Connect with us

ಬೆಂಗಳೂರು

ಲೋಕಸಭೆಗೆ ಬೊಮ್ಮಾಯಿ‌ ಕಣಕ್ಕಿಳಿಸಲು ಬಿಜೆಪಿ ಪ್ಲಾನ್!? ಕೈ ತಪ್ಪುತ್ತಾ ವಿಪಕ್ಷ ಸ್ಥಾನ?

Published

on

ಲೋಕಸಭೆಗೆ ಬೊಮ್ಮಾಯಿ ಕಣಕ್ಕಿಳಿಸಲು ಬಿಜೆಪಿ ಪ್ಲಾನ್!? ಕೈ ತಪ್ಪುತ್ತಾ ವಿಪಕ್ಷ ಸ್ಥಾನ?
ಲೋಕಸಭೆಗೆ ಬೊಮ್ಮಾಯಿ ಕಣಕ್ಕಿಳಿಸಲು ಬಿಜೆಪಿ ಪ್ಲಾನ್!? ಕೈ ತಪ್ಪುತ್ತಾ ವಿಪಕ್ಷ ಸ್ಥಾನ?

ಬೆಂಗಳೂರು, ಸೆಪ್ಟೆಂಬರ್‌ 02: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದ್ದು, ಬಿಜೆಪಿ ಹೈಕಮಾಂಡ್‌ ಸಹ ಗೆಲ್ಲುವ ನಾಯಕರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ

ಲೋಕಸಭಾ ಚುನಾವಣೆಯಲ್ಲಿ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಬಿಜೆಪಿ ನಾಯಕತ್ವವು ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಇನ್ನೂ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಶಿಗ್ಗಾಂವಿ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸೇರಿದರೂ ಹಾವೇರಿ ಜಿಲ್ಲೆಯಲ್ಲಿ ಮಾಜಿ ಸಿಎಂ ಗಣನೀಯ ಪ್ರಭಾವ ಹೊಂದಿದ್ದಾರೆ. ಅದಲ್ಲದೇ ಮುಖ್ಯಮಂತ್ರಿ ಆಗಿದ್ದಾಗ ಹಾವೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳನ್ನು ಹೈಕಮಾಂಡ್‌ ಗಮನಿಸಿದ್ದು, ಇವು ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುತ್ತವೆ ಎಂಬ ಚಿಂತನೆಯಲ್ಲಿ ಪಕ್ಷದ ನಾಯಕರು ಇದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಗದಗ ಜಿಲ್ಲೆಯ ಕೆಲ ಕ್ಷೇತ್ರಗಳು ಕೂಡ ಬರಲಿದ್ದು, ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ತೋರಿದ್ದು, ಗದಗ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಶಿರಹಟ್ಟಿ ಹಾಗೂ ಹಾವೇರಿಯ 6 ಕ್ಷೇತ್ರಗಳ ಪೈಕಿ ಶಿಗ್ಗಾಂವಿಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.ಇತ್ತ ಕಾಂಗ್ರೆಸ್‌ ತನ್ನ ಶಕ್ತಿಯನ್ನ ವೃದ್ದಿಸಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಳಿಕ ಐದು ಚುನಾವಣಾ ಗ್ಯಾರಂಟಿಗಳಿಗೆ ಜನರಿಂದ ಬರುವ ಪ್ರತಿಕ್ರಿಯೆ ಕಾಂಗ್ರೆಸ್‌ ಅನ್ನು ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡಿಸುತ್ತಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಕಷ್ಟಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನೂ ಈ ಬಗ್ಗೆ ಧಾರವಾಡ ವಿಭಾಗದ ಚುನಾವಣಾ ಉಸ್ತುವಾರಿ ಲಿಂಗರಾಜ್‌ ಪಾಟೀಲ್‌, ಹಾವೇರಿಯಲ್ಲಿ ಬಿಜೆಪಿಗಿರುವ ಸವಾಲಿನ ಬಗ್ಗೆ ನಮಗೆ ಅರಿವಿದೆ. ಹಾವೇರಿಗೆ ಸಮರ್ಥ ಅಭ್ಯರ್ಥಿಯನ್ನು ಘೋಷಿಸುತ್ತೇವೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸರ್ವೇ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ. ಶಿವಕುಮಾರ್‌ ಉದಾಸಿ ಅವರು 2009ರಿಂದ ಹಾವೇರಿಯಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ್‌ ಕಲ್ಕೋಟಿ, ಒಬಿಸಿ ನಾಯಕ ರಾಜಶೇಖರ್‌ ಕತ್ತೆಗೌಡರ್‌ ಬಿಜೆಪಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಇನ್ನೂ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ವಿಳಂಬದ ಕುರಿತು ಈಗಾಗಲೇ ಬಿಜೆಪಿ ಪಕ್ಷದ ವಿರುದ್ದ ಕಾಂಗ್ರೆಸ್‌ ನಾಯಕರು ಸಾಕಷ್ಟು ಟೀಕೆ ಟಿಪ್ಪಣಿಗಳನ್ನ ನಡೆಸಿದ್ದು, ಇತ್ತ ಲೋಕಸಭಾ ಚುನಾವಣಾ ಸಿದ್ದತೆ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರು ಗುರುವಾರ ಬಿಜೆಪಿ ನಾಯಕರ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಈ ವೇಳೆ ವಿಧಾನಸಭಾ ವಿರೋಧ ಪಕ್ಷದ ನಾಯಕನ ನೇಮಕ ವಿಳಂಬದ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ ಬಸವರಾಜ ಬೊಮ್ಮಾಯಿ ಪಾತ್ರದ ಬಗ್ಗೆಯೂ ಮಾತುಕತೆ ನಡೆದಿದೆ. ಹಾವೇರಿಯಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೆಸರು ಕೇಳಿಬರುತ್ತಿದೆ. ಅವರು ಎರಡು ಬಾರಿ ಈ ಸ್ಥಾನಕ್ಕೆ ಸ್ಪರ್ಧಿಸಿದರು ಮತ್ತು 2014 ರಲ್ಲಿ 43% ಮತಗಳನ್ನು ಪಡೆದಿದ್ದರು, ಇನ್ನೂ 2019 ರಲ್ಲಿ ಉದಾಸಿ ವಿರುದ್ಧ ಸೋತ DR ಪಾಟೀಲ್ ಮತ್ತು ಕಾನೂನು ಸಚಿವ HK ಪಾಟೀಲ್ ಅವರ ಪುತ್ರ ಕೃಷ್ಣ ಪಾಟೀಲ್ ಇತರ ಸಂಭಾವ್ಯರಲ್ಲಿ ಸೇರಿದ್ದಾರೆ. ಪಕ್ಷ ಬಯಸಿದರೆ ನಾನು ಸ್ಪರ್ಧಿಸಲು ಸಿದ್ಧ ಎಂದು ಸಲ್ಲಿಂ ಅಹ್ಮದ್ ಹೇಳಿದ್ದಾರೆ.


ದೇಶ

‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ

Published

on

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.

ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.

“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Continue Reading

ದೇಶ

ಪೆಟ್ರೋಲ್-ಡಿಸೇಲ್ ತೆರಿಗೆ ಕಡಿತಕ್ಕೆ ಸಿಎಂ ಸ್ಪಷ್ಟ ನಕಾರ

Published

on

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕುರಿತು ಚರ್ಚೆಗಳು ತೀವ್ರವಾಗಿರುವ ನಡುವೆ ಮುಖ್ಯಮಂತ್ರಿ Siddaramaiah ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸಿದರೆ ನಾವು ತೆರಿಗೆ ಕಡಿಮೆ ಮಾಡಬೇಕಾ? ಅವರು ಬೆಲೆ ಏರಿಕೆ ಮಾಡಿದಾಗ ಯಾಕೆ ಪ್ರಶ್ನೆ ಕೇಳುವುದಿಲ್ಲ?” ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಕೇಂದ್ರ ಸರ್ಕಾರವೇ ಎಂದು ಆರೋಪಿಸಿದರು.

ಮುಂದುವರಿದು ಅವರು, “Narendra Modi ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮತ್ತು ಡಿಸೇಲ್ ದರ ಎಷ್ಟು ಇತ್ತು? ಮಾಜಿ ಪ್ರಧಾನಿ Manmohan Singh ಅವಧಿಯಲ್ಲಿ ಪೆಟ್ರೋಲ್ ₹70 ಮತ್ತು ಡಿಸೇಲ್ ₹48 ಇತ್ತು. ಗ್ಯಾಸ್ ಸಿಲಿಂಡರ್ ಬೆಲೆ ₹414 ಇತ್ತು. ಈಗ ದರ ಎಷ್ಟು ಏರಿದೆ ಎಂಬುದನ್ನು ಜನರು ಗಮನಿಸಬೇಕು” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಜನರಿಗೆ ಯಾವುದೇ ನೆರವು ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಕೇಂದ್ರ ಸರ್ಕಾರ ದರ ಹೆಚ್ಚಿಸಿದಾಗ ಅವರ ವಿರುದ್ಧ ಪ್ರಶ್ನೆ ಕೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕೆಂದು ಕೇಳುತ್ತೀರಿ. ನಿಮ್ಮ ಪ್ರಶ್ನೆಗಳಲ್ಲೇ ಕೇಂದ್ರ ಸರ್ಕಾರದ ಪರ ನಿಲುವು ಕಾಣಿಸುತ್ತದೆ” ಎಂದು ಮಾಧ್ಯಮಗಳ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಇಂಧನ ದರ ಏರಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.

Continue Reading

ದೇಶ

‘ಹೈದರಾಬಾದ್‌ನಲ್ಲಿ ಗುಂಡಿಗಳೇ ಇಲ್ಲ, ಬೆಂಗಳೂರಿನಲ್ಲಿ ಯಾಕೆ?’: ವಿದೇಶಿಗನ ಪ್ರಶ್ನೆ ವೈರಲ್

Published

on

ಹೈದರಾಬಾದ್: Bengaluru ನಗರದ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಬಾರಿ ಕೆನಡಾ ಮೂಲದ ಕ್ಯಾಲೆಬ್ ಫ್ರೀಸೆನ್ ಎಂಬುವವರು Hyderabad ನಗರದ ರಸ್ತೆಗಳನ್ನು ಹೊಗಳಿ, ಬೆಂಗಳೂರಿನ ಮೂಲಸೌಕರ್ಯವನ್ನು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೋ ಹಂಚಿಕೊಂಡಿರುವ ಕ್ಯಾಲೆಬ್, “ಹೈದರಾಬಾದ್‌ನಲ್ಲಿ ರಸ್ತೆಗಳು ಅತ್ಯುತ್ತಮವಾಗಿವೆ. ನಗರದ ಮಧ್ಯಭಾಗದಲ್ಲಿದ್ದರೂ ಸಂಚಾರ ಸುಲಭವಾಗಿದೆ. ಎಲ್ಲೆಡೆ ಉತ್ತಮ ರಸ್ತೆ ಸಂಪರ್ಕವಿದ್ದು, ಗುಂಡಿಗಳ ಸಮಸ್ಯೆ ಕಾಣುತ್ತಿಲ್ಲ” ಎಂದು ಹೇಳಿದ್ದಾರೆ.

ಮುಂದುವರಿದು ಅವರು, “ಇಲ್ಲಿ ರಸ್ತೆಗಳ ಮೇಲೆ ಪ್ರಾಣಿಗಳ ಓಡಾಟ ಇಲ್ಲ, ಪಾದಚಾರಿಗಳು ಹಠಾತ್ ವಾಹನಗಳ ಮುಂದೆ ಬರುತ್ತಿಲ್ಲ. ಹೈದರಾಬಾದ್‌ನಲ್ಲಿ ಇಷ್ಟು ಉತ್ತಮ ರಸ್ತೆ ವ್ಯವಸ್ಥೆ ಇರುವಾಗ ಬೆಂಗಳೂರಿನಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹೈದರಾಬಾದ್‌ನಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಇರುವುದನ್ನೂ ಅವರು ಮೆಚ್ಚಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ‘ಬೆಂಗಳೂರು Vs ಹೈದರಾಬಾದ್’ ಚರ್ಚೆ ಜೋರಾಗಿದೆ. ಹಲವರು ಬೆಂಗಳೂರಿನಲ್ಲಿ ಯೋಜಿತ ರಸ್ತೆ ಅಭಿವೃದ್ಧಿ ಹಾಗೂ ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಬಿಬಿಎಂಪಿ ಆಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಬೆಂಗಳೂರು ಪರವಾಗಿ ಪ್ರತಿಕ್ರಿಯಿಸಿದ ಕೆಲ ನೆಟ್ಟಿಗರು, “ಎಲ್ಲಾ ನಗರಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ರಸ್ತೆಗಳು ಇರುತ್ತವೆ. ಹೈದರಾಬಾದ್‌ನ ಪ್ರಮುಖ ಪ್ರದೇಶಗಳನ್ನು ನೋಡಿ ಮಾತ್ರ ಇಂತಹ ಅಭಿಪ್ರಾಯ ನೀಡಲಾಗಿದೆ” ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಹೈದರಾಬಾದ್ ನಿವಾಸಿಯೊಬ್ಬರು, “ದಯವಿಟ್ಟು ನಮ್ಮ ನಗರವನ್ನು ಇಷ್ಟು ಹೊಗಳಬೇಡಿ. ಇಲ್ಲದಿದ್ದರೆ ಬೆಂಗಳೂರಿನಂತೆ ಮನೆ ಬಾಡಿಗೆಗಳು ಏರಿಬಿಡುತ್ತವೆ” ಎಂದು ಹಾಸ್ಯಭರಿತ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ರಸ್ತೆ ಅಭಿವೃದ್ಧಿ ಮತ್ತು ನಗರ ಯೋಜನೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Continue Reading

Trending