Connect with us

ರಾಜಕೀಯ

ನೈಸ್ ವಿಚಾರದಲ್ಲಿ ಸಣ್ಣ ಸಾಕ್ಷಿ ತೋರಿಸಿದರೂ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ ಸವಾಲು

Published

on

HD Kumaraswamy reaction on NICE: ನೈಸ್​ ರಸ್ತೆ ವಿಚಾರದ ಬಗ್ಗೆ ಸಂಸದ ಡಿ ಕೆ ಸುರೇಶ್​ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜಕೀಯ ನಿವೃತ್ತಿಯ ಸವಾಲು ಹಾಕಿದ್ದಾರೆ.

ಬೆಂಗಳೂರು : ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ನಮ್ಮ ಕುಟುಂಬದ ಒಬ್ಬರ ಹೆಸರಲ್ಲಿ ಜಮೀನು ಇದ್ದರೂ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಜೆಡಿಎಸ್​​ ಕಚೇರಿ ಜೆಪಿ ಭವನದಲ್ಲಿ ಇಂದು ನಡೆಯುತ್ತಿರುವ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ಸಂಸದ ಡಿ ಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಗರಂ ಆದರು. ನೈಸ್ ಕಂಪನಿಗೆ ಸಹಿ ಹಾಕಿದ್ದು ಯಾರು?. ಅವನ (ಒನರ್) ಜೊತೆ ಶಾಮೀಲಾಗಿ ಜಮೀನು ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದರಾ?. ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ. ಸಹಿ ಯಾರು ಹಾಕಿದ್ದು ಗೊತ್ತಿದೆಯಾ ಅವನಿಗೆ. ಅವತ್ತಿನ ಯುಡಿ ಮಿನಿಸ್ಟರ್ ಯಾರು ಇದ್ದಿದ್ದು, ಇವನ ಅಣ್ಣನೇ ಅಲ್ವಾ, ಅವನೇ ತಾನೆ ಸಹಿ ಹಾಕಿದ್ದು. ಯಾರ ಹೆಸರಿಗೆ ಮಾಡಲು ಹೊರಟಿದ್ದೀರಾ, ನಿಮ್ಮ ಕುಟುಂಬಕ್ಕೆ ಮಾಡಲು ಹೊರಟಿದ್ದೀರಾ?. ನಮ್ಮ ಬಗ್ಗೆ ಮಾತಾಡ್ತೀರಾ ನೀವು ಎಂದು ಏಕವಚನದಲ್ಲೇ ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆಶಿಕ್ಷಣ ಇಲಾಖೆಯಲ್ಲಿ ಡಿಕೆಶಿ ಸಭೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ಕೊಡಲು ಹೊರಟಿದ್ದಾರಾ ಇವರು?. ನನಗೆ ಜನ ವಿರಾಮ ಕೊಟ್ಟಿದ್ದಾರಂತೆ ಅಂತ ಇವರು ಹೇಳುತ್ತಿದ್ದಾರೆ. ನೀವು ಬೆದರಿಕೆ ಹಾಕಲು ಬರಬೇಡಿ, ಗುತ್ತಿಗೆದಾರರಿಗೆ ಬೆದರಿಕೆ ಹಾಕಿದಂತೆ ನನಗೆ ಹಾಕಲು ಆಗಲ್ಲ. ನೀವು, ನಿಮ್ಮಣ್ಣ ನಮಗೆ ಬೆದರಿಕೆ ಹಾಕಲು ಆಗಲ್ಲ ಎಂದು ಕಿಡಿಕಾರಿದರು.

40 ಪರ್ಸೆಂಟ್ ಸರ್ಕಾರ ಅನ್ನುವ ಆರೋಪ ತನಿಖೆಗೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, 2016 -17ರಲ್ಲಿ ಜಾಬ್ ಕಾರ್ಡ್​​ದು ನಾಗಮೋಹನ್ ಅವರ ಬಳಿ ತನಿಖೆ ಮಾಡಿಸಿದ್ದರು. ಅದು ಎಲ್ಲಿದೆ, ಹಾಗಾದರೆ ವರದಿ ಏನು?. ವೀರಪ್ಪ ನೇತೃತ್ವದಲ್ಲಿ ಅಂದರು, ಆದರೆ ಬಹುಶಃ ಒಪ್ಪಿಲ್ಲ ಅನಿಸುತ್ತದೆ. ಹಾಗಾಗಿ ಇವರಿಗೆ ವಹಿಸಿದ್ದಾರೆ ಅನಿಸುತ್ತದೆ. ನಾಗಮೋಹನ್ ದಾಸ್ ಅವರ ಕೈಯಲ್ಲಿ ತನಿಖೆ ಮಾಡಿಸಿ, ಆ ವರದಿ ಹಾಗೆ ಇಟ್ಟುಕೊಳ್ತೀರಾ ಅಷ್ಟೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ನೀರು ಹರಿಸುವ ವಿಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

ಲೂಟಿ ಹೊಡೆಯುವ ಕೆಲಸಕ್ಕೆ ಪ್ರಕೃತಿ ಸಹಕಾರ ಇಲ್ಲತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ ಅಂತ ಪ್ರಶ್ನೆ ಮಾಡ್ತಾ ಇದ್ದಾರಲ್ಲಾ?. ನಾನು ಇದ್ದಾಗ ಯಥೇಚ್ಛವಾಗಿ ನೀರು ಹರಿಸಲಾಗಿದೆ. ಅವರ ಪಾಪದ ಕೆಲಸ, ಲೂಟಿ ಹೊಡೆಯುವ ಕೆಲಸಕ್ಕೆ ಪ್ರಕೃತಿ ಸಹಕಾರ ಇಲ್ಲ ಎಂದರು.

ನೈತಿಕತೆ ಇಲ್ಲಕೋರ್ಟ್ ಆದೇಶ ಕೊಟ್ಟಾಗ ದೇವೇಗೌಡರು ನೀರು ಬಿಟ್ಟಿದ್ದರು. ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ದೇವೇಗೌಡರು ನೀರು ಬಿಟ್ಟಿಲ್ಲ. ಕಾವೇರಿ ವಿಚಾರದಲ್ಲಿ ರೈತರ ಹಿತಾಸಕ್ತಿ ನೋಡಿದ್ದರೆ ಅದು ದೇವೇಗೌಡರು ಮಾತ್ರ. ಅವರ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ನೈತಿಕತೆ ಇಲ್ಲ. ಸುಪ್ರೀಂಕೋರ್ಟ್​​​ಗೆ ಹೋಗಿ ತಕರಾರು ತೆಗೆದಾಗ ದೇವೇಗೌಡರು ಒಂದಿಷ್ಟು ಸಲಹೆ ಕೊಟ್ಟಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ಮೇಕೆದಾಟು ಪಾದಯಾತ್ರೆ ಏನಾಯ್ತು? : ಮೇಕೆದಾಟು ಪಾದಯಾತ್ರೆ ಮಾಡಿದ್ದು ಏನಾಯ್ತು?. ಕೇವಲ ಚಿಕನ್, ಮಟನ್ ತಿಂದು ಹೋರಾಟ ಮಾಡಿದ್ದಷ್ಟೆ. ಬಂದ ನಾಯಕರಿಗೆ ಚಿಕನ್ ಲೆಗ್ ಕೊಟ್ಟಿದ್ದಷ್ಟೆ. ಇವರ ಸ್ನೇಹಿತ ಅಲ್ವೇ ಸ್ಟಾಲಿನ್, ಅವರ ಜೊತೆ ಮಾತಾಡಲಿ. ನಮ್ಮಲ್ಲಿ ಇನ್ನೂ ಮೊದಲ ಬೆಳೆ ಕೂಡ ಬೆಳೆಯಲಾಗಿಲ್ಲ. ಅಲ್ಲಿ ನಾಲ್ಕು ಲಕ್ಷ ಎಕರೆಗೆ ಸೌಲಭ್ಯ ಪಡೆದುಕೊಂಡಿದ್ದಾರೆ. ಈಗ ನಮ್ಮ ರೈತರಿಗೆ ಸಮಸ್ಯೆ ಆಗಿದೆ. ರೆಡ್ ಕಾರ್ಪೆಟ್ ಹಾಕಿ ಸ್ಟಾಲಿನ್​ ಅವರಿಗೆ ಸ್ವಾಗತ ಮಾಡಿದ್ದಾರೆ. ನನಗೂ ಒಮ್ಮೆ ಪೆನ್ ಕೊಡಿ ಅಂತಿದ್ದಾರೆ. ಪೆನ್ ಯಾಕೆ ಇಂತಹ ಕೆಲಸ ಮಾಡಲಿಕ್ಕಾ? ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಹೆಚ್​​ಡಿಕೆ, ನಾವು ವಿಪಕ್ಷದಲ್ಲಿ ಇರುವುದೇ ರಾಜಕೀಯ ಮಾಡುವುದಕ್ಕೆ, ಅವರು ಮಾಡುತ್ತಿರುವುದು ಏನು?. ಇವರಿಗೆ ನಮ್ಮ ರೈತರ ಮೇಲೆ ಔದಾರ್ಯ ಇಲ್ಲ. ಪೆನ್ ಕೊಡಿ ಅಂದ್ರಲಾ ಇದಕ್ಕಾ?. ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡಮಾನ ಇಡಲು ಹೊರಟಿದ್ದಾರೆ. ಇದಕ್ಕೇನಾ ನೀವು ಪೆನ್ ಕೇಳಿದ್ದು? ಎಂದು ಪ್ರಶ್ನಿಸಿದರು.

ಇಂಡಿಯಾ ಮೈತ್ರಿ ಕೂಡ ಸಂಬಂಧ ಓಲೈಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಯಾವುದಕ್ಕೆ ಓಲೈಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂ ಮುಂದೆ ತಮಿಳುನಾಡಿನವರು ಮತ್ತೊಂದು ಅರ್ಜಿ ಹಾಕುತ್ತಾರೆ. ಆಗ ಏನು ಮಾಡ್ತೀರಾ? ಎಂದು ಪ್ರಶ್ನಿಸಿದರು.

ದೇಶ

ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೊದಲ ಕಾಂಗ್ರೆಸ್ ಶಾಸಕಾಂಗ ಸಭೆ ಇಂದು: ಬಿಡದಿಯಲ್ಲಿ ಮಹತ್ವದ ಚರ್ಚೆ

Published

on

ರಾಮನಗರ: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ಇಂದು ಸಂಜೆ 6.30ಕ್ಕೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಈ ಶಾಸಕಾಂಗ ಸಭೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲು ಈ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಭಾಗವಹಿಸಲಿದ್ದು, ಚುನಾವಣಾ ತಂತ್ರಗಾರಿಕೆ ಮತ್ತು ಮತಗಳ ಸಮನ್ವಯ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಮುಂಬರುವ ಚುನಾವಣಾ ಸವಾಲುಗಳ ಕುರಿತೂ ಸಭೆಯಲ್ಲಿ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಶಾಸಕಾಂಗ ಸಭೆಯಾಗಿರುವುದರಿಂದ ಪಕ್ಷದ ಒಳರಾಜಕೀಯ ಮತ್ತು ಭವಿಷ್ಯದ ಕಾರ್ಯತಂತ್ರದ ದೃಷ್ಟಿಯಿಂದ ಇದು ಮಹತ್ವ ಪಡೆದಿದೆ.

ಸಭೆ ಹಿನ್ನೆಲೆಯಲ್ಲಿ ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶವನ್ನು ಸಂಜೆ ಬಳಿಕ ನಿರ್ಬಂಧಿಸಲಾಗಿದ್ದು, ಕಾಂಗ್ರೆಸ್ ಶಾಸಕರು ಮತ್ತು ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಬೆಂಬಲವನ್ನು ಕ್ರೋಢೀಕರಿಸುವ ಉದ್ದೇಶದಿಂದ ಈ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಮಹತ್ವದ ರಾಜಕೀಯ ಸಂದೇಶ ಹೊರಬೀಳುವ ನಿರೀಕ್ಷೆಯಿದೆ.

Continue Reading

ದೇಶ

ಗ್ಯಾರಂಟಿ ಯೋಜನೆಗಳಿಗೆ ಸರ್ಜರಿ? ಮರು ಅರ್ಜಿ ಕಡ್ಡಾಯ ಸಾಧ್ಯತೆ; ಸರ್ಕಾರದ 100 ಕೋಟಿ ರೂ. ಉಳಿತಾಯ ಪ್ಲ್ಯಾನ್

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಿದ್ಧತೆಗಳು ಜೋರಾಗಿದ್ದು, ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಬೇಕಾಗುವ ಸಾಧ್ಯತೆ ಇದೆ. ಯೋಜನೆಗಳ ದುರುಪಯೋಗ ತಡೆಯುವ ಜೊತೆಗೆ ಅನರ್ಹರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಸರ್ಕಾರ ವರ್ಷಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡುವ ಗುರಿ ಹೊಂದಿದೆ.

ಸರ್ಕಾರವು ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಮುಂದಾಗಿದೆ. ಮೃತರ ಹೆಸರಿನಲ್ಲಿ ಹಣ ವರ್ಗಾವಣೆ ಆಗುತ್ತಿರುವ ಪ್ರಕರಣಗಳು, ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿದಾರರು ಯೋಜನೆಗಳ ಲಾಭ ಪಡೆಯುತ್ತಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪರಿಷ್ಕರಣೆಯ ಬಳಿಕ ಸುಮಾರು 3 ರಿಂದ 4 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಡುವ ಸಾಧ್ಯತೆ ಇದೆ.

ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಮಹಿಳೆಯರು ಪ್ರತಿ ತಿಂಗಳು ₹2,000 ನೆರವು ಪಡೆಯುತ್ತಿದ್ದು, ಸರ್ಕಾರ ತಿಂಗಳಿಗೆ ₹2,480 ಕೋಟಿ ಹಾಗೂ ವರ್ಷಕ್ಕೆ ₹29,760 ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗೆ ಏಪ್ರಿಲ್ ಅಂತ್ಯದವರೆಗೆ ಒಟ್ಟು ₹72,253 ಕೋಟಿ ಪಾವತಿಸಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಗ್ರಾಹಕರು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಇದರ ವೆಚ್ಚ ₹26,115 ಕೋಟಿಗೆ ತಲುಪಿದೆ. ಅನ್ನಭಾಗ್ಯ ಯೋಜನೆಗೆ ಇದುವರೆಗೆ ₹18,897 ಕೋಟಿ ವೆಚ್ಚವಾಗಿದ್ದರೆ, ಶಕ್ತಿ ಯೋಜನೆಯಡಿ ಮಹಿಳೆಯರು 757.62 ಕೋಟಿ ಉಚಿತ ಪ್ರಯಾಣ ಟಿಕೆಟ್‌ಗಳ ಪ್ರಯೋಜನ ಪಡೆದಿದ್ದು, ಇದರ ಮೌಲ್ಯ ₹19,890 ಕೋಟಿ ಎಂದು ಅಂದಾಜಿಸಲಾಗಿದೆ.

ಇನ್ನು ಯುವನಿಧಿ ಯೋಜನೆಯಡಿ 3.59 ಲಕ್ಷ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ನೆರವು ನೀಡಲಾಗಿದ್ದು, ಈವರೆಗೆ ₹1,115 ಕೋಟಿ ಪಾವತಿಸಲಾಗಿದೆ.

ಒಟ್ಟಾರೆ, ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ₹1,38,270.21 ಕೋಟಿ ವೆಚ್ಚ ಮಾಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪರಿಷ್ಕರಣೆ ನಡೆಸಲು ಮುಂದಾಗಿದೆ.

Continue Reading

ದೇಶ

ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಗೃಹಲಕ್ಷ್ಮಿಯಿಂದ ಐಟಿ, ಜಿಎಸ್‌ಟಿ ಪಾವತಿದಾರರು ಔಟ್

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Gruha Lakshmi Scheme ಯೋಜನೆಯಲ್ಲಿ ಭಾರೀ ಪರಿಷ್ಕರಣೆ ನಡೆಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಂಡಿದೆ.

ಯೋಜನೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು ₹77 ಕೋಟಿ ಉಳಿತಾಯವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಅನರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿಸುತ್ತಿದ್ದ ಸುಮಾರು 1.94 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮರಣ ಹೊಂದಿದ ಸುಮಾರು 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿ ಹಣ ಜಮೆಯಾಗುತ್ತಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದ್ದು, ಅಂತಹ ಖಾತೆಗಳನ್ನೂ ರದ್ದುಗೊಳಿಸಲಾಗಿದೆ.

ಜಿಲ್ಲಾವಾರು ಪರಿಶೀಲನೆಯಲ್ಲಿ Bengaluru ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 47,871 ಮಹಿಳೆಯರನ್ನು ಅನರ್ಹರೆಂದು ಗುರುತಿಸಲಾಗಿದೆ. ಬಳಿಕ Belagavi, Dakshina Kannada, Mysuru ಹಾಗೂ Tumakuru ಜಿಲ್ಲೆಗಳು ಅತಿ ಹೆಚ್ಚು ಅನರ್ಹ ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ.

ಮುಂದಿನ ದಿನಗಳಲ್ಲಿ ನಕಲಿ ಫಲಾನುಭವಿಗಳು ಹಾಗೂ ತಾಂತ್ರಿಕ ಲೋಪಗಳನ್ನು ಸಂಪೂರ್ಣವಾಗಿ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಂದ ಮರು ದೃಢೀಕರಣ ಅಥವಾ ಮರು ಅರ್ಜಿ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Continue Reading

Trending