Connect with us

ಬೆಂಗಳೂರು

ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತ ಸ್ಥಳಕ್ಕೆ ಸಿಎಂ ಭೇಟಿ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Published

on

ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಮೃತಪಟ್ಟ 8 ಮಂದಿಯ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಎಂಟು ಮಂದಿ ಮೃತಪಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ ಘೋಷಣೆ ಮಾಡಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ನಿನ್ನೆ ವೈಯಾನಡ್‌ಗೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಗಿದೆ. ಕಟ್ಟಡ ಕುಸಿತ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಳಾಗಿವೆ ಅವರ ಆಸ್ಪತ್ರೆ ಖರ್ಚು ಸರ್ಕಾರ ಭರಿಸುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ 5 ಲಕ್ಷ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಎರಡು ಲಕ್ಷ ನೀಡಲಾಗುತ್ತದೆ. ಬಿಬಿಎಂಪಿಯಿಂದ ಮೂರು ಲಕ್ಷ ಪರಿಹಾರ ಘೋಷಿಸಿದೆ ಎಂದು ತಿಳಿಸಿದರು.

ಮೃತದೇಹ ಕಳುಹಿಸುವ ಕೆಲಸ ಆಗುತ್ತದೆ. ಅನಧಿಕೃತವಾಗಿ ಕಟ್ಟಿದ ಕಟ್ಟಡಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆದರೂ ಕಟ್ಟಿದ್ದಾರೆ. ಜೋನ್ ನ ಐಎಎಸ್ ಅಫೀಸ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ನೋಟೀಸ್ ಕೊಡಲು ಹೇಳಲಾಗಿದೆ. ಕಾನೂನು ಪ್ರಕಾರ ಮನೆ ಕಟ್ಟಬೇಕು ಎಂದು ಜನರಿಗೆ ಮನವಿ ಮಾಡುತ್ತೇನೆ. ಕಳಪೆ ಕಾಮಗಾರಿಯಿಂದ ಈ ಕಟ್ಟಡ ಬಿದ್ದಿದೆ. ಅನಧಿಕೃತವಾಗಿ ಮನೆ ಕಟ್ಟಲು ಬಿಡಬಾರದು. ಇದಕ್ಕೆಲ್ಲಾ ಅಧಿಕಾರಿಗಳು ಹೊಣೆ ಹಾಗಾಗಿ ಕಮಿಷನರ್‌ಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಮೃತರ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಡೆದಿರುವ ಭೀಕರ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯಿಂದಲೂ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇದುವರೆಗೆ 8ಕಾರ್ಮಿಕರ ಮೃತದೇಹಗಳನ್ನ ಹೊರಗೆ ತೆಗೆಯಲಾಗಿದೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಎನ್​ಡಿಆರ್​​ಎಫ್, ಎಸ್​ಡಿಆರ್​​ಎಫ್ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 14 ಜನರನ್ನು ರಕ್ಷಿಸಿದ್ದಾರೆ.

ಕಟ್ಟಡದ ಅವಶೇಷಗಳಡಿಯಿಂದ ಬಿಹಾರ ಮೂಲದ ಅರ್ಮಾನ್, ಮೊಹಮ್ಮದ್ ಸಾಹೀಲ್, ಶ್ರೀರಾನ್ ಕಿರುಪಾಲ್, ಸೋಲೋ ಪಾಸ್ವಾನ್, ತಮಿಳುನಾಡು ಮೂಲದ ಮಣಿಕಂಠನ್, ಸತ್ಯಾರಾಜು, ಆಂಧ್ರದ ತುಳುಸಿರೆಡ್ಡಿ, ಉತ್ತರ ಪ್ರದೇಶದ ಪುಲ್ಚನ್ ಯಾದವ್ ಎಂಬುವರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಅವಶೇಷಗಳಡಿ ಸಿಲುಕಿರುವ ಏಳುಮಲೈ, ಗಜೇಂದ್ರ ಪತ್ತೆಗೆ ಶೋಧ ನಡೆಯುತ್ತಿದೆ.

ದೇಶ

ಬೆಂಗಳೂರು ಹೃದಯ ಸ್ಪರ್ಶಿ ಕಥೆ: ಯುವತಿಗೆ ನೆರವಾದ ಅಪರಿಚಿತರು

Published

on

By

ಬೆಂಗಳೂರು: ಸಿಲಿಕಾನ್ ಸಿಟಿಯ ಕತ್ತಲ ರಾತ್ರಿಯಲ್ಲಿ ಯುವತಿಯೊಬ್ಬಳಿಗೆ ರಕ್ಷೆಯಾಗಿ ನಿಂತ ಸಾರಿಗೆ ಸಿಬ್ಬಂದಿ ಹಾಗೂ ಬೈಕ್ ಟ್ಯಾಕ್ಸಿ ಚಾಲಕನ ಮಾನವೀಯತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಗದ್ದಲದ ನಡುವೆ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಐಶ್ವರ್ಯ ಎಂಬ ಯುವತಿ Bangalore Metropolitan Transport Corporation ಬಸ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆ ಸಮಯದಲ್ಲಿ ಸುತ್ತಮುತ್ತ ಸಂಪೂರ್ಣ ಕತ್ತಲು ಆವರಿಸಿಕೊಂಡಿದ್ದು, ರಸ್ತೆಗಳಲ್ಲಿ ಜನರ ಓಡಾಟವೂ ಇರಲಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಸಿಲುಕಿದ ಯುವತಿ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೂ ಯಾವುದೇ ವಾಹನ ಲಭ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ಸ್ಥಿತಿಯನ್ನು ಗಮನಿಸಿದ ಬಿಎಂಟಿಸಿ ಸಿಬ್ಬಂದಿ, ಆಕೆಯನ್ನು ಬಸ್ ಸ್ಟಾಪ್‌ನಲ್ಲಿ ಬಿಟ್ಟು ತೆರಳದೆ ಸುರಕ್ಷಿತ ವಾಹನ ಸಿಗುವವರೆಗೂ ಅಲ್ಲಿಯೇ ಉಳಿದುಕೊಂಡರು. ಅವರ ಈ ಕಾಳಜಿ ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.

ಅದೇ ಸಮಯದಲ್ಲಿ ಆ ಮಾರ್ಗವಾಗಿ ಬಂದ Rapido ಚಾಲಕನೊಬ್ಬ ಯುವತಿಯ ನೆರವಿಗೆ ಧಾವಿಸಿದರು. ಬಿಎಂಟಿಸಿ ಸಿಬ್ಬಂದಿ ಚಾಲಕನ ವಿವರಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಯುವತಿಯನ್ನು ಅವರೊಂದಿಗೆ ಕಳುಹಿಸಿದರು. ವಿಶೇಷವೆಂದರೆ, ಆ ಚಾಲಕ ಯಾವುದೇ ಹಣ ಪಡೆಯದೆ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೆರವಾದ ಬಿಎಂಟಿಸಿ ಸಿಬ್ಬಂದಿ ಮತ್ತು ರ‍್ಯಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಈಗ ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

Bengaluru: ಸಚಿವ ಮುನಿಯಪ್ಪ ಮನೆ ಮುತ್ತಿಗೆ: ಆಟೋ ಚಾಲಕರ ಪ್ರತಿಭಟನೆ

Published

on

By

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಸಾವಿರಾರು ಆಟೋ ಚಾಲಕರ ಬದುಕು ಸಂಕಷ್ಟಕ್ಕೀಡಾಗಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಗದೆ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗೆ ವಿರೋಧವಾಗಿ ಚಾಲಕರು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. “ಗ್ಯಾಸ್ ಸಿಗುತ್ತಿಲ್ಲ, ಸಿಕ್ಕರೂ ಲೀಟರ್‌ಗೆ ₹90 ಬದಲು ₹135 ವರೆಗೆ ವಸೂಲಿ ಮಾಡುತ್ತಿದ್ದಾರೆ” ಎಂದು ಚಾಲಕರು ಆರೋಪಿಸಿದ್ದಾರೆ.

ಮಹಿಳಾ ಆಟೋ ಚಾಲಕರ ಸ್ಥಿತಿ ಮತ್ತಷ್ಟು ದುಃಖಕರವಾಗಿದೆ. “ಮಕ್ಕಳನ್ನು ಮನೆಯಲ್ಲಿ ಬಿಟ್ಟು ಗಂಟೆಗಳ ಕಾಲ ಗ್ಯಾಸ್‌ಗಾಗಿ ಕಾಯಬೇಕು” ಎಂದು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಬಂಕ್‌ಗಳಲ್ಲಿ ದಾಸ್ತಾನು ಕೊರತೆಯೇ ಪ್ರಮುಖ ಕಾರಣವಾಗಿದ್ದು, ಹಗಲು-ರಾತ್ರಿ ಎನ್ನದೆ ಚಾಲಕರು ರಸ್ತೆಯಲ್ಲೇ ಕಾಯುವಂತಾಗಿದೆ.

ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್. ಮುನಿಯಪ್ಪ, “ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ. ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ವಿತರಣೆ ಕೇಂದ್ರದ ನಿಯಂತ್ರಣದಲ್ಲಿ ಇದೆ. ಕರ್ನಾಟಕಕ್ಕೆ ಸಮರ್ಪಕ ಪೂರೈಕೆ ಆಗುತ್ತಿಲ್ಲ” ಎಂದು ಆರೋಪಿಸಿದರು. ಈ ಕುರಿತು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿ, ಏಪ್ರಿಲ್ 10 ನಂತರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಆದರೆ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಚಾಲಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ನಾವು ರಸ್ತೆಯಲ್ಲೇ ಮಲಗುತ್ತಿದ್ದರೂ ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಇಂಧನ ಅಸ್ಥಿರತೆಯ ನಡುವೆ ಸ್ಥಳೀಯ ಮಟ್ಟದಲ್ಲಿ ಉಂಟಾದ ಈ ಎಲ್‌ಪಿಜಿ ಕೊರತೆ ಆಟೋ ಚಾಲಕರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ.

Continue Reading

Trending