Connect with us

ಬೆಂಗಳೂರು

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ

Published

on

ಬೆಂಗಳೂರು: ಯೋಗೇಶ್ವರ್ (C P Yogeshwar) ಕಾಂಗ್ರೆಸ್ ಸೇರ್ಪಡೆ ಆಗಿರೋದು ಆಶ್ಚರ್ಯ ಏನು ಇಲ್ಲ. ಇದು ನಿರೀಕ್ಷಿತವೇ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯ ಪಡುವಂತಹದ್ದು ಏನು ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋ ಆರೋಪ ಅಲ್ಲ. ಅವರು ಯಾವಾಗ ಬಿಜೆಪಿ ಪರಿಷತ್ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ಕೊಟ್ರೋ ಆಗಲೇ ರಾಜಕೀಯ ವಿದ್ಯಮಾನಗಳ ಬೆಳವಣಿಗೆ ಬಗ್ಗೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುತ್ತಾರೆ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವಿಲ್ಲ ಎಂದರು.

ಚನ್ನಪಟ್ಟಣಕ್ಕೆ ನನ್ನ ಹೆಸರು 2 ತಿಂಗಳಿಂದ ಚಾಲ್ತಿಯಲ್ಲಿದೆ. ಪಕ್ಷದ ಕಾರ್ಯಕರ್ತರು ನಿಖಿಲ್‌ಗೆ ಟಿಕೆಟ್ ಸಿಕ್ಕರೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಾನು ಸ್ಪರ್ಧೆ ಮಾಡೋದಕ್ಕೆ ಧೈರ್ಯದ ಪ್ರಶ್ನೆ ಅಲ್ಲ. ಯಾವುದೇ ಸ್ಪರ್ಧೆ ಅಂತಿಮವಾಗಬೇಕಾದರೆ ಎನ್‌ಡಿಎ ಕಡೆಯಿಂದ ಘೋಷಣೆ ಆಗಬೇಕಿದೆ. ಕುಮಾರಸ್ವಾಮಿ ಅವರು ನಿನ್ನೆ ಹೇಳಿದ್ದಾರೆ ತಾಳಿದವನು ಬಾಳಿಯಾನು ಎಂದು ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಷ್ಟು ದಿನ ಅತ್ಯಂತ ತಾಳ್ಮೆಯಿಂದ ನಾವು ಕಾದಿದ್ದೇವೆ. ಈಗಲೂ ಕೂಡಾ ಬಿಜೆಪಿ ರಾಜ್ಯದ ನಾಯಕರು ನಮ್ಮ ಪಕ್ಷದ ನಾಯಕರು ಕೂಡಿ ಚರ್ಚೆ ಮಾಡಿ ಯಾರು ಎನ್‌ಡಿಎ ಅಭ್ಯರ್ಥಿ ಆಗಬೇಕು ಎಂದು ತೀರ್ಮಾನ ಮಾಡುತ್ತೇವೆ. ಅಭ್ಯರ್ಥಿ ಯಾರು ಅಂತ ಎನ್‌ಡಿಎ ಘೋಷಣೆ ಮಾಡುತ್ತದೆ ಎಂದು ತಿಳಿಸಿದರು.

ನಿಖಿಲ್ ನಿಲ್ಲಬೇಕು ಅಂತ ಕಾರ್ಯಕರ್ತರು ಹೇಳಿದರೆ ಅಯ್ಯೋ ರಾಮ ದೇವೇಗೌಡರ ಕುಟುಂಬ ಬಿಟ್ಟರೆ ಇನ್ಯಾರು ಸ್ಪರ್ಧೆ ಮಾಡೋಕೆ ಆಗುವುದಿಲ್ಲವಾ ಎಂದು ಪ್ರಶ್ನೆ ಕೇಳುತ್ತಾರೆ. ಮತ್ತೊಂದು ಕಡೆ ಧೈರ್ಯದ ಪ್ರಶ್ನೆಯೂ ಕೇಳುತ್ತಾರೆ. ಇದಕ್ಕೆ ನಾನು ಏನು ಉತ್ತರ ಕೊಡಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ರಾಮನಗರ ಜೆಡಿಎಸ್ ಮುಕ್ತ ಮಾಡಲು ಈ ಆಪರೇಷನ್ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಹಳೆ ಮೈಸೂರು ಭಾಗದಲ್ಲಿ ನೋಡಿದ್ದೇವೆ. 14 ಕ್ಷೇತ್ರಗಳ ಪೈಕಿ 12 ಸ್ಥಾನ ಜನರು ಕೊಟ್ಟರು. 12 ಸೀಟು ಬರಲು ಜೆಡಿಎಸ್ ಮತ್ತು ಕುಮಾರಸ್ವಾಮಿ ಕಾರಣ. ಇದು ಬಿಜೆಪಿ ರಾಷ್ಟ್ರೀಯ ನಾಯಕರ ಗಮನದಲ್ಲೂ ಇದೆ. ಕಾಂಗ್ರೆಸ್‌ನವರಿಗೆ ರಾಜ್ಯದಲ್ಲಿ ಟಾರ್ಗೆಟ್ ಇರೋದು ಕುಮಾರಸ್ವಾಮಿ ಅವರು. ಕಳೆದ ಚುನಾವಣೆ ಫಲಿತಾಂಶ ಬಳಿಕ ಆಗಿರೋ ಕೆಲ ಘಟನೆಗಳು ಎಲ್ಲರಿಗೂ ಗೊತ್ತು. ಕುಮಾರಸ್ವಾಮಿ ಟಾರ್ಗೆಟ್ ಆಗಿದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಚನ್ನಪಟ್ಟಣ ಜನತೆ ನಮಗೆ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಡಾ.ಮಂಜುನಾಥ್ ಪತ್ನಿ ಅನಸೂಯ ಅಭ್ಯರ್ಥಿ ಆಗೋ ಬಗ್ಗೆ ಕಾದು ನೋಡಿ ಎಂದು ಕುತೂಹಲವಿಟ್ಟರು. ಕುಮಾರಸ್ವಾಮಿ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರನ್ನ ಬೆಳೆಯಲು ಬಿಡುತ್ತಿಲ್ಲ ಎಂಬ ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಅವರು ಪತ್ರಿಕೆಗೆ ಸಂದರ್ಶನ ಕೊಟ್ಟಿದ್ದರು. ಅದರಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರನ್ನ ಕುಮಾರಸ್ವಾಮಿ ತುಳಿಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈಗ ಯೋಗೇಶ್ವರ್ ಇಂತಹ ಹೇಳಿಕೆ ಕೊಡಲು, ಕುಮ್ಮಕ್ಕು ಕೊಡಲು ಯಾರು ಅನ್ನೋದು ನಮಗೆ ಮೊದಲೇ ಅರ್ಥ ಆಗಿತ್ತು. ಈಗ ರಾಜ್ಯದ ಜನರಿಗೆ ಅರ್ಥ ಆಗಿದೆ ಎಂದು ಕಾಂಗ್ರೆಸ್ ಮತ್ತು ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ದೇಶ

ಬೆಂಗಳೂರು ಹೃದಯ ಸ್ಪರ್ಶಿ ಕಥೆ: ಯುವತಿಗೆ ನೆರವಾದ ಅಪರಿಚಿತರು

Published

on

By

ಬೆಂಗಳೂರು: ಸಿಲಿಕಾನ್ ಸಿಟಿಯ ಕತ್ತಲ ರಾತ್ರಿಯಲ್ಲಿ ಯುವತಿಯೊಬ್ಬಳಿಗೆ ರಕ್ಷೆಯಾಗಿ ನಿಂತ ಸಾರಿಗೆ ಸಿಬ್ಬಂದಿ ಹಾಗೂ ಬೈಕ್ ಟ್ಯಾಕ್ಸಿ ಚಾಲಕನ ಮಾನವೀಯತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಗದ್ದಲದ ನಡುವೆ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಐಶ್ವರ್ಯ ಎಂಬ ಯುವತಿ Bangalore Metropolitan Transport Corporation ಬಸ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆ ಸಮಯದಲ್ಲಿ ಸುತ್ತಮುತ್ತ ಸಂಪೂರ್ಣ ಕತ್ತಲು ಆವರಿಸಿಕೊಂಡಿದ್ದು, ರಸ್ತೆಗಳಲ್ಲಿ ಜನರ ಓಡಾಟವೂ ಇರಲಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಸಿಲುಕಿದ ಯುವತಿ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೂ ಯಾವುದೇ ವಾಹನ ಲಭ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ಸ್ಥಿತಿಯನ್ನು ಗಮನಿಸಿದ ಬಿಎಂಟಿಸಿ ಸಿಬ್ಬಂದಿ, ಆಕೆಯನ್ನು ಬಸ್ ಸ್ಟಾಪ್‌ನಲ್ಲಿ ಬಿಟ್ಟು ತೆರಳದೆ ಸುರಕ್ಷಿತ ವಾಹನ ಸಿಗುವವರೆಗೂ ಅಲ್ಲಿಯೇ ಉಳಿದುಕೊಂಡರು. ಅವರ ಈ ಕಾಳಜಿ ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.

ಅದೇ ಸಮಯದಲ್ಲಿ ಆ ಮಾರ್ಗವಾಗಿ ಬಂದ Rapido ಚಾಲಕನೊಬ್ಬ ಯುವತಿಯ ನೆರವಿಗೆ ಧಾವಿಸಿದರು. ಬಿಎಂಟಿಸಿ ಸಿಬ್ಬಂದಿ ಚಾಲಕನ ವಿವರಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಯುವತಿಯನ್ನು ಅವರೊಂದಿಗೆ ಕಳುಹಿಸಿದರು. ವಿಶೇಷವೆಂದರೆ, ಆ ಚಾಲಕ ಯಾವುದೇ ಹಣ ಪಡೆಯದೆ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೆರವಾದ ಬಿಎಂಟಿಸಿ ಸಿಬ್ಬಂದಿ ಮತ್ತು ರ‍್ಯಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಈಗ ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

Bengaluru: ಸಚಿವ ಮುನಿಯಪ್ಪ ಮನೆ ಮುತ್ತಿಗೆ: ಆಟೋ ಚಾಲಕರ ಪ್ರತಿಭಟನೆ

Published

on

By

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಸಾವಿರಾರು ಆಟೋ ಚಾಲಕರ ಬದುಕು ಸಂಕಷ್ಟಕ್ಕೀಡಾಗಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಗದೆ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗೆ ವಿರೋಧವಾಗಿ ಚಾಲಕರು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. “ಗ್ಯಾಸ್ ಸಿಗುತ್ತಿಲ್ಲ, ಸಿಕ್ಕರೂ ಲೀಟರ್‌ಗೆ ₹90 ಬದಲು ₹135 ವರೆಗೆ ವಸೂಲಿ ಮಾಡುತ್ತಿದ್ದಾರೆ” ಎಂದು ಚಾಲಕರು ಆರೋಪಿಸಿದ್ದಾರೆ.

ಮಹಿಳಾ ಆಟೋ ಚಾಲಕರ ಸ್ಥಿತಿ ಮತ್ತಷ್ಟು ದುಃಖಕರವಾಗಿದೆ. “ಮಕ್ಕಳನ್ನು ಮನೆಯಲ್ಲಿ ಬಿಟ್ಟು ಗಂಟೆಗಳ ಕಾಲ ಗ್ಯಾಸ್‌ಗಾಗಿ ಕಾಯಬೇಕು” ಎಂದು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಬಂಕ್‌ಗಳಲ್ಲಿ ದಾಸ್ತಾನು ಕೊರತೆಯೇ ಪ್ರಮುಖ ಕಾರಣವಾಗಿದ್ದು, ಹಗಲು-ರಾತ್ರಿ ಎನ್ನದೆ ಚಾಲಕರು ರಸ್ತೆಯಲ್ಲೇ ಕಾಯುವಂತಾಗಿದೆ.

ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್. ಮುನಿಯಪ್ಪ, “ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ. ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ವಿತರಣೆ ಕೇಂದ್ರದ ನಿಯಂತ್ರಣದಲ್ಲಿ ಇದೆ. ಕರ್ನಾಟಕಕ್ಕೆ ಸಮರ್ಪಕ ಪೂರೈಕೆ ಆಗುತ್ತಿಲ್ಲ” ಎಂದು ಆರೋಪಿಸಿದರು. ಈ ಕುರಿತು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿ, ಏಪ್ರಿಲ್ 10 ನಂತರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಆದರೆ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಚಾಲಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ನಾವು ರಸ್ತೆಯಲ್ಲೇ ಮಲಗುತ್ತಿದ್ದರೂ ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಇಂಧನ ಅಸ್ಥಿರತೆಯ ನಡುವೆ ಸ್ಥಳೀಯ ಮಟ್ಟದಲ್ಲಿ ಉಂಟಾದ ಈ ಎಲ್‌ಪಿಜಿ ಕೊರತೆ ಆಟೋ ಚಾಲಕರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ.

Continue Reading

Trending