ದೇಶ
ಅಡುಗೆ ಮನೆ ಬಜೆಟ್ಗೆ ಭಾರೀ ಹೊರೆ! ಬೆಂಗಳೂರಿನಲ್ಲಿ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆ
ಬೆಂಗಳೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ವಿಶೇಷವಾಗಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ತರಕಾರಿ ಉತ್ಪಾದನೆ ಕುಂಠಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ದರಗಳು ಗಗನಕ್ಕೇರಿವೆ.
ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವು ಬೆಳೆಗಳ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಇಳಿಕೆಯಾಗಿದ್ದು, ಬೇಡಿಕೆ ಹೆಚ್ಚಾದ ಕಾರಣ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾದರೆ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಹಾಪ್ಕಾಮ್ಸ್ ಪ್ರಕಟಿಸಿರುವ ಇತ್ತೀಚಿನ ದರಪಟ್ಟಿಯ ಪ್ರಕಾರ, ಹಲವು ತರಕಾರಿಗಳ ಬೆಲೆ ಸಾಮಾನ್ಯ ಗ್ರಾಹಕರಿಗೆ ದುಬಾರಿಯಾಗಿದೆ. ಹುರಳಿಕಾಯಿ ಒಂದು ಕೆ.ಜಿಗೆ ₹110, ಬಿಳಿ ಬದನೆಕಾಯಿ ₹95, ದಪ್ಪ ಮೆಣಸಿನಕಾಯಿ ₹90, ಬಜ್ಜಿ ಮೆಣಸಿನಕಾಯಿ ₹85, ಬಿಳಿ ಹುರಳಿಕಾಯಿ ₹85, ಬಟಾಣಿ ಕಾಳು ₹200, ಹಿರೇಕಾಯಿ ₹60, ಹಾಗಲಕಾಯಿ ₹64, ಶುಂಠಿ ₹177, ಬೆಳ್ಳುಳ್ಳಿ ₹270, ಊಟಿ ಕ್ಯಾರೆಟ್ ₹90, ಡಬಲ್ ಬೀನ್ಸ್ ₹160 ಹಾಗೂ ಗೋರಿಕಾಯಿ ₹70ಕ್ಕೆ ಮಾರಾಟವಾಗುತ್ತಿದೆ.
ಸೊಪ್ಪಿನ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಮೆಂತ್ಯೆ ಸೊಪ್ಪು ಪ್ರತಿ ಕೆ.ಜಿಗೆ ₹125 (ಒಂದು ಕಟ್ಟಿಗೆ ₹30) ಹಾಗೂ ಪುದೀನ ₹95 (ಒಂದು ಕಟ್ಟಿಗೆ ₹20) ದರ ನಿಗದಿಯಾಗಿದೆ.
ಹಣ್ಣುಗಳ ದರ ಕೂಡ ಗ್ರಾಹಕರಿಗೆ ದುಬಾರಿಯಾಗಿದ್ದು, ವಾಷಿಂಗ್ಟನ್ ಸೇಬು ₹325, ಗಾಲಾ ಸೇಬು ₹350, ಕಿವಿ ಹಣ್ಣು ₹800, ಗೋಲ್ಡ್ ಕಿವಿ ₹1,000, ಲಿಚ್ಚಿ ₹500, ಮೂಸಂಬಿ ₹160, ಬಾದಾಮಿ ಮಾವು ₹200, ಸಕ್ಕರೆಗುತ್ತಿ ಮಾವು ₹230 ಹಾಗೂ ಸಪೋಟ ₹190 ಪ್ರತಿ ಕೆ.ಜಿಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರು, ತರಕಾರಿ ಮತ್ತು ಹಣ್ಣುಗಳ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿ ಉತ್ತಮ ಮಳೆಯಾದರೆ ಮಾತ್ರ ಮುಂದಿನ ದಿನಗಳಲ್ಲಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶ
ಶಾಂತಿ ಒಪ್ಪಂದ ಮುರಿದಿತೇ? ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಅಮೆರಿಕಾ-ಇರಾನ್ ಸಂಘರ್ಷ; ಕ್ಷಿಪಣಿ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ
ಟೆಹ್ರಾನ್/ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯವಾಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಆ ಆಶಾವಾದ ಹೆಚ್ಚು ದಿನ ಉಳಿಯದೇ, ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ಇರಾನ್ ಪಡೆಗಳು ಸಿಂಗಾಪುರ ಧ್ವಜದಡಿ ಸಂಚರಿಸುತ್ತಿದ್ದ M/V ಎವರ್ ಲವ್ಲಿ ಕಾರ್ಗೋ ಹಡಗಿನ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕಾ ಆರೋಪಿಸಿದೆ. ಇದನ್ನು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿರುವ ಅಮೆರಿಕಾದ ಸೆಂಟ್ರಲ್ ಕಮಾಂಡ್, ಪ್ರತೀಕಾರವಾಗಿ ಇರಾನ್ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಈ ಬೆಳವಣಿಗೆಗೂ ಮುನ್ನವೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ನ ಕ್ರಮವನ್ನು ಖಂಡಿಸಿ “ಇದು ಕದನ ವಿರಾಮದ ಮೂರ್ಖತನದ ಉಲ್ಲಂಘನೆ” ಎಂದು ಹೇಳಿದ್ದರು. ಪ್ರತೀಕಾರ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ “ನೀವು ಶೀಘ್ರದಲ್ಲೇ ನೋಡುತ್ತೀರಿ” ಎಂದು ನೀಡಿದ್ದ ಪ್ರತಿಕ್ರಿಯೆ ದಾಳಿಯ ಮುನ್ಸೂಚನೆಯಾಗಿತ್ತು.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿ ನಡೆಸಿದೆ ಎಂದು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. ಇದೇ ವೇಳೆ, ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿರುವ ಇರಾನ್, ಅಮೆರಿಕಾದ ಭದ್ರತಾ ವ್ಯವಸ್ಥೆಯನ್ನು ಅವಲಂಬಿಸುವುದು ಅಪಾಯಕಾರಿ ಎಂದು ಹೇಳಿದೆ.
ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಿದ್ದು, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಸಮುದ್ರ ವ್ಯಾಪಾರದ ಮೇಲೂ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ. ರಾಜತಾಂತ್ರಿಕರು ಕದನ ವಿರಾಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ದೇಶ
ವಿಕಸಿತ ಭಾರತ 2047 ಗುರಿಗೆ ಕಾರ್ಮಿಕ ಸುಧಾರಣೆ, ಕೌಶಲ್ಯಾಭಿವೃದ್ಧಿ ಒತ್ತು: ಸಂಸದರು-ಶಾಸಕರಿಗೆ NFPRC ಕಾರ್ಯಾಗಾರ
ನವದೆಹಲಿ, ಜೂನ್ 26: ವಿಕಸಿತ ಭಾರತ–2047 ಗುರಿ ಸಾಧಿಸಲು ಕಾರ್ಮಿಕರ ಔಪಚಾರಿಕೀಕರಣ, ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕೌಶಲ್ಯಾಭಿವೃದ್ಧಿ ಹಾಗೂ ಡಿಜಿಟಲ್ ಆಡಳಿತ ಅತ್ಯಗತ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅಭಿಪ್ರಾಯಪಟ್ಟರು.
ದೆಹಲಿ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನ ಗುಲ್ಮೋಹರ್ ಸಭಾಂಗಣದಲ್ಲಿ ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ (NFPRC) ಆಯೋಜಿಸಿದ್ದ ಸಂಸದರು ಮತ್ತು ಶಾಸಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶದ ವಿವಿಧ ರಾಜ್ಯಗಳ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಗಳ ಸುಮಾರು 70ಕ್ಕೂ ಹೆಚ್ಚು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಮಿಕರ ಔಪಚಾರಿಕೀಕರಣ ಹಾಗೂ ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಸಾಮಾಜಿಕ ಭದ್ರತೆ ವಿಸ್ತರಣೆ ದೇಶದ ಲಕ್ಷಾಂತರ ಅಸಂಘಟಿತ, ಗಿಗ್ ಹಾಗೂ ವೇದಿಕೆ ಆಧಾರಿತ ಕಾರ್ಮಿಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಸಚಿವರು ಹೇಳಿದರು. ಇ-ಶ್ರಮ್ ಪೋರ್ಟಲ್, ರಾಷ್ಟ್ರೀಯ ವೃತ್ತಿ ಸೇವೆ (NCS) ಹಾಗೂ ಡಿಜಿಟಲ್ ಲೇಬರ್ ಚೌಕ್ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತಿವೆ ಎಂದರು.
ಎನ್ಎಫ್ಪಿಆರ್ಸಿ ಅಧ್ಯಕ್ಷ ತರುಣ್ ಚುಗ್ ಅವರು, ಕಾರ್ಮಿಕರ ಔಪಚಾರಿಕೀಕರಣ, ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಸಮಗ್ರ ಅಭಿವೃದ್ಧಿಗೆ ವೇಗ ನೀಡುವುದು ವಿಕಸಿತ ಭಾರತದ ಪ್ರಮುಖ ಅಡಿಪಾಯ ಎಂದು ತಿಳಿಸಿದರು.
ಹರಿಯಾಣ ವಿಧಾನಸಭೆಯ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಅವರು, ಸಾಕ್ಷ್ಯಾಧಾರಿತ ನೀತಿ ರೂಪಣೆ ಹಾಗೂ ಜ್ಞಾನಾಧಾರಿತ ಶಾಸನ ಪ್ರಕ್ರಿಯೆ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ವಿನೋದ್ ತಾವಡೆ ಅವರು ಡಿಜಿಟಲ್ ಸಂವಹನ, ಸಾಮಾಜಿಕ ಮಾಧ್ಯಮ ನಿರ್ವಹಣೆ, ತಪ್ಪು ಮಾಹಿತಿಯನ್ನು ಎದುರಿಸುವ ತಂತ್ರಗಳು ಹಾಗೂ ಜನಸಂಪರ್ಕದ ಮಹತ್ವದ ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (NSDC) ಸಿಇಒ ಅರುಣ್ ಕುಮಾರ್ ಪಿಳ್ಳೈ ಅವರು ಜಾಗತಿಕ ಕೌಶಲ್ಯ ಮಾದರಿಗಳು ಹಾಗೂ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯ ಮೂಲಕ ಉದ್ಯೋಗ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಾಗಾರದ ಕೊನೆಯಲ್ಲಿ ನೀತಿ ಸಂಶೋಧನೆ, ಡಿಜಿಟಲ್ ಆಡಳಿತ, ಜನಕೇಂದ್ರಿತ ಸೇವೆ ಹಾಗೂ ಶಾಸಕರ ಸಾಮರ್ಥ್ಯ ವೃದ್ಧಿಗೆ ಇಂತಹ ಸಂವಾದಗಳು ಅತ್ಯಂತ ಅಗತ್ಯ ಎಂದು ಭಾಗವಹಿಸಿದ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ದೇಶ
‘ಯಲಹಂಕಕ್ಕೆ ಬಂದರೆ ಚಿಕ್ಕಬಳ್ಳಾಪುರಕ್ಕೆ ಬರುತ್ತೇನೆ’; ಸಂಸದರ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು!
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವಿಚಾರ ಯಲಹಂಕ ಬಿಜೆಪಿ ರಾಜಕಾರಣದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಶಾಸಕ ಎಸ್.ಆರ್. ವಿಶ್ವನಾಥ್ ಅವರು ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಸಮಾರಾಸ್ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕದಲ್ಲಿ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಕೆಂಪೇಗೌಡ ಜಯಂತಿ ಆಚರಿಸಿರುವ ಕ್ರಮವನ್ನು ಪ್ರಶ್ನಿಸಿ, ಪರೋಕ್ಷವಾಗಿ ಸಂಸದರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ತತ್ವದಡಿ ಬೆಂಗಳೂರನ್ನು ಕಟ್ಟಿದ ಮಹಾನ್ ವ್ಯಕ್ತಿ. ಆದರೆ ಯಲಹಂಕದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ” ಎಂದು ಅವರು ಹೇಳಿದರು.
ಯಲಹಂಕದಲ್ಲಿ ಬಿಜೆಪಿ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ ಎಂದು ಹೇಳಿದ ವಿಶ್ವನಾಥ್, “ಯಲಹಂಕ ಬಿಜೆಪಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಅಲುಗಾಡಿಸಬಹುದು ಅಷ್ಟೇ. ನಮ್ಮ ಕಾರ್ಯಕರ್ತರು ಹಣಕ್ಕಾಗಲಿ, ಆಮಿಷಕ್ಕಾಗಲಿ ಒಳಗಾಗುವವರಲ್ಲ. ಸಂಸದರ ಹಿಂದೆ ಬಿಜೆಪಿ ಕಾರ್ಯಕರ್ತರಿಗಿಂತ ಕಾಂಗ್ರೆಸ್ ಮುಖಂಡರೇ ಹೆಚ್ಚಿದ್ದಾರೆ” ಎಂದು ಆರೋಪಿಸಿದರು.
ಕಳೆದ 48 ವರ್ಷಗಳಿಂದ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಕಟ್ಟಿದ್ದೇನೆ ಎಂದು ಹೇಳಿದ ಅವರು, ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಯಲಹಂಕ ಕ್ಷೇತ್ರದಿಂದ ಭಾರಿ ಮುನ್ನಡೆ ದೊರೆತಿರುವುದನ್ನು ನೆನಪಿಸಿದರು. “ನಮ್ಮದು ವ್ಯಕ್ತಿ ಬದ್ಧ ರಾಜಕಾರಣವಲ್ಲ, ಪಕ್ಷ ಬದ್ಧ ರಾಜಕಾರಣ” ಎಂದು ಸ್ಪಷ್ಟಪಡಿಸಿದರು.
ಸಂಸದರ ನಡೆ ಪ್ರಶ್ನಿಸಿದ ಅವರು, “ಪಕ್ಷದ ಮುಖಂಡರು ಮೃತಪಟ್ಟಾಗ ಬರಲಿಲ್ಲ. ಆದರೆ ಕಾಂಗ್ರೆಸ್ ನಾಯಕರ ಮನೆಗಳಿಗೆ ಹೋಗುತ್ತೀರಿ. ನಿಮ್ಮ ವಿರುದ್ಧ ಮತ ಹಾಕಿದವರೊಂದಿಗೆ ಸಖ್ಯ ಬೆಳೆಸುತ್ತೀರಿ. ಇದರ ಮರ್ಮವೇನು?” ಎಂದು ಪ್ರಶ್ನಿಸಿದರು.
“ಒಡೆದು ಆಳುವ ರಾಜಕಾರಣ ಯಲಹಂಕದಲ್ಲಿ ನಡೆಯುವುದಿಲ್ಲ. ನಮ್ಮ ಬುಡಕ್ಕೆ ಬಂದರೆ ನಾವು ಕೂಡ ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಬುಡಕ್ಕೆ ಬರುತ್ತೇವೆ. ಇನ್ನು ಮುಂದೆ ಪ್ರತಿ ತಿಂಗಳು ಚಿಕ್ಕಬಳ್ಳಾಪುರಕ್ಕೆ ಬಂದು ಪಕ್ಷ ಸಂಘಟನೆ ಮಾಡುತ್ತೇನೆ. ಈ ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿರುವ ಅನುಭವ ನನಗಿದೆ. ಸಂಘಟನೆ ಹೇಗೆ ಮಾಡಬೇಕು ಎಂಬುದು ಗೊತ್ತಿದೆ” ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.
ಇದೇ ವೇಳೆ ಮತ್ತಷ್ಟು ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, “ಯಲಹಂಕದಲ್ಲಿ ನಮ್ಮ ಒಬ್ಬ ಮುಖಂಡರನ್ನು ಮುಟ್ಟಿದರೆ ನಿಮ್ಮ ಕಡೆಯಿಂದ ಇಬ್ಬರನ್ನು ಕರೆತರುತ್ತೇನೆ. ಎಚ್ಚರವಿರಲಿ” ಎಂದು ಎಚ್ಚರಿಕೆ ನೀಡಿದರು.
2029ರ ಲೋಕಸಭಾ ಚುನಾವಣೆಯ ಬಗ್ಗೆಯೂ ಮಾತನಾಡಿದ ವಿಶ್ವನಾಥ್, “2029ಕ್ಕೆ ನೀವೇ ಅಭ್ಯರ್ಥಿ ಎಂದು ಈಗಲೇ ಘೋಷಿಸಿ. ನಿಮ್ಮನ್ನು ಗೆಲ್ಲಿಸಲು ನಾವು ಕಾರ್ಯತಂತ್ರ ರೂಪಿಸುತ್ತೇವೆ. ಇಲ್ಲದಿದ್ದರೆ ಯಲಹಂಕಕ್ಕೆ ಬರುವಾಗ ಬಿಜೆಪಿಯಿಂದ ನಾನೇ ಅಭ್ಯರ್ಥಿ. ನೀವು ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ” ಎಂದು ಬಹಿರಂಗ ಸವಾಲು ಹಾಕಿದರು.
ಚಿಕ್ಕಬಳ್ಳಾಪುರ ರಾಜಕೀಯದ ಕುರಿತೂ ಪ್ರತಿಕ್ರಿಯಿಸಿದ ಅವರು, ಸಂದೀಪ್ ರೆಡ್ಡಿ ಅವರಂತಹ ಯುವ ನಾಯಕರಿಗೆ ಅವಕಾಶ ಸಿಗಬೇಕು ಎಂದು ಅಭಿಪ್ರಾಯಪಟ್ಟರು. “ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇನೆ. ಒಂದು ವೇಳೆ ನನಗೇ ಟಿಕೆಟ್ ನೀಡಿದರೂ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ” ಎಂದು ಘೋಷಿಸಿದರು.
ಪುತ್ರನ ರಾಜಕೀಯ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಮಗ ಶಾಸಕ ಅಥವಾ ಸಂಸದ ಆಗಬಾರದೇ? ಯುವಕರಿಗೆ ಅವಕಾಶ ಸಿಗಬೇಕು ಎಂದು ನಾನು ಹೇಳಿದ್ದೇನೆ. ಟಿಕೆಟ್ ನೀಡುವುದು ಹೈಕಮಾಂಡ್ ತೀರ್ಮಾನ” ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಯಲಹಂಕ ಬಿಜೆಪಿ ರಾಜಕಾರಣದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಈ ಹೇಳಿಕೆಗಳು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬಣ ರಾಜಕಾರಣ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
-
ದೇಶ3 hours agoವಿಕಸಿತ ಭಾರತ 2047 ಗುರಿಗೆ ಕಾರ್ಮಿಕ ಸುಧಾರಣೆ, ಕೌಶಲ್ಯಾಭಿವೃದ್ಧಿ ಒತ್ತು: ಸಂಸದರು-ಶಾಸಕರಿಗೆ NFPRC ಕಾರ್ಯಾಗಾರ
-
ದೇಶ23 hours agoಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪ್ರಾಣ ತ್ಯಾಗ: ಆಪರೇಷನ್ ಸಿಂಧೂರ್ನ 6 ವೀರರ ಹೆಸರು ಬಹಿರಂಗ
-
ದೇಶ23 hours agoಗೃಹಜ್ಯೋತಿ, ಶಕ್ತಿ ಯೋಜನೆಗಳ ವೆಚ್ಚ ಹೆಚ್ಚಳ; ರಾಜ್ಯದ ಆರ್ಥಿಕತೆಗೆ ಎಚ್ಚರಿಕೆ ಗಂಟೆ
-
ದೇಶ24 hours agoಚಿರತೆಗಳ ನೆಲೆಗೆ ಕಸದ ಬೆದರಿಕೆ: ತುರಹಳ್ಳಿ ಅರಣ್ಯ ಉಳಿಸಲು ನಿವಾಸಿಗಳ ಒತ್ತಾಯ
-
ದೇಶ24 hours agoಬಾಲರಾಮನ ಕಾಣಿಕೆಗೂ ಕನ್ನ: ಅಯೋಧ್ಯೆ ರಾಮಮಂದಿರ ಕಳ್ಳತನದ ಜಾಲದ ಒಳಕಥೆ
-
ದೇಶ6 hours ago‘ಯಲಹಂಕಕ್ಕೆ ಬಂದರೆ ಚಿಕ್ಕಬಳ್ಳಾಪುರಕ್ಕೆ ಬರುತ್ತೇನೆ’; ಸಂಸದರ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು!
-
ದೇಶ6 hours agoಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ನೇರ ಸಂಪರ್ಕ; ಎಸ್.ಎಂ. ಕೃಷ್ಣ ಹೆಸರಿಡುವುದು ಹೆಮ್ಮೆಯ ಸಂಗತಿ: ಎಸ್.ಟಿ. ಸೋಮಶೇಖರ್
-
ದೇಶ6 hours agoಸಿಂಧೂ ನಾಗರಿಕತೆಯ ಅಸ್ತ್ರ ಪ್ರಯೋಗಿಸಿದ ಪಾಕಿಸ್ತಾನ! ಬ್ರಿಟನ್-ಆಸ್ಟ್ರೇಲಿಯಾದ ಬೆಂಬಲಕ್ಕೆ ಜಾಗತಿಕ ಚರ್ಚೆ
