ಬೆಂಗಳೂರು
CM D K Shiv Kumar 100 ದಿನಗಳ ಸಂವಾದ: ‘ಗಟ್ಟಿ ತೀರ್ಮಾನ ಮಾಡದಿದ್ದರೆ ನನ್ನನ್ನು ಕಾಲಿ ಡಬ್ಬಿ ಅಂತಾರೆ’!
ಬೆಂಗಳೂರು: CM D K Shiv Kumar ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುದ್ದಿಮಾಧ್ಯಮಗಳ ಸಂಪಾದಕರೊಂದಿಗೆ ಸಂವಾದ ನಡೆಸಿ, ತಮ್ಮ ಸರ್ಕಾರದ ನೂರು ದಿನಗಳ ಹೆಜ್ಜೆಗುರುತು, ಮುಂದಿನ ಯೋಜನೆಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆರೋಗ್ಯ ಸಹಕರಿಸಿದರೆ ಇನ್ನೂ 15 ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಅರಿತೇ ಯೋಜನೆಗಳ ಘೋಷಣೆ
ಕಳೆದ ನೂರು ದಿನಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಅನುಷ್ಠಾನ ಮಾಡಲು ಸಾಧ್ಯವಿರುವ ಯೋಜನೆಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನುಡಿದಂತೆ ನಡೆಯಬೇಕು ಎಂಬ ಅರಿವು ತಮ್ಮಲ್ಲಿದೆ. ಇಲ್ಲವಾದರೆ ಎಲ್ಲರ ಎದುರು ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗಾಗಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಸಿ, ಸಿಸಿ ವಿಚಾರದಲ್ಲಿಯೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ಕಟ್ಟಡಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ವಾಣಿಜ್ಯ ಕಟ್ಟಡಗಳ ವಿಚಾರವನ್ನು ಪರಿಗಣಿಸಿದರೆ ಬೇರೆ ರೀತಿಯ ನಿರ್ಧಾರವಾಗುತ್ತದೆ. ಭೂ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೊರರಾಜ್ಯದವರಿಗೆ ಉಚಿತ ಸೌಲಭ್ಯ ಯಾಕೆ?
ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್ ನೀಡಲು ತೀರ್ಮಾನಿಸಲಾಗಿದ್ದು, ಕಾರ್ಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 14 ಲಕ್ಷದಷ್ಟು ಹೊರರಾಜ್ಯದವರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಹಾಗಿದ್ದಾಗ ಹೊರರಾಜ್ಯದವರಿಗೆ ಏಕೆ ಉಚಿತ ಅವಕಾಶ ನೀಡಬೇಕು ಎಂಬ ಪ್ರಶ್ನೆ ಇದೆ. ಇದೇ ರೀತಿ ಹೊರರಾಜ್ಯದವರಿಗೆ ಉಚಿತ ವಿದ್ಯುತ್ ನೀಡುವ ವಿಚಾರದಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಟ್ಟಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲವಾದರೆ ತಮ್ಮನ್ನು ‘ಕಾಲಿ ಡಬ್ಬ’ ಎಂದು ಕರೆಯುತ್ತಾರೆ ಎಂಬ ಅರಿವು ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಟನಲ್ ರಸ್ತೆ ಯಾರಿಗಾಗಿ?
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಉದ್ದೇಶಿಸಿರುವ ಟನಲ್ ರಸ್ತೆ ಯೋಜನೆಗೆ ಹಲವು ಅಡೆತಡೆಗಳಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪಾರ್ಕ್‌ನ ಒಂದು ಮೂಲೆಯ ಜಾಗವನ್ನು ಬಳಸಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಸಣ್ಣ ಬಂಡೆಯೊಂದನ್ನು ತೆಗೆಯಬೇಕಾದ ಪರಿಸ್ಥಿತಿಯನ್ನೂ ದೊಡ್ಡ ವಿಚಾರವನ್ನಾಗಿ ಮಾಡಲಾಗುತ್ತಿದೆ. ಬೇರೆ ಕಟ್ಟಡಗಳನ್ನು ಒಡೆಯಲು ಸಾಧ್ಯವಿಲ್ಲ. ಹಾಗಾದರೆ ಈ ಟನಲ್ ರಸ್ತೆ ಯಾರಿಗಾಗಿ ಎಂಬ ಪ್ರಶ್ನೆಯನ್ನು ಡಿಕೆಶಿ ಮುಂದಿಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಏಳು ಟನಲ್ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಕರ್ನಾಟಕದ ದಾಖಲೆಗಳನ್ನು ತೆಗೆದುಕೊಂಡು ಕೆಲವು ರಾಜ್ಯಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟನಲ್ ರಸ್ತೆಯನ್ನು ನಿರ್ಮಿಸಲು ಸರ್ಕಾರ ಸುಮಾರು ₹4,000 ಕೋಟಿ ಮಾತ್ರ ನೀಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಿ, 25ರಿಂದ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ರೀತಿಯಲ್ಲಿ ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಹಣ ಪಾವತಿಸಲು ಸಿದ್ಧರಿರುವವರು ಟನಲ್ ರಸ್ತೆಯಲ್ಲಿ ಸಂಚರಿಸಿ ಸಮಯ ಉಳಿಸಿಕೊಳ್ಳಬಹುದು. ಹಣ ನೀಡಲು ಸಾಧ್ಯವಾಗದವರು ಮೇಲಿನ ಸಾಮಾನ್ಯ ರಸ್ತೆಯಲ್ಲಿ ಸಂಚರಿಸಬಹುದು. ಟನಲ್ ರಸ್ತೆಯಿಂದ ಕನಿಷ್ಠ ಒಂದು ಗಂಟೆ ಸಮಯ ಉಳಿಯಬಹುದು ಎಂದು ಡಿಕೆಶಿ ಹೇಳಿದ್ದಾರೆ.
ನಿದ್ದೆಗೆ ಕಡಿಮೆ ಸಮಯ: ‘ರಾಜಕೀಯವೇ ನನ್ನ ದೊಡ್ಡ ಅಭ್ಯಾಸ’
ತಮ್ಮ ನಿದ್ದೆಯ ಅವಧಿ ಕಳೆದ ಐದಾರು ವರ್ಷಗಳಿಂದ ಬಹಳ ಕಡಿಮೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ಮಲಗಿ, ಬೆಳಗ್ಗೆ 5.15ಕ್ಕೆ ಎದ್ದು ಎಪಿಎಂಸಿ ಭೇಟಿ ನೀಡಿದ್ದೆ. ಬೆಳಗ್ಗೆ 9.45ರ ವೇಳೆಗೆ ವಾಪಸ್ ಬಂದಿದ್ದೆ. ಮೊದಲ ಬಾರಿಗೆ ಮಧ್ಯಾಹ್ನ ದೈಹಿಕವಾಗಿ ವ್ಯತ್ಯಾಸ ಕಂಡುಬಂತು ಎಂದು ತಿಳಿಸಿದ್ದಾರೆ.
ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕನಿಷ್ಠ ಐದಾರು ಗಂಟೆಗಳ ವಿಶ್ರಾಂತಿಯೂ ಸಿಗುತ್ತಿಲ್ಲ. ಗುರಿ ಮುಟ್ಟಬೇಕು ಎಂಬ ಪ್ರಯತ್ನದಿಂದ ಪ್ರತಿದಿನ ರಾತ್ರಿ 2 ಗಂಟೆಯವರೆಗೂ ಯಾರಾದರೂ ಭೇಟಿಯಾಗುತ್ತಿರುತ್ತಾರೆ. ಹಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತಿದೆ. ಅದೇ ತಮ್ಮ ದೊಡ್ಡ ಶಕ್ತಿ. ಬೇರೆ ಯಾವುದೇ ಅಭ್ಯಾಸವಿಲ್ಲ, ರಾಜಕೀಯವೇ ತಮ್ಮ ದೊಡ್ಡ ಅಭ್ಯಾಸ ಎಂದು ಡಿಕೆಶಿ ಹೇಳಿದ್ದಾರೆ.
ಸರ್ಕಾರದ ಮುಂದೆ ಹಲವು ಸವಾಲುಗಳು
ತಮ್ಮ ಸರ್ಕಾರದ ಕಾಲಾವಧಿ ಕಡಿಮೆ ಇದೆ ಎಂಬ ಅರಿವಿದೆ. ಆದರೆ ಇದು ಡಿಕ್ಟೇಟರ್‌ಶಿಪ್ ಸರ್ಕಾರವಲ್ಲ, ಪ್ರಜಾಪ್ರಭುತ್ವದ ಸರ್ಕಾರ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಸೇರಿದಂತೆ ಹಲವು ಹಂತಗಳಲ್ಲಿ ಸರ್ಕಾರದ ಪ್ರತಿಯೊಂದು ತೀರ್ಮಾನವೂ ಪ್ರಶ್ನೆಗೆ ಒಳಗಾಗುತ್ತದೆ. ಅಧಿಕಾರಿಗಳು ಕೂಡ ಎಲ್ಲ ನಿರ್ಧಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾರೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಮೇಲೇರಲು ಪ್ರಯತ್ನಿಸುವವರ ಕಾಲೆಳೆಯುವುದು ಸಹಜ. ನ್ಯಾಯಾಲಯಕ್ಕೆ ಯಾರಾದರೂ ಹೋಗಿ ತಡೆಯಾಜ್ಞೆ ತಂದರೂ ಯೋಜನೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. ಶಿವರಾಮ ಕಾರಂತ ಬಡಾವಣೆ ವಿಚಾರವೇ ಇದಕ್ಕೆ ಉದಾಹರಣೆ. ಈ ಎಲ್ಲ ಕಾರಣಗಳಿಂದ ಸಾಕಷ್ಟು ಸವಾಲುಗಳಿವೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರಧಾನಿ ಮೋದಿ ಜತೆಗಿನ ಮಾತುಕತೆ ಬಹಿರಂಗಪಡಿಸುವುದಿಲ್ಲ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕರೆದು ಮಾತನಾಡಿದ್ದರು. ಅದು ಅವರ ಹೃದಯಶ್ರೀಮಂತಿಕೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜನರು, ದೇಶ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದಾನಿ ಭೇಟಿ ಬಗ್ಗೆ ರಾಹುಲ್ ಗಾಂಧಿ ಕೇಳಿಲ್ಲ
ಉದ್ಯಮಿ ಗೌತಮ್ ಅದಾನಿ ಬಹಳ ದಿನಗಳಿಂದ ಪರಿಚಯವಿರುವವರು. ವಿದ್ಯುತ್, ಸಿಮೆಂಟ್ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಒಬ್ಬ ಉದ್ಯಮಿಯಾಗಿ ಅದಾನಿ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಅದಾನಿ ಜತೆಗಿನ ತಮ್ಮ ಭೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದು ತಿಳಿಸಿದ್ದಾರೆ.
‘ಜನರನ್ನು ಗೊಂದಲಕ್ಕೆ ಸಿಲುಕಿಸುವುದಿಲ್ಲ’
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ಘೋಷಿಸಿದರೂ ಮುಂದುವರಿಸಲು ಸಾಧ್ಯವಾಗದೆ ನಿಲ್ಲಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ವಿ ವಿಲ್ ಕನ್ವಿನ್ಸ್ಡ್ ದಿ ಪೀಪಲ್, ವಿ ವಿಲ್ ನಾಟ್ ಕನ್ಫ್ಯೂಸ್ಡ್ ದಿ ಪೀಪಲ್’ ಎಂದು ಹೇಳಿರುವ ಡಿಕೆಶಿ, ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ ಎಂದು ಹೇಳಿದ್ದಾರೆ.
‘ಜನರ ಬಗ್ಗೆ ಕಾಳಜಿಯಷ್ಟೇ’
ಪಾರ್ಕ್ ಜಾಗ ಬಳಕೆ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಸರ್ಕಾರ ಯುಟರ್ನ್ ಹೊಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾಡಿನ ಜನರ ಕುರಿತು ಕಾಳಜಿ ಮತ್ತು ಗೌರವ ಮಾತ್ರ ಸರ್ಕಾರದ ಉದ್ದೇಶ. ಜನರ ಭಾವನೆಗಳಿಗೆ ಗೌರವ ನೀಡಬೇಕು ಮತ್ತು ಅದನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕಸ: ‘ದೊಡ್ಡ ಮಾಫಿಯಾ’
ಬೆಂಗಳೂರು ಕಸ ನಿರ್ವಹಣೆ ವಿಚಾರವೂ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಬೆಂಗಳೂರಿನ ಕಸದ ಟೆಂಡರ್ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಸರ್ಕಾರವಿದ್ದರೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿರಲಿಲ್ಲ. ಇದು ದೊಡ್ಡ ಮಾಫಿಯಾ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗ ಕಸ ನಿರ್ವಹಣೆಗೆ ಪ್ಯಾಕೇಜ್‌ಗಳನ್ನು ರೂಪಿಸಿ ಟೆಂಡರ್ ನೀಡಲಾಗಿದೆ. ನ್ಯಾಯಾಲಯದ ಮಧ್ಯಪ್ರವೇಶ ಸೇರಿದಂತೆ ಹಲವು ವಿಚಾರಗಳು ಇದರಲ್ಲಿವೆ. ಈ ಸಮಸ್ಯೆಯನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು
ತಾಯಂದಿರ ಕನಸುಗಳಿಗೆ ಮತ್ತೆ ರೆಕ್ಕೆ; ಜೀ ಕನ್ನಡದಲ್ಲಿ ‘Dance Karnataka Dance – ಸೂಪರ್ ಮಾಮ್’!
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಜೀ ಕನ್ನಡ, ಕರ್ನಾಟಕದ ತಾಯಂದಿರ ನೃತ್ಯ ಪ್ರತಿಭೆ ಹಾಗೂ ಕನಸುಗಳಿಗೆ ಹೊಸ ವೇದಿಕೆ ಕಲ್ಪಿಸಲು ‘Dance Karnataka Dance – ಸೂಪರ್ ಮಾಮ್’ ರಿಯಾಲಿಟಿ ಶೋನೊಂದಿಗೆ ಮತ್ತೆ ವೀಕ್ಷಕರ ಮನೆಮನ ತಲುಪಲು ಸಜ್ಜಾಗಿದೆ.

ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕುಟುಂಬ, ಉದ್ಯೋಗ ಹಾಗೂ ದಿನನಿತ್ಯದ ನೂರಾರು ಜವಾಬ್ದಾರಿಗಳ ನಡುವೆಯೂ ನೃತ್ಯದ ಮೇಲಿನ ತಮ್ಮ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡಿರುವ ಸ್ಪೂರ್ತಿದಾಯಕ ತಾಯಂದಿರ ಕಥೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ.
ಕುಟುಂಬದ ನಡುವೆ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ
ತಾಯಂದಿರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬ ಹಾಗೂ ಮನೆಯ ಜವಾಬ್ದಾರಿಗಳಿಗೆ ಮೀಸಲಿಡುತ್ತಾರೆ. ಈ ಜವಾಬ್ದಾರಿಗಳ ನಡುವೆ ಅವರ ಸ್ವಂತ ಆಸೆ-ಆಕಾಂಕ್ಷೆಗಳು ಮತ್ತು ಕನಸುಗಳು ಕೆಲವೊಮ್ಮೆ ಹಿಂದೆ ಸರಿಯುತ್ತವೆ.
ಅಂತಹ ತಾಯಂದಿರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ತಮ್ಮ ನೃತ್ಯದ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಕಂಡುಕೊಳ್ಳಲು ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಲಿದೆ.
ವರ್ಷಗಳಿಂದ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ ನೀಡುವುದರ ಜೊತೆಗೆ, ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಮತ್ತೊಮ್ಮೆ ಪ್ರದರ್ಶಿಸಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಲಿದೆ.
ವಿವಿಧ ಭಾಗಗಳ ತಾಯಂದಿರ ವಿಭಿನ್ನ ಕಥೆಗಳು
ಆಡಿಷನ್ ಸಂಚಿಕೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ತಾಯಂದಿರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತದೆ. ನೃತ್ಯದ ಮೇಲಿನ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಲಿರುವ ಅವರು, ತಮ್ಮ ವೈಯಕ್ತಿಕ ಬದುಕಿನ ಪಯಣ, ಕನಸುಗಳು ಮತ್ತು ಆಕಾಂಕ್ಷೆಗಳನ್ನೂ ಹಂಚಿಕೊಳ್ಳಲಿದ್ದಾರೆ.
ಕುಟುಂಬ ಹಾಗೂ ಇತರ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳಿಗೆ ಮತ್ತೊಮ್ಮೆ ಆದ್ಯತೆ ನೀಡುವ ಅವರ ಪ್ರಯತ್ನಗಳು ಕಾರ್ಯಕ್ರಮದ ಪ್ರಮುಖ ಹೈಲೈಟ್‌ಗಳಾಗಲಿವೆ.
ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆ ಮತ್ತು ನೃತ್ಯ ಶೈಲಿಯೊಂದಿಗೆ ವೇದಿಕೆಯೇರಲಿದ್ದು, ವಿಭಿನ್ನ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.
ಅನುಶ್ರೀ ನಿರೂಪಣೆ, ಶಿವರಾಜ್ ಕುಮಾರ್ ಸೇರಿ ತಾರೆಯರ ತೀರ್ಪುಗಾರರ ಬಳಗ
ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿರುವ ತೀರ್ಪುಗಾರರ ಬಳಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ.
ತಮ್ಮ ಅನುಭವ ಮತ್ತು ವಿಭಿನ್ನ ದೃಷ್ಟಿಕೋನಗಳ ಮೂಲಕ ತೀರ್ಪುಗಾರರು ಸ್ಪರ್ಧಿಗಳ ನೃತ್ಯ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸೆ.12ರಿಂದ ‘ಸೂಪರ್ ಮಾಮ್’ಗಳ ನೃತ್ಯ ಪಯಣ
ವಿವಿಧ ಹಿನ್ನೆಲೆಯಿಂದ ಬಂದಿರುವ ತಾಯಂದಿರು ತಮ್ಮದೇ ಆದ ಅನುಭವ, ವ್ಯಕ್ತಿತ್ವ ಮತ್ತು ನೃತ್ಯ ಪ್ರತಿಭೆಯೊಂದಿಗೆ ವೇದಿಕೆಯೇರಲಿದ್ದಾರೆ. ಅವರ ನೃತ್ಯ ಪ್ರದರ್ಶನಗಳ ಜತೆಗೆ ಬದುಕಿನ ಕಥೆಗಳೂ ವೀಕ್ಷಕರಿಗೆ ಪರಿಚಯವಾಗಲಿವೆ.
ಕುಟುಂಬದವರ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಈ ತಾಯಂದಿರು, ಇದೀಗ ತಮ್ಮದೇ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಲಿದ್ದಾರೆ.
ಸೆಪ್ಟೆಂಬರ್ 12 ಮತ್ತು 13ರಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಯಾವುದೇ ಸಮಯದಲ್ಲೂ ಕನ್ನಡ ಜೀ5ನಲ್ಲಿ ವೀಕ್ಷಿಸಬಹುದು.
ಬೆಂಗಳೂರು
APMC ಯಲ್ಲಿ ಬಾಲಕಾರ್ಮಿಕ ಸಿಕ್ಕಿದ್ದೇ ತಡ; ಬೆಂಗಳೂರಿನಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, 17 ಮಕ್ಕಳು ರಕ್ಷಣೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು APMCಗೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಗರದಾದ್ಯಂತ ಬಾಲಕಾರ್ಮಿಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೆ 17 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಇತ್ತೀಚೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಾರ್ಮಿಕನೊಬ್ಬ ಕೆಲಸ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯ ಪೊಲೀಸರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಮಹಿಳಾ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನೇ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸೂಚನೆ ಬೆನ್ನಲ್ಲೇ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಹೋಟೆಲ್, ಅಂಗಡಿ, ಗ್ಯಾರೇಜ್‌ಗಳಲ್ಲಿ ಪರಿಶೀಲನೆ
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಹೋಟೆಲ್‌ಗಳು, ಅಂಗಡಿಗಳು, ಗ್ಯಾರೇಜ್‌ಗಳು, ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಪೊಲೀಸರು ವ್ಯಾಪಕ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವು ಕಡೆ ಬಾಲಕಾರ್ಮಿಕರು ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ಕಾರ್ಯಾಚರಣೆಯ ಮೂಲಕ ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಮುಂದುವರಿದಿರುವುದು ಬೆಳಕಿಗೆ ಬಂದಿದೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಸ್ಥಳಗಳ ಬಗ್ಗೆ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಉತ್ತರ ವಿಭಾಗದಲ್ಲೇ 100ಕ್ಕೂ ಹೆಚ್ಚು ಕಡೆ ತಪಾಸಣೆ
ಈ ಕುರಿತು ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಮಾಹಿತಿ ನೀಡಿದ್ದು, ಉತ್ತರ ವಿಭಾಗವೊಂದರಲ್ಲೇ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇದುವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 17 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ನಗರದ ಇತರ ಭಾಗಗಳಲ್ಲೂ ಬಾಲಕಾರ್ಮಿಕರ ಪತ್ತೆಗಾಗಿ ವಿಶೇಷ ಪರಿಶೀಲನೆ ಮುಂದುವರಿದಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರ ಎಪಿಎಂಸಿ ಭೇಟಿಯ ಸಂದರ್ಭದಲ್ಲಿ ಬಾಲಕಾರ್ಮಿಕ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆರಂಭವಾದ ಈ ಕಾರ್ಯಾಚರಣೆ ಇದೀಗ ಬೆಂಗಳೂರಿನಾದ್ಯಂತ ವಿಸ್ತರಿಸಲಾಗಿದೆ.
ಬೆಂಗಳೂರು
Bengaluru ಟ್ರಾಫಿಕ್‌ಗೆ ಬಿಗ್ ರಿಲೀಫ್! ₹16,980 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್; ಸುರಂಗ ರಸ್ತೆ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು: Bengaluru ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಸಭೆಯಲ್ಲಿ ಒಟ್ಟು ₹16,980 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗಳ ಪೈಕಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್‌ವರೆಗೆ ನಿರ್ಮಾಣವಾಗಲಿರುವ 16.75 ಕಿ.ಮೀ ಉದ್ದದ ಮೊದಲ ಹಂತದ ಸುರಂಗ ರಸ್ತೆ ಪ್ರಮುಖ ಆಕರ್ಷಣೆಯಾಗಿದೆ.
ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳವರೆಗೆ ಸುರಂಗ ರಸ್ತೆ
ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳನ್ನು ಸಂಪರ್ಕಿಸುವ ಉದ್ದೇಶದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್‌ವರೆಗೆ 16.75 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.
ನಗರದ ಪ್ರಮುಖ ಮಾರ್ಗಗಳ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಸುರಂಗ ರಸ್ತೆ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
11 ಎಲಿವೇಟೆಡ್ ಕಾರಿಡಾರ್‌ಗಳಿಗೆ ಟೆಂಡರ್
ಸುರಂಗ ರಸ್ತೆಯ ಜೊತೆಗೆ ನಗರದ ವಿವಿಧ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ 120 ಕಿ.ಮೀ ಉದ್ದದ 13 ಎಲಿವೇಟೆಡ್ ಕಾರಿಡಾರ್‌ಗಳ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ.
ಇವುಗಳ ಪೈಕಿ ₹13,262.70 ಕೋಟಿ ವೆಚ್ಚದ 11 ಕಾರಿಡಾರ್‌ಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ 29.10 ಕಿ.ಮೀ ಉದ್ದದ 9 ಮೇಲ್ಸೇತುವೆಗಳ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.
ಭೂಸ್ವಾಧೀನಕ್ಕೆ BDA ಹೊಣೆ
ಈ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಳ್ಳಲಿದೆ.
ಯೋಜನೆಗಳು ಪೂರ್ಣಗೊಂಡ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಒಟ್ಟಾರೆ ಸಂಚಾರ ದಟ್ಟಣೆ ಶೇ.40ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸಿಲ್ಕ್ ಬೋರ್ಡ್-ಕೆ.ಆರ್. ಪುರಂ ರಸ್ತೆಗೂ ₹450 ಕೋಟಿ
ನಗರದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿರುವ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯನ್ನು ₹450 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಉನ್ನತೀಕರಿಸಲು ನಿರ್ಧರಿಸಲಾಗಿದೆ.
ಈ ರಸ್ತೆಯ ಅಭಿವೃದ್ಧಿಯಿಂದ ಪ್ರಮುಖ ಐಟಿ ಹಾಗೂ ವಾಣಿಜ್ಯ ಪ್ರದೇಶಗಳ ನಡುವಿನ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ.
ರಾಜಕಾಲುವೆ ಅಭಿವೃದ್ಧಿಗೂ ₹2,000 ಕೋಟಿ
ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಪದೇಪದೇ ಎದುರಾಗುವ ಪ್ರವಾಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮತ್ತೊಂದು ಮಹತ್ವದ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ.
ವಿಶ್ವಬ್ಯಾಂಕ್ ನೆರವಿನೊಂದಿಗೆ ₹2,000 ಕೋಟಿ ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರಾಜಕಾಲುವೆಗಳ ಸಾಮರ್ಥ್ಯ ಹೆಚ್ಚಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಒಟ್ಟಿನಲ್ಲಿ, ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್‌ಗಳು, ಮೇಲ್ಸೇತುವೆಗಳು, ಹೊರವರ್ತುಲ ರಸ್ತೆ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ಸುಧಾರಣೆ ಸೇರಿದಂತೆ ಹಲವು ಬೃಹತ್ ಯೋಜನೆಗಳಿಗೆ ಅನುಮೋದನೆ ದೊರೆತಿರುವುದು ಬೆಂಗಳೂರಿನ ಸಂಚಾರ ಮತ್ತು ಮೂಲಸೌಕರ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆ ಮೂಡಿಸಿದೆ.
-
ಬೆಂಗಳೂರು4 ಗಂಟೆಗಳು agoAPMC ಯಲ್ಲಿ ಬಾಲಕಾರ್ಮಿಕ ಸಿಕ್ಕಿದ್ದೇ ತಡ; ಬೆಂಗಳೂರಿನಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, 17 ಮಕ್ಕಳು ರಕ್ಷಣೆ
-
ರಾಜ್ಯ7 ಗಂಟೆಗಳು agoBIG NEWS Gram Panchayati ಚುನಾವಣೆ: ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ; ಚುನಾವಣೆ ಯಾವಾಗ?
-
ಬೆಂಗಳೂರು4 ಗಂಟೆಗಳು agoBengaluru ಟ್ರಾಫಿಕ್‌ಗೆ ಬಿಗ್ ರಿಲೀಫ್! ₹16,980 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್; ಸುರಂಗ ರಸ್ತೆ ನಿರ್ಮಾಣಕ್ಕೆ ಚಾಲನೆ
-
ಬೆಂಗಳೂರು3 ಗಂಟೆಗಳು agoತಾಯಂದಿರ ಕನಸುಗಳಿಗೆ ಮತ್ತೆ ರೆಕ್ಕೆ; ಜೀ ಕನ್ನಡದಲ್ಲಿ ‘Dance Karnataka Dance – ಸೂಪರ್ ಮಾಮ್’!
-
ದೇಶ6 ಗಂಟೆಗಳು agoNational News BRICS Summit 2026: ದೆಹಲಿಯ ಭಾರತ್ ಮಂಟಪಂ ಹೇಗಿದೆ? ಜಾಗತಿಕ ನಾಯಕರ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ!
-
ದೇಶ4 ಗಂಟೆಗಳು agoIRCTC ದಾಖಲೆ: ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್ ಬುಕಿಂಗ್; ಹೊಸ ದಾಖಲೆ ಸೃಷ್ಟಿ!
-
ದೇಶ6 ಗಂಟೆಗಳು agoBRICS Membership: ಪಾಕಿಸ್ತಾನಕ್ಕೆ ಶಾಕ್; ಭಾರತದಿಂದಲೇ ಬಿತ್ತು ಸದಸ್ಯತ್ವಕ್ಕೆ ಬ್ರೇಕ್?
-
ದೇಶ2 ಗಂಟೆಗಳು agoBRICS ಶೃಂಗಸಭೆಯಲ್ಲಿ PM MODI ಮಾಸ್ಟರ್ ಪ್ಲ್ಯಾನ್; ವಿಶ್ವ ಆಡಳಿತ ಬದಲಿಸಲು 10 ಅಂಶಗಳ ರೋಡ್ಮ್ಯಾಪ್!
