ಕ್ರೀಡೆ
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಮದುವೆ ಫಿಕ್ಸ್? ಮಾರ್ಚ್ನಲ್ಲಿ ಸಾನಿಯಾ ಚಾಂದೋಕ್ ಜೊತೆ ವಿವಾಹ ಮಹೋತ್ಸವ ಸಾಧ್ಯತೆ
ಮುಂಬೈ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಹಾಗೂ ಮುಂಬೈ ಮೂಲದ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ (Saaniya Chandhok) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮುಂದಿನ ಮಾರ್ಚ್ನಲ್ಲಿ ಅರ್ಜುನ್–ಸಾನಿಯಾ ವಿವಾಹ ಮಹೋತ್ಸವ ನಡೆಯುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ವಿವಾಹದ ಸ್ಥಳ ಮತ್ತು ಅಧಿಕೃತ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ ಕುಟುಂಬದ ಆಪ್ತ ವಲಯದಲ್ಲಿ ಮದುವೆ ತಯಾರಿಗಳು ಆರಂಭವಾಗಿವೆ ಎನ್ನಲಾಗುತ್ತಿದೆ. 2025ರ ಆಗಸ್ಟ್ 13ರಂದು ಅರ್ಜುನ್ ಮತ್ತು ಸಾನಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಸಂದರ್ಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು. ಆಪ್ತ ಸ್ನೇಹಿತರು ಹಾಗೂ ಎರಡೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು.
ಸಾನಿಯಾ ಚಾಂದೋಕ್ ಮುಂಬೈನ ಪ್ರಸಿದ್ಧ ‘ಘಾಯ್’ ವ್ಯಾಪಾರ ಕುಟುಂಬದ ಯುವತಿ. ಅವರು ಗ್ರಾವಿಸ್ ಗ್ರೂಪ್ ಅಧ್ಯಕ್ಷ ರವಿ ಘಾಯ್ ಅವರ ಮೊಮ್ಮಗಳು. ಗ್ರಾವಿಸ್ ಗ್ರೂಪ್ ಬ್ರೂಕ್ಲಿನ್ ಕ್ರೀಮರಿಯ ಮೂಲ ಸಂಸ್ಥೆಯಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಸಾನಿಯಾ ‘ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ LLP’ನಲ್ಲಿ ನಿಯೋಜಿತ ಪಾಲುದಾರ ಹಾಗೂ ನಿರ್ದೇಶಕಿಯಾಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಯಾಗಿರುವ ಸಾನಿಯಾ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪದವಿ ಪಡೆದಿದ್ದಾರೆ. ಇದೀಗ ಈ ಸೆಲೆಬ್ರಿಟಿ ಜೋಡಿಯ ಮದುವೆ ಸುದ್ದಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.