Connect with us

ದೇಶ

‘MLC ಮಾಡಿಸುತ್ತೇನೆ’ ಎಂದು ₹1.50 ಕೋಟಿ ಪಡೆದು ವಂಚನೆ; ಬೆಂಗಳೂರಿನಲ್ಲಿ FIR ದಾಖಲು

Published

on

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ಸಮಾಜಸೇವಕಿಯೊಬ್ಬರಿಗೆ ₹1.50 ಕೋಟಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿ ಯರಿಸ್ವಾಮಿ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಾಯಕರ ಫೋಟೋ ತೋರಿಸಿ ವಿಶ್ವಾಸ ಗಳಿಸಿದ ಆರೋಪಿ

ಮಂಗಳೂರು ಮೂಲದ ಸಮಾಜಸೇವಕಿ ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಪರಿಚಯವಾದ ಯರಿಸ್ವಾಮಿ, ತಾನು ಕಾಂಗ್ರೆಸ್‌ನ ಪ್ರಮುಖ ನಾಯಕರ ಮಾಧ್ಯಮ ಸಲಹೆಗಾರ ಹಾಗೂ ಹೈಕಮಾಂಡ್‌ನ ಆಪ್ತ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಭಾವಿ ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

₹5 ಕೋಟಿ ಬೇಡಿಕೆ, ಬಳಿಕ ₹1.25 ಕೋಟಿಗೆ ಒಪ್ಪಂದ

ಸಮಾಜಸೇವೆ ಮಾಡುತ್ತಿರುವ ನಿಮಗೆ MLC ಸ್ಥಾನ ದೊರೆತರೆ ಇನ್ನಷ್ಟು ಜನಸೇವೆ ಮಾಡಲು ಸಾಧ್ಯ ಎಂದು ಹೇಳಿ ಆರಂಭದಲ್ಲಿ ₹5 ಕೋಟಿ ಬೇಡಿಕೆ ಇಟ್ಟಿದ್ದ ಆರೋಪಿಗಳು, ಬಳಿಕ ಮಾತುಕತೆಯ ಮೂಲಕ ₹1.25 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ವಿವಿಧ ಹಂತಗಳಲ್ಲಿ ಯರಿಸ್ವಾಮಿ, ಸಿದ್ದರಾಜು ಹಾಗೂ ಬಸವರಾಜು ಸೇರಿ ಒಟ್ಟು ₹1.50 ಕೋಟಿ ಹಣ ಪಡೆದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಹಣ ಹಸ್ತಾಂತರವಾಗಿರುವುದಾಗಿ ಆರೋಪಿಸಲಾಗಿದೆ.

ದೆಹಲಿ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪ

ಹಣ ಪಡೆದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವ ನೆಪದಲ್ಲಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಆರೋಪಿಯು, ಖಾಸಗಿ ಹೋಟೆಲ್‌ನಲ್ಲಿ ಅವರ ಕೊಠಡಿಯ ಬಾಗಿಲು ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆ ತಕ್ಷಣ ಬಾಗಿಲು ಲಾಕ್ ಮಾಡಿಕೊಂಡು ಅಪಾಯದಿಂದ ಪಾರಾಗಿದ್ದಾಗಿ ತಿಳಿಸಿದ್ದಾರೆ.

ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ?

ದಿನಗಳು ಕಳೆದರೂ MLC ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮಹಿಳೆ ಹಣ ವಾಪಸ್ ನೀಡುವಂತೆ ಕೇಳಿದಾಗ, ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಸಂತ್ರಸ್ತೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.

ದೇಶ

NEET ‘ಯುವಕರ ಹೋರಾಟ ನೋಡಿ ಭರವಸೆ ಮೂಡಿತು’ : ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಂದೇಶ

Published

on

ನವದೆಹಲಿ: NEET ದೇಶದ ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ Rahul Gandhi ಕರೆ ನೀಡಿದರು. ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ-2026’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ, ದ್ವೇಷ ಅಥವಾ ಹಿಂಸೆಯ ಅಭಿವ್ಯಕ್ತಿ ಅಲ್ಲ. ಅದು ಭಾರತದ ಯುವಜನತೆಯ ಭರವಸೆ ಮತ್ತು ಭವಿಷ್ಯದ ಕನಸುಗಳ ಪ್ರತಿಬಿಂಬ ಎಂದು ರಾಹುಲ್ ಗಾಂಧಿ ಹೇಳಿದರು.

“ದೇಶದ ಭವಿಷ್ಯವಾದ ಯುವಕರು ತಮ್ಮ ಆತಂಕ ಮತ್ತು ನೋವನ್ನು ವ್ಯಕ್ತಪಡಿಸಲು ಬೀದಿಗಿಳಿದಿರುವುದು ನನಗೆ ಸಂತೋಷ ಮತ್ತು ಹೊಸ ಭರವಸೆ ಮೂಡಿಸಿದೆ. ಅವರು ಹೋರಾಟ ಮಾಡಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸುತ್ತದೆ,” ಎಂದು ಅವರು ಹೇಳಿದರು.

ಮುಂದಿನ ಪೀಳಿಗೆಯ ಆಶೋತ್ತರಗಳನ್ನು ಪ್ರತಿಭಟನೆಗಳು ಪ್ರತಿಬಿಂಬಿಸುತ್ತವೆ ಎಂದು ಒತ್ತಿ ಹೇಳಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಧ್ವನಿಯನ್ನು ಕಡೆಗಣಿಸುವ ಬದಲು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಯುವಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.

Continue Reading

ದೇಶ

Madurai ಮೀನಾಕ್ಷಿ ದೇವಾಲಯದ ₹60 ಕೋಟಿ ಆಸ್ತಿ ಕಬಳಿಕೆ ಸಂಚು! 19 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

Published

on

ಚೆನ್ನೈ: Madurai ನ ಪ್ರಸಿದ್ಧ ಮೀನಾಕ್ಷಿ ಸುಂದರೇಶ್ವರರ್ ದೇವಾಲಯದ ಧರ್ಮದತ್ತಿ ಟ್ರಸ್ಟ್‌ಗೆ ಸೇರಿದ ಅಂದಾಜು ₹60 Crores ಮೌಲ್ಯದ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಜಿ ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್ ಸೇರಿದಂತೆ ಒಟ್ಟು 19 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮಧುರೈ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಧುರೈ ಅಲಗರ್ ಕೋವಿಲ್ ರಸ್ತೆಯಲ್ಲಿರುವ ‘ಅಶೋಕ್ ವಿಲಾಸ್’ ಬಂಗ್ಲೆ ಹಾಗೂ 1.79 ಎಕರೆ ಜಾಗ ಮೀನಾಕ್ಷಿ ದೇವಾಲಯ ಮತ್ತು ಅಲಗರ್ ಕೋವಿಲ್ ಸೇವೆಗಾಗಿ ಸ್ಥಾಪಿಸಲಾದ ಟ್ರಸ್ಟ್‌ಗೆ ಸೇರಿದೆ. 1930ರಲ್ಲಿ ನೋಂದಾಯಿಸಲಾದ ಉಯಿಲಿನ ಪ್ರಕಾರ ಈ ಆಸ್ತಿಯನ್ನು ಬಾಡಿಗೆಗೆ ಮಾತ್ರ ನೀಡಬಹುದಾಗಿದ್ದು, ಮಾರಾಟ, ಅಡಮಾನ ಅಥವಾ ಮಾಲೀಕತ್ವ ವರ್ಗಾವಣೆ ಮಾಡುವಂತಿಲ್ಲ.

ಆದರೆ, 2016ರಲ್ಲಿ ಮಧುರೈ ಉತ್ತರ ಭಾಗದ ಅಂದಿನ ತಹಸೀಲ್ದಾರ್ ಅನ್ಬಳಗನ್ ಅವರು ಸರ್ಕಾರಿ ದಾಖಲೆಗಳಿಂದ ದೇವಾಲಯದ ಹೆಸರನ್ನು ತೆಗೆದು ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಿದ ಆರೋಪ ಕೇಳಿಬಂದಿದೆ. ಬಳಿಕ ಈ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಆ ಆದೇಶವನ್ನು ರದ್ದುಗೊಳಿಸಿ ಆಸ್ತಿಯನ್ನು ಮರುದೇವಾಲಯದ ಹೆಸರಿಗೆ ದಾಖಲಿಸಲು ಆದೇಶಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಹೈಕೋರ್ಟ್ ಪೀಠವೂ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಆದರೂ, 2021ರಲ್ಲಿ ಕೆಲ ಸಬ್ ರಿಜಿಸ್ಟ್ರಾರ್‌ಗಳ ಸಹಕಾರದಿಂದ ನಕಲಿ ಜನರಲ್ ಪವರ್ ಆಫ್ ಅಟಾರ್ನಿ (GPA) ಹಾಗೂ ಅಡಮಾನ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ದೇವಾಲಯದ ಜಂಟಿ ಆಯುಕ್ತ ಚೆಲ್ಲಾದುರೈ ಹಾಗೂ ಭ್ರಷ್ಟಾಚಾರ ವಿರೋಧಿ ಸಂಘಟನೆ ‘ಅರಪ್ಪೋರ್ ಇಯಕ್ಕಮ್’ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ವಂಚನೆ, ದಾಖಲೆಗಳ ನಕಲಿ ಸೃಷ್ಟಿ ಹಾಗೂ ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Continue Reading

ಬೆಂಗಳೂರು

NICE ಗೆ ಹೈಕೋರ್ಟ್‌ನಿಂದ ಭಾರಿ ಶಾಕ್! ರೈತರ ಪರ ಐತಿಹಾಸಿಕ ತೀರ್ಪು

Published

on

ಬೆಂಗಳೂರು: ನೈಸ್ (NICE) ರಸ್ತೆ ಯೋಜನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಮೂಲಕ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ Karnataka High Court ಮಹತ್ವದ ತೀರ್ಪು ನೀಡಿದ್ದು, ನೈಸ್ ಸಂಸ್ಥೆಗೆ ಭಾರಿ ಹಿನ್ನಡೆಯಾಗಿದೆ. ಭೂಸ್ವಾಧೀನ ರದ್ದತಿ ಆದೇಶವನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದ್ದು, ಪ್ರಕರಣದಲ್ಲಿದ್ದ ನೂರಾರು ರೈತರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ನೈಸ್ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಸಹಜ ಕೆರೆಗಳು ಹಾಗೂ ರೈತರ ಫಲವತ್ತಾದ ಕೃಷಿಭೂಮಿಯನ್ನು ಅತಿಕ್ರಮಿಸಿರುವ ಬಗ್ಗೆ ಗಂಭೀರ ಆರೋಪಗಳಿರುವುದನ್ನು ನ್ಯಾಯಪೀಠ ಉಲ್ಲೇಖಿಸಿದೆ.

ಪ್ರಕರಣದಲ್ಲಿ ರೈತರ ಪರವಾಗಿ ಹಿರಿಯ ವಕೀಲ ಹೆಚ್.ಎನ್. ಶಶಿಧರ್ ವಾದ ಮಂಡಿಸಿದ್ದರು. ರಸ್ತೆ ಬಳಕೆದಾರರಿಂದ ಪ್ರತಿದಿನ ಕೋಟ್ಯಂತರ ರೂಪಾಯಿ ಟೋಲ್ ಸಂಗ್ರಹಿಸುತ್ತಿದ್ದರೂ, ಮೂಲ ಭೂಮಾಲೀಕರಾದ ರೈತರಿಗೆ ಸಮರ್ಪಕ ಪರಿಹಾರ ನೀಡದೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂಬ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಇದೇ ವೇಳೆ, ನೈಸ್ ಸಂಸ್ಥೆಯ ವಿರುದ್ಧದ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ಸಮರ್ಪಕ ಹಾಗೂ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನವನ್ನೂ ಹೈಕೋರ್ಟ್ ವ್ಯಕ್ತಪಡಿಸಿದೆ. ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ, ಆರ್ಥಿಕ ವ್ಯವಹಾರಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳ ಕುರಿತು ಸ್ವತಂತ್ರ ಉನ್ನತ ಮಟ್ಟದ ತನಿಖೆ ಮತ್ತು ಫೊರೆನ್ಸಿಕ್ ಆಡಿಟ್ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ನ ಈ ತೀರ್ಪು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ರೈತರಿಗೆ ಹೊಸ ಭರವಸೆ ನೀಡಿದ್ದು, ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ವಿವಾದದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

Continue Reading

Trending