ದೇಶ
BRICS ಘೋಷಣೆಯಲ್ಲಿ ಡಾಲರ್ಗೆ ದೊಡ್ಡ ಸವಾಲು? ಸ್ಥಳೀಯ ಕರೆನ್ಸಿ ವಹಿವಾಟಿಗೆ ಮಹತ್ವದ ನಿರ್ಧಾರ
ನವದೆಹಲಿ: ಭಾರತ್ ಮಂಟಪದಲ್ಲಿ ನಡೆದ 18ನೇ BRICS ಶೃಂಗಸಭೆಯಲ್ಲಿ ‘ಬ್ರಿಕ್ಸ್ ಹೊಸ ದೆಹಲಿ ಘೋಷಣೆ’ ಅಂಗೀಕರಿಸಲಾಗಿದ್ದು, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು, ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಜಾಗತಿಕ ಸಂಘರ್ಷಗಳಿಗೆ ರಾಜತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಲಾಗಿದೆ.

ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಹೆಚ್ಚಿನ ಧ್ವನಿ ಮತ್ತು ಪ್ರಭಾವ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಸಂದೇಶ ನೀಡಿರುವ ಘೋಷಣೆಯಲ್ಲಿ, ಬಹುಧ್ರುವೀಯ ಜಾಗತಿಕ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಲಾಗಿದೆ.
ಡಾಲರ್ ಅವಲಂಬನೆ ಕಡಿಮೆ ಮಾಡಲು ಸ್ಥಳೀಯ ಕರೆನ್ಸಿಗೆ ಒತ್ತು
ಬ್ರಿಕ್ಸ್ ರಾಷ್ಟ್ರಗಳ ನಡುವಿನ ವಹಿವಾಟಿನಲ್ಲಿ ರಾಷ್ಟ್ರೀಯ ಮತ್ತು ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವ ಅಗತ್ಯಕ್ಕೆ ಘೋಷಣೆಯಲ್ಲಿ ಒತ್ತು ನೀಡಲಾಗಿದೆ.
ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಸದಸ್ಯ ರಾಷ್ಟ್ರಗಳ ಆರ್ಥಿಕತೆಯನ್ನು ಬಾಹ್ಯ ಹಣಕಾಸು ಅಸ್ಥಿರತೆಯಿಂದ ರಕ್ಷಿಸುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ.
ಸ್ಥಳೀಯ ಕರೆನ್ಸಿ ಪಾವತಿ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಗಡಿಯಾಚೆಗಿನ ಹಣಕಾಸು ವಹಿವಾಟಿಗೆ ಪರ್ಯಾಯ ವ್ಯವಸ್ಥೆಗಳ ಅನ್ವೇಷಣೆಗೆ ಸದಸ್ಯ ರಾಷ್ಟ್ರಗಳು ಒತ್ತು ನೀಡಿವೆ. ನ್ಯೂ ಡೆವಲಪ್ಮೆಂಟ್ ಬ್ಯಾಂಕ್ನ ವಿಸ್ತರಣೆಯ ಬಗ್ಗೆಯೂ ಗಮನ ಹರಿಸಲಾಗಿದೆ.
UNSC ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗೆ ಕರೆ
ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ವ್ಯಾಪಾರ ಸಂಸ್ಥೆ ಸೇರಿದಂತೆ ಬಹುಪಕ್ಷೀಯ ಜಾಗತಿಕ ಸಂಸ್ಥೆಗಳಲ್ಲಿ ಸಮಗ್ರ ಸುಧಾರಣೆ ಅಗತ್ಯ ಎಂದು ಬ್ರಿಕ್ಸ್ ನಾಯಕರು ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಧ್ವನಿ ದೊರೆಯುವಂತೆ ರಚನಾತ್ಮಕ ಸುಧಾರಣೆ ತರಬೇಕೆಂಬ ಬೇಡಿಕೆಯನ್ನು ಘೋಷಣೆ ಮುಂದಿಟ್ಟಿದೆ.
ಯುದ್ಧಕ್ಕೆ ವಿರೋಧ, ರಾಜತಾಂತ್ರಿಕ ಪರಿಹಾರಕ್ಕೆ ಆದ್ಯತೆ
ಜಾಗತಿಕ ಸಂಘರ್ಷಗಳು ಹಾಗೂ ಪ್ರಾದೇಶಿಕ ಉದ್ವಿಗ್ನತೆಗಳ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಯುದ್ಧಗಳು ಕೇವಲ ಯುದ್ಧಭೂಮಿಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸಂದೇಶದೊಂದಿಗೆ, ಸಂಘರ್ಷಗಳಿಗೆ ಶಾಂತಿಯುತ ಮಾತುಕತೆ, ಮಧ್ಯಸ್ಥಿಕೆ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಒತ್ತು ನೀಡಲಾಗಿದೆ.
ರಾಜ್ಯ ಮಟ್ಟದ ಆಕ್ರಮಣಕಾರಿ ಕ್ರಮಗಳು ಮತ್ತು ಸೇನಾ ಸಂಘರ್ಷಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಾಯಕರು, ರಾಜತಾಂತ್ರಿಕ ಪ್ರಯತ್ನಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಸೇರಿದಂತೆ ಸಮುದ್ರ ಮಾರ್ಗಗಳ ಸುರಕ್ಷತೆ
ಜಾಗತಿಕ ವ್ಯಾಪಾರದ ಪ್ರಮುಖ ಜೀವನಾಡಿಯಾಗಿರುವ ಸಮುದ್ರ ಮಾರ್ಗಗಳ ಸುರಕ್ಷತೆಯ ಬಗ್ಗೆಯೂ ಬ್ರಿಕ್ಸ್ ಘೋಷಣೆಯಲ್ಲಿ ಗಮನ ಹರಿಸಲಾಗಿದೆ.
ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಮಾರ್ಗಗಳಲ್ಲಿ ಉಂಟಾಗುವ ಭದ್ರತಾ ಬಿಕ್ಕಟ್ಟುಗಳು ವಾಣಿಜ್ಯ ನೌಕೆಗಳ ಸಂಚಾರ ಹಾಗೂ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ವಾಣಿಜ್ಯ ನೌಕೆಗಳು ಮತ್ತು ನಾವಿಕರ ಸುರಕ್ಷತೆಯನ್ನು ಖಚಿತಪಡಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ.
ನಾವಿಕರ ಸುರಕ್ಷತೆಗಾಗಿ ‘ನಾವಿಕರ ತುರ್ತು ಬೆಂಬಲ ಜಾಲ’ ಸ್ಥಾಪಿಸುವ ಪ್ರಸ್ತಾಪಕ್ಕೂ ಮಹತ್ವ ನೀಡಲಾಗಿದೆ.
ಗ್ಲೋಬಲ್ ಸೌತ್ ಇನ್ನು ನಿಯಮ ಪಾಲಕರಲ್ಲ, ನಿಯಮ ರೂಪಕರು
ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಬಾಹ್ಯಾಕಾಶ, ಹಸಿರು ತಂತ್ರಜ್ಞಾನ ಸೇರಿದಂತೆ ಭವಿಷ್ಯದ ಪ್ರಮುಖ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳು ಸಕ್ರಿಯ ಪಾತ್ರ ವಹಿಸಬೇಕು ಎಂಬ ಸಂದೇಶವನ್ನು ಬ್ರಿಕ್ಸ್ ಪುನರುಚ್ಚರಿಸಿದೆ.
ಇದುವರೆಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ರಾಷ್ಟ್ರಗಳಾಗಿ ಮಾತ್ರ ಉಳಿಯದೆ, ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲೂ ಸಮಾನವಾಗಿ ಭಾಗವಹಿಸಬೇಕು ಎಂಬ ಆಶಯವನ್ನು ಘೋಷಣೆ ಪ್ರತಿಬಿಂಬಿಸಿದೆ.
ಒಟ್ಟಾರೆ, ಹೊಸ ದೆಹಲಿ ಘೋಷಣೆಯು ಜಾಗತಿಕ ಆಡಳಿತದಲ್ಲಿ ಸುಧಾರಣೆ, ಸ್ಥಳೀಯ ಕರೆನ್ಸಿ ವಹಿವಾಟು, ಸಮುದ್ರ ಮಾರ್ಗಗಳ ಸುರಕ್ಷತೆ, ಶಾಂತಿಯುತ ರಾಜತಾಂತ್ರಿಕ ಪರಿಹಾರ ಮತ್ತು ಗ್ಲೋಬಲ್ ಸೌತ್ ರಾಷ್ಟ್ರಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ನೀಡಿದೆ.

ಬೆಂಗಳೂರು
CM D K Shiv Kumar 100 ದಿನಗಳ ಸಂವಾದ: ‘ಗಟ್ಟಿ ತೀರ್ಮಾನ ಮಾಡದಿದ್ದರೆ ನನ್ನನ್ನು ಕಾಲಿ ಡಬ್ಬಿ ಅಂತಾರೆ’!
ಬೆಂಗಳೂರು: CM D K Shiv Kumar ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುದ್ದಿಮಾಧ್ಯಮಗಳ ಸಂಪಾದಕರೊಂದಿಗೆ ಸಂವಾದ ನಡೆಸಿ, ತಮ್ಮ ಸರ್ಕಾರದ ನೂರು ದಿನಗಳ ಹೆಜ್ಜೆಗುರುತು, ಮುಂದಿನ ಯೋಜನೆಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆರೋಗ್ಯ ಸಹಕರಿಸಿದರೆ ಇನ್ನೂ 15 ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಅರಿತೇ ಯೋಜನೆಗಳ ಘೋಷಣೆ
ಕಳೆದ ನೂರು ದಿನಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಅನುಷ್ಠಾನ ಮಾಡಲು ಸಾಧ್ಯವಿರುವ ಯೋಜನೆಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನುಡಿದಂತೆ ನಡೆಯಬೇಕು ಎಂಬ ಅರಿವು ತಮ್ಮಲ್ಲಿದೆ. ಇಲ್ಲವಾದರೆ ಎಲ್ಲರ ಎದುರು ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗಾಗಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಸಿ, ಸಿಸಿ ವಿಚಾರದಲ್ಲಿಯೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ಕಟ್ಟಡಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ವಾಣಿಜ್ಯ ಕಟ್ಟಡಗಳ ವಿಚಾರವನ್ನು ಪರಿಗಣಿಸಿದರೆ ಬೇರೆ ರೀತಿಯ ನಿರ್ಧಾರವಾಗುತ್ತದೆ. ಭೂ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೊರರಾಜ್ಯದವರಿಗೆ ಉಚಿತ ಸೌಲಭ್ಯ ಯಾಕೆ?
ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್ ನೀಡಲು ತೀರ್ಮಾನಿಸಲಾಗಿದ್ದು, ಕಾರ್ಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 14 ಲಕ್ಷದಷ್ಟು ಹೊರರಾಜ್ಯದವರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಹಾಗಿದ್ದಾಗ ಹೊರರಾಜ್ಯದವರಿಗೆ ಏಕೆ ಉಚಿತ ಅವಕಾಶ ನೀಡಬೇಕು ಎಂಬ ಪ್ರಶ್ನೆ ಇದೆ. ಇದೇ ರೀತಿ ಹೊರರಾಜ್ಯದವರಿಗೆ ಉಚಿತ ವಿದ್ಯುತ್ ನೀಡುವ ವಿಚಾರದಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಟ್ಟಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲವಾದರೆ ತಮ್ಮನ್ನು ‘ಕಾಲಿ ಡಬ್ಬ’ ಎಂದು ಕರೆಯುತ್ತಾರೆ ಎಂಬ ಅರಿವು ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಟನಲ್ ರಸ್ತೆ ಯಾರಿಗಾಗಿ?
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಉದ್ದೇಶಿಸಿರುವ ಟನಲ್ ರಸ್ತೆ ಯೋಜನೆಗೆ ಹಲವು ಅಡೆತಡೆಗಳಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪಾರ್ಕ್ನ ಒಂದು ಮೂಲೆಯ ಜಾಗವನ್ನು ಬಳಸಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಸಣ್ಣ ಬಂಡೆಯೊಂದನ್ನು ತೆಗೆಯಬೇಕಾದ ಪರಿಸ್ಥಿತಿಯನ್ನೂ ದೊಡ್ಡ ವಿಚಾರವನ್ನಾಗಿ ಮಾಡಲಾಗುತ್ತಿದೆ. ಬೇರೆ ಕಟ್ಟಡಗಳನ್ನು ಒಡೆಯಲು ಸಾಧ್ಯವಿಲ್ಲ. ಹಾಗಾದರೆ ಈ ಟನಲ್ ರಸ್ತೆ ಯಾರಿಗಾಗಿ ಎಂಬ ಪ್ರಶ್ನೆಯನ್ನು ಡಿಕೆಶಿ ಮುಂದಿಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಏಳು ಟನಲ್ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಕರ್ನಾಟಕದ ದಾಖಲೆಗಳನ್ನು ತೆಗೆದುಕೊಂಡು ಕೆಲವು ರಾಜ್ಯಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟನಲ್ ರಸ್ತೆಯನ್ನು ನಿರ್ಮಿಸಲು ಸರ್ಕಾರ ಸುಮಾರು ₹4,000 ಕೋಟಿ ಮಾತ್ರ ನೀಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಿ, 25ರಿಂದ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ರೀತಿಯಲ್ಲಿ ಬಿಲ್ಡ್-ಆಪರೇಟ್-ಟ್ರಾನ್ಸ್ಫರ್ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಹಣ ಪಾವತಿಸಲು ಸಿದ್ಧರಿರುವವರು ಟನಲ್ ರಸ್ತೆಯಲ್ಲಿ ಸಂಚರಿಸಿ ಸಮಯ ಉಳಿಸಿಕೊಳ್ಳಬಹುದು. ಹಣ ನೀಡಲು ಸಾಧ್ಯವಾಗದವರು ಮೇಲಿನ ಸಾಮಾನ್ಯ ರಸ್ತೆಯಲ್ಲಿ ಸಂಚರಿಸಬಹುದು. ಟನಲ್ ರಸ್ತೆಯಿಂದ ಕನಿಷ್ಠ ಒಂದು ಗಂಟೆ ಸಮಯ ಉಳಿಯಬಹುದು ಎಂದು ಡಿಕೆಶಿ ಹೇಳಿದ್ದಾರೆ.
ನಿದ್ದೆಗೆ ಕಡಿಮೆ ಸಮಯ: ‘ರಾಜಕೀಯವೇ ನನ್ನ ದೊಡ್ಡ ಅಭ್ಯಾಸ’
ತಮ್ಮ ನಿದ್ದೆಯ ಅವಧಿ ಕಳೆದ ಐದಾರು ವರ್ಷಗಳಿಂದ ಬಹಳ ಕಡಿಮೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ಮಲಗಿ, ಬೆಳಗ್ಗೆ 5.15ಕ್ಕೆ ಎದ್ದು ಎಪಿಎಂಸಿ ಭೇಟಿ ನೀಡಿದ್ದೆ. ಬೆಳಗ್ಗೆ 9.45ರ ವೇಳೆಗೆ ವಾಪಸ್ ಬಂದಿದ್ದೆ. ಮೊದಲ ಬಾರಿಗೆ ಮಧ್ಯಾಹ್ನ ದೈಹಿಕವಾಗಿ ವ್ಯತ್ಯಾಸ ಕಂಡುಬಂತು ಎಂದು ತಿಳಿಸಿದ್ದಾರೆ.
ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕನಿಷ್ಠ ಐದಾರು ಗಂಟೆಗಳ ವಿಶ್ರಾಂತಿಯೂ ಸಿಗುತ್ತಿಲ್ಲ. ಗುರಿ ಮುಟ್ಟಬೇಕು ಎಂಬ ಪ್ರಯತ್ನದಿಂದ ಪ್ರತಿದಿನ ರಾತ್ರಿ 2 ಗಂಟೆಯವರೆಗೂ ಯಾರಾದರೂ ಭೇಟಿಯಾಗುತ್ತಿರುತ್ತಾರೆ. ಹಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತಿದೆ. ಅದೇ ತಮ್ಮ ದೊಡ್ಡ ಶಕ್ತಿ. ಬೇರೆ ಯಾವುದೇ ಅಭ್ಯಾಸವಿಲ್ಲ, ರಾಜಕೀಯವೇ ತಮ್ಮ ದೊಡ್ಡ ಅಭ್ಯಾಸ ಎಂದು ಡಿಕೆಶಿ ಹೇಳಿದ್ದಾರೆ.
ಸರ್ಕಾರದ ಮುಂದೆ ಹಲವು ಸವಾಲುಗಳು
ತಮ್ಮ ಸರ್ಕಾರದ ಕಾಲಾವಧಿ ಕಡಿಮೆ ಇದೆ ಎಂಬ ಅರಿವಿದೆ. ಆದರೆ ಇದು ಡಿಕ್ಟೇಟರ್ಶಿಪ್ ಸರ್ಕಾರವಲ್ಲ, ಪ್ರಜಾಪ್ರಭುತ್ವದ ಸರ್ಕಾರ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಸೇರಿದಂತೆ ಹಲವು ಹಂತಗಳಲ್ಲಿ ಸರ್ಕಾರದ ಪ್ರತಿಯೊಂದು ತೀರ್ಮಾನವೂ ಪ್ರಶ್ನೆಗೆ ಒಳಗಾಗುತ್ತದೆ. ಅಧಿಕಾರಿಗಳು ಕೂಡ ಎಲ್ಲ ನಿರ್ಧಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾರೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಮೇಲೇರಲು ಪ್ರಯತ್ನಿಸುವವರ ಕಾಲೆಳೆಯುವುದು ಸಹಜ. ನ್ಯಾಯಾಲಯಕ್ಕೆ ಯಾರಾದರೂ ಹೋಗಿ ತಡೆಯಾಜ್ಞೆ ತಂದರೂ ಯೋಜನೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. ಶಿವರಾಮ ಕಾರಂತ ಬಡಾವಣೆ ವಿಚಾರವೇ ಇದಕ್ಕೆ ಉದಾಹರಣೆ. ಈ ಎಲ್ಲ ಕಾರಣಗಳಿಂದ ಸಾಕಷ್ಟು ಸವಾಲುಗಳಿವೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರಧಾನಿ ಮೋದಿ ಜತೆಗಿನ ಮಾತುಕತೆ ಬಹಿರಂಗಪಡಿಸುವುದಿಲ್ಲ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕರೆದು ಮಾತನಾಡಿದ್ದರು. ಅದು ಅವರ ಹೃದಯಶ್ರೀಮಂತಿಕೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜನರು, ದೇಶ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದಾನಿ ಭೇಟಿ ಬಗ್ಗೆ ರಾಹುಲ್ ಗಾಂಧಿ ಕೇಳಿಲ್ಲ
ಉದ್ಯಮಿ ಗೌತಮ್ ಅದಾನಿ ಬಹಳ ದಿನಗಳಿಂದ ಪರಿಚಯವಿರುವವರು. ವಿದ್ಯುತ್, ಸಿಮೆಂಟ್ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಒಬ್ಬ ಉದ್ಯಮಿಯಾಗಿ ಅದಾನಿ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಅದಾನಿ ಜತೆಗಿನ ತಮ್ಮ ಭೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದು ತಿಳಿಸಿದ್ದಾರೆ.
‘ಜನರನ್ನು ಗೊಂದಲಕ್ಕೆ ಸಿಲುಕಿಸುವುದಿಲ್ಲ’
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ಘೋಷಿಸಿದರೂ ಮುಂದುವರಿಸಲು ಸಾಧ್ಯವಾಗದೆ ನಿಲ್ಲಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ವಿ ವಿಲ್ ಕನ್ವಿನ್ಸ್ಡ್ ದಿ ಪೀಪಲ್, ವಿ ವಿಲ್ ನಾಟ್ ಕನ್ಫ್ಯೂಸ್ಡ್ ದಿ ಪೀಪಲ್’ ಎಂದು ಹೇಳಿರುವ ಡಿಕೆಶಿ, ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ ಎಂದು ಹೇಳಿದ್ದಾರೆ.
‘ಜನರ ಬಗ್ಗೆ ಕಾಳಜಿಯಷ್ಟೇ’
ಪಾರ್ಕ್ ಜಾಗ ಬಳಕೆ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಸರ್ಕಾರ ಯುಟರ್ನ್ ಹೊಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾಡಿನ ಜನರ ಕುರಿತು ಕಾಳಜಿ ಮತ್ತು ಗೌರವ ಮಾತ್ರ ಸರ್ಕಾರದ ಉದ್ದೇಶ. ಜನರ ಭಾವನೆಗಳಿಗೆ ಗೌರವ ನೀಡಬೇಕು ಮತ್ತು ಅದನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕಸ: ‘ದೊಡ್ಡ ಮಾಫಿಯಾ’
ಬೆಂಗಳೂರು ಕಸ ನಿರ್ವಹಣೆ ವಿಚಾರವೂ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಬೆಂಗಳೂರಿನ ಕಸದ ಟೆಂಡರ್ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಸರ್ಕಾರವಿದ್ದರೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿರಲಿಲ್ಲ. ಇದು ದೊಡ್ಡ ಮಾಫಿಯಾ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗ ಕಸ ನಿರ್ವಹಣೆಗೆ ಪ್ಯಾಕೇಜ್ಗಳನ್ನು ರೂಪಿಸಿ ಟೆಂಡರ್ ನೀಡಲಾಗಿದೆ. ನ್ಯಾಯಾಲಯದ ಮಧ್ಯಪ್ರವೇಶ ಸೇರಿದಂತೆ ಹಲವು ವಿಚಾರಗಳು ಇದರಲ್ಲಿವೆ. ಈ ಸಮಸ್ಯೆಯನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ
ED ಕಾರ್ಯಾಚರಣೆಗೆ ರಾಜಕೀಯ ಬಣ್ಣ ಬೇಡ; ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಮಾಡಿದ್ದ ಟೀಕೆ ಏನು?
ಮೈಸೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯದ (ED) ಪರಿಶೀಲನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಆರೋಪಗಳು ಕೇವಲ ರಾಜಕೀಯ ತಂತ್ರ ಎಂದು ಅವರು ಟೀಕಿಸಿದ್ದಾರೆ.

ಇಡಿ ಸೇರಿದಂತೆ ಪ್ರತಿಯೊಂದು ತನಿಖಾ ಸಂಸ್ಥೆಯ ಕ್ರಮಕ್ಕೂ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
‘ತನಿಖಾ ಸಂಸ್ಥೆಗಳ ಕಾರ್ಯಕ್ಕೆ ರಾಜಕೀಯ ಬಣ್ಣ ಬೇಡ’
ತನಿಖಾ ಸಂಸ್ಥೆಗಳ ಪರಿಶೀಲನೆ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಚಿತ್ರರಂಗದ ಪ್ರಮುಖರ ನಿವಾಸಗಳ ಮೇಲೆಯೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಉದ್ದೇಶಪೂರ್ವಕವಾಗಿ ರಾಜಕೀಯಕ್ಕೆ ಎಳೆದು ತರುವುದು ಸೂಕ್ತವಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಇಡಿ ಪರಿಶೀಲನೆಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿರುವ ಆರೋಪಗಳು ರಾಜಕೀಯ ತಂತ್ರ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಟೀಕೆ
ಇದೇ ವೇಳೆ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವದ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿ ತಮ್ಮ ಪ್ರಭಾವವನ್ನು ಬಳಸಿರುವುದು ಕೇವಲ ಮಾಜಿ ಸಚಿವ ಮಹದೇವಪ್ಪ ಅವರ ನಿವಾಸ ಖಾಲಿ ಮಾಡಿಸಿದ ಪ್ರಕರಣದಲ್ಲಿ ಮಾತ್ರ ಎಂದು ಟೀಕಿಸಿದ್ದಾರೆ.
ಈ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವದ ಬಗ್ಗೆ ಪ್ರತಾಪ್ ಸಿಂಹ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ
Media Manasugalu ಪಾಳುಬಿದ್ದ ಬಸ್ ತಂಗುದಾಣಕ್ಕೆ ಕಾಯಕಲ್ಪ; ಸುದ್ದಿ ಮಾಡುವ ಕೈಗಳೇ ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದು ಹೀಗೆ!
ಮಂಗಳೂರು: ಸಾಮಾಜಿಕ ಕಳಕಳಿಗೆ ಮಾಧ್ಯಮ ಮನಸುಗಳು ಕನ್ನಡಿ ಹಿಡಿದಿವೆ. ಪಾಳುಬಿದ್ದ ಸ್ಥಿತಿಯಲ್ಲಿದ್ದ ಪಣಂಬೂರಿನ ಕುದ್ರೆಮುಖ ಬಸ್ ತಂಗುದಾಣಕ್ಕೆ ಇದೀಗ ಕಾಯಕಲ್ಪ ಸಿಕ್ಕಿದ್ದು, ‘Media Manasugalu’ ತಂಡದ ಸಾಮಾಜಿಕ ಕಾಳಜಿಯ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸ್ವಚ್ಛ ಭಾರತ ಹಾಗೂ ಸ್ವಸ್ಥ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡಿದ್ದ ಈ ಬಸ್ ತಂಗುದಾಣವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು.
ತ್ಯಾಜ್ಯದ ತೊಟ್ಟಿಯಾಗಿದ್ದ ಬಸ್ ತಂಗುದಾಣ
ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪ, ಕುದ್ರೆಮುಖ ಕಂಪನಿಯ ಮುಂಭಾಗದಲ್ಲಿರುವ ಬಸ್ ತಂಗುದಾಣದ ಸ್ಥಿತಿ ಶೋಚನೀಯವಾಗಿತ್ತು.
ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಜನನಿಬಿಡ ಪ್ರದೇಶವಾಗಿದ್ದರೂ, ಸೂಕ್ತ ನಿರ್ವಹಣೆಯಿಲ್ಲದೆ ಬಸ್ ತಂಗುದಾಣ ತ್ಯಾಜ್ಯದ ತೊಟ್ಟಿಯಂತಾಗಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಹಾಗೂ ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ ಅಯೋಗ್ಯವಾದ ವಾತಾವರಣ ನಿರ್ಮಾಣವಾಗಿತ್ತು.
ಸಾರ್ವಜನಿಕರ ದೂರಿಗೆ ಸ್ಪಂದಿಸಿದ ‘ಮೀಡಿಯಾ ಮನಸುಗಳು’
ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಈ ಕುರಿತು ‘ಮೀಡಿಯಾ ಮನಸುಗಳು’ ತಂಡದ ಗಮನಕ್ಕೆ ತಂದರು.
ದೂರಿಗೆ ಸ್ಪಂದಿಸಿದ ತಂಡದ ಸದಸ್ಯರು ಕೇವಲ ಸುದ್ದಿ ವರದಿ ಮಾಡುವುದಕ್ಕೆ ತಮ್ಮ ಸೇವೆಯನ್ನು ಸೀಮಿತಗೊಳಿಸದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾವೇ ಕಣಕ್ಕಿಳಿಯಲು ನಿರ್ಧರಿಸಿದರು.
ದೈನಂದಿನ ಮಾಧ್ಯಮ ಕೆಲಸದ ಒತ್ತಡದ ನಡುವೆಯೂ ಸಮಯ ಮೀಸಲಿಟ್ಟ ತಂಡದ ಸದಸ್ಯರು ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಲು ಶ್ರಮದಾನಕ್ಕೆ ಮುಂದಾದರು.
ಮೂರು ಗಂಟೆಗಳ ಕಾಲ ಶ್ರಮದಾನ
ಸುಮಾರು ಮೂರು ಗಂಟೆಗಳ ಕಾಲ ನಡೆದ ಸ್ವಚ್ಛತಾ ಅಭಿಯಾನದಲ್ಲಿ ‘ಮೀಡಿಯಾ ಮನಸುಗಳು’ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಚಿತ್ರಾ ಪ್ರೀತಂ ಹಾಗೂ ಗಿರೀಶ್ ಮಣೇಲ್ ಶ್ರಮಿಸಿದರು.
ತಂಡದ ಸದಸ್ಯರು ಬಸ್ ತಂಗುದಾಣದಲ್ಲಿದ್ದ ಕಸವನ್ನು ತೆರವುಗೊಳಿಸಿ, ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಸ್ಥಳವನ್ನು ಸ್ವಚ್ಛಗೊಳಿಸಿ ತಂಗುದಾಣಕ್ಕೆ ಹೊಸ ಕಳೆ ತಂದರು.
ತ್ಯಾಜ್ಯ ವಿಲೇವಾರಿಗೆ ಮನಪಾ ಸಹಕಾರ
ಈ ಜನಪರ ಕಾರ್ಯಕ್ಕೆ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಸುಮಿತ್ರಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮೇಲ್ವಿಚಾರಕ ರೋಷನ್ ಅಮಿನ್ ಅವರು ತಕ್ಷಣ ಸ್ಪಂದಿಸಿದರು.
ತಂಡದ ಮನವಿಗೆ ಸ್ಪಂದಿಸಿದ ಅವರು ಸಂಗ್ರಹಗೊಂಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸಿ ಸಹಕರಿಸಿದರು.
ಬದಲಾವಣೆಗೆ ಮುನ್ನುಡಿ ಬರೆದ ಮಾಧ್ಯಮ ಬಳಗ
ಸುದ್ದಿ ಬಿತ್ತರಿಸುವ ಕೈಗಳು ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಪಣತೊಟ್ಟಾಗ ನಿಜವಾದ ಸಾಮಾಜಿಕ ಜಾಗೃತಿ ಮೂಡುತ್ತದೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಕೇವಲ ವ್ಯವಸ್ಥೆಯನ್ನು ಟೀಕಿಸುತ್ತಾ ಕೂರದೆ, ಬದಲಾವಣೆಗೆ ತಾವೇ ಮುನ್ನುಡಿ ಬರೆದ ‘ಮೀಡಿಯಾ ಮನಸುಗಳು’ ಬಳಗದ ಕಾರ್ಯವು ಯುವಜನತೆ ಹಾಗೂ ಸಮಾಜಕ್ಕೆ ಪ್ರೇರಣೆಯಾಗಿದೆ.
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬಸ್ ತಂಗುದಾಣ ಇದೀಗ ಮತ್ತೆ ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿದ್ದು, ಮಾಧ್ಯಮ ತಂಡದ ಈ ಸೇವೆಯನ್ನು ಸ್ಥಳೀಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
-
ಬೆಂಗಳೂರು3 ಗಂಟೆಗಳು agoAPMC ಯಲ್ಲಿ ಬಾಲಕಾರ್ಮಿಕ ಸಿಕ್ಕಿದ್ದೇ ತಡ; ಬೆಂಗಳೂರಿನಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, 17 ಮಕ್ಕಳು ರಕ್ಷಣೆ
-
ರಾಜ್ಯ6 ಗಂಟೆಗಳು agoBIG NEWS Gram Panchayati ಚುನಾವಣೆ: ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ; ಚುನಾವಣೆ ಯಾವಾಗ?
-
ಬೆಂಗಳೂರು3 ಗಂಟೆಗಳು agoBengaluru ಟ್ರಾಫಿಕ್ಗೆ ಬಿಗ್ ರಿಲೀಫ್! ₹16,980 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್; ಸುರಂಗ ರಸ್ತೆ ನಿರ್ಮಾಣಕ್ಕೆ ಚಾಲನೆ
-
ದೇಶ6 ಗಂಟೆಗಳು agoNational News BRICS Summit 2026: ದೆಹಲಿಯ ಭಾರತ್ ಮಂಟಪಂ ಹೇಗಿದೆ? ಜಾಗತಿಕ ನಾಯಕರ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ!
-
ದೇಶ3 ಗಂಟೆಗಳು agoIRCTC ದಾಖಲೆ: ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್ ಬುಕಿಂಗ್; ಹೊಸ ದಾಖಲೆ ಸೃಷ್ಟಿ!
-
ಬೆಂಗಳೂರು2 ಗಂಟೆಗಳು agoತಾಯಂದಿರ ಕನಸುಗಳಿಗೆ ಮತ್ತೆ ರೆಕ್ಕೆ; ಜೀ ಕನ್ನಡದಲ್ಲಿ ‘Dance Karnataka Dance – ಸೂಪರ್ ಮಾಮ್’!
-
ದೇಶ7 ಗಂಟೆಗಳು agoAmerica- Israiel ಗೆ ಇರಾನ್ ಅಧ್ಯಕ್ಷರ ನೇರ ಎಚ್ಚರಿಕೆ; ‘ಒತ್ತಡ ಹೇರಿದರೆ ತಕ್ಕ ಉತ್ತರ’ ಎಂದ ಪೆಜೆಶ್ಕಿಯಾನ್!
-
ದೇಶ5 ಗಂಟೆಗಳು agoBRICS Membership: ಪಾಕಿಸ್ತಾನಕ್ಕೆ ಶಾಕ್; ಭಾರತದಿಂದಲೇ ಬಿತ್ತು ಸದಸ್ಯತ್ವಕ್ಕೆ ಬ್ರೇಕ್?
