Connect with us

ರಾಜಕೀಯ

ನಿಖಿಲ್ ಪರ ಜಂಟಿ ಪ್ರಚಾರ: ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ – ಯಡಿಯೂರಪ್ಪ

ರಾಮನಗರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್​​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಕ್ಷೇತ್ರದ ಅಂಬಾಡಹಳ್ಳಿ ಮತ್ತು ಸೋಗಾಲ ಗ್ರಾಮಗಳಲ್ಲಿ ಜಂಟಿ ಪ್ರಚಾರ ನಡೆಸಿದ ನಾಯಕರಿಬ್ಬರು ಮತ ಯಾಚಿಸಿದರು.

ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ: ಪ್ರಚಾರದ ವೇಳೆ ಮಾತನಾಡಿದ ಯಡಿಯೂರಪ್ಪ, ಹಿಂದೆ ನಾನು ಮತ್ತು ಕುಮಾರಸ್ವಾಮಿ ಸೇರಿ ಸರ್ಕಾರ ಮಾಡಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದೆವು. ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ದೆವು. ಇದನ್ನೆಲ್ಲ ಜನತೆ ಮರೆಯಬಾರದು. ಅಷ್ಟೇ ಅಲ್ಲ, ಸಂಧ್ಯಾ ಸುರಕ್ಷಾ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಸಮಾಜಕ್ಕೆ ಅವೆಲ್ಲ ಉಪಯೋಗವಾಗಿದೆ. ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿಮೀರಿ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ನಾವು ಅಭಿವೃದ್ಧಿ ವಿಷಯ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ. ಅಭಿವೃದ್ಧಿಯ ಮೇಲೆ ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ಸಮಾಜ ಒಡೆಯುವ ದಿಕ್ಕಿನಲ್ಲಿ ಚುನಾವಣಾ ಕಣವನ್ನು ಕಲುಷಿತಗೊಳಿಸಿದೆ ಎಂದು ಆರೋಪ ಮಾಡಿದರು.

ಕುಮಾರಸ್ವಾಮಿ ಟೂರಿಂಗ್‌ ಟಾಕೀಸ್‌ ಇದ್ದಂತೆ ಎಂದು ಟೀಕಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಹೆಚ್​ಡಿಕೆ, ನಾನು ಟೂರಿಂಗ್ ಟಾಕೀಸ್ ಅಲ್ಲ, ಪರ್ಮನೆಂಟ್ ಟಾಕೀಸ್. ನನ್ನದು ಪರ್ಮನೆಂಟ್ ಟಾಕೀಸ್ ರಾಮನಗರ, ಇಲ್ಲಿ ಬಿಟ್ಟು ನಾನೆಲ್ಲೂ ಹೋಗುವುದಿಲ್ಲ, ಯಾರಿಂದಲೂ ನನ್ನನ್ನು ಕಳಿಸಲು ಸಾಧ್ಯವೂ ಇಲ್ಲ. ಅಡ್ಡದಾರಿ ರಾಜಕಾರಣ ಒಮ್ಮೆ ಯಶಸ್ಸು ಆಗಿರಬಹುದು. ಪ್ರತಿ ಬಾರಿಯೂ ಅದು ನಡೆಯಲ್ಲ ಎಂದು ಟಾಂಗ್ ಕೊಟ್ಟರು.

ಉತ್ತರ ಪ್ರದೇಶದ ಅಮೇಠಿಯಿಂದ ವೈನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಉತ್ತರ ಪ್ರದೇಶದಲ್ಲಿ ನಿಲ್ಲುವುದು ಬಿಟ್ಟು ಸಹೋದರ ತೆರವು ಮಾಡಿದ ವೈನಾಡ್ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಹಾಗಾದರೆ ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದನ್ನು ಸರಿಯಾಡಿಕೊಳ್ಳುವುದು ಬಿಟ್ಟು ಪಕ್ಕದ ತಟ್ಟೆ ನೋಡುವುದನ್ನು ಬಿಡಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

17 ಕೆರೆಗಳನ್ನು ತುಂಬಿಸಿ ನಾನೇ ಭಗೀರಥ ಎಂದು ಊರ ತುಂಬಾ ಕೆಲವರು ಫ್ಲೆಕ್ಸ್ ಹಾಕಿಕೊಂಡರು. ಆದರೆ ನಾನು ತಾಲೂಕಿನ 107 ಕೆರೆಗಳಿಗೆ ನೀರು ತುಂಬಿಸಿದೆ. ಹಾಗಾದರೆ, ನಾನು ಏನೆಂದು ಕರೆದುಕೊಳ್ಳಬೇಕು? ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದರು. ಅವರು ಆ ಜಲಾಶಯ ಕಟ್ಟಿಸದೇ ಇದ್ದಿದ್ದರೆ ಅವರು 17 ಕೆರೆ, ನಾನು 107 ಕೆರೆ ತುಂಬಿಸಲು ಎಲ್ಲಿ ಆಗುತ್ತಿತ್ತು ಎಂದು ಅವರು ಪ್ರಶ್ನಿಸಿದರು.

ದೇಶ

ಸಿಎಂ ಕುರ್ಚಿ ಉಳಿಸಿಕೊಳ್ಳಲು ಶಾಸಕರ ವಿದೇಶ ಪ್ರವಾಸ? ವಿಜಯೇಂದ್ರ ಗಂಭೀರ ಆರೋಪ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರ ಬಂದ ಬಳಿಕ ಅನುದಾನ ಬೇಡಿಕೆ ಇಟ್ಟಿದ್ದರೂ ಗಂಗಕಲ್ಯಾಣ ಯೋಜನೆ, ಮನೆ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳು ನಡೆಯದೆ ಜನರಲ್ಲಿ ಅಸಮಾಧಾನ ಮೂಡಿದೆ ಎಂದು ಆರೋಪಿಸಿದರು. ಶಾಸಕರು ತಮ್ಮ ಖರ್ಚಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಸಿಎಂ ಹೇಳಿಕೆಯನ್ನು ಪ್ರಶ್ನಿಸಿ, “ತಮ್ಮ ಕುರ್ಚಿ ಉಳಿಸಿಕೊಳ್ಳಲು ತಾವೇ ಅವರನ್ನು ಕಳಿಸುತ್ತಿದ್ದಾರೆ” ಎಂದು ಟೀಕಿಸಿದರು.

ರೆಸಾರ್ಟ್ ರಾಜಕೀಯದ ಮೇಲೆ ಲೇವಡಿ

ಕಾಂಗ್ರೆಸ್ ಶಾಸಕರು ರೆಸಾರ್ಟ್ ಬುಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಅವರಿಗೆ ಅನುಕೂಲವಾಗಲಿ ಎಂದು ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ” ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಂತರದ ರಾಜಕೀಯ ನಡೆಯುತ್ತಿದೆ ಎಂದು ಹೇಳಿದರು.

₹5,000 ಕೋಟಿ ಎಲ್ಲಿಗೆ ಹೋಯ್ತು?

ಗೃಹ ಲಕ್ಷ್ಮೀ ಯೋಜನೆಯ ₹5,000 ಕೋಟಿ ಹಣದ ಬಗ್ಗೆ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಆರೋಪಿಸಿದ ಅವರು, “ಹಣ ಉಪಯೋಗ ಆಯ್ತಾ? ದುರಪಯೋಗ ಆಯ್ತಾ? ಸಿಎಂ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರಕ್ಕೆ ನಕಲಿ ದಾಖಲೆ ನೀಡಿರುವ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ವಿವರವಾದ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ಹೆಚ್ಚಳ

ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ವರದಿ ಉಲ್ಲೇಖಿಸಿ, ರಾಜ್ಯದಲ್ಲಿ ಅಸಮಾನತೆ ಶೇಕಡಾ 60ರಿಂದ 72.08ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹಿಂದುಳಿದಿದೆ ಎಂದು ಆರೋಪಿಸಿದರು.

ಕುರಿಗಾರರಿಗೆ ಪರಿಹಾರ ಬಾಕಿ

ಅನುಗ್ರಹ ಯೋಜನೆಯಡಿ 45 ಕೋಟಿ ರೂ. ಬಾಕಿ ಇಟ್ಟಿದ್ದು, 90 ಸಾವಿರ ಸಾವಿನ ಪೈಕಿ ಕೇವಲ 30 ಸಾವಿರ ಕುರಿಮರಿಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕಾರಿಣಿ ಸಭೆ

ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸರ್ಕಾರದ ವೈಫಲ್ಯಗಳು ಮತ್ತು ಮುಂದಿನ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

Continue Reading

ದೇಶ

LATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ತೀವ್ರಗೊಂಡಿರುವ ನಡುವೆಯೇ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ, ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎಂದು ತಿಳಿಸಿದ್ದರೂ, ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿವೆ.

“ನಾನು ದೆಹಲಿಗೆ ಬಂದಿರೋದೇ ರಾಜಕಾರಣ ಮಾಡಲು. ಏನೂ ಮಾತನಾಡದೆ ಸುಮ್ಮನೆ ಹೋಗಲು ಸಾಧ್ಯವೇ?” ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ರೂಪೇಶ್ ಬಘೇಲ್ ಜೊತೆಗೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ ಅವರು, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳ ಚುನಾವಣಾ ಸ್ಥಿತಿಗತಿಗಳ ಕುರಿತು ಚರ್ಚೆ ನಡೆದಿದೆ ಎಂದರು. “ಎಲ್ಲಾ ವಿಚಾರಗಳನ್ನು ಮಾತನಾಡಲೇಬೇಕು. ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ” ಎಂಬ ಅವರ ಮಾತುಗಳಿಗೆ ಹಲವು ಅರ್ಥಗಳು ನೀಡಲಾಗುತ್ತಿದೆ.

ಇದೇ ವೇಳೆ ಬಜೆಟ್ ಪೂರ್ವಸಿದ್ಧತಾ ಸಭೆಗೆ ಗೈರಾಗಿದ್ದ ಡಿಕೆಶಿ ದೆಹಲಿಗೆ ತೆರಳಿರುವುದು ಗಮನಾರ್ಹ. ಸಿಎಂ ಸಿದ್ದರಾಮಯ್ಯ ಅವರ ಅನುಮತಿ ಪಡೆದುಕೊಂಡೇ ಅವರು ತೆರಳಿದ್ದಾರೆ ಎನ್ನಲಾಗಿದ್ದರೂ, ದೆಹಲಿಯ ರಾಜಕೀಯ ಚಟುವಟಿಕೆಗಳು ಕುತೂಹಲ ಹುಟ್ಟಿಸಿವೆ. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರಾ? ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿಲ್ಲ.

ರಾಜ್ಯ ನಾಯಕತ್ವ ವಿಚಾರದಲ್ಲಿ ರಾಹುಲ್ ಗಾಂಧಿಯ ನಿರ್ಧಾರವೇ ಅಂತಿಮ ಎಂಬುದು ಕಾಂಗ್ರೆಸ್ ವಲಯದ ನಿಲುವು. ಇದೀಗ ಡಿಕೆಶಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಸಾಧ್ಯತೆಗಳೂ ಚರ್ಚೆಯಾಗುತ್ತಿವೆ. ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆ ಹೊಸ ತಿರುವು ಪಡೆಯುವ ಸೂಚನೆ ನೀಡಿದೆ.

Continue Reading

ಅಪರಾಧ

BAIRATHI BASAVARJU BREAKING NEWS : ಸಿಐಡಿ ಲುಕ್‌ಔಟ್ ನೋಟಿಸ್ ಜಾರಿ, ತನಿಖೆ ತೀವ್ರ

ಬೆಂಗಳೂರು: ರೌಡಿಶೀಟರ್ ಬಿಲ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರಿಗೆ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅವರ ಬಂಧನದ ಭೀತಿ ಮತ್ತಷ್ಟು ಗಟ್ಟಿಯಾಗಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ನಂತರ ಬೈರತಿ ಬಸವರಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಸಹ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ವಿಚಾರಣೆ ವೇಳೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಗಮನಾರ್ಹ.

ಈ ಬೆಳವಣಿಗೆಯೊಂದಿಗೆ ತನಿಖಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿಐಡಿ ಪೊಲೀಸರು ಬೈರತಿ ಬಸವರಾಜ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ.

ರಾಜಕೀಯ ವಲಯದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ.

Continue Reading

Trending