸುಧಾಮ್ ದಾಸ್ ನಾಮನಿರ್ದೇಶನ ಬೇಡ ಎಂದು ಪಕ್ಷದ ಹೈಕಮಾಂಡ್‌ಗೆ ಪತ್ರ ಕೂಡ ಬರೆದಿದ್ದರು. ಅವರ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಕೋರಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಕಾರಣ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಅಡ್ಡಿಯಾಗಲಿಲ್ಲ.

ಏತನ್ಮಧ್ಯೆ ಪಟ್ಟಿಯಲ್ಲಿ ಮನ್ಸೂರ್‌ ಅಲಿ ಖಾನ್‌ ಅವರ ಹೆಸರಿತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿಅವರ ಬದಲಿಗೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠರಿಗೆ ಮನವಿ ಮಾಡಿದ್ದರು. ಹಿಂದೆ ತೇರದಾಳ ಕ್ಷೇತ್ರದ ಶಾಸಕಿಯಾಗಿದ್ದ ಉಮಾಶ್ರೀ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲು ಉತ್ಸುಕವಾಗಿದ್ದರು. ಆ ವೇಳೆ ಅವರಿಗೆ ಪರಿಷತ್‌ ಸ್ಥಾನದ ಭರವಸೆ ನೀಡಲಾಗಿತ್ತು ಎಂದು ಹೇಳಲಾಗಿದೆ.

ಕ್ರೀಡೆ

ಅಪ್ಪು ಕಪ್ ಸೀಸನ್ 4ಕ್ಕೆ ಅದ್ದೂರಿ ಚಾಲನೆ: ಜುಲೈ 24ರಿಂದ ಶಟಲ್ ಬ್ಯಾಡ್ಮಿಂಟನ್ ಲೀಗ್ ಆರಂಭ

Published

on

ಬೆಂಗಳೂರು: ರಾಜ್ಯದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಅಪ್ಪು ಕಪ್ ಸೀಸನ್ 4 (Appu Cup Season 4) ಶಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆತಿದೆ. STELLER STUDIO & EVENT MANAGEMENT ಸಂಸ್ಥೆ, PRK Audio ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಪ್ರತಿಷ್ಠಿತ ಟೂರ್ನಿಯ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಭ್ರಮದಿಂದ ನಡೆಯಿತು. ಇದೇ ಜುಲೈ 24, 25 ಮತ್ತು 26ರಂದು ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಟೂರ್ನಿಗೆ ಶುಭ ಕೋರಿದರು. ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು ಹಾಗೂ ಮೆನ್ ಮತ್ತು ವುಮನ್ ಐಕಾನ್‌ಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕ ಚೇತನ್ ಸೂರ್ಯ, “ಅಪ್ಪು ಕಪ್ ಆರಂಭವಾದ ದಿನದಿಂದಲೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬೆಂಬಲ ನಮ್ಮೊಂದಿಗಿದೆ. ಈ ಬಾರಿಯ ಪಂದ್ಯಗಳು ಜುಲೈ 24ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಪಂದ್ಯಗಳ ನೇರ ಪ್ರಸಾರವೂ ಇರಲಿದೆ. ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ತಿಳಿಸಿದರು.

ಟಿ.ಎ. ಶರವಣ ಅವರು, “ಅಪ್ಪು ಕಪ್ ಆರಂಭದಿಂದಲೇ ಚೇತನ್ ಸೂರ್ಯ ಅವರೊಂದಿಗೆ ಇದ್ದೇನೆ. ಮುಂದೆಯೂ ಈ ಕ್ರೀಡಾ ಉತ್ಸವಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದು ಹೇಳಿದರು. ಕೆ.ವಿ. ಪ್ರಭಾಕರ್ ಹಾಗೂ ಸಾ.ರಾ. ಗೋವಿಂದು ಅವರು ಕೂಡ ಟೂರ್ನಿಯ ಯಶಸ್ಸಿಗೆ ಶುಭ ಹಾರೈಸಿದರು.

ಕ್ರೀಡೆ, ಮನರಂಜನೆ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಅಪ್ಪು ಕಪ್ ಸೀಸನ್ 4 ಈ ಬಾರಿ ಮತ್ತಷ್ಟು ಭರ್ಜರಿಯಾಗಿ ನಡೆಯಲಿದ್ದು, ಬ್ಯಾಡ್ಮಿಂಟನ್ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಬೆಂಗಳೂರಿನ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಈ ಟೂರ್ನಿ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

Continue Reading

ದೇಶ

ರಾಮಮಂದಿರ ದೇಣಿಗೆ ಪ್ರಕರಣ ಸಿಬಿಐಗೆ ವಹಿಸಿ: ಮೋದಿ, ಅಮಿತ್ ಶಾ, ಯೋಗಿ ರಾಜೀನಾಮೆಗೆ ಕೆಪಿಸಿಸಿ ಆಗ್ರಹ

Published

on

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಐದು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಹಿಸಿದ್ದರು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು.

ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ₹10,000 ಕೋಟಿ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮೊದಲ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗಗಳಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆ ಗಂಭೀರವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಇನ್ನೊಂದು ಪ್ರಮುಖ ನಿರ್ಣಯದಲ್ಲಿ ರಾಮಮಂದಿರ ದೇಣಿಗೆ ಹಾಗೂ ಹುಂಡಿ ಹಣದ ದುರ್ಬಳಕೆ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಸಭೆ ನಿರ್ಣಯದಲ್ಲಿ ತಿಳಿಸಿತು. ಆರೋಪದಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಇದರ ಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ನೇಮಕಗೊಂಡ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಮತ್ತೊಂದು ಅಭಿನಂದನಾ ನಿರ್ಣಯವನ್ನೂ ಸಭೆ ಅಂಗೀಕರಿಸಿತು.

ಕೆಪಿಸಿಸಿ ಸಭೆಯಲ್ಲಿ ಕೈಗೊಂಡ ಈ ಐದು ನಿರ್ಣಯಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬರ ನಿರ್ವಹಣೆ ಹಾಗೂ ರಾಮಮಂದಿರ ದೇಣಿಗೆ ಪ್ರಕರಣದ ಕುರಿತಾಗಿ ಕಾಂಗ್ರೆಸ್ ತನ್ನ ಅಧಿಕೃತ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Continue Reading

ದೇಶ

Grama Panchayat Election ಬಿಗ್ ಅಪ್‌ಡೇಟ್! ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ

Published

on

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಅಧಿಕೃತವಾಗಿ ವೇಗ ಸಿಕ್ಕಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಲು ಆರಂಭಿಸಿವೆ.

2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹೊಸದಾಗಿ ಪುನರ್ರಚನೆಯಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ.

ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳ ನಿಯೋಜನೆಗೆ ಹೊಸ ಮಾರ್ಗಸೂಚಿಯನ್ನೂ ರೂಪಿಸಲಾಗಿದೆ. ಇದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಗ್ರೂಪ್-ಬಿ ಅಧಿಕಾರಿ ಚುನಾವಣಾಧಿಕಾರಿಯಾಗಿ ನೇಮಕವಾಗಲಿದ್ದಾರೆ. ಇವರಿಗೆ ನೆರವಾಗಲು ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಲು ಸೂಚಿಸಲಾಗಿದೆ.

ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಊರು ಅಥವಾ ತವರು ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ. ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಆಧರಿಸಿ ಅಧಿಕಾರಿಗಳ ನಿಯೋಜನೆಯ ಪ್ರಮಾಣವೂ ನಿಗದಿಯಾಗಿದೆ. 25 ಸದಸ್ಯ ಸ್ಥಾನಗಳವರೆಗೆ ಇರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿ, 25ರಿಂದ 35 ಸ್ಥಾನಗಳಿರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಇಬ್ಬರು ಸಹಾಯಕರು, 35ಕ್ಕಿಂತ ಹೆಚ್ಚು ಸ್ಥಾನಗಳಿರುವ ದೊಡ್ಡ ಪಂಚಾಯಿತಿಗಳಿಗೆ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ.

ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ಸುತ್ತೋಲೆಯೊಂದಿಗೆ ಲಗತ್ತಿಸಿದೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Continue Reading

Trending