Connect with us

ದೇಶ

ಪ್ರಧಾನಿ ಮೋದಿ ಭೇಟಿಯಿಂದ ಪ್ರೇರಣೆ; ಜನಸೇವೆಗೆ ಹೊಸ ಸಂಕಲ್ಪ ಎಂದ ಮೋಹನ್

Published

on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಯಶವಂತಪುರ ಕ್ಷೇತ್ರದ ಕೆಂಗಲ್ ಹನುಮಂತಯ್ಯ ವಾರ್ಡ್‌ನ ಜಿಬಿಎ ಆಶಯ ಅಭ್ಯರ್ಥಿ ಮೋಹನ್ ಅವರಿಗೆ ಪ್ರಧಾನಿ ಅವರನ್ನು ಸ್ವಾಗತಿಸುವ ಅಪರೂಪದ ಅವಕಾಶ ದೊರೆತಿದೆ. ಕರ್ನಾಟಕ ಬಿಜೆಪಿ ನಾಯಕರ ಸಾಲಿನಲ್ಲಿ ನಿಂತು ಪ್ರಧಾನಿ ಮೋದಿಯನ್ನು ಭೇಟಿಯಾದ ಕ್ಷಣವನ್ನು ಮೋಹನ್ “ಜೀವನದ ಕನಸು ನನಸಾದ ಅನುಭವ” ಎಂದು ಬಣ್ಣಿಸಿದ್ದಾರೆ.

Hosasuddi.in ಜೊತೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾರತದ ನಾಯಕ ಅಲ್ಲ, ಇಡೀ ಜಗತ್ತಿನ ನಾಯಕ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ವಿಶ್ವ ಮಟ್ಟದಲ್ಲಿ ಭಾರತಕ್ಕೆ ಗೌರವ ಹೆಚ್ಚಾಗಲು ಮೋದಿಯವರ ಪಾರದರ್ಶಕ ಆಡಳಿತ ಮತ್ತು ದೂರದೃಷ್ಟಿಯೇ ಕಾರಣ” ಎಂದು ಹೇಳಿದ್ದಾರೆ.

“ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪ್ರಧಾನಿ ಅವರನ್ನು ಹತ್ತಿರದಿಂದ ಭೇಟಿಯಾಗುವುದು ನನ್ನ ಜೀವನದ ಅತ್ಯಂತ ದೊಡ್ಡ ಕ್ಷಣ. ಅವರ ಸರಳತೆ, ಶಿಸ್ತು ಮತ್ತು ದೇಶದ ಬಗ್ಗೆ ಇರುವ ಬದ್ಧತೆ ನನ್ನನ್ನು ತುಂಬಾ ಪ್ರೇರೇಪಿಸಿದೆ. ಮುಂದಿನ ದಿನಗಳಲ್ಲಿ ನನ್ನ ವಾರ್ಡ್ ಹಾಗೂ ಕ್ಷೇತ್ರದಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮೋದಿ ಅವರ ಮಾದರಿಯಲ್ಲೇ ಮಾಡುತ್ತೇನೆ” ಎಂದು ಮೋಹನ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭಾಷಣ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವಿನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದರು.

ಈ ವೇಳೆ ಮೋಹನ್ ಸೇರಿದಂತೆ ಹಲವು ಯುವ ಬಿಜೆಪಿ ಮುಖಂಡರು ಪ್ರಧಾನಿ ಭೇಟಿಯಿಂದ ಉತ್ಸಾಹಗೊಂಡಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.

ದೇಶ

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ; ವೈರಲ್ ಆಡಿಯೋಗೆ ಸದಾನಂದ ಗೌಡರ ‘ನೋ ಕಾಮೆಂಟ್ಸ್’

Published

on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ದೆಹಲಿ ನಾಯಕರಿಗೆ ಒತ್ತಾಯಿಸಿರುವಂತೆ ಹೇಳಲಾಗುತ್ತಿರುವ ವೈರಲ್ ಆಡಿಯೋ ಇದೀಗ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಧ್ವನಿಯನ್ನು ಹೋಲುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ಆಡಿಯೋದಲ್ಲಿ, ವಿಜಯೇಂದ್ರ ಅವರ ಮೂರು ವರ್ಷದ ಅವಧಿ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು, ಈಗಲೇ ಅವರನ್ನು ಬದಲಾಯಿಸಿದರೆ ಪಕ್ಷದೊಳಗೆ ಅನಗತ್ಯ ಗೊಂದಲ ಉಂಟಾಗಬಹುದು ಎಂದು ಹೇಳಲಾಗಿದೆ. ಅಕ್ಟೋಬರ್ ಅಥವಾ ಅವಧಿ ಪೂರ್ಣಗೊಂಡ ಬಳಿಕವೇ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವಂತೆ ಕೇಳಿಬರುತ್ತಿದೆ.

ಸಂಭಾಷಣೆಯಲ್ಲಿ, “ಈಗಲೇ ಅವರನ್ನು ತೆಗೆದರೆ ಅವರ ತಂಡ ಎಚ್ಚೆತ್ತುಕೊಳ್ಳುತ್ತದೆ. ಅವಧಿ ಪೂರ್ಣಗೊಂಡ ನಂತರ ಬದಲಾವಣೆ ಮಾಡಿದರೆ ಯಾವುದೇ ವಿವಾದ ಉಂಟಾಗುವುದಿಲ್ಲ. ಬಳಿಕ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು” ಎಂಬ ಮಾತುಗಳೂ ಕೇಳಿಬರುತ್ತಿವೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಇನ್ನೂ ಮೂರು ತಿಂಗಳಲ್ಲಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದು, ಪಕ್ಷದ ಸಂಪ್ರದಾಯದ ಪ್ರಕಾರ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷಗಳಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೈರಲ್ ಆಡಿಯೋ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇನ್ನೊಂದೆಡೆ, ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, “ಈ ಬಗ್ಗೆ ನೋ ಕಾಮೆಂಟ್ಸ್. ಅದು ನನ್ನ ಆಡಿಯೋ ಅಥವಾ ವಿಡಿಯೋ ಎಂಬುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸತ್ಯಾಸತ್ಯತೆಯನ್ನು ನೀವೇ ಕಂಡುಹಿಡಿಯಿರಿ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಡಿಯೋದ ಸತ್ಯಾಸತ್ಯತೆ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ಆದರೂ ಈ ಬೆಳವಣಿಗೆ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Continue Reading

ದೇಶ

ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್‌ಗೆ 6 ವರ್ಷ ಉಚ್ಚಾಟನೆ

Published

on

ಬೆಂಗಳೂರು: ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ವಕ್ತಾರ ಹಾಗೂ ಮೈಸೂರಿನ ಮುಖಂಡ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಈ ಕುರಿತು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದೇಶದ ಪ್ರಕಾರ, ಜೂನ್ 19ರಂದು ಸಂಜೆ ನಡೆದ ಪಕ್ಷದ ವೆಬೆಕ್ಸ್ ಸಭೆಯಲ್ಲಿ ಎಂ.ಜಿ. ಮಹೇಶ್ ಅವರು ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಬಿಜೆಪಿ ಪ್ರಮುಖರ ವಿರುದ್ಧ ಇಲ್ಲಸಲ್ಲದ, ಕೀಳುಮಟ್ಟದ ಹಾಗೂ ಅವಹೇಳನಕಾರಿ ಆರೋಪಗಳನ್ನು ಮಾಡಿರುವುದು ಗಮನಕ್ಕೆ ಬಂದಿತ್ತು. ಈ ನಡೆ ಪಕ್ಷದ ಸಂಘಟನಾ ಶಿಸ್ತುಗೆ ವಿರುದ್ಧವಾಗಿದ್ದು, ಅವರಿಂದ ಸ್ಪಷ್ಟೀಕರಣವನ್ನು ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.

ನೋಟಿಸ್‌ಗೆ ಪ್ರತಿಯಾಗಿ ಎಂ.ಜಿ. ಮಹೇಶ್ ಅವರು ನೀಡಿದ ಸ್ಪಷ್ಟೀಕರಣವನ್ನು ಶಿಸ್ತು ಸಮಿತಿ ಪರಿಶೀಲಿಸಿತ್ತು. ಆದರೆ, ಅವರ ಉತ್ತರ ಸಮರ್ಪಕವಾಗಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದು, ಪಕ್ಷದ ಶಿಸ್ತು ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಎಂ.ಜಿ. ಮಹೇಶ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಕ್ರಮ ರಾಜ್ಯ ಬಿಜೆಪಿ ವಲಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಪಕ್ಷದೊಳಗಿನ ಶಿಸ್ತು ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.

Continue Reading

ದೇಶ

ಫೇಸ್‌ಬುಕ್‌ನಿಂದ ಮಿಂತ್ರಾವರೆಗೆ; ಶ್ವೇತಾ ಕೃಷ್ಣ ಯಶಸ್ಸಿನ ಸ್ಪೂರ್ತಿದಾಯಕ ಪಯಣ

Published

on

ಬೆಂಗಳೂರು: ಸೃಜನಶೀಲತೆ, ಪರಿಸರ ಸ್ನೇಹಿ ಫ್ಯಾಷನ್ ಮತ್ತು ನಿರಂತರ ಪರಿಶ್ರಮದ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಉದ್ಯಮಿಯರಾದ ಶ್ವೇತಾ ಕೃಷ್ಣ ಅವರಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ‘ರೆಸಿಲಿಯಂಟ್ ಫ್ಯಾಷನ್ ವ್ಯಾಂಗಾರ್ಡ್ ಅವಾರ್ಡ್’ ಪ್ರದಾನ ಮಾಡಲಾಗಿದೆ. ಫ್ಯಾಷನ್ ಕ್ಷೇತ್ರದಲ್ಲಿ ಅವರ ಸಾಧನೆ, ನವೀನ ಆಲೋಚನೆ ಹಾಗೂ ಉದ್ಯಮಶೀಲತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಶ್ವೇತಾ ಕೃಷ್ಣ ಅವರ ಉದ್ಯಮ ಪಯಣವು ಫೇಸ್‌ಬುಕ್ ಮೂಲಕ ಉಡುಪುಗಳ ಡ್ರಾಪ್‌ಶಿಪ್ಪಿಂಗ್‌ನಿಂದ ಆರಂಭವಾಯಿತು. ಇದರ ಜೊತೆಗೆ ಕೈಯಿಂದ ತಯಾರಿಸಿದ ಟೆರಾಕೋಟಾ ಮತ್ತು ಮಣಿಗಳ ಆಭರಣಗಳು ಹಾಗೂ ಹಳೆಯ ಡೆನಿಮ್ ಬಟ್ಟೆಗಳನ್ನು ಆಕರ್ಷಕ ಬ್ಯಾಗ್‌ಗಳಾಗಿ ಪರಿವರ್ತಿಸಿ ‘ಮಂಜರಿ’ ಬ್ರ್ಯಾಂಡ್ ಅಡಿಯಲ್ಲಿ ಗ್ರಾಹಕರಿಗೆ ಪರಿಚಯಿಸಿದರು. ವಿವಿಧ ಪ್ರದರ್ಶನಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ ಮೆಚ್ಚುಗೆ ಗಳಿಸಿದರು.

ಇ-ಕಾಮರ್ಸ್ ಬೆಳವಣಿಗೆಯೊಂದಿಗೆ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಆನ್‌ಲೈನ್ ವೇದಿಕೆಗಳಲ್ಲಿ ಟಪ್ಪರ್‌ವೇರ್ ಉತ್ಪನ್ನಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದರು. ನಂತರ ನೀತಿ ಬದಲಾವಣೆಯಿಂದ ಆ ವ್ಯವಹಾರಕ್ಕೆ ಅಡ್ಡಿಯಾದಾಗ ಹಿಂಜರಿಯದೆ ತಮ್ಮ ಮೂಲ ಆಸಕ್ತಿಯಾಗಿದ್ದ ಫ್ಯಾಷನ್ ಹಾಗೂ ಕೈಗಾರಿಕಾ ವಿನ್ಯಾಸ ಕ್ಷೇತ್ರಕ್ಕೆ ಮತ್ತೆ ಮರಳಿದರು.

ಕಳೆದ ವರ್ಷ ತಂದೆಯ ಅಗಲಿಕೆಯ ಬಳಿಕ ಅವರ ನೆನಪಿಗಾಗಿ ತಂದೆಯ ಹೆಸರಿನಲ್ಲೇ ಸ್ವಂತ ಬೊಟಿಕ್ ಆರಂಭಿಸಿದ್ದು, ಇದು ಅವರ ಜೀವನದ ಮಹತ್ವದ ತಿರುವಾಯಿತು. ಪ್ರಸ್ತುತ ಬೊಟಿಕ್‌ನಲ್ಲಿ ರೆಡಿ-ಟು-ವೇರ್ ಉಡುಪುಗಳು, ಸೀರೆಗಳು, ಕಸ್ಟಮೈಸ್ ಮಾಡಿದ ವೆಸ್ಟರ್ನ್ ವೇರ್, ಡಿಸೈನರ್ ಬ್ಲೌಸ್‌ಗಳು ಹಾಗೂ ವಿಶೇಷ ಟೈಲರಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಹಳೆಯ ನೆನಪಿನ ಸೀರೆಗಳನ್ನು ಆಧುನಿಕ ವಿನ್ಯಾಸದ ಉಡುಪುಗಳಾಗಿ ಪರಿವರ್ತಿಸುವ ಸೇವೆ ಅವರ ಬೊಟಿಕ್‌ನ ವಿಶೇಷ ಆಕರ್ಷಣೆಯಾಗಿದೆ.

ಬದಲಾಗುತ್ತಿರುವ ಮಾರುಕಟ್ಟೆ ಪ್ರವೃತ್ತಿಗೆ ತಕ್ಕಂತೆ ತಮ್ಮ ಬ್ರ್ಯಾಂಡ್ ಅನ್ನು ಪ್ರಮುಖ ಇ-ಕಾಮರ್ಸ್ ವೇದಿಕೆಗಳಿಗೆ ವಿಸ್ತರಿಸಿರುವ ಶ್ವೇತಾ ಕೃಷ್ಣ, ಇತ್ತೀಚೆಗೆ ಮಿಂತ್ರಾ ವೇದಿಕೆಯಲ್ಲಿ ತಮ್ಮ ಬ್ರ್ಯಾಂಡ್‌ಗೆ ಸ್ಥಾನ ಪಡೆದಿರುವುದು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ನಿರಂತರ ಪರಿಶ್ರಮ, ಹೊಸತನ ಮತ್ತು ಮಹಿಳೆಯರನ್ನು ಆತ್ಮವಿಶ್ವಾಸದಿಂದ ಫ್ಯಾಷನ್ ಮೂಲಕ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಪ್ರೇರೇಪಿಸುವ ಅವರ ಸಂಕಲ್ಪವೇ ಇಂದು ಈ ಪ್ರತಿಷ್ಠಿತ ಪ್ರಶಸ್ತಿಗೆ ಕಾರಣವಾಗಿದೆ.

ಉದ್ಯಮ, ಮಹಿಳಾ ಸಾಧನೆ, ಸ್ಟಾರ್ಟ್‌ಅಪ್ ಹಾಗೂ ಪ್ರೇರಣಾದಾಯಕ ಯಶೋಗಾಥೆಗಳಿಗಾಗಿ ಪ್ರತಿದಿನ ಹೊಸಸುದ್ದಿ (hosasuddi.in) ವೀಕ್ಷಿಸಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಈ ಸುದ್ದಿಯನ್ನು ಹಂಚಿಕೊಳ್ಳಿ.

Continue Reading

Trending