Connect with us

ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಮೂಲಕ ಎಂಟ್ರಿ-ಎಕ್ಸಿಟ್‌ ಬಂದ್‌ ಮಾಡಲು ಮುಂದಾದ NHAI

Published

on

ಬೆಂಗಳೂರು-ಮೈಸೂರು ಹೆದ್ದಾರಿ

ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದ್ದ ಆಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಆಗಿವೆ.ಬೆಂಗಳೂರು-ಮೈಸೂರು ಹೆದ್ದಾರಿ ಆದಾಗಿನಿಂದ ವಾಹನ ಸವಾರರು ಟೋಲ್‌ ಸಿಬ್ಬಂದಿಯ ನಡುವೆ ಒಂದಲ್ಲ ಒಂದು ಗಲಾಟೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಈ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಮಾಡಲು ಮುಂದಾಗಿದ್ದು, ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಕೆಂಡಕಾರುತ್ತಿದ್ದಾರೆ.ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಸೇರಿದಂತೆ ಇತರ ವಾಹನಗಳ ಪ್ರಯಾಣಿಕರು ಟೋಲ್‌ ವಂಚಿಸಿ ಹೋಗುತ್ತಾರೆ ಎನ್ನುವ ಕಾರಣದುಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್‌ ಮಾಡಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಂಡ್ಯದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ಬರಲು ಅನುಕೂಲ ಆಗುವಂತೆ ಇಂಡುವಾಳು ಗ್ರಾಮದ ಬಳಿ ಆಗಮನ, ನಿರ್ಗಮನ ಮಾರ್ಗಗಳನ್ನು ನೀಡಲಾಗಿದೆ. ಇನ್ನು ಶ್ರೀರಂಗಪಟ್ಟಣ, ಮೈಸೂರಿಗೆ ಹೋಗುವವರು ಹೆದ್ದಾರಿ ಪ್ರವೇಶಿಸಿದರೆ ಗಣಂಗೂರು ಬಳಿಯಲ್ಲಿನ ಟೋಲ್‌ ಪ್ಲಾಜಾದಲ್ಲಿ ಟೋಲ್‌ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಸರ್ವಿಸ್ ರಸ್ತೆಯನ್ನೇ ಬಳಸಬೇಕಿದೆ.ಇಲ್ಲಿವರೆಗೆ ಮಂಡ್ಯದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿಇಂಡುವಾಳು, ಕಾಳೇನಹಳ್ಳಿ, ತೂಬಿನಕೆರೆ, ಗರುಡನ ಉಕ್ಕಡ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಆಗಮನ, ನಿರ್ಮನ ನೀಡಲಾಗಿದೆ. ಅಲ್ಲದೆ ಮೈಸೂರಿನಿಂದ ಮಂಡ್ಯಕ್ಕೆ ಬರುವ ಮಾರ್ಗದಲ್ಲಿ ನಾಗನಹಳ್ಳಿ ಗೇಟ್‌, ಗರುಡನ ಉಕ್ಕಡ, ಬ್ಯಾಡರಹಳ್ಳಿ ಗೇಟ್‌, ತೂಬಿನಕೆರೆ, ಕಾಳೇನಹಳ್ಳಿ, ಸುಂಡಹಳ್ಳಿ, ಇಂಡುವಾಳು ಬಳಿ ಈ ವ್ಯವಸ್ಥೆಯನ್ನು ಮಾಡಲಾಗಿತ್ತು.ಆದರೆ ಈಗ ಆಗಮನ ಮತ್ತು ನಿರ್ಗಮನ ಮಾರ್ಗಗಳನ್ನು ಬಂದ್‌ ಮಾಡಲಾಗಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ, ಮೈಸೂರಿಗೆ ಕಾರು ಮತ್ತು ಇತರ ವಾಹನಗಳಲ್ಲಿ ಸಂಚಾರ ಮಾಡುವವರು ಟೋಲ್‌ ಪಾವತಿಸಿಯೇ ಹೆದ್ದಾರಿಯಲ್ಲಿ ಹೋಗುವಂತೆ ಮಾಡಿದ್ದಾರೆ. ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿದರೆ ಟೋಲ್‌ ಪಾವತಿಸುವುದು ಅನಿವಾರ್ಯ ಆಗಿದೆ.ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಹೆದ್ದಾರಿಗೆ ಕಲ್ಪಿಸಿದ ಆಗಮನ, ನಿರ್ಗಮನ ದ್ವಾರಗಳನ್ನು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಿದೆ. ತೂಬಿನಕೆರೆ, ಕಾಳೇನಹಳ್ಳಿ, ಇಂಡುವಾಳು ಸೇರಿದಂತೆ ಹಲವೆಡೆ ಚರಂಡಿ ಕಾಮಗಾರಿಗಳು ಪೂರ್ಣವಾಗಿಲ್ಲ. ಶ್ರೀರಂಗಪಟ್ಟಣದ ಬೈಪಾಸ್‌ ರಸ್ತೆಯಲ್ಲೂ ಚರಂಡಿ ಕಾಮಗಾರಿಗಳು ಅವೈಜ್ಞಾನಿಕ ಆಗಿವೆ. ಸರ್ವೀಸ್‌ ರಸ್ತೆಯಲ್ಲಿ ಪ್ರತಿ ಗ್ರಾಮಗಳ ಬಳಿಯೂ ಅಂಡರ್‌ಪಾಸ್‌ ಸಮೀಪದಲ್ಲಿಅವೈಜ್ಞಾನಿಕವಾಗಿ ಎತ್ತರವಾದ ಹಂಫ್ಸ್‌ಗಳನ್ನು ಹಾಕಲಾಗಿದೆ. ಇವು ಅಪಘಾತಕ್ಕೆ ಕಾರಣವಾಗಿತ್ತು. ಆದರೂ ಆಗಮನ, ನಿರ್ಗಮನ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಸ್ಥಳಗಳಲ್ಲಿ ಹೆದ್ದಾರಿಯಲ್ಲೇ ಸಂಚರಿಸಲು ಅನುಕೂಲ ಆಗುವಂತೆ ಎಂಟ್ರಿ, ಎಕ್ಸಿಟ್‌ ಕೊಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಟೋಲ್‌ ತಪ್ಪಿಸಿಕೊಳ್ಳುವ ಅಲೋಚನೆಯಿಂದ ಏಕಮುಖ ಸಂಚಾರ ಮಾರ್ಗದಲ್ಲಿ ವಾಹನಗಳು ಸಾಗುವುದು ಅತ್ಯಂತ ಅಪಾಯಕಾರಿಯಾಗಿದೆ.

Continue Reading

ರಾಜ್ಯ

Old Pension Scheme ಮರುಜಾರಿ: ಸರ್ಕಾರಿ ನೌಕರರಿಗೆ ಶೀಘ್ರವೇ ಸಿಗಲಿದೆಯೇ ಸಿಹಿಸುದ್ದಿ?

Published

on

ಬೆಂಗಳೂರು: ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಪ್ರಮುಖ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆ ಮರುಜಾರಿ (Old Pension Scheme Karnataka) ಕುರಿತು ಸರ್ಕಾರದ ಮಟ್ಟದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ರಾಷ್ಟ್ರೀಯ ಪಿಂಚಣಿ ಯೋಜನೆ ಬದಲಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಸರ್ಕಾರಿ ನೌಕರರ ವಲಯದಲ್ಲಿ ಕೇಳಿಬರುತ್ತಿದೆ. ಇದೀಗ ಈ ವಿಚಾರದಲ್ಲಿ ಸರ್ಕಾರದ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಹಳೆಯ ಪಿಂಚಣಿ ಯೋಜನೆಗೆ ಹೆಚ್ಚಿನ ಮಹತ್ವವಿದೆ. ಇದೇ ಕಾರಣಕ್ಕೆ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೆ ತರಬೇಕು ಎಂಬುದು ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಈ ಬೇಡಿಕೆಯ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಿತ್ತು.

ಅಂಜುಮ್ ಪರ್ವೇಜ್ ಸಮಿತಿ ವರದಿಗೆ ನಿರೀಕ್ಷೆ

ಹಳೆಯ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಲಾಗಿದೆ. ಸಮಿತಿಯು ಒಪಿಎಸ್ ಜಾರಿಗೆ ಸಂಬಂಧಿಸಿದ ವಿವಿಧ ಅಂಶಗಳು, ಆರ್ಥಿಕ ಪರಿಣಾಮಗಳು ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಪರಿಶೀಲಿಸುತ್ತಿದೆ.

ಸಮಿತಿಯ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಮುಂದಿನ ಹಂತದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವರದಿ ಸರ್ಕಾರದ ಕೈ ಸೇರಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಸರ್ಕಾರದ ಪ್ರಮುಖ ನಾಯಕರು ಭರವಸೆ ನೀಡಿದ್ದಾರೆ.

ಸಮಿತಿಯ ಶಿಫಾರಸುಗಳು ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಸರ್ಕಾರಿ ನೌಕರರು ಇದೀಗ ಸಮಿತಿಯ ವರದಿಯತ್ತ ಗಮನಹರಿಸಿದ್ದಾರೆ.

ಈಗಾಗಲೇ 13 ಸಾವಿರ ನೌಕರರಿಗೆ OPS

ಈ ನಡುವೆ, 2006ಕ್ಕಿಂತ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಲಾದ ಸುಮಾರು 13,000 ಸರ್ಕಾರಿ ನೌಕರರನ್ನು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಲಾಗಿದೆ ಎಂಬ ಮಾಹಿತಿ ನೌಕರರ ವಲಯದಲ್ಲಿ ಮಹತ್ವ ಪಡೆದಿದೆ.

ಉಳಿದ ನೌಕರರಿಗೂ ಹಳೆಯ ಪಿಂಚಣಿ ಸೌಲಭ್ಯ ವಿಸ್ತರಿಸಬೇಕು ಎಂಬ ಬೇಡಿಕೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಿರ್ಧಾರವು ಸಾವಿರಾರು ಸರ್ಕಾರಿ ನೌಕರರ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಒಪಿಎಸ್ ಜಾರಿಯಾದರೆ ನಿವೃತ್ತಿಯ ನಂತರ ನೌಕರರಿಗೆ ನಿರ್ದಿಷ್ಟ ಪಿಂಚಣಿ ಸೌಲಭ್ಯ ದೊರೆಯುವ ನಿರೀಕ್ಷೆ ಇದೆ. ಇದರಿಂದ ನಿವೃತ್ತ ಜೀವನದಲ್ಲಿ ಆರ್ಥಿಕ ಭದ್ರತೆ ಹೆಚ್ಚಾಗಬಹುದು ಎಂಬುದು ನೌಕರರ ಅಭಿಪ್ರಾಯವಾಗಿದೆ.

ಸಚಿವ ಸಂಪುಟದ ನಿರ್ಧಾರಕ್ಕೆ ಕಾದಿರುವ ನೌಕರರು

ಅಂಜುಮ್ ಪರ್ವೇಜ್ ಸಮಿತಿಯ ವರದಿ ಸಲ್ಲಿಕೆಯಾದ ಬಳಿಕ ಅದರಲ್ಲಿರುವ ಶಿಫಾರಸುಗಳನ್ನು ಸರ್ಕಾರ ಪರಿಶೀಲಿಸಲಿದೆ. ನಂತರ ಆರ್ಥಿಕ ಮತ್ತು ಆಡಳಿತಾತ್ಮಕ ಪರಿಣಾಮಗಳನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಒಪಿಎಸ್ ಮರುಜಾರಿ ಮಾಡಿದರೆ ರಾಜ್ಯದ ಬೊಕ್ಕಸದ ಮೇಲೆ ಬೀರುವ ಆರ್ಥಿಕ ಹೊರೆ ಸೇರಿದಂತೆ ಹಲವು ಅಂಶಗಳನ್ನು ಸರ್ಕಾರ ಪರಿಶೀಲಿಸಬೇಕಾಗುತ್ತದೆ. ಮತ್ತೊಂದೆಡೆ, ಸರ್ಕಾರಿ ನೌಕರರ ಹಿತರಕ್ಷಣೆ ಹಾಗೂ ನಿವೃತ್ತಿಯ ನಂತರದ ಸಾಮಾಜಿಕ ಭದ್ರತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ಹೀಗಾಗಿ Old Pension Scheme Karnataka ವಿಚಾರದಲ್ಲಿ ಸಮಿತಿಯ ವರದಿ ಮತ್ತು ಅದರ ಬಳಿಕ ನಡೆಯಲಿರುವ ಸಚಿವ ಸಂಪುಟ ಚರ್ಚೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸರ್ಕಾರ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ರಾಜ್ಯದ ಸರ್ಕಾರಿ ನೌಕರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸದ್ಯಕ್ಕೆ ಒಪಿಎಸ್ ಮರುಜಾರಿ ಕುರಿತು ಅಂತಿಮ ನಿರ್ಧಾರ ಹೊರಬಂದಿಲ್ಲ. ಸಮಿತಿಯ ವರದಿ ಸಲ್ಲಿಕೆಯಾದ ನಂತರ ಸರ್ಕಾರದ ಅಧಿಕೃತ ನಿಲುವು ಸ್ಪಷ್ಟವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಸರ್ಕಾರಿ ನೌಕರರು ಸರ್ಕಾರದ ಮುಂದಿನ ಘೋಷಣೆಯತ್ತ ಗಮನಹರಿಸಬೇಕಾಗಿದೆ.

Continue Reading

ದೇಶ

ಕಾರ್ಯಕರ್ತನ ಮದುವೆಯಲ್ಲಿ ಮನೆಯ ಮಗಳಾದ ಕೆ ಕವಿತಾ; ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿಯಾದ ಕ್ಷಣ

Published

on

ತೆಲಂಗಾಣ: ತಮ್ಮ ಪಕ್ಷದ ಕಾರ್ಯಕರ್ತನೊಬ್ಬರ ವಿಶೇಷ ಆಸೆಯನ್ನು ಈಡೇರಿಸುವ ಮೂಲಕ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರು ಎಲ್ಲರ ಗಮನ ಸೆಳೆದಿದ್ದಾರೆ. ತೆಲಂಗಾಣ ರಕ್ಷಣಾ ಸೇನೆಯ ಕಾರ್ಯಕರ್ತ ಬಾಲಪ್ರಸಾದ್ ಅವರ ವಿವಾಹ ಸಮಾರಂಭದಲ್ಲಿ ಸ್ವಂತ ಮನೆಯ ಅಕ್ಕನ ಸ್ಥಾನದಲ್ಲಿ ನಿಂತು, ಕುಟುಂಬದ ಸಂಪ್ರದಾಯದಂತೆ ಮದುವೆ ವಿಧಿವಿಧಾನಗಳಲ್ಲಿ ಭಾಗವಹಿಸುವ ಮೂಲಕ ಕವಿತಾ ಅವರು ಕಾರ್ಯಕರ್ತನ ಬಹುದಿನದ ಆಸೆಯನ್ನು ಈಡೇರಿಸಿದ್ದಾರೆ. ಈ ವಿಶಿಷ್ಟ ವಿವಾಹ ಸಮಾರಂಭದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾರ್ಯಕರ್ತನ ವಿಶೇಷ ಕೋರಿಕೆಗೆ ಸ್ಪಂದಿಸಿದ ಕವಿತಾ

ಯಾದಾದ್ರಿ ಭುವನಗಿರಿ ಜಿಲ್ಲೆಯ ಗೂಡೂರು ನಿವಾಸಿಯಾದ ಭಾಷಬೋಯಿನ ಬಾಲಪ್ರಸಾದ್ ಅವರು ತೆಲಂಗಾಣ ರಕ್ಷಣಾ ಸೇನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೆಲಂಗಾಣ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲೂ ಅವರು ಭಾಗವಹಿಸಿದ್ದಾರೆ.

ಬಾಲಪ್ರಸಾದ್ ಅವರಿಗೆ ಸೀತಾಫಲ್ ಮಂಡಿ ನಿವಾಸಿ ಶಿವಾನಿ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಬಾಲಪ್ರಸಾದ್ ಅವರಿಗೆ ಸ್ವಂತ ಅಕ್ಕ-ತಂಗಿಯರಿಲ್ಲ. ಹೀಗಾಗಿ ತಮ್ಮ ಮದುವೆಯಲ್ಲಿ ಮನೆಯ ಹೆಣ್ಣುಮಗಳಾಗಿ ನಿಂತು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಬೇಕು ಎಂಬ ವಿಶೇಷ ಆಸೆಯನ್ನು ಅವರು ಕೆ ಕವಿತಾ ಅವರ ಮುಂದೆ ವ್ಯಕ್ತಪಡಿಸಿದ್ದರು.

ಕಾರ್ಯಕರ್ತನ ಈ ಮನವಿಗೆ ಸ್ಪಂದಿಸಿದ ಕವಿತಾ ಅವರು, ಮದುವೆ ಸಮಾರಂಭದಲ್ಲಿ ಕುಟುಂಬದ ಹಿರಿಯ ಸದಸ್ಯೆಯಂತೆ ಭಾಗವಹಿಸಿ ಅವರ ಆಸೆಯನ್ನು ಈಡೇರಿಸಿದ್ದಾರೆ.

ಮನೆಯ ಮಗಳಂತೆ ಮದುವೆ ಸಂಪ್ರದಾಯ ಪಾಲನೆ

ಮುದಿರಾಜ್ ಸಮುದಾಯದ ಸಾಂಪ್ರದಾಯಿಕ ಆಚರಣೆಯಂತೆ ವರನು ವಧುವಿಗೆ ಮಂಗಳಸೂತ್ರ ಧಾರಣೆ ಮಾಡುವ ಮೊದಲು ಮನೆಯ ಹೆಣ್ಣುಮಕ್ಕಳು ಕೆಲವು ಪ್ರಮುಖ ವಿಧಿವಿಧಾನಗಳನ್ನು ನೆರವೇರಿಸುವ ಪದ್ಧತಿ ಇದೆ.

ಈ ಸಂಪ್ರದಾಯಕ್ಕೆ ಗೌರವ ನೀಡಿದ ಕೆ ಕವಿತಾ ಅವರು ಮದುವೆಯ ಗೌರಿ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ವಧು ಶಿವಾನಿಯ ಕತ್ತಿಗೆ ಹರಿಶಿನದ ದಾರದಿಂದ ಮೂರು ಗಂಟುಗಳನ್ನು ಕಟ್ಟುವ ಸಾಂಪ್ರದಾಯಿಕ ವಿಧಿಯನ್ನು ನೆರವೇರಿಸಿದರು.

ಅಷ್ಟೇ ಅಲ್ಲದೆ ವಧುವಿನ ಉಂಗುರದ ಬೆರಳಿಗೆ ಸಂಪ್ರದಾಯದಂತೆ ಉಂಗುರ ತೊಡಿಸಿದರು. ನಂತರ ಒಡಿಬಿಯ್ಯಂ ಶಾಸ್ತ್ರದಲ್ಲೂ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

ಈ ವೇಳೆ ಕವಿತಾ ಅವರು ಬಾಲಪ್ರಸಾದ್ ಅವರ ಕುಟುಂಬದ ಸದಸ್ಯೆಯಂತೆ ಆತ್ಮೀಯವಾಗಿ ನಡೆದುಕೊಂಡಿದ್ದು, ಮದುವೆ ಸಮಾರಂಭದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.

ಬಳಿಕ ಶಿವಾನಿಗೆ ಮಂಗಳಸೂತ್ರ ಧಾರಣೆ

ಕವಿತಾ ಅವರು ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ವರ ಬಾಲಪ್ರಸಾದ್ ಅವರು ವಧು ಶಿವಾನಿಗೆ ಮಂಗಳಸೂತ್ರ ಧಾರಣೆ ಮಾಡಿದರು. ಕುಟುಂಬಸ್ಥರು, ಬಂಧುಗಳು ಹಾಗೂ ತೆಲಂಗಾಣ ರಕ್ಷಣಾ ಸೇನೆಯ ಪ್ರಮುಖ ನಾಯಕರು ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.

ಬಾಲಪ್ರಸಾದ್ ಅವರ ತಂದೆ-ತಾಯಿ ಸ್ವರೂಪ ಮತ್ತು ಬಾಲಕೃಷ್ಣ, ಸಹೋದರ ನಾಗರಾಜು ಸೇರಿದಂತೆ ಕುಟುಂಬದ ಸದಸ್ಯರು ಮದುವೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕರ್ತನ ಕುಟುಂಬದ ವಿಶೇಷ ಕೋರಿಕೆಯನ್ನು ಗೌರವಿಸಿ, ಅವರ ಸಮುದಾಯದ ಸಂಪ್ರದಾಯದಂತೆ ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸಿದ ಕೆ ಕವಿತಾ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಮದುವೆ ಸಮಾರಂಭದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕವಿತಾ ಅವರು ವಧುವಿನೊಂದಿಗೆ ಸಂಪ್ರದಾಯದ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.

ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ನಾಯಕರೊಬ್ಬರು ತಮ್ಮ ಪಕ್ಷದ ಕಾರ್ಯಕರ್ತನ ವೈಯಕ್ತಿಕ ಜೀವನದ ಪ್ರಮುಖ ಕ್ಷಣದಲ್ಲಿ ಕುಟುಂಬದ ಸದಸ್ಯೆಯಂತೆ ಭಾಗವಹಿಸಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ.

ಕಾರ್ಯಕರ್ತನ ಆಸೆಯನ್ನು ಗೌರವಿಸಿ, ಅವರ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದುಕೊಂಡಿರುವುದು ಈ ಮದುವೆಯ ಪ್ರಮುಖ ವಿಶೇಷತೆಯಾಗಿದೆ. ಹೀಗಾಗಿ ಬಾಲಪ್ರಸಾದ್ ಮತ್ತು ಶಿವಾನಿ ಅವರ ವಿವಾಹ ಸಮಾರಂಭದ ಜೊತೆಗೆ ಕೆ ಕವಿತಾ ಅವರ ಈ ವಿಶೇಷ ನಡೆ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

Continue Reading

ರಾಜಕೀಯ

B Nagendra ಗೆ Janardhana Reddy ಸವಾಲ್; 10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ ಎಂದ ಬಿಜೆಪಿ ಶಾಸಕ

Published

on

ಬಳ್ಳಾರಿ: ಸಚಿವ ಸ್ಥಾನಕ್ಕೆ B Nagendra ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ. ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ Janardhana Reddy, ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಾಲ್ಮೀಕಿ ನಿಗಮದ ಹಣದ ಅವ್ಯವಹಾರ ಪ್ರಕರಣ, ಅವರ ರಾಜಕೀಯ ಹಿನ್ನೆಲೆ ಹಾಗೂ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ನಾಗೇಂದ್ರ ಅವರು ಕಣ್ಣೀರು ಹಾಕುತ್ತಿರುವುದು ನಾಟಕ ಎಂದು ಟೀಕಿಸಿದರು. ಅಲ್ಲದೆ, ರಾಮಾಯಣದ ಶಂಭುಕನ ಕಥೆಯನ್ನು ರಾಜಕೀಯವಾಗಿ ಬಳಸಿಕೊಂಡು ಜನರನ್ನು ದಾರಿ ತಪ್ಪಿಸಬಾರದು ಎಂದು ಕಿಡಿಕಾರಿದರು.

‘ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ’

ನಾಗೇಂದ್ರ ಅವರು ತಮ್ಮ ರಾಜಕೀಯ ಹಿನ್ನೆಲೆ ಹಾಗೂ ಬಿಜೆಪಿ ಜೊತೆಗಿನ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ಜನಾರ್ದನ ರೆಡ್ಡಿ, ರಾಜಕೀಯಕ್ಕೆ ರಾಮಾಯಣದ ವಿಚಾರವನ್ನು ತರುವ ಮೊದಲು ಅದರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಶಂಭುಕನ ವಿಚಾರವಾಗಿ ಮಾತನಾಡುವ ನೈತಿಕತೆ ನಾಗೇಂದ್ರ ಅವರಿಗೆ ಇಲ್ಲ ಎಂದು ಟೀಕಿಸಿದ ಅವರು, ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿ ಹಲವು ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಅವರು ಹಿಂದೆ ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ್ದರು ಎಂಬುದನ್ನೂ ಜನಾರ್ದನ ರೆಡ್ಡಿ ನೆನಪಿಸಿದರು.

ವಾಲ್ಮೀಕಿ ನಿಗಮದ ಪ್ರಕರಣ ಪ್ರಸ್ತಾಪಿಸಿ ವಾಗ್ದಾಳಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರ ಪ್ರಕರಣವನ್ನು ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರದ ಕುರಿತು ಪ್ರಶ್ನೆಗಳನ್ನು ಎತ್ತಿದರು.

ನಿಗಮದ ಹಣವನ್ನು ಚುನಾವಣಾ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ಆರೋಪಗಳನ್ನು ಪುನರುಚ್ಚರಿಸಿದ ಅವರು, ತೆಲಂಗಾಣ, ಗೋವಾ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಹಣ ಬಳಕೆಯಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಕೆಲ ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವ ಬಗ್ಗೆ ನಾಗೇಂದ್ರ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ ಜನಾರ್ದನ ರೆಡ್ಡಿ, ಪ್ರಕರಣದಲ್ಲಿ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

‘10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ’

ರಾಜಕೀಯ ಸೋಲು-ಗೆಲುವಿನ ಕುರಿತು ನಾಗೇಂದ್ರ ನೀಡಿರುವ ಹೇಳಿಕೆಗಳಿಗೂ ಜನಾರ್ದನ ರೆಡ್ಡಿ ತಿರುಗೇಟು ನೀಡಿದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಸಂಗತಿ ಎಂದು ಹೇಳಿದ ಅವರು, ತಮ್ಮನ್ನು ಅಥವಾ ಇತರರನ್ನು ‘ರಿಜೆಕ್ಟೆಡ್ ಪೀಸ್’ ಎಂದು ಕರೆಯುವ ಮೊದಲು ರಾಜಕೀಯ ವಾಸ್ತವಾಂಶ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ನಾಗೇಂದ್ರ ಅವರಿಗೆ ನೇರ ಸವಾಲು ಹಾಕಿದ ಜನಾರ್ದನ ರೆಡ್ಡಿ, ಧೈರ್ಯವಿದ್ದರೆ ತುಕಾರಾಂ ಸೇರಿದಂತೆ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಬನ್ನಿ ಎಂದು ಹೇಳಿದರು.

ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲ್ಲದಿದ್ದರೆ ತಾನು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಸವಾಲು ಹಾಕಿದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹಣ ವರ್ಗಾವಣೆ ಕುರಿತು ಸ್ಪಷ್ಟನೆಗೆ ಆಗ್ರಹ

ವಾಲ್ಮೀಕಿ ನಿಗಮದ ಖಾತೆಯಿಂದ ಕೆಲವು ವ್ಯಕ್ತಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಈ ಹಣ ವರ್ಗಾವಣೆಯ ಉದ್ದೇಶವೇನು ಹಾಗೂ ಸಂಬಂಧಪಟ್ಟ ವ್ಯಕ್ತಿಗಳಿಗೂ ನಾಗೇಂದ್ರ ಅವರಿಗೂ ಇರುವ ಸಂಪರ್ಕವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಹಲವು ಮಂದಿ ಆರೋಪಿಗಳಾಗಿದ್ದಾರೆ ಎಂದು ಹೇಳಿದ ಅವರು, ನಿಗಮದ ಹಣದ ದುರ್ಬಳಕೆಯ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆ ರಾಜಕೀಯಕ್ಕೆ ಹೊಸ ತಿರುವು

ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರ ಈ ವಾಗ್ದಾಳಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

ನಾಗೇಂದ್ರ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಿದ್ದು, ಪ್ರಕರಣದ ತನಿಖೆಯ ನಂತರ ಸತ್ಯ ಹೊರಬರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರು ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜಕೀಯ ಒತ್ತಡವನ್ನು ಮುಂದುವರಿಸಿದ್ದಾರೆ.

ಹೀಗಾಗಿ ನಾಗೇಂದ್ರ ರಾಜೀನಾಮೆ ಬೆಳವಣಿಗೆಯ ನಡುವೆಯೇ ಜನಾರ್ದನ ರೆಡ್ಡಿ ಮಾಡಿರುವ ಆರೋಪಗಳು ಹಾಗೂ ಹಾಕಿರುವ ಚುನಾವಣಾ ಸವಾಲು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

Continue Reading

Trending