ಆರೋಗ್ಯ
ದೊಡ್ಡಪತ್ರೆ:ಪುಟ್ಟ ಎಲೆಗಳ ದೊಡ್ಡ ಪ್ರಯೋಜನಗಳು!
ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು.ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ ಮಾತ್ರ ಬಹು ದೊಡ್ಡದು. ಅದರಲ್ಲಿ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ. ಇದನ್ನು ಪುಟ್ಟ ಪಾಟ್ನಲ್ಲಿಯೂ ಇಟ್ಟು ಬೆಳೆಸಬಹುದಾಗಿದೆ. ಇದನ್ನು ಸಾಂಬಾರ ಸೊಪ್ಪು ಅಥವಾ ಅಜವನ ಗಿಡ ಎಂದೂ ಕರೆಯುತ್ತಾರೆ.ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆಯನ್ನು ಹೊಂದಿರುತ್ತವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂಗಳು ಚಿಕ್ಕದಾಗಿದೆ.ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣಭಾರತದಲ್ಲಿ ಸಾಮಾನ್ಯವಾಗಿ ಇದನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ ಮಾಡಲಾಗುತ್ತದೆ. ಈಗ ಈ ದೊಡ್ಡ ಪತ್ರೆ ಸೊಪ್ಪು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಬದಲಾವಣೆ, ಹವಾಮಾನದಲ್ಲಿನ ವ್ಯತ್ಯಾಸದಿಂದ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಇದರಿಂದ ಶೀತವಾದರೆ ಎಷ್ಟು ದಿನವಾದರೂ ಕಡಿಮೆಯಾಗುವುದಿಲ್ಲ. ಇದಕ್ಕೆ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಈ ದೊಡ್ಡ ಪತ್ರೆ ಸೊಪ್ಪನ್ನು ಔಷಧವಾಗಿ ಬಳಸಬಹುದಾಗಿದೆ.ದೊಡ್ಡ ಪತ್ರೆ ಸೊಪ್ಪನ್ನು ಕೊಯ್ದು ತಂದು ಬೆಂಕಿಯಲ್ಲಿ ಸುಟ್ಟು ಅದರ ರಸವನ್ನು ತೆಗದು ಅದಕ್ಕೆ ಅರ್ಧ ಚಮಚ ಬೆಲ್ಲ ಸೇರಿಸಿ ಕುಡಿದರೆ ಒಂದೆ ದಿನದಲ್ಲಿ ಶೀತ, ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ.ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯ ಮೇಲೆ ಇಟ್ಟು ಬಾಡಿಸಿ ನಂತರ ಅದನ್ನು ನೆತ್ತಿಗೆ ಹಾಕಿದರೆ ದೇಹದಲ್ಲಿನ ತಣ್ಣನೆಯ ಅಂಶ ನಿವಾರಣೆಯಾಗಿ ಜ್ವರ, ಶೀತ ಕಡಿಮೆಯಾಗುತ್ತದೆ. ಮಕ್ಕಳಿಗೆ ಇದು ಬೆಸ್ಟ್ ಔಷಧವಾಗಿದೆ.ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಈ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ. ಒಂದು ವಾರದವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ. ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆಯಾಗುತ್ತದೆ. ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ.ದೊಡ್ಡ ಪತ್ರೆಯ ಗಿಡದ ಎಲೆಯನ್ನು ತಂದು ಬಾಡಿಸಿ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅರಿಸಿನ ಕಾಮಾಲೆ ಇದ್ದವರಿಗೂ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆ ಮದ್ದಾಗಿದೆ. ಈ ಎಲೆಯನ್ನು ಆಹಾರ ರೂಪದಲ್ಲಿ ಅಂದರೆ ಚಟ್ನಿ, ತಂಬುಳಿ ಮಾಡಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಕಾಯಿಲೆ ಚೇತರಿಕೆಯನ್ನು ಕಾಣುತ್ತದೆ. ಕಂಬಳಿ ಹುಳ, ಇಸುಬು ಇಂತಹ ಕೀಟಗಳು ಕಚ್ಚಿದ್ದರೆ ಸಹಿಸಲಾರದ ಉರಿ ಚರ್ಮಕ್ಕಾಗುತ್ತದೆ. ಇದನ್ನು ತಡೆಯಲು ಈ ದೊಡ್ಡ ಪತ್ರೆ ಸೊಪ್ಪು ಸಹಾಯಕವಾಗಿದೆ.
ದೊಡ್ಡ ಪತ್ರೆ ಎಲೆಯ ರಸಕ್ಕೆ ಬೆಲ್ಲ ಸೇರಿಸಿ ಕುಡಿದಾಗ ಬೆಲ್ಲ ಕೂಡ ದೇಹಕ್ಕೆ ಒಳ್ಳೆಯ ಪದಾರ್ಥವಾಗಿದೆ. ಇದು ದೇಹದಿಂದ ವಿಷಯುಕ್ತ ಪದಾರ್ಥವನ್ನು ಹೊರಹಾಕಲು ನೆರವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಹಿತ್ತಲಿನಲ್ಲಿ ದೊಡ್ಡ ಪತ್ರೆ ಸೊಪ್ಪಿದ್ದರೆ ಜೋಪಾನ ಮಾಡಿ ಉಳಿಸಿಕೊಳ್ಳ.
ಆರೋಗ್ಯ
Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?
ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.
ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.
ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ
WHO ಎಚ್ಚರಿಕೆ ಬಳಿಕ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ; ವಿಜಯವಾಡದಲ್ಲಿ ಕ್ಯಾಂಪ್
ವಿಜಯವಾಡ: ಜಾಗತಿಕ ಮಟ್ಟದಲ್ಲಿ ಎಬೋಲಾ ವೈರಸ್ ಕುರಿತ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ವಿಜಯವಾಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಎಬೋಲಾ ತಪಾಸಣಾ ಶಿಬಿರ ಆರಂಭಿಸಿದೆ. ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಆಂಧ್ರ ಸರ್ಕಾರ ನಿಯೋಜಿಸಿರುವ ವೈದ್ಯಕೀಯ ತಂಡಗಳು ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ, ಆರೋಗ್ಯ ಲಕ್ಷಣಗಳ ಪರಿಶೀಲನೆ ಹಾಗೂ ಶಂಕಿತ ಸೋಂಕಿನ ಗುರುತು ಪತ್ತೆ ಕಾರ್ಯ ನಡೆಸುತ್ತಿವೆ. ಜ್ವರ, ವಾಂತಿ, ದೌರ್ಬಲ್ಯ ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದು ಕೇವಲ ಮುನ್ನೆಚ್ಚರಿಕಾ ಕ್ರಮವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಹೊರಡಿಸಿರುವ ಆರೋಗ್ಯ ಎಚ್ಚರಿಕೆ ಹಿನ್ನೆಲೆಯಲ್ಲಿ ನಿಗಾ ಕ್ರಮ ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮಾಜಿ WHO ಮುಖ್ಯ ವಿಜ್ಞಾನಿ Soumya Swaminathan ಭಾರತವು ಎಬೋಲಾ ವಿರುದ್ಧದ ಸಂಶೋಧನೆ, ಲಸಿಕೆ ಅಭಿವೃದ್ಧಿ ಹಾಗೂ ರೋಗ ಪತ್ತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ. WHO ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದೊಂದಿಗೆ ಭಾರತ ಹೆಚ್ಚಿನ ಸಂಶೋಧನೆ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದ ಕೆಲವು ಭಾಗಗಳಲ್ಲಿ ಎಬೋಲಾ ಸೋಂಕು ಹೆಚ್ಚಳ ಕಂಡುಬಂದಿದೆ. WHO ಮಹಾನಿರ್ದೇಶಕ Tedros Adhanom Ghebreyesus ನೀಡಿರುವ ಮಾಹಿತಿಯಂತೆ, ಕಾಂಗೋದಲ್ಲಿ ಈಗಾಗಲೇ 101 ಪ್ರಕರಣಗಳು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನೂರಾರು ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ.
ಎಬೋಲಾ ವೈರಸ್ನ ‘ಬುಂಡಿಬುಗ್ಯೋ’ ರೂಪಾಂತರಿ ತಳಿಯು ಪತ್ತೆ ಹಾಗೂ ಚಿಕಿತ್ಸೆ ಕಾರ್ಯಕ್ಕೆ ಸವಾಲು ಎಸೆದಿರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿವೆ.
ಆರೋಗ್ಯ
ಇನ್ಸುಲಿನ್ಗೆ ಗುಡ್ಬೈ? ಸಕ್ಕರೆ ನಿಯಂತ್ರಣಕ್ಕೆ ಬಂದಿದೆ ‘ಓಬೆಡಾ’ ಮಾತ್ರೆ!
ಬೆಂಗಳೂರು: ಜಾಗತಿಕ ಖ್ಯಾತಿಯ ಔಷಧ ತಯಾರಿಕಾ ಸಂಸ್ಥೆಯಾದ Dr. Reddy’s Laboratories ಭಾರತದಲ್ಲಿ ಟೈಪ್-2 ಮಧುಮೇಹ ರೋಗಿಗಳಿಗಾಗಿ ‘ಓಬೆಡಾ’ (Obeda) ಎಂಬ ಹೊಸ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಔಷಧವು ‘ಓರಲ್ ಸೆಮಾಗ್ಲುಟೈಡ್ ಬಯೋಸಿಮಿಲರ್’ ರೂಪದಲ್ಲಿದ್ದು, ಬಾಯಿಯ ಮೂಲಕ ಸೇವಿಸಬಹುದಾದ ಮಧುಮೇಹ ನಿಯಂತ್ರಣ ಟ್ಯಾಬ್ಲೆಟ್ ಆಗಿದೆ.
ಇತ್ತೀಚೆಗೆ ಇದೇ ಸಂಸ್ಥೆ ಭಾರತ ಮತ್ತು ಕೆನಡಾದಲ್ಲಿ ಸೆಮಾಗ್ಲುಟೈಡ್ ಇಂಜೆಕ್ಷನ್ ಬಿಡುಗಡೆ ಮಾಡಿದ್ದರೆ, ಇದೀಗ ಅದೇ ಔಷಧಿಯನ್ನು ಮಾತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ರೋಗಿಗಳಿಗೆ ಹೆಚ್ಚು ಸುಲಭ ಮತ್ತು ಅನುಕೂಲಕರ ಚಿಕಿತ್ಸೆಯನ್ನು ಒದಗಿಸಲು ಮುಂದಾಗಿದೆ.
ಭಾರತದಲ್ಲಿ ಮಧುಮೇಹದ ಆತಂಕಕಾರಿ ಚಿತ್ರಣ
Indian Council of Medical Research ನಡೆಸಿದ ‘ಇಂಡಿಯಾಬ್’ ಅಧ್ಯಯನದ ಪ್ರಕಾರ, ಭಾರತದಲ್ಲಿ 10.1 ಕೋಟಿಗೂ ಅಧಿಕ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೊತೆಗೆ ಸುಮಾರು 13.6 ಕೋಟಿ ಜನರು ಪ್ರೀ-ಡಯಾಬಿಟಿಕ್ ಸ್ಥಿತಿಯಲ್ಲಿದ್ದು, ಭವಿಷ್ಯದಲ್ಲಿ ಮಧುಮೇಹಕ್ಕೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹೊಟ್ಟೆ ಬೊಜ್ಜು ಮತ್ತು ಜೀವನಶೈಲಿ ಬದಲಾವಣೆಗಳು ಮಧುಮೇಹ ಪ್ರಕರಣಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
‘ಓಬೆಡಾ’ ಮಾತ್ರೆ ಹೇಗೆ ಕೆಲಸ ಮಾಡುತ್ತದೆ?
‘ಓಬೆಡಾ’ ಔಷಧವು ಜಿಎಲ್ಪಿ-1 ಆರ್ಎ (GLP-1 RA) ವರ್ಗಕ್ಕೆ ಸೇರಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವೈದ್ಯರ ಸಲಹೆಯಂತೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮದ ಜೊತೆಗೆ ಈ ಮಾತ್ರೆಯನ್ನು ಸೇವಿಸಿದರೆ:
- ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ
- ತೂಕ ಇಳಿಕೆಗೆ ಸಹಕಾರಿ
- ದೀರ್ಘಕಾಲೀನ ಮಧುಮೇಹ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ
- HbA1c ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ
ಕ್ಲಿನಿಕಲ್ ಟ್ರಯಲ್ನಲ್ಲಿ ಯಶಸ್ಸು
Central Drugs Standard Control Organisation ಅನುಮತಿಯೊಂದಿಗೆ 288 ಮಧುಮೇಹ ರೋಗಿಗಳ ಮೇಲೆ ನಡೆದ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳಲ್ಲಿ ‘ಓಬೆಡಾ’ ಉತ್ತಮ ಫಲಿತಾಂಶ ನೀಡಿದೆ ಎಂದು ಕಂಪನಿ ತಿಳಿಸಿದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ತೂಕ ಇಳಿಕೆ ಹಾಗೂ ಸುರಕ್ಷಿತ ಬಳಕೆಯಲ್ಲಿ ಈ ಔಷಧ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ.
ಬೆಲೆ ಎಷ್ಟು?
‘ಓಬೆಡಾ’ ದಿನಕ್ಕೊಮ್ಮೆ ಸೇವಿಸುವ ಮಾತ್ರೆಯಾಗಿದ್ದು, ಮೂರು ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದೆ:
- 3 mg – ₹99
- 7 mg – ₹135
- 14 mg – ₹225
ಕಂಪನಿ ಹೇಳಿದ್ದೇನು?
M. V. Ramana ಮಾತನಾಡಿ, “ಮಧುಮೇಹ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ. ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಅವರಿಗೆ ಸೂಕ್ತ ಆಯ್ಕೆಯನ್ನು ಒದಗಿಸುವುದು ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.
1984ರಲ್ಲಿ ಸ್ಥಾಪನೆಯಾದ Dr. Reddy’s Laboratories ಜಠರ, ಹೃದಯ, ಮಧುಮೇಹ, ಕ್ಯಾನ್ಸರ್ ಮತ್ತು ಚರ್ಮರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಫಾರ್ಮಾ ಕಂಪನಿಯಾಗಿ ಗುರುತಿಸಿಕೊಂಡಿದೆ.
-
ದೇಶ7 hours agoಬಸ್ ಕಂಡಕ್ಟರ್ನಿಂದ ಸೂಪರ್ ಸ್ಟಾರ್ ತನಕ: ರಜನಿಕಾಂತ್ ಅಪರೂಪದ ಫೋಟೋ ವೈರಲ್
-
ದೇಶ4 hours agoಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
-
ಬೆಂಗಳೂರು5 hours ago“ನಾಳೆ ಎಲ್ಲ ಹೇಳುತ್ತೇನೆ”: ರಾಜಕೀಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಸ್ಪೆನ್ಸ್ ಉತ್ತರ!
-
ದೇಶ7 hours agoಸಿಎಂ ಬದಲಾವಣೆಯ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಶಾಕ್?
-
ದೇಶ7 hours agoಅಯ್ಯನ ಕೆರೆ ಕಲುಷಿತಗೊಳಿಸಲು ಯತ್ನ: ಸಿಬ್ಬಂದಿಯ ದಿಟ್ಟ ಕ್ರಮಕ್ಕೆ ಭಾರಿ ಮೆಚ್ಚುಗೆ
-
ಅಪರಾಧ8 hours agoಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ: ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ!
-
ಕ್ರೀಡೆ4 hours ago“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
-
ಕ್ರೀಡೆ7 hours ago‘ಈ ಸಲ ಕಪ್ ನಮ್ದೇ’ ಘೋಷಣೆ ಜೋರಾಗಿದೆ: ಆರ್ಸಿಬಿ ಫೈನಲ್ಗೆ ಎಂಟ್ರಿ
