Connect with us

ರಾಜಕೀಯ

ಮುನಿರತ್ನ ಕೇಸ್: ತನಿಖೆಯಾಗಿ ಸತ್ಯ ಹೊರಬರಲಿ, ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ-ಬಿಜೆಪಿ – Muniratna Case

ತುಮಕೂರು/ದೊಡ್ಡಬಳ್ಳಾಪುರ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಇಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ. ಈ ಕುರಿತು ಸರಿಯಾದ ರೀತಿಯಲ್ಲಿ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುನಿರತ್ನ ಪ್ರಕರಣದಲ್ಲಿ ಎಲ್ಲೋ ಒಂದೆಡೆ ರಾಜ್ಯ ಸರ್ಕಾರದ ತರಾತುರಿ ನೋಡಿದರೆ, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ವಾಲ್ಮೀಕಿ ನಿಗಮ ಹಗರಣದ ವಿರುದ್ಧ, ಮುಡಾ ವಿರುದ್ಧದ ನಮ್ಮ ಪಾದಯಾತ್ರೆಯಿಂದಾಗಿ ಮುಖ್ಯಮಂತ್ರಿಗಳು ಒಂಟಿ ಕಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಪಕ್ಷದಲ್ಲಿ ಮುಖ್ಯಮಂತ್ರಿ ರೇಸ್ ಹೆಚ್ಚಾಗಿದೆ‌. ಹೀಗಾಗಿ ಹತಾಶರಾಗಿ ಪ್ರತಿಪಕ್ಷಗಳನ್ನು ಎದುರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಳೇ ಪ್ರಕರಣಗಳನ್ನು ಕೆದಕುವುದು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವುದು ಹೊಸದೇನಲ್ಲ ಎಂದು ಇದೇ ವೇಳೆ ತಿಳಿಸಿದರು.

ಮುನಿರತ್ನ ಕಾಂಗ್ರೆಸ್​ನಲ್ಲಿದ್ದರೆ ಒಳ್ಳೆಯವ, ಬಿಜೆಪಿಗೆ ಬಂದ್ರೆ ಕೆಟ್ಟವ?: ಮುನಿರತ್ನ ಕಾಂಗ್ರೆಸ್‌ನಲ್ಲಿದ್ದರೆ ಒಳ್ಳೆಯವನು, ಬಿಜೆಪಿಗೆ ಬಂದ್ರೆ ಕೆಟ್ಟವನಾ ಎಂದು ಮುನಿರತ್ನರನ್ನು ಸಮರ್ಥಿಸಿಕೊಳ್ಳುವ ಬಿಜೆಪಿಯವರಿಗೆ ನಾಚಿಕೆ ಆಗಲ್ವಾ? ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ದೊಡ್ಡಬಳ್ಳಾಪುರದ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದರು.

ಡಿ.ಕೆ.ಬ್ರದರ್ಸ್ ಬಗ್ಗೆ ಕೊತ್ವಾಲ್ ರಾಮಚಂದ್ರನ ಶಿಷ್ಯರು ಎಂದು ಮಾಧ್ಯಮದಲ್ಲಿ ಪ್ರಚಾರ ಆಗಿತ್ತು. ಮುನಿರತ್ನ ನಮ್ಮ ಪಕ್ಷಕ್ಕೆ ಬಂದು ಕೇವಲ 5 ವರ್ಷ ಆಗಿದೆ. ಆದರೆ, ಅವರು 30 ವರ್ಷ ಕಾಂಗ್ರೆಸ್‌ನಲ್ಲಿದ್ದರು. ಆಗ ಒಳ್ಳೆಯವನಾಗಿದ್ದ, ಈಗ ಕೆಟ್ಟವನಾಗಿದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ.

ಪಿಎಸ್​​ಐ ಆತ್ಮಹತ್ಯೆ ಪ್ರಕರಣದಲ್ಲಿ ಹೆಂಡತಿ ದೂರು ನೀಡಿದರು. ಬೀದಿಯಲ್ಲಿ ಪ್ರತಿಭಟನೆ ಮಾಡಿ ಬಂಧಿಸುವಂತೆ ಆಗ್ರಹಿಸಿದರು. ಆದರೂ ನೀವು ಯಾಕೆ ಬಂಧಿಸಲಿಲ್ಲ?. ನೀವು ನಿಮ್ಮ ಪಕ್ಷದ ಶಾಸಕರಿಗೆ ಒಂದು, ಬಿಜೆಪಿ ಶಾಸಕರಿಗೆ ಇನ್ನೊಂದು ರೀತಿ ಧೋರಣೆ ಮಾಡುತ್ತಿದ್ದೀರಾ‌?. ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ನಾವು ಯಾರೂ ಕೂಡ ಬೆಂಬಲಿಸಲ್ಲ ಎಂದರು.

ಕಾನೂನಿನ ಪ್ರಕಾರ ನೋಟಿಸ್ ಕೊಡಬೇಕಿತ್ತು, ಓಡಿ ಹೋಗಿದ್ದರೆ ಬಂಧಿಸಬೇಕಿತ್ತು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ, ಉಪ್ಪು ತಿಂದವರು ನೀರು ಕುಡೀಬೇಕು, ಪೊಲೀಸ್ ಸ್ಟೇಷನ್​​ಗಳನ್ನು ನೀವು ಕಾಂಗ್ರೆಸ್​​ನ ಸ್ಟೇಷನ್ ಆಗಿ ಮಾಡಿಕೊಂಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ದೇಶ

“ಉರ್ಕೆ ಉಂಡ್ರಾ?”: ಮಧುಗಿರಿಯಲ್ಲಿ ‘ಸಿಎಂ ಆಗಿ’ ಘೋಷಣೆಗೆ ಪರಮೇಶ್ವರ್ ತೆಲುಗಿನಲ್ಲಿ ತಿರುಗೇಟು

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ “ಸಿಎಂ ಆಗಬೇಕು” ಎಂಬ ಘೋಷಣೆ ಕೇಳಿಬಂದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು “ನೀವು ಸಿಎಂ ಆಗಬೇಕು” ಎಂದು ಕೂಗಿದ ಪ್ರಸಂಗ ನಡೆದಿದೆ.

ಭಾಷಣದ ಅಂತ್ಯದಲ್ಲಿ ಈ ಘೋಷಣೆ ಕೇಳಿಬಂದಾಗ, ಪರಮೇಶ್ವರ್ ಅವರು ಕ್ಷಣಮಾತ್ರ ನಿಂತು ಕಾರ್ಯಕರ್ತನ ಮಾತಿಗೆ ತೆಲುಗಿನಲ್ಲಿ ಪ್ರತಿಕ್ರಿಯಿಸಿದರು. “ಉರ್ಕೆ ಉಂಡ್ರ… ನೀನು ಸಿಎಂ ಅಂಟ?” ಎಂದು ಹೇಳಿ, “ನಾನು ಸಿಎಂ ಆಗಬೇಕಂತೆ… ಸುಮ್ಮನಿರು” ಎಂದು ಹಾಸ್ಯಭರಿತವಾಗಿ ಹೇಳಿ ಕಾರ್ಯಕರ್ತನ ಬಾಯಿ ಮುಚ್ಚಿಸಿದರು.

ಈ ದೃಶ್ಯ ಅಲ್ಲಿದ್ದ ಜನರಲ್ಲಿ ನಗೆರಸ ಮೂಡಿಸಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಜಕೀಯ ವಲಯದಲ್ಲೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಪರಮೇಶ್ವರ್ ಅವರ ಪ್ರತಿಕ್ರಿಯೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಭಿವೃದ್ಧಿ, ಮೂಲಸೌಕರ್ಯ ಬಲಪಡಿಸುವುದು ಮತ್ತು ಸಾರ್ವಜನಿಕ ಸೇವೆ ಸುಧಾರಣೆ ಕುರಿತು ಗೃಹ ಸಚಿವರು ಮಾತನಾಡಿದರು. ಆದರೆ “ಸಿಎಂ ಆಗಿ” ಘೋಷಣೆಯ ಘಟನೆ ಸಮಾರಂಭದ ಪ್ರಮುಖ ಹೈಲೈಟ್ ಆಗಿದೆ.

Continue Reading

ದೇಶ

638 ಕನ್ನಡ ಶಾಲೆ ಮುಚ್ಚಿದ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ

ನವದೆಹಲಿ: ರಾಜ್ಯದಾದ್ಯಂತ 638 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿರುವುದು ಕನ್ನಡ ಮತ್ತು ಕನ್ನಡ ಶಿಕ್ಷಣದ ವಿರುದ್ಧದ ಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು. “ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಹೇಳಿದರು. ಈ ನಿರ್ಧಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಬದ್ಧವಾಗಿರಬೇಕು. ಆದರೆ ಪ್ರಸ್ತುತ ಸರ್ಕಾರದ ನಡೆ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ ಬೊಮ್ಮಾಯಿ, ಕೂಡಲೇ ಮುಚ್ಚಿರುವ ಎಲ್ಲಾ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜೊತೆಗೆ, ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ನಿರಂತರ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶಗೊಂಡಿದೆ” ಎಂದು ಹೇಳಿದರು. ಸಂಸತ್ತಿನಲ್ಲಿ ಬೆಂಚ್‌ಗಳ ಮೇಲೆ ನಿಂತು ಗದ್ದಲ ಮಾಡುವುದು, ಸ್ಪೀಕರ್ ವಿರುದ್ಧ ದಾಳಿ ನಡೆಸುವುದು ಹಾಗೂ ಪ್ರಧಾನಮಂತ್ರಿಯ ಆಸನದವರೆಗೆ ತೆರಳಿ ತಡೆ ಮಾಡುವ ಪ್ರಯತ್ನ ಮಿತಿಮೀರಿದ ವರ್ತನೆ ಎಂದು ಅವರು ಆರೋಪಿಸಿದರು.

ರಾಜಕೀಯದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಗದ್ದಲ ಹಾಗೂ ಅಶಾಂತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

Continue Reading

ದೇಶ

ಅಧಿಕಾರ ಹಂಚಿಕೆ ವಿವಾದ: “ಹೈಕಮಾಂಡ್ ತೀರ್ಮಾನವೇ ಅಂತಿಮ” – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಅದಕ್ಕೆ ಅನುಗುಣವಾಗಿ ತಾವು ಹಾಗೂ ಡಿಕೆ ಶಿವಕುಮಾರ್ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಡಿಕೆ ಸುರೇಶ್ ಅವರು “ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರೆ ಎಂಬ ವಿಶ್ವಾಸ ಇದೆ” ಎಂದು ಹೇಳಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. “ಇನ್ನೇನು ಕೇಳೋದೇ ಇಲ್ಲವಾ ನಿಮಗೆ? ಮೂರು ತಿಂಗಳುಗಳಿಂದ ಇದೇ ವಿಚಾರ ಕೇಳ್ತಿದ್ದೀರಿ. ದಯವಿಟ್ಟು ಇನ್ನು ಮುಂದೆ ಈ ಪ್ರಶ್ನೆ ಕೇಳಬೇಡಿ” ಎಂದು ಅವರು ತಿರುಗೇಟು ನೀಡಿದರು.

ಹೈಕಮಾಂಡ್‌ಗೆ ಎಲ್ಲವೂ ತಿಳಿದಿದ್ದು, ಅಂತಿಮ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆ. “ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳಬೇಕು, ಡಿಕೆ ಶಿವಕುಮಾರ್ ಕೂಡ ನಡೆದುಕೊಳ್ಳಬೇಕು” ಎಂದು ಸಿಎಂ ಹೇಳಿದರು.

ಡಿಕೆ ಸುರೇಶ್ ಅವರ ಹೇಳಿಕೆ ಕುರಿತು ಪ್ರಶ್ನೆ ಕೇಳಿದಾಗ, “ಅವರು ಏನು ಹೇಳಿದ್ರು ಅಂದ್ರೆ ಅವರನ್ನೇ ಕೇಳಿ. ನನಗೆ ಯಾಕೆ ಕೇಳ್ತೀರಾ?” ಎಂದು ಅಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆಗಳು ಜೋರಾಗಿರುವ ನಡುವೆಯೇ ಸಿಎಂ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

Trending