ಅಪರಾಧ
ADGP ದಯಾನಂದ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ: ಸೈಬರ್ ಖದೀಮರ ಹೊಸ ಕೃತ್ಯ
ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ದಯಾನಂದ್ ಅವರ ಹೆಸರಲ್ಲಿ ಕಿಡಿಗೇಡಿಗಳು ಮತ್ತೊಮ್ಮೆ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ತಿಂಗಳಲ್ಲಿ ಇದು ನಾಲ್ಕನೇ ಬಾರಿ ನಕಲಿ ಖಾತೆ ಪ್ರಚಾರಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಿಂದಿನ ಮೂರ್ಸಾರಿ ನಕಲಿ ಪ್ರೊಫೈಲ್‌ಗಳ ಬಗ್ಗೆ ದಯಾನಂದ್ ಅವರು ಸ್ವತಃ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಸೈಬರ್ ಖದೀಮರು ಮತ್ತೊಮ್ಮೆ ಹೊಸ ಖಾತೆ ತೆರೆದು, ಸೂಟ್ ಧರಿಸಿರುವ ಫೋಟೋಗಳು ಮತ್ತು ಕುಟುಂಬದ ಸದಸ್ಯರ ಜೊತೆಗಿನ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅನೇಕ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಬಳಿಕ ಹಣಕ್ಕೆ ಬೇಡಿಕೆ ಮಾಡುವ ಕೆಲಸ ನಡೆಯುತ್ತಿದೆ ಎಂದು ದೂರುಗಳು ಹೊರಬಿದ್ದಿವೆ.
ಪ್ರಸ್ತುತ ದಯಾನಂದ್ ಕಾರಾಗೃಹ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಜೈಲಿನೊಳಗಿನ ಒಂದು ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆ ಈ ನಕಲಿ ಅಕೌಂಟ್ ಘಟನೆ ಹೊಸ ಸಂಶಯಗಳಿಗೆ ಕಾರಣವಾಗಿದೆ. ವಿಡಿಯೋ ಮೂಲಕ ದಯಾನಂದ್ ಅವರ ವಿರುದ್ಧ ಅಪಪ್ರಚಾರ ನಡೆಸಲು ಪ್ರಯತ್ನಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು.
ಈಗ ಮತ್ತೆ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಬಗ್ಗೆ ಅಧಿಕೃತ ದೂರು ದಾಖಲಿಸಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಪರಿಚಿತರಿಂದ ಬಂದ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸದೆ, ಹಣಕ್ಕೆ ಬೇಡಿಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ದೇಶ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅಪರಾಧ
ಮುಂಬೈನಲ್ಲಿ ಹೈ ಅಲರ್ಟ್! ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ಚುರುಕು
ಮುಂಬೈ: ನವಿ ಮುಂಬೈನಲ್ಲಿರುವ ಖ್ಯಾತ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆ ನಿಯೋಜಿಸಿದ್ದಾರೆ. ತಡರಾತ್ರಿ ನವಿ ಮುಂಬೈ ಪೊಲೀಸ್ ಠಾಣೆಗೆ ಬಂದ ಅಪರಿಚಿತ ದೂರವಾಣಿ ಕರೆಯಲ್ಲಿ, ದಾವೂದ್ ಇಬ್ರಾಹಿಂ ಹೆಸರನ್ನು ಉಲ್ಲೇಖಿಸಿ ಹೋಟೆಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿ ಕರೆ ಕಡಿತಗೊಳಿಸಲಾಗಿತ್ತು.
ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೋಟೆಲ್ ಆಡಳಿತಕ್ಕೆ ಮಾಹಿತಿ ನೀಡಿ, ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿದರು. ಬಳಿಕ ಬಾಂಬ್ ಪತ್ತೆ ದಳವು ಹೋಟೆಲ್‌ನ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್, ಬ್ಯಾಂಕ್ವೆಟ್ ಹಾಲ್‌ಗಳು, ರೆಸ್ಟೋರಂಟ್‌ಗಳು ಹಾಗೂ ಪಾರ್ಕಿಂಗ್ ಪ್ರದೇಶ ಸೇರಿದಂತೆ ಎಲ್ಲೆಡೆ ತೀವ್ರ ಶೋಧ ಕಾರ್ಯ ನಡೆಸಿತು.
ಆದರೆ ಸುದೀರ್ಘ ತಪಾಸಣೆಯ ಬಳಿಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಕರೆ ಆಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೋಟೆಲ್‌ನಲ್ಲಿ ಭದ್ರತೆಯನ್ನು ಮುಂದುವರಿಸಲಾಗಿದೆ.
ಇನ್ನೊಂದೆಡೆ, ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈ ಕರೆ ನವಿ ಮುಂಬೈನ ತುರ್ಭೆ ಪ್ರದೇಶದಿಂದ ಬಂದಿರುವ ಸಾಧ್ಯತೆ ಇದೆ. ಸ್ಥಳೀಯ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಅಧಿಕಾರಿಗಳು ಈ ಹಂತದಲ್ಲಿ ಯಾವುದೇ ಉಗ್ರ ಸಂಚು ಅಥವಾ ದಾಳಿಯ ಕುರಿತು ಅಧಿಕೃತ ದೃಢೀಕರಣ ನೀಡಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಅಪರಾಧ
ಮಟನ್ ಬದಲು ಚಿಕನ್ ಬಡಿಸಿದ ಪರಿಣಾಮ! ಮದುವೆ ಮನೆಯಲ್ಲಿ ಭೀಕರ ಗಲಾಟೆ
ಬಿಹಾರ: ಬಿಹಾರದಲ್ಲಿ ಮದುವೆ ಸಮಾರಂಭಗಳ ವೇಳೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆಯುವುದು ಹೊಸದಲ್ಲ. ಇದೀಗ ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರದಲ್ಲಿ ನಡೆದ ಮದುವೆ ಸಮಾರಂಭವೊಂದು ಊಟದ ಮೆನು ಬದಲಾವಣೆಯಿಂದ ರಣರಂಗವಾಗಿ ಮಾರ್ಪಟ್ಟಿದೆ. ಮಟನ್ (ಕುರಿಮರಿ ಮಾಂಸ) ಬಡಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದ ಅತಿಥಿಗಳಿಗೆ ಚಿಕನ್ (ಕೋಳಿ ಮಾಂಸ) ಬಡಿಸಿದ ಕಾರಣ ವಧು ಹಾಗೂ ವರನ ಕಡೆಯವರ ನಡುವೆ ತೀವ್ರ ಘರ್ಷಣೆ ನಡೆದಿದೆ.
ಗುರುವಾರ (ಜುಲೈ 9) ರಾತ್ರಿ ನಡೆದ ಈ ಘಟನೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಅತಿಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ಅದು ಹೊಡೆದಾಟಕ್ಕೆ ತಿರುಗಿದೆ. ಪರಿಸ್ಥಿತಿ ಕೈಮೀರಿದ ಪರಿಣಾಮ ಉಭಯ ಕಡೆಯ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವರದಿಗಳ ಪ್ರಕಾರ, ಸಿಮ್ರಿ ಭಕ್ತಿಯಾರ್ಪುರದ ನಿವಾಸಿ ಮೊಹಮ್ಮದ್ ಅನ್ವರ್ ಅವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅವರ ವಿವಾಹವು ರಾಜನ್‌ಪುರದ ನಿವಾಸಿ ಮೊಹಮ್ಮದ್ ಜಾವಿದ್ ಅಲಿಯಾಸ್ ಮೋಟೋ ಅವರ ಪುತ್ರಿಯೊಂದಿಗೆ ನಡೆಯುತ್ತಿತ್ತು. ವಿವಾಹ ವಿಧಿವಿಧಾನಗಳು ಸುಸೂತ್ರವಾಗಿ ಪೂರ್ಣಗೊಂಡಿದ್ದರೂ, ಊಟ ಆರಂಭವಾಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ.
ವರನ ಕಡೆಯವರು, ಮದುವೆ ಮೆನುವಿನಲ್ಲಿ ಮಟನ್ ನೀಡಲಾಗುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ ಊಟದ ವೇಳೆ ಚಿಕನ್ ಬಡಿಸಿದ್ದರಿಂದ ಅಸಮಾಧಾನ ಉಂಟಾಯಿತು ಎಂದು ಆರೋಪಿಸಿದ್ದಾರೆ. ಇದೇ ವೇಳೆ ವರನ ಚಿಕ್ಕಪ್ಪ ಮೊಹಮ್ಮದ್ ಇರ್ಫಾನ್ ಮಾತನಾಡಿ, ಆಹಾರದ ವಿಚಾರದಲ್ಲಿ ಪ್ರಶ್ನಿಸಿದ ತಕ್ಷಣ ವಧುವಿನ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಘಟನೆಯ ತೀವ್ರತೆಯನ್ನು ಅರಿತ ಹಿರಿಯರು ಹಾಗೂ ಸ್ಥಳೀಯ ಗಣ್ಯರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಸಿದರು. ಬಳಿಕ ವಿವಾದವನ್ನು ಸ್ಥಳದಲ್ಲೇ ಬಗೆಹರಿಸಿ ಮದುವೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
-
ಬೆಂಗಳೂರು16 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ದೇಶ15 hours agoಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
-
ಸುತ್ತ ಮುತ್ತ18 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ದೇಶ17 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ದೇಶ16 hours agoಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
-
ರಾಜ್ಯ19 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್ಟೇಕರ್ ನವೀನ್ ಮನವಿ
-
ರಾಜ್ಯ23 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ಕ್ರೀಡೆ17 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
