ದೇಶ
72nd National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಅನಂತ್ ನಾಗ್
ಏಕ್ತಾ ನಗರ: ಗುಜರಾತ್‌ನ ಏಕ್ತಾ ನಗರದಲ್ಲಿ72nd National Film Awards ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ನೇ ಸಾಲಿನ ಸಿನಿಮಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ಅನಂತ್ ನಾಗ್ ಹೆಜ್ಜೆ ಹಾಕುತ್ತಿದ್ದಂತೆ ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಐದು ದಶಕಗಳಿಗೂ ಅಧಿಕ ಕಾಲದ ನಟನಾ ಪಯಣದಲ್ಲಿ ಬೆಂಬಲ ನೀಡಿದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರೇಕ್ಷಕರಿಗೆ ಗೌರವವನ್ನು ಅರ್ಪಿಸಿದರು.
“ಈ ಪ್ರಶಸ್ತಿ ಕೇವಲ ನನಗೊಬ್ಬನಿಗೇ ಸೇರಿದ್ದಲ್ಲ” ಎಂದು ಹೇಳಿದ ಅನಂತ್ ನಾಗ್, ತಮ್ಮ ನಟನಾ ಪಯಣದ ಆರಂಭದ ದಿನಗಳನ್ನು ಸ್ಮರಿಸಿಕೊಂಡರು.
ತಮ್ಮ ಬಾಲ್ಯದಲ್ಲಿ 12ನೇ ವಯಸ್ಸಿನವರೆಗೆ ಆಶ್ರಮವೊಂದರಲ್ಲಿ ಬೆಳೆದಿದ್ದಾಗಿ ತಿಳಿಸಿದ ಅವರು, ಬಳಿಕ ಮುಂಬೈಗೆ ತೆರಳಿ ನಾಟಕಗಳಲ್ಲಿ ನಟಿಸುವ ಮೂಲಕ ತಮ್ಮ ಕಲಾ ವೃತ್ತಿಜೀವನ ಆರಂಭವಾಯಿತು ಎಂದು ಹೇಳಿದರು. ಸುಮಾರು ಐದು ವರ್ಷಗಳಲ್ಲಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದು, ಅದು ತಮ್ಮ ಮುಂದಿನ ಸಿನಿಮಾ ವೃತ್ತಿಜೀವನಕ್ಕೆ ತರಬೇತಿಯಂತೆ ಕೆಲಸ ಮಾಡಿತು ಎಂದು ವಿವರಿಸಿದರು.
ನಂತರ ಕನ್ನಡ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆಯಿತು. ಕನ್ನಡ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಮತ್ತು ವ್ಯವಸ್ಥೆ ಇದ್ದ ಕಾರಣ ಬೆಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿದ್ದಾಗಿ ಅವರು ಹೇಳಿದರು. ಕನ್ನಡ ಚಿತ್ರರಂಗವೇ ತಮ್ಮ ಕರ್ಮಭೂಮಿಯಾಯಿತು ಎಂದು ಅನಂತ್ ನಾಗ್ ಭಾವುಕರಾಗಿ ಸ್ಮರಿಸಿದರು.
ಐದು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಕನ್ನಡ ಮತ್ತು ಹಿಂದಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ
Pingback: ಕುಮಾರಸ್ವಾಮಿ ನಿರಂತರ ಪ್ರಯತ್ನ ನಡೆಸುತ್ತಿದ್ದ