ದೇಶ
ಲಾಲ್‌ಬಾಗ್‌ನಲ್ಲಿ ಫೋಟೋ, ವಿಡಿಯೋ ಶೂಟ್ ನಿಷೇಧ – ರಾಜ್ಯ ಸರ್ಕಾರದ ಹೊಸ ನಿಯಮ ಜಾರಿ
ಬೆಂಗಳೂರು: ಐತಿಹಾಸಿಕ ಮಹತ್ವ ಹೊಂದಿರುವ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಬೆಂಗಳೂರು ನಗರದಲ್ಲಿ ಉಳಿದಿರುವ ಅತ್ಯಂತ ದೊಡ್ಡ ಹಸಿರು ಪ್ರದೇಶಗಳಲ್ಲಿ ಒಂದಾಗಿದೆ. ಸಾವಿರಾರು ಜನರು ಪ್ರತಿದಿನ ವಾಕಿಂಗ್, ಜಾಗಿಂಗ್ ಮತ್ತು ವಿಶ್ರಾಂತಿಗಾಗಿ ಭೇಟಿ ನೀಡುವ ಈ ಉದ್ಯಾನವು ಹಲವಾರು ವರ್ಷಗಳಿಂದ ವೀಕೆಂಡ್ ಮನರಂಜನೆಯ ಕೇಂದ್ರವಾಗಿತ್ತು. ಆದರೆ ಇತ್ತೀಚಿಗೆ ಲಾಲ್‌ಬಾಗ್‌ನ ಟನಲ್ ರೋಡ್ ವಿವಾದದ ನಂತರ ಇದೀಗ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇನ್ನಿನಿಂದ ಲಾಲ್‌ಬಾಗ್‌ನಲ್ಲಿ ಫೋಟೋ ಅಥವಾ ವಿಡಿಯೋ ಶೂಟ್ ಮಾಡುವಂತಿಲ್ಲ ಎಂದು ಸ್ಪಷ್ಟ ನಿಷೇಧ ಹೇರಲಾಗಿದೆ.
ತೋಟಗಾರಿಕೆ ಇಲಾಖೆಯಿಂದ ಹೊರಡಿಸಿದ ಆದೇಶದ ಪ್ರಕಾರ, ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಮನರಂಜನಾ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ವಿಶೇಷವಾಗಿ ಸೀರಿಯಲ್, ಸಿನಿಮಾ, ಮ್ಯೂಸಿಕ್ ವೀಡಿಯೋ, ರೀಲ್ಸ್, ಪ್ರಿ/ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಮಾಡೆಲಿಂಗ್, ಬೇಬಿ ಶವರ್ ಶೂಟ್‌ಗಳು ಸಂಪೂರ್ಣ ನಿಷೇಧಕ್ಕೆ ಒಳಪಡುತ್ತವೆ. ನಿಯಮ ಉಲ್ಲಂಘಿಸಿದವರಿಗೆ ₹500 ದಂಡ ವಿಧಿಸಲಾಗುತ್ತದೆ.
ಹೊಸ ನಿಯಮದ ಪ್ರಮುಖ ಅಂಶಗಳು
ಹೊಸ ಮಾರ್ಗಸೂಚಿಗಳ ಪ್ರಕಾರ, ಬೆಳಗ್ಗೆ 5:30ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4:30ರಿಂದ 7ರವರೆಗೆ ಮಾತ್ರ ವಾಕಿಂಗ್ ಮತ್ತು ಜಾಗಿಂಗ್‌ಗೆ ಅವಕಾಶ. ಕಬ್ಬನ್ ಪಾರ್ಕ್‌ನಲ್ಲಿ ಸಾಧ್ಯವಾಗುವ ಸ್ಕೇಟಿಂಗ್, ಸೈಕ್ಲಿಂಗ್, ಮ್ಯಾರಥಾನ್, ವಾಕ್‌ಥಾನ್ ಮುಂತಾದ ಚಟುವಟಿಕೆಗಳು ಲಾಲ್‌ಬಾಗ್‌ನಲ್ಲಿ ಸಂಪೂರ್ಣ ನಿಷೇಧ.
ಹಾಗೆಯೇ ಹೊರಗಿನವರು ಗಿಡಗಳನ್ನು ನೆಡುವಂತಿಲ್ಲ. ಆದರೆ ಪರಿಸರ ಜಾಗೃತಿ ಕಾರ್ಯಕ್ರಮಗಳು ಅಥವಾ ಪ್ರಾಧಿಕಾರ ಅನುಮತಿಸಿದ ಗಿಡ ನೆಡುವ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ.
ಲಾಲ್‌ಬಾಗ್‌ನಲ್ಲಿ ನಿಷೇಧಿತ ಚಟುವಟಿಕೆಗಳು
- ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ
- ಎಲ್ಲ ರೀತಿಯ ಫೋಟೋ ಮತ್ತು ವಿಡಿಯೋ ಶೂಟ್
- ಡ್ರೋನ್ ಬಳಕೆ
- ಪ್ಲಾಸ್ಟಿಕ್ ಬಳಕೆ
- ಸ್ಪೀಕರ್ ಮತ್ತು ಸಂಗೀತ ವಾದ್ಯಗಳು
- ಪಟಾಕಿ, ಗಾಳಿಪಟ, ಹೊರಗಿನ ಆಹಾರ
- ಮರ ಹತ್ತುವುದು, ಹುಲ್ಲುಗಾವಲುಗಳಲ್ಲಿ ಆಟ
- ಸಾಕುಪ್ರಾಣಿ ಕರೆತರುವುದು
ಅನುಮತಿತ ಚಟುವಟಿಕೆಗಳು
- ಸರ್ಕಾರಿ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು
- ಪ್ರವಾಸಿಗರಿಂದ ಸ್ಟಿಲ್ ಫೋಟೋಗ್ರಫಿ
- ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು (ಅನುಮತಿ ಅವಶ್ಯ)
- ಮಾನ್ಯ ಸಂಸ್ಥೆಗಳ ಆರೋಗ್ಯ ಶಿಬಿರಗಳು
ತೋಟಗಾರಿಕೆ ಇಲಾಖೆ ಹೇಳುವಂತೆ, ಸಸ್ಯ ಸಂಪತ್ತು, ಜೀನ್ ಬ್ಯಾಂಕ್ ಮತ್ತು ಪರಿಸರ ಸಂರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇಶ
ಟೇಲರ್ ಸ್ವಿಫ್ಟ್-ಟ್ರೇವಿಸ್ ಕೆಲ್ಸಿ ಮದುವೆ: ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಶತಮಾನದ ಸೆಲೆಬ್ರಿಟಿ ಮದುವೆಯ ಒಳಗಿನ ಕಥೆ
ವಿಶ್ವದ ಅತ್ಯಂತ ಜನಪ್ರಿಯ ಗಾಯಕಿ ಟೇಲರ್ ಸ್ವಿಫ್ಟ್ ಮತ್ತು ಎನ್‌ಎಫ್‌ಎಲ್ ತಾರೆ ಟ್ರೇವಿಸ್ ಕೆಲ್ಸಿ ಜುಲೈ 3ರಂದು ನ್ಯೂಯಾರ್ಕ್‌ನ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ವಿವಾಹವಾಗಿದ್ದಾರೆ. ಈ ಸುದ್ದಿ ಸದ್ಯ ಜಗತ್ತಿನಾದ್ಯಂತ ಅತಿ ಹೆಚ್ಚು ಸರ್ಚ್ ಆಗುತ್ತಿರುವ ಟಾಪಿಕ್‌ಗಳಲ್ಲಿ ಒಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ.
ಹಾಸ್ಯನಟ ಆಡಂ ಸ್ಯಾಂಡ್ಲರ್‌ನಿಂದ ಮದುವೆ ನಡೆಸಿಕೊಟ್ಟದ್ದು ಅಚ್ಚರಿ
ದಂಪತಿಗಳ ಆಪ್ತ ಸ್ನೇಹಿತ ಎಂದೇ ಗುರುತಿಸಲ್ಪಟ್ಟ ಹಾಸ್ಯನಟ ಆಡಂ ಸ್ಯಾಂಡ್ಲರ್ ಈ ವಿವಾಹ ಸಮಾರಂಭ ನಡೆಸಿಕೊಟ್ಟಿದ್ದಾರೆ ಎಂದು ಸ್ವಿಫ್ಟ್ ಅವರ ಪ್ರತಿನಿಧಿ ಖಚಿತಪಡಿಸಿದ್ದಾರೆ. ದಂಪತಿಗಳಿಗೆ ಸಾಂಪ್ರದಾಯಿಕ ಬ್ರೈಡ್ಸ್‌ಮೇಡ್ ಅಥವಾ ಗ್ರೂಮ್ಸ್‌ಮೆನ್ ಇರಲಿಲ್ಲ; ಬದಲಿಗೆ ಸ್ವಿಫ್ಟ್ ಅವರ ಸಹೋದರ ಆಸ್ಟಿನ್ ಸ್ವಿಫ್ಟ್ ‘ಮ್ಯಾನ್ ಆಫ್ ಆನರ್’ ಆಗಿ ಹಾಗೂ ಕೆಲ್ಸಿ ಅವರ ಸಹೋದರ, ನಿವೃತ್ತ ಎನ್‌ಎಫ್‌ಎಲ್ ಆಟಗಾರ ಜೇಸನ್ ಕೆಲ್ಸಿ ಬೆಸ್ಟ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದರು.
ಕ್ರಿಶ್ಚಿಯನ್ ಡಿಯರ್ ವಿನ್ಯಾಸದ ವಸ್ತ್ರ, ‘ಸೀಕ್ರೆಟ್ ಗಾರ್ಡನ್’ ಥೀಮ್
ವಧು-ವರರ ಉಡುಪುಗಳನ್ನು ಫ್ಯಾಷನ್ ಬ್ರ್ಯಾಂಡ್ ಕ್ರಿಶ್ಚಿಯನ್ ಡಿಯರ್ ಹಾಟ್ ಕೂಚರ್ ಸಿದ್ಧಪಡಿಸಿತ್ತು. ಇಡೀ ವೇದಿಕೆಯನ್ನು ‘ಸೀಕ್ರೆಟ್ ಗಾರ್ಡನ್’ ಪರಿಕಲ್ಪನೆಯಡಿ ಹಸಿರು-ಬಿಳಿ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಅತಿಥಿಗಳೊಬ್ಬರ ಪ್ರಕಾರ, ವೇದಿಕೆಯ ಗೋಡೆಗಳ ಮೇಲೆ ಸ್ವಿಫ್ಟ್-ಕೆಲ್ಸಿ ಅವರ ಬಾಲ್ಯದಿಂದ ಇಂದಿನವರೆಗಿನ ದೊಡ್ಡ ಗಾತ್ರದ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು.
ಸುಮಾರು 1,000 ಅತಿಥಿಗಳು, ಬಿಗಿ ಭದ್ರತೆ
ಸುಮಾರು 1,000 ಅತಿಥಿಗಳು ಭಾಗವಹಿಸಿದ ಈ ಸಮಾರಂಭಕ್ಕೆ ನಟರಾದ ಹ್ಯೂ ಗ್ರಾಂಟ್, ಎಥಾನ್ ಹಾಕ್, ಬ್ರಾಡ್ಲಿ ಕೂಪರ್, ಗಾಯಕರಾದ ಎಡ್ ಶೀರನ್, ಸೆಲೆನಾ ಗೊಮೆಜ್ ಸೇರಿದಂತೆ ಹಾಲಿವುಡ್ ಹಾಗೂ ಕ್ರೀಡಾ ಲೋಕದ ಘಟಾನುಘಟಿಗಳು ಆಗಮಿಸಿದ್ದರು. ಎನ್‌ಎಫ್‌ಎಲ್ ದಿಗ್ಗಜ ಟಾಮ್ ಬ್ರಾಡಿ ಸೇರಿದಂತೆ ಹಲವು ಕ್ರೀಡಾಪಟುಗಳೂ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಟ್ಟುನಿಟ್ಟಿನ ಗೌಪ್ಯತಾ ಒಪ್ಪಂದ ಹಾಗೂ ಬಿಗಿ ಭದ್ರತಾ ವ್ಯವಸ್ಥೆಯಿಂದಾಗಿ ಕಾರ್ಯಕ್ರಮದ ವಿವರಗಳು ಮದುವೆಯ ನಂತರವಷ್ಟೇ ಹೊರಬರುತ್ತಿವೆ.
ಸ್ವಂತ ಪ್ರತಿಜ್ಞೆ, ಪಾಲ್ ಮೆಕ್ಕಾರ್ಟ್ನಿ-ಸ್ಟೀವಿ ನಿಕ್ಸ್ ಪ್ರದರ್ಶನ
ಇಬ್ಬರೂ ತಮ್ಮ ಸ್ವಂತ ಪ್ರತಿಜ್ಞೆಗಳನ್ನು ಬರೆದು ಓದಿದ್ದಾರೆಂದು ಅತಿಥಿಗಳು ತಿಳಿಸಿದ್ದಾರೆ. ರಿಸೆಪ್ಶನ್ ವೇಳೆ ಸಂಗೀತ ದಿಗ್ಗಜರಾದ ಪಾಲ್ ಮೆಕ್ಕಾರ್ಟ್ನಿ ಮತ್ತು ಸ್ಟೀವಿ ನಿಕ್ಸ್ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮುನ್ನ ನಡೆದ ರಿಹರ್ಸಲ್ ಡಿನ್ನರ್‌ನಲ್ಲಿ ಸ್ವಿಫ್ಟ್ ಮತ್ತು ಕೆಲ್ಸಿ ಇಬ್ಬರೂ ಒಟ್ಟಿಗೆ ಹಾಡಿದ್ದಾರೆ ಎಂದು ಅತಿಥಿಗಳು ಹಂಚಿಕೊಂಡಿದ್ದಾರೆ.
‘JUST&T MARRIED’ ಬೋರ್ಡ್, ಎಂಪೈರ್ ಸ್ಟೇಟ್ ಬಿಲ್ಡಿಂಗ್ ಬೆಳಕಿನ ಸಂಭ್ರಮ
ಮದುವೆ ಅಧಿಕೃತವಾಗಿ ಪೂರ್ಣಗೊಂಡ ಬಳಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಹೊರಗಿನ ಫಲಕದಲ್ಲಿ “JUST&T MARRIED” ಎಂಬ ಸಂದೇಶ ಮಿನುಗಿತು. ಅದೇ ಸಮಯದಲ್ಲಿ ಸಮೀಪದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನೀಲಿ ಬಣ್ಣದಲ್ಲಿ ಬೆಳಗಿತ್ತು. ಮದುವೆ ಘೋಷಣೆಯಾದ ಕೂಡಲೇ ನ್ಯೂಯಾರ್ಕ್‌ನಲ್ಲಿ ಮಳೆ ಸುರಿದಿದ್ದು, ಇದನ್ನು ಅನೇಕ ಅಭಿಮಾನಿಗಳು ಶುಭಸೂಚಕ ಎಂದು ಬಣ್ಣಿಸಿದ್ದಾರೆ.
ದತ್ತಿಗೂ ಆದ್ಯತೆ: 20 ಸಂಸ್ಥೆಗಳಿಗೆ ದೇಣಿಗೆ
ಮದುವೆಗೂ ಮುನ್ನ ದಂಪತಿಗಳು ತಮ್ಮೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರದೇಶಗಳಲ್ಲಿನ 20 ಸ್ಥಳೀಯ ಹಾಗೂ ರಾಷ್ಟ್ರೀಯ ದತ್ತಿ ಸಂಸ್ಥೆಗಳಿಗೆ ಒಟ್ಟು 26 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕ್ರೀಡೆ
ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ
ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಆಟಗಾರರನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ತಂಡದಿಂದ ಕೈಬಿಡುವುದು ಉಳಿದ ಆಟಗಾರರಲ್ಲಿ ಅಭದ್ರತೆ ಮೂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ವಿಶ್ವಕಪ್ ಬಳಿಕ ತಂಡದಿಂದ ಹೊರಗಿಡುವ ನಿರ್ಧಾರ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಇಂತಹ ಕ್ರಮಗಳು ಆಟಗಾರರಲ್ಲಿ “ನಾಳೆ ನಮ್ಮ ಸ್ಥಿತಿಯೂ ಇದೇ ಆಗಬಹುದು” ಎಂಬ ಭಯವನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು.
ಆಟಗಾರರನ್ನು ಪದೇ ಪದೇ ತಂಡಕ್ಕೆ ಸೇರಿಸುವುದು ಮತ್ತು ಹೊರಗಿಡುವುದು ‘ಮ್ಯೂಸಿಕಲ್ ಚೇರ್ಸ್’ ಆಟದಂತಾಗಿದೆ. ಇದು ಡ್ರೆಸ್ಸಿಂಗ್ ರೂಮ್ ವಾತಾವರಣದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಅಶ್ವಿನ್ ಎಚ್ಚರಿಸಿದರು.
ಪ್ರಸ್ತುತ ತಂಡದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ರೂಪದಲ್ಲಿ ಎಡಗೈ ಬ್ಯಾಟರ್‌ಗಳಿರುವುದರಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುತ್ತಿಲ್ಲ. ಹೊಸ ಆಟಗಾರರಿಗೆ ಅವಕಾಶ ನೀಡುವುದು ತಪ್ಪಲ್ಲ, ಆದರೆ ವಿಶ್ವಕಪ್ ಗೆದ್ದ ಹಿರಿಯ ಆಟಗಾರರಿಗೆ ಕನಿಷ್ಠ ಎರಡು ಅಥವಾ ಮೂರು ಸರಣಿಗಳವರೆಗೆ ಸ್ಪಷ್ಟ ಬೆಂಬಲ ಮತ್ತು ಭರವಸೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಟೀಮ್ ಮ್ಯಾನೇಜ್ಮೆಂಟ್ ಆಟಗಾರರ ಮೇಲೆ ವಿಶ್ವಾಸ ತೋರಿಸಿದರೆ ಮಾತ್ರ ತಂಡದ ವಾತಾವರಣ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ನಿರಂತರ ಬದಲಾವಣೆಗಳು ಭವಿಷ್ಯದಲ್ಲಿ ಭಾರತೀಯ ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
ದೇಶ
ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಕರ್ನಾಟಕ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದ ಬೆಳವಣಿಗೆ
ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದಿದ್ದರೂ, ಸಚಿವ ಸಂಪುಟ ವಿಸ್ತರಣೆ ಇನ್ನೂ ಅಂತಿಮಗೊಂಡಿಲ್ಲ. ಸದ್ಯ ಸಂಪುಟದಲ್ಲಿ ಕೇವಲ 14 ಸಚಿವರಿದ್ದು, ರಾಜ್ಯದ ಒಟ್ಟು ಅನುಮತಿಸಲಾದ 34 ಸಚಿವ ಸ್ಥಾನಗಳ ಪೈಕಿ ಬಹುಪಾಲು ಇನ್ನೂ ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಶಾಸಕರ ಲಾಬಿ ತೀವ್ರಗೊಂಡಿದ್ದು, ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ದೆಹಲಿಗೂ ತೆರಳಿ ವರಿಷ್ಠರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಹೈಕಮಾಂಡ್ ಕೈಯಲ್ಲೇ ಅಂತಿಮ ನಿರ್ಧಾರ
ಜುಲೈ 5ರಂದು ಮಾತನಾಡಿದ ಸಿಎಂ ಶಿವಕುಮಾರ್, ಸಚಿವ ಸ್ಥಾನ ಹಂಚಿಕೆ ಕುರಿತ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಮಾತ್ರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಬೆಂಬಲಿಗ ಶಾಸಕರಿಗಾಗಿ ನಿಯೋಗ ತಂದು ಒತ್ತಡ ಹೇರುವುದನ್ನು ಕಾರ್ಯಕರ್ತರು ಕೈಬಿಡಬೇಕೆಂದೂ ಅವರು ಮನವಿ ಮಾಡಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪರವಾಗಿ ಬೆಂಬಲಿಗರ ನಿಯೋಗ ಸಿಎಂ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಹೇಳಿಕೆ ಬಂದಿರುವುದು ಗಮನಾರ್ಹ.
ಆಗಸ್ಟ್ ಅಧಿವೇಶನಕ್ಕೂ ಮುನ್ನ ಪೂರ್ಣ ಸಂಪುಟ?
ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರು, ವಿಧಾನಸಭಾ ಅಧಿವೇಶನ ಆಗಸ್ಟ್‌ನಲ್ಲಿ ಆರಂಭವಾಗುವ ಮುನ್ನ ಸಂಪುಟ ವಿಸ್ತರಣೆ ನಡೆಯಬಹುದು ಎಂದು ಸುಳಿವು ನೀಡಿದ್ದಾರೆ. ಸದ್ಯ ಸುಮಾರು 20 ಖಾತೆಗಳನ್ನು ಸಿಎಂ ಶಿವಕುಮಾರ್ ಅವರೇ ನಿಭಾಯಿಸುತ್ತಿದ್ದು, ಅಧಿವೇಶನಕ್ಕೂ ಮುನ್ನ ಸಂಪೂರ್ಣ ಸಂಪುಟ ರಚನೆಯಾಗಬೇಕೆಂಬ ಒತ್ತಾಯ ಪಕ್ಷದೊಳಗೇ ಕೇಳಿಬರುತ್ತಿದೆ.
ಜಿಲ್ಲಾವಾರು ಪ್ರಾತಿನಿಧ್ಯದ ಪ್ರಶ್ನೆ
ಮೊದಲ ಹಂತದ ಸಂಪುಟ ರಚನೆಯಲ್ಲಿ ಮೈಸೂರು, ಮಂಡ್ಯ, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಧಾರವಾಡ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಹಾಗೂ ಸಿಎಂ ಶಿವಕುಮಾರ್ ಅವರ ಸ್ವಂತ ಸಮುದಾಯದ ಪ್ರಾಬಲ್ಯವಿರುವ ಮಂಡ್ಯಕ್ಕೆ ಪ್ರಾತಿನಿಧ್ಯ ಸಿಗದಿರುವುದು ಚರ್ಚೆಗೆ ಗ್ರಾಸವಾಗಿತ್ತು. ಎರಡನೇ ಹಂತದ ವಿಸ್ತರಣೆಯಲ್ಲಿ ಈ ಜಿಲ್ಲೆಗಳಿಗೆ ಆದ್ಯತೆ ಸಿಗುವ ಸಾಧ್ಯತೆಯಿದೆ.
ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ
ಪ್ರಸಕ್ತ ಸಂಪುಟದಲ್ಲಿ ಒಬ್ಬ ಮಹಿಳಾ ಸಚಿವರೂ ಇಲ್ಲದಿರುವುದು ಪ್ರತಿಪಕ್ಷ ಮತ್ತು ಪಕ್ಷದೊಳಗಿನ ಕೆಲವರ ಟೀಕೆಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಶಿವಕುಮಾರ್, ಮುಂದಿನ ವಿಸ್ತರಣೆಯಲ್ಲಿ ಈ ಕೊರತೆ ನೀಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಒಂದು ತಿಂಗಳ ಆಡಳಿತ: ಮುಖ್ಯಾಂಶಗಳು
ಜುಲೈ 3ಕ್ಕೆ ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳು ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ, ಬಿಡದಿ ಬಳಿ ಪ್ರಸ್ತಾಪಿತ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಯೋಜನೆ ಮತ್ತು ಹೆಬ್ಬಾಳ-ಮೇಖ್ರಿ ವೃತ್ತ ಸಂಪರ್ಕಿಸುವ ಸುರಂಗ ಮಾರ್ಗ ಉದ್ಘಾಟನೆಯಂತಹ ಬೆಳವಣಿಗೆಗಳು ನಡೆದಿವೆ. ಆದರೆ ಬಿಡದಿ ಭೂಸ್ವಾಧೀನ ವಿಚಾರದಲ್ಲಿ ರೈತರ ವಿರೋಧ ಎದುರಾಗಿದ್ದು, ಇದು ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ.
ಮುಂದೇನು?
ಸಂಪುಟ ವಿಸ್ತರಣೆ ಆಗಸ್ಟ್ ಅಧಿವೇಶನಕ್ಕೂ ಮುನ್ನ ನಡೆಯುವ ಸಾಧ್ಯತೆ ಹೆಚ್ಚಾಗಿದ್ದರೂ, ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಪಾಡುವ ಸವಾಲು ಹೈಕಮಾಂಡ್ ಮುಂದಿದೆ. ಸ್ವತಃ ಶಿವಕುಮಾರ್ ಅವರೇ “ಯಾರನ್ನು ಸೇರಿಸಿಕೊಳ್ಳಬೇಕು ಎಂಬ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ” ಎಂದು ಒಪ್ಪಿಕೊಂಡಿರುವುದು, ಪಕ್ಷದೊಳಗಿನ ಗುಂಪುಗಾರಿಕೆ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ತೋರಿಸುತ್ತದೆ.
-
ದೇಶ20 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ21 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ23 hours agoಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
-
ದೇಶ24 hours agoರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
-
ದೇಶ22 hours ago“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
-
ದೇಶ21 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
-
ದೇಶ24 hours agoPoK ಪ್ರತಿಭಟನೆ ತೀವ್ರ: ‘ಗಡಿ ತೆರೆಯಿರಿ, ಮಾನವೀಯ ನೆರವು ನೀಡಿ’ ಎಂದು ಭಾರತದತ್ತ ಮೊರೆ
-
ದೇಶ23 hours ago“ಭಾರತದಿಂದ ಅಪಾರ ಬೆಂಬಲ”: ಜೆಡಿ ವ್ಯಾನ್ಸ್ ಹೇಳಿಕೆಗೆ ನೆತನ್ಯಾಹು ತಿರುಗೇಟು
