Connect with us

ರಾಜ್ಯ

Published

on

ಒಮ್ಮೆ ನೋಡಲೇಬೇಕಾದ ಕರ್ನಾಟಕದ ವಿಶ್ವ ಪರಂಪರೆ ತಾಣಗಳಿವು
ಒಮ್ಮೆ ನೋಡಲೇಬೇಕಾದ ಕರ್ನಾಟಕದ ವಿಶ್ವ ಪರಂಪರೆ ತಾಣಗಳಿವು

ಕನ್ನಡ ನಾಡು ಪ್ರವಾಸಿಗರಿಗೆ ಸ್ವರ್ಗ. ಯಾರಾರಿಗೆ ಯಾವ್ಯಾವ ರೀತಿಯ ಆಸಕ್ತಿಯ ತಾಣಗಳು ಬೇಕೊ ಅಂಥವನ್ನು ಆಯ್ದುಕೊಂಡು ಅಡ್ಡಾಡುವಷ್ಟು ಸಮೃದ್ಧವಾಗಿ ಪ್ರವಾಸಿ ಗಮ್ಯಗಳು ಮತ್ತು ಪರಂಪರೆಯ ತಾಣಗಳು ಕರ್ನಾಟಕದಲ್ಲಿವೆ. ಸಮುದ್ರದಲ್ಲಿ ಆಡಿ, ಮರಳಲ್ಲಿ ಹೊರಳುವವರಿಗಾಗಿ ಉದ್ದಾನುದ್ದದ ತೀರ ಪ್ರದೇಶ, ಕಾನು ಸುತ್ತಿ ಚೈತನ್ಯ ತುಂಬಿಕೊಳ್ಳುವವರಿಗೆಂದು ಹಸಿರಾದ ಮಲೆನಾಡು, ಕಲೆಯ ಆಸಕ್ತರಿಗಾಗಿ ಅತಿಸುಂದರವಾದ ಶಿಲಾದೇಗುಲಗಳು, ಇತಿಹಾಸದ ಕುತೂಹಲಿಗಳಿಗಾಗಿ ರಾಜ-ನಿಜಾಮರುಗಳ ಸಂಸ್ಥಾನದ ಉಳಿಕೆಗಳು- ಯಾವುದಿಲ್ಲ ಹೇಳಿ! ವಿಶ್ವ ಪರಂಪರೆಯ ತಾಣಗಳೆಂದು ಯುನೆಸ್ಕೊ ಸಂಸ್ಥೆಯಿಂದ ಗುರುತಿಸಿಕೊಂಡಿದ್ದು ಆರೇ ಸ್ಥಳಗಳಾದರೂ, ಉಳಿದ ತಾಣಗಳು ಕಡಿಮೆಯೆಂದು ಎಣಿಸುವಂತಿಲ್ಲ. ಗಡಿಗೆಯಲ್ಲಿನ ಪಕ್ವಾನ್ನ ಹೇಗಿದೆ ಎನ್ನುವುದನ್ನು ಕೆಲವೇ ಅಗುಳುಗಳಿಂದ ಅಳೆದು ನೋಡುವಂತೆ, ಯುನೆಸ್ಕೊ ಮಾನ್ಯ ಮಾಡಿದ ಕೆಲವೇ ತಾಣಗಳು ಸಾಕು ಇಡೀ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದಕ್ಕೆ. ವಿಶ್ವ ಮಾನ್ಯತೆ ಪಡೆದ ತಾಣಗಳ ಕಿರುಪರಿಚಯವಿದು.
ರಸ್ತೆ ಬದಿಯಲ್ಲಿ ಮುತ್ತು-ರತ್ನಗಳನ್ನು ಕೊಳಗದಲ್ಲಿ ಅಳೆದಳೆದು ಮಾರುತ್ತಿದ್ದ ಸಾಮ್ರಾಜ್ಯವೆಂಬ ಹೆಗ್ಗಳಿಕೆ ಹೊತ್ತ ವಿಜಯನಗರ ಸಾಮ್ರಾಜ್ಯದ ಹೆಗ್ಗುರುತಾಗಿ ನಿಂತಿರುವ ಹಂಪಿಯ ಸ್ಮಾರಕಗಳ ಗುಂಪು, ಕರ್ನಾಟಕದ ಮೇರು ಪ್ರವಾಸಿ ಆಕರ್ಷಣೆಗಳಲ್ಲೊಂದು. ವಿಜಯನಗರ ಸಾಮ್ರಾಜ್ಯದ ಅವಶೇಷಗಳು ದಕ್ಷಿಣ ಭಾರತದ ಹಲವೆಡೆಗಳಲ್ಲಿ ಹರಡಿದ್ದರೂ, ರಾಜಧಾನಿ ಎನಿಸಿದ್ದರಿಂದ ಹಂಪೆಯ ಕಂಪು ದೊಡ್ಡದು. ಸಾಮ್ರಾಜ್ಯದ ಸ್ವರ್ಣಯುಗವನ್ನು ಇವು ಇಂದಿಗೂ ಕಣ್ಮುಂದೆ ತೆರೆದಿಡುತ್ತವೆ. ಸುಮಾರು 4187 ಹೆಕ್ಟೇರ್ ಜಾಗಕ್ಕೆ ಹರಡಿರುವ ಈ ತಾಣ, 200 ವರ್ಷಗಳ ಕಥೆಯನ್ನಿಲ್ಲಿ ಹೇಳುತ್ತದೆ. 1,600ಕ್ಕೂ ಹೆಚ್ಚು ಸಣ್ಣ-ದೊಡ್ಡ ಸ್ಮಾರಕಗಳಿಲ್ಲಿ ನಿಂತಿದ್ದು, 1986ರಲ್ಲೇ ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿದೆ.
ಅತ್ಯಂತ ಸುಂದರ ಶಿಲಾ ದೇಗುಲಗಳು, ರಾಣಿ ಮಹಲುಗಳು, ಕೋಟೆಗಳು, ನಿರೀಕ್ಷಣಾ ಗೋಪುರಗಳು ಸೇರಿದಂತೆ ನೋಡುವುದಕ್ಕೆ ಬಹಳಷ್ಟನ್ನು ಹಂಪೆ ಪ್ರವಾಸಿಗರ ಮುಂದಿರಿಸುತ್ತದೆ. ಅತಿ ಮನೋಹರವಾದ ಕಲ್ಲಿನ ರಥ, ಉಗ್ರ ನರಸಿಂಹನ ಮೂರ್ತಿ, ವಿರೂಪಾಕ್ಷ ದೇವಾಲಯ, ವಿಠ್ಠಲ ದೇಗುಲ, ಹಜಾರ ರಾಮ ದೇವಾಲಯ, ಅಚ್ಚುತರಾಯ ದೇವಳ, ಹೇಮಕೂಟ ಬೆಟ್ಟದ ದೇಗುಲಗಳು, ರಾಣಿಯ ಸ್ನಾನಗೃಹ, ಆನೆಲಾಯ, ಕಮಲ ಮಹಲ್, ಹಂಪೆಯ ಬಜಾರು… ಹೀಗೆ ಬಹಳಷ್ಟನ್ನು ಇಲ್ಲಿ ನೋಡಬಹುದು. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 9ರಿಂದ ಸಂಜೆ 6ವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು. ಇಲ್ಲಿಂದ 13 ಕಿ.ಮೀ. ದೂರದ ಹೊಸಪೇಟೆಯಲ್ಲಿ ರೈಲು ನಿಲ್ದಾಣವಿದ್ದು, ಸುಮಾರು 35 ಕಿ.ಮೀ ದೂರದಲ್ಲಿ ವಿಜಯನಗರ ಜಿಲ್ಲೆಯ ವಿಮಾನನಿಲ್ದಾಣವಿದೆ.

ಸುಮಾರು 7 ಮತ್ತು 8ನೇ ಶತಮಾನಕ್ಕೆ ಸೇರಿದ ಹಿಂದೂ ಮತ್ತು ಜಿನ ಮಂದಿರಗಳ ಸುಂದರ ಸಮುಚ್ಚಯ ಈ ಪಟ್ಟದಕಲ್ಲು, ಬಾದಾಮಿ ಮತ್ತು ಐಹೊಳೆಯ ದೇಗುಲಗಳು. 1987ರಲ್ಲೇ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾದ ಈ ತಾಣವು ಸುಮಾರು 5.5 ಹೆಕ್ಟೇರ್ ಜಾಗದಲ್ಲಿ ಹರಡಿಕೊಂಡಿದೆ. ಚಾಲುಕ್ಯರು ಮತ್ತು ರಾಷ್ಟ್ರಕೂಟರ ಶಿಲ್ಪಕಲೆಯ ವೈಭವವನ್ನು ಇಲ್ಲಿ ಕಾಣಬಹುದಾಗಿದ್ದು, ಪಟ್ಟದಕಲ್ಲಿನಲ್ಲಿ ಶಿವನಿಗೆಂದು ನಿರ್ಮಿಸಲಾದ 9 ದೇಗುಲಗಳ ಸರಣಿಯನ್ನು ಕಾಣಬಹುದು. ಆದರೆ ವೈಷ್ಣವ ಮತ್ತು ಶಾಕ್ತ ಪಂಥದ ಕುರುಹುಗಳನ್ನೂ ದೇವಾಲಯಗಳಲ್ಲಿ ಕಾಣಬಹುದು. ದ್ರಾವಿಡ ಮತ್ತು ಇಂಡೊ ಆರ್ಯನ್ ಶೈಲಿಯ ಮಿಶ್ರಣದಂಥ ವಿನ್ಯಾಸಗಳನ್ನು ಹೊಂದಿರುವ ಜೈನ ದೇವಾಲಯಗಳು ಇಲ್ಲಿವೆ. ವಿರೂಪಾಕ್ಷ ದೇವಳ (ಹಂಪೆಯದ್ದಲ್ಲ, ಇಲ್ಲೇ ಬೇರೆಯದು), ಗಳಗನಾಥ ದೇಗುಲ, ಜಂಬುಲಿಂಗೇಶ್ವರ ಮಂದಿರ, ಸಂಗಮೇಶ್ವರ, ಕಾಡಸಿದ್ದೇಶ್ವರ, ಚಂದ್ರಶೇಖರ, ಕಾಶಿ ವಿಶ್ವನಾಥ ಮತ್ತು ಜೈನ ನಾರಾಯಣ ದೇವಾಲಯಗಳು ಇಲ್ಲಿನ ಆಕರ್ಷಣೆ.
ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಸಮೀಪದ ವಿಮಾನ ನಿಲ್ದಾಣ 130 ಕಿ.ಮೀ. ದೂರದ ಹುಬ್ಬಳ್ಳಿಯದ್ದು. ಬೆಳಗಾವಿ ವಿಮಾನ ನಿಲ್ದಾಣ 150 ಕಿ.ಮೀ. ದೂರದಲ್ಲಿದೆ. 18 ಕಿ.ಮೀ. ದೂರದ ಬಾದಾಮಿಯಲ್ಲಿ ರೈಲು ನಿಲ್ದಾಣವಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು.
ವಿಶ್ವದ 39 ಮಹತ್ವದ ಜೀವವೈವಿಧ್ಯ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಸಹ್ಯಾದ್ರಿ ಶ್ರೇಣಿಗಳು ಹಿಮಾಲಯಕ್ಕಿಂತ ಸಾಕಷ್ಟು ಹಳೆಯದಾಗಿದ್ದು, ಮುಂಗಾರು ಮಾರುತ ವ್ಯವಸ್ಥೆಗೆ ಇಡೀ ಭೂಮಿಯಲ್ಲೇ ಉತ್ತಮ ಉದಾಹರಣೆಯಿದು. 2012ರಲ್ಲಿ ವಿಶ್ವ ಪರಂಪೊರೆಯ ತಾಣವನ್ನು ಸೇರಿರುವ ಈ ಹಸಿರು ಪ್ರದೇಶ, 795.3 ಹೆಕ್ಟೇರ್ನ ಬೃಹತ್ ಪ್ರದೇಶವನ್ನು ಒಳಗೊಂಡಿದೆ. ವಿಶ್ವದಲ್ಲೇ ಅಳಿವಿನಂಚಿಗೆ ಬಂದಿರುವ ಸುಮಾರು 325 ಜಾತಿಯ ಅಮೂಲ್ಯ ಪ್ರಾಣಿ ಮತ್ತು ಪಕ್ಷಗಳ ಆಶ್ರಯ ತಾಣವಿದು ಎಂಬುದನ್ನು ಜಾಗತಿಕ ಜೀವ ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಏನಿದೆ ವಿಶೇಷ?
ಪಶ್ಚಿಮ ಘಟ್ಟಗಳು ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲೂ ವ್ಯಾಪಿಸಿದೆ. ಹಲವಾರು ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಂರಕ್ಷಿತ ಪ್ರದೇಶಗಳನ್ನಿದು ಒಳಗೊಂಡಿದೆ. 7 ಸಾವಿರಕ್ಕೂ ಹೆಚ್ಚಿನ ಪ್ರಭೇದಗಳ ಹೂಬಿಡುವ ಸಸ್ಯಗಳು, 139 ಜಾತಿಯ ಸಸ್ತನಿಗಳು, 508 ಜಾತಿಯ ಹಕ್ಕಿಗಳು, 179 ಜಾತಿಯ ಉಭಯವಾಸಿಗಳು, 6 ಸಾವಿರ ಜಾತಿಯ ಕೀಟಗಳು, 300 ಜಾತಿಯ ಮೀನುಗಳಿಗೆ ಈ ಪ್ರದೇಶ ತವರೆನಿಸಿಕೊಂಡಿದೆ.
ಹೊಯ್ಸಳ ದೇವಾಲಯಗಳು
ತ್ರಿಕೂಟಾಚಲ ವಿನ್ಯಾಸದ, ಚೆನ್ನಕೇಶವ ಮತ್ತು ಹೊಯ್ಸಳೇಶ್ವರರನ್ನು ಆರಾಧಿಸುವ ಬೇಲೂರು ಹಾಗೂ ಹಳೇಬೀಡಿನ ಸರ್ವಾಂಗ ಸುಂದರ ದೇವಾಲಯಗಳು ಯುನೆಸ್ಕೊ ಪಟ್ಟಿ ಸೇರಿ, ವಿಶ್ವ ಮಾನ್ಯತೆ ಪಡೆದಿವೆ. ನಕ್ಷತ್ರಾಕಾರದ ವೇದಿಕೆಯ ಮೇಲೆ ಸ್ಥಿತವಾದ ಈ ಸಂಕೀರ್ಣ ಕೆತ್ತನೆಯ ದೇವಳಗಳು 2004ರಿಂದ ವಿಶ್ವ ಪರಂಪರೆಯ ತಾಣವೆನಿಸಿವೆ. 10ರಿಂದ 14ನೇ ಶತಮಾನದ ಅವಧಿಯಲ್ಲಿ ಆಗಿಹೋದ ಹೊಯ್ಸಳರ ಉತ್ತುಂಗದ ಕಥೆಯನ್ನು ಇಲ್ಲಿನ ಕಲ್ಲಿನಲ್ಲಿರುವ ಕಲೆಗಳು ಹೇಳುತ್ತವೆ.
ಇಲ್ಲಿಯ ವಿಶೇಷತೆ ಏನು?
ರಾಜ ವಿಷ್ಣುವರ್ಧನನ ಕಾಲದಲ್ಲಿ ಬೇಲೂರಿನ ಚೆನ್ನಕೇಶವ ದೇಗುಲ ನಿರ್ಮಿಸಲಾಗಿದ್ದು, ಮಂತ್ರಿ ಕೇತುಮಲ್ಲನ ಕಾಲದಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಆದರೆ ಹೊಯ್ಸಳರ ಆಡಳಿತವಿದ್ದು ಜಾಗಗಳಲ್ಲಿ ಇಂಥ ಹಲವು ಸಣ್ಣ ದೇವಾಲಯಗಳಿದ್ದು, ಎಲ್ಲವುಗಳಲ್ಲೂ ಇಂಥದ್ದೇ ಸೂಕ್ಷ್ಮ ಕುಸುರಿಯಂಥ ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಲೋಹಕ್ಕೆ ಇರಬಹುದಾದಂಥ ಹೊಳಪು ಇಲ್ಲಿನ ಕಲ್ಲುಗಳಿಗಿದ್ದು, ನೋಡುಗರ ಹುಬ್ಬೇರಿಸುತ್ತವೆ.
ಹಾಸನ ಜಿಲ್ಲೆಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 6ವರೆಗೆ ಹಳೇಬೀಡಿನ ದೇಗುಲ ಭೇಟಿಗೆ ಲಭ್ಯವಿದ್ದು, ಬೆಳಗ್ಗೆ 7.30ರಿಂದ ಸಂಜೆ 6.30ರವರೆಗೆ ಬೇಲೂರಿನ ದೇವಳ ತೆರೆದಿರುತ್ತದೆ. ಪ್ರವೇಶ ಶುಲ್ಕವಿಲ್ಲ.
ಶ್ರೀರಂಗಪಟ್ಟಣದ ಸ್ಮಾರಕಗಳು
ಸುತ್ತಲೂ ಹರಿಯುವ ಕಾವೇರಿ ನದಿಯಿಂದ ದ್ವೀಪದಂತೆ ಕಾಣುವ ಶ್ರೀರಂಗಪಟ್ಟಣ ಮೈಸೂರಿಗೆ ಸಮೀಪದಲ್ಲಿದೆ. ವಿಜಯನಗರ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪಗಳು ಇಲ್ಲಿನ ಸ್ಮಾರಕಗಳ ಹೆಗ್ಗಳಿಕೆ. ಊರಿಗೆ ತನ್ನ ಹೆಸರನ್ನು ನೀಡಿರುವ ಶ್ರೀರಂಗನಾಥ ಸ್ವಾಮಿಯ ದೇಗುಲ ಇಲ್ಲಿನ ಹೆಗ್ಗುರುತು. ಇದು ಕರ್ನಾಟಕದ ಭವ್ಯ ವೈಷ್ಣವ ಆರಾಧನಾ ತಾಣಗಳಲ್ಲಿ ಒಂದು.
ಏನು ನೋಡಬಹುದು?
ಹಿಂದೊಮ್ಮೆ ಮೈಸೂರು ಸಂಸ್ಥಾನದ ರಾಜಧಾನಿ ಎನಿಸಿಕೊಂಡಿದ್ದ ಇಲ್ಲಿ, ದರಿಯಾ ದೌಲತ್ ಬಾಗ್, ಶ್ರೀರಂಗಪಟ್ಟಣದ ಕೋಟೆ, ಟಿಪ್ಪು ಸುಲ್ತಾನನ ಗುಂಬಜ್, ಜಾಮಾ ಮಸೀದಿ, ರಂಗನತಿಟ್ಟು ಪಕ್ಷಿಧಾಮಗಳು ನೋಡಲೇಬೇಕಾದವು. ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು.
ಬೀದರ್, ವಿಜಯಪುರ ಮತ್ತು ಕಲಬುರ್ಗಿಯಲ್ಲಿ ಹರಡಿಕೊಂಡಿರುವ ಈ ಸ್ಮಾರಕಗಳು ಯುನೆಸ್ಕೊದ ತಾತ್ಕಲಿಕ ಪಟ್ಟಿಯಲ್ಲಿವೆ. ಪ್ರಧಾನವಾಗಿ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವೇ ಈ ಸ್ಮಾರಕಗಳಲ್ಲಿ ಸೊಗಸಾದ ಗುಮ್ಮಟಗಳು, ಕಮಾನುಗಳನ್ನು ನೋಡಬಹುದು. ಹೈದರಾಬಾದ್ನಲ್ಲೂ ಈ ಸುಲ್ತಾನರ ಸ್ಮಾರಕಗಳಿವೆ.
ಪ್ರಮುಖವಾದುದೇನು?
ಬಹಮನಿ ಸುಲ್ತಾನರ ಮೊದಲ ರಾಜಧಾನಿ ಕಲಬುರ್ಗಿಯಲ್ಲಿರುವ ಸ್ಮಾರಕಗಳ ಪೈಕಿ ಕಲಬುರ್ಗಿ ಕೋಟೆ, ದೊಡ್ಡ ಮಸೀದಿ, ಏಳು ಗೋರಿಗಳ ಸಂಕೀರ್ಣದ ಗುಂಬಜ್ ಪ್ರಮುಖವಾದವು. ಬೀದರ್ನ ಸ್ಮಾರಕಗಳ ಪೈಕಿ ಬೀದರ್ ಕೋಟೆ, ಅರಮನೆ, ಮದರಸ, ಬಹಮನಿ ಗೋರಿಗಳು ಇತ್ಯಾದಿಗಳನ್ನು ನೋಡಬಹುದು. ವಿಜಯಪುರದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಸಣ್ಣ, ದೊಡ್ಡ ಸ್ಮಾರಕಗಳಿವೆ. ಇವುಗಳಲ್ಲಿ ಗೋಲ್ ಗುಂಬಜ್ ಜನಪ್ರಿಯವಾಗಿದ್ದು, ಪ್ರವಾಸಿಗರ ಮೆಚ್ಚಾಗಿದೆ. ಇದು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಗುಂಬಜ್ ಎಂದು ಖ್ಯಾತವಾಗಿದೆ.
ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಸೂಕ್ತ. ಕೆಲವು ಸ್ಮಾರಕಗಳಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ; ಆದಿಲ್ ಶಾಹಿ ಸ್ಮಾರಕಗಳಿಗೆ ಶುಲ್ಕ ನಿಗದಿ ಪಡಿಸಲಾಗಿದೆ.

ದೇಶ

ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ‘III’: ಶಾಸ್ತ್ರೀಯ ನೃತ್ಯದ ವೈಭವ ಅನಾವರಣ

Published

on

ಬೆಂಗಳೂರು: ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಲಾದ “III” – ಭರತನಾಟ್ಯ ಮತ್ತು ಕಥಕ್ ತ್ರಯಿ ನೃತ್ಯೋತ್ಸವವು ಶಾಸ್ತ್ರೀಯ ನೃತ್ಯಾಭಿಮಾನಿಗಳಿಗೆ ವಿಶಿಷ್ಟ ಕಲಾನುಭವವನ್ನು ನೀಡಿತು. ಭರತನಾಟ್ಯ ಮತ್ತು ಕಥಕ್ ಎಂಬ ಎರಡು ಶ್ರೇಷ್ಠ ಭಾರತೀಯ ನೃತ್ಯಪ್ರಕಾರಗಳ ತ್ರಯಿ ವಿನ್ಯಾಸಗಳ ಮೂಲಕ ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಭಾವಾಭಿವ್ಯಕ್ತಿಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವು ಕಿರಿಯ ವಿದ್ಯಾರ್ಥಿಗಳ ಪ್ರಥಮ ಸಾರ್ವಜನಿಕ ಪ್ರದರ್ಶನವಾದ “ನಟೇಶ ಕೌತ್ವಂ” ಮೂಲಕ ಆರಂಭಗೊಂಡಿತು. ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಕೂಡಿದ ಅವರ ಪ್ರದರ್ಶನವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಥಕ್ ತ್ರಯಿಯು ಶಿವತತ್ತ್ವವನ್ನು ವರ್ಣಿಸುವ ನೃತ್ಯ ರೂಪಕದೊಂದಿಗೆ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿತು. ಬಳಿಕ ಭರತನಾಟ್ಯ ಶೈಲಿಯ ಪುಷ್ಪಾಂಜಲಿ ಭಕ್ತಿರಸದ ವಾತಾವರಣವನ್ನು ಸೃಷ್ಟಿಸಿತು. “ತುಮಕು ಚಲತಾ ರಾಮಚಂದ್ರ” ಕಥಕ್ ರೂಪಕವು ಶ್ರೀರಾಮನ ಜೀವನದ ತಾಯಿತನದ ವಿಭಿನ್ನ ಆಯಾಮಗಳನ್ನು ಹಾಗೂ ಭಕ್ತಕವಿ ತುಳಸಿದಾಸರ ಭಾವಲೋಕವನ್ನು ಮನೋಜ್ಞವಾಗಿ ಮೂಡಿಸಿತು.

ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿದ್ದ “ದುರ್ಗಾ ವರ್ಣಂ” ಭರತನಾಟ್ಯ ಪ್ರದರ್ಶನವು ದೇವಿ ದುರ್ಗೆಯ ಶೌರ್ಯ, ಕರುಣೆ ಹಾಗೂ ಸ್ತ್ರೀಶಕ್ತಿಯ ವೈಭವವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿತು. ಇದೇ ವೇಳೆ ಕಥಕ್ ಶೈಲಿಯ “ದುರ್ಗಾ ಸ್ತುತಿ” ಆದಿಶಕ್ತಿಯ ಮಹಿಮೆಯನ್ನು ಭಾವಪೂರ್ಣವಾಗಿ ಬಿಂಬಿಸಿತು. ಜನಪ್ರಿಯ ಕೃಷ್ಣಾಭಿನಯ “ವಿಷಮಕಾರಿ ಕಣ್ಣ” ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಿಸಿತು.

ಸಮಾರೋಪದಲ್ಲಿ ಪ್ರದರ್ಶಿಸಲಾದ ಕಥಕ್ ಶೈಲಿಯ “ತರಾನಾ” ತನ್ನ ಚುರುಕು ಲಯ ಮತ್ತು ಮನೋಹರ ಚಲನಶೈಲಿಯ ಮೂಲಕ ರಸಿಕರನ್ನು ರಂಜಿಸಿತು.

ಕಾರ್ಯಕ್ರಮದ ಸಂಗೀತ ಸಂಯೋಜನೆಯನ್ನು ಶರತ್ ಪ್ರಭಾತ್ ನಿರ್ವಹಿಸಿದ್ದು, “ದುರ್ಗಾ ವರ್ಣಂ” ಸಾಹಿತ್ಯ ರಚನೆ ಹಾಗೂ ಕಥಕ್ ನೃತ್ಯ ಸಂಯೋಜನೆಗಳಿಗೂ ಅವರು ಕೈಜೋಡಿಸಿದ್ದರು. ಭರತನಾಟ್ಯ ವಿಭಾಗದ ನೃತ್ಯ ಸಂಯೋಜನೆಯನ್ನು ದಿವ್ಯ ಪ್ರಭಾತ್ ರೂಪಿಸಿದ್ದರು.

ಭರತನಾಟ್ಯ ತ್ರಯಿಯ ದೀಕ್ಷಾ ಜೋಶಿ, ಪಾಯಲ್ ಮತ್ತು ತಾನ್ಯಾ ಹಾಗೂ ಕಥಕ್ ತ್ರಯಿಯ ಆದ್ಯಾ, ಅನನ್ಯಾ ಮತ್ತು ಸ್ವಪಾಂತಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ Mahathi Kannan ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಕುಂತಲಾ ರಾಘವೇಂದ್ರ ಪ್ರಭಾತ್, ಶರತ್ ಪ್ರಭಾತ್ ಹಾಗೂ ದಿವ್ಯ ಭರತ್ ಪ್ರಭಾತ್ ಉಪಸ್ಥಿತರಿದ್ದರು.

Continue Reading

ದೇಶ

ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಗೃಹಲಕ್ಷ್ಮಿಯಿಂದ ಐಟಿ, ಜಿಎಸ್‌ಟಿ ಪಾವತಿದಾರರು ಔಟ್

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Gruha Lakshmi Scheme ಯೋಜನೆಯಲ್ಲಿ ಭಾರೀ ಪರಿಷ್ಕರಣೆ ನಡೆಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಂಡಿದೆ.

ಯೋಜನೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು ₹77 ಕೋಟಿ ಉಳಿತಾಯವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಅನರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿಸುತ್ತಿದ್ದ ಸುಮಾರು 1.94 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮರಣ ಹೊಂದಿದ ಸುಮಾರು 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿ ಹಣ ಜಮೆಯಾಗುತ್ತಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದ್ದು, ಅಂತಹ ಖಾತೆಗಳನ್ನೂ ರದ್ದುಗೊಳಿಸಲಾಗಿದೆ.

ಜಿಲ್ಲಾವಾರು ಪರಿಶೀಲನೆಯಲ್ಲಿ Bengaluru ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 47,871 ಮಹಿಳೆಯರನ್ನು ಅನರ್ಹರೆಂದು ಗುರುತಿಸಲಾಗಿದೆ. ಬಳಿಕ Belagavi, Dakshina Kannada, Mysuru ಹಾಗೂ Tumakuru ಜಿಲ್ಲೆಗಳು ಅತಿ ಹೆಚ್ಚು ಅನರ್ಹ ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ.

ಮುಂದಿನ ದಿನಗಳಲ್ಲಿ ನಕಲಿ ಫಲಾನುಭವಿಗಳು ಹಾಗೂ ತಾಂತ್ರಿಕ ಲೋಪಗಳನ್ನು ಸಂಪೂರ್ಣವಾಗಿ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಂದ ಮರು ದೃಢೀಕರಣ ಅಥವಾ ಮರು ಅರ್ಜಿ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Continue Reading

ಆರೋಗ್ಯ

ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Published

on

ರಾಮನಗರ: ಕಾಂಗ್ರೆಸ್ ಶಾಸಕ Iqbal Hussain ಅವರಿಗೆ ಹೃದಯಾಘಾತ ಉಂಟಾಗಿದ್ದು, ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತುರ್ತು ಚಿಕಿತ್ಸೆ ನೀಡಿ ಸ್ಟಂಟ್ ಅಳವಡಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಇಕ್ಬಾಲ್ ಹುಸೇನ್ ಅವರಿಗೆ ಬೆಂಗಳೂರಿನ Vydehi Hospital ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಶಾಸಕರ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು, ಆಪ್ತರು ಹಾಗೂ ರಾಜಕೀಯ ಮಿತ್ರರು ಆಸ್ಪತ್ರೆಗೆ ಧಾವಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಮುಖ್ಯಮಂತ್ರಿ D. K. Shivakumar ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇಕ್ಬಾಲ್ ಹುಸೇನ್ ಅವರು ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂದರ್ಭಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಒಳರಾಜಕೀಯ ವಿಚಾರಗಳಲ್ಲಿಯೂ ಅವರು ಸಕ್ರಿಯವಾಗಿ ಧ್ವನಿ ಎತ್ತುತ್ತಿದ್ದರು.

ಶಾಸಕರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ಮುಂದುವರಿಸಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Continue Reading

Trending