Connect with us

ದೇಶ

Rajdhani Express ಎದುರು 90 ಆನೆಗಳು; ಅಧಿಕಾರಿಯ ಸಮಯಪ್ರಜ್ಞೆಗೆ ತಪ್ಪಿದ ಭೀಕರ ಅಪಘಾತ

Published

on

ಗುವಾಹಟಿ: ಅಸ್ಸಾಂನಲ್ಲಿ (Assam) ಸುಮಾರು 90 ಆನೆಗಳ ಹಿಂಡು ರೈಲು ಹಳಿ ದಾಟುತ್ತಿದ್ದ ವೇಳೆ ದಿಬ್ರುಗಢ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ (Dibrugarh-Delhi Rajdhani Express) ಎದುರಾಗಿದ್ದು, ಅರಣ್ಯಾಧಿಕಾರಿಯ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭೀಕರ ಅನಾಹುತ ತಪ್ಪಿದ ಘಟನೆ ನಡೆದಿದೆ. ಅರಣ್ಯ ಸಿಬ್ಬಂದಿ ಕೆಂಪು ಟಾರ್ಚ್ ಮೂಲಕ ಸಿಗ್ನಲ್ ನೀಡಿ ರೈಲನ್ನು ಸಮಯಕ್ಕೆ ಸರಿಯಾಗಿ ನಿಲ್ಲಿಸಿದ್ದು, ಆನೆಗಳ ಹಿಂಡು ಸುರಕ್ಷಿತವಾಗಿ ಹಳಿ ದಾಟಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಸ್ಸಾಂನ ಹೋಜಾಯಿ (Hojai) ಜಿಲ್ಲೆಯ ಹವಾಯಿಪುರ (Hawaipur) ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 4:57ಕ್ಕೆ ಈ ಘಟನೆ ನಡೆದಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ನಯನ್ ಜ್ಯೋತಿ ರಾಜವಂಶಿ ತಿಳಿಸಿದ್ದಾರೆ.

ಮೊದಲು ಕಂಡಿದ್ದು ಕೆಲ ಆನೆಗಳು, ಬಳಿಕ ಗೊತ್ತಾಯ್ತು 90 ಆನೆಗಳ ಹಿಂಡು

ಹವಾಯಿಪುರ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ರೇಂಜ್ ಫಾರೆಸ್ಟ್ ಆಫೀಸರ್ ಮಾಣಿಕ್ ಬರುವಾ ಮತ್ತು ಫಾರೆಸ್ಟರ್-1 ಶಶಾಂಕ್ ರೈ ಅವರಿಗೆ ರೈಲು ಹಳಿಯ ಸಮೀಪ ಆನೆಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಐದರಿಂದ ಹತ್ತು ಆನೆಗಳಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು.

ಆದರೆ ಹಿಂಡಿನತ್ತ ಗಮನಹರಿಸಿ ಎಣಿಕೆ ನಡೆಸಿದಾಗ ಬರೋಬ್ಬರಿ ಸುಮಾರು 90 ಆನೆಗಳಿರುವುದು ತಿಳಿದುಬಂದಿದೆ. ಹಿಂಡಿನಲ್ಲಿ ಮರಿಯಾನೆಗಳೂ ಇದ್ದವು. ಆನೆಗಳು ರೈಲು ಹಳಿಯನ್ನು ದಾಟಿ ಸಮೀಪದ ಕಬ್ಬಿನ ಗದ್ದೆಗಳತ್ತ ಸಾಗುತ್ತಿದ್ದವು.

ಎದುರಾದ ರಾಜಧಾನಿ ಎಕ್ಸ್‌ಪ್ರೆಸ್; ಕೆಂಪು ಟಾರ್ಚ್‌ನಿಂದ ರೈಲು ನಿಲ್ಲಿಸಿದ ಅಧಿಕಾರಿ

ಆನೆಗಳ ಹಿಂಡು ಹಳಿ ದಾಟುತ್ತಿದ್ದ ಸಂದರ್ಭದಲ್ಲೇ ದಿಬ್ರುಗಢ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಅದೇ ಮಾರ್ಗದಲ್ಲಿ ಬರುತ್ತಿರುವುದು ಅರಣ್ಯ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಫಾರೆಸ್ಟರ್ ಶಶಾಂಕ್ ರೈ, ಲೋಕೋ ಪೈಲಟ್‌ಗೆ ಕೆಂಪು ಸಿಗ್ನಲ್‌ನ ಟಾರ್ಚ್ ತೋರಿಸಿ ರೈಲನ್ನು ನಿಲ್ಲಿಸಲು ಸೂಚಿಸಿದ್ದಾರೆ.

ಸಿಗ್ನಲ್ ಗಮನಿಸಿದ ಲೋಕೋ ಪೈಲಟ್ ಕೂಡಲೇ ರೈಲನ್ನು ನಿಲ್ಲಿಸಿದ್ದು, ಪರಿಣಾಮವಾಗಿ ಯಾವುದೇ ಆತಂಕವಿಲ್ಲದೆ ಸಂಪೂರ್ಣ ಆನೆಗಳ ಹಿಂಡು ಸುರಕ್ಷಿತವಾಗಿ ರೈಲು ಹಳಿ ದಾಟಿದೆ.

ತಪ್ಪಿದ ಭೀಕರ ಅನಾಹುತ

ರೈಲು ಸಮಯಕ್ಕೆ ನಿಲ್ಲಿಸದೇ ಮುಂದುವರಿದಿದ್ದರೆ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಹಿಂಡಿನಲ್ಲಿ ಮರಿಯಾನೆಗಳೂ ಇದ್ದುದರಿಂದ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗಿತ್ತು. ಅರಣ್ಯ ಸಿಬ್ಬಂದಿಯ ತ್ವರಿತ ಕ್ರಮ ಮತ್ತು ಲೋಕೋ ಪೈಲಟ್‌ನ ಎಚ್ಚರಿಕೆಯಿಂದ ದೊಡ್ಡ ದುರಂತ ತಪ್ಪಿದ್ದು, ಅಧಿಕಾರಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

India Mineral Security ಖನಿಜ ತೆರಿಗೆಗೆ ಹೊಸ ನಿಯಮ: ಕೇಂದ್ರದ ಮಹತ್ವದ ಹೆಜ್ಜೆ, ರಾಜ್ಯಗಳ ಅಧಿಕಾರಕ್ಕೆ ಕಡಿವಾಣ?

Published

on

ನವದೆಹಲಿ: India Mineral Security ಕೇವಲ ಗಣಿಗಾರಿಕೆ ಕ್ಷೇತ್ರಕ್ಕೆ ಸೀಮಿತವಾದ ವಿಚಾರವಲ್ಲ. ಇದು ದೇಶದ ಆರ್ಥಿಕ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಮುಖ ಭಾಗವಾಗಿದೆ. ಮೂಲಸೌಕರ್ಯ, ಉಕ್ಕು, ರಕ್ಷಣಾ ಉತ್ಪಾದನೆ, ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ ಹಾಗೂ ಹೊಸ ತಂತ್ರಜ್ಞಾನಗಳಿಗೆ ಅಗತ್ಯವಿರುವ ಖನಿಜಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಖನಿಜ ಪೂರೈಕೆಯನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ಭಾರತದಲ್ಲಿ ಖನಿಜಗಳ ಮೇಲಿನ ತೆರಿಗೆಗೆ ಸಂಬಂಧಿಸಿದ ಕಾನೂನು ವಿವಾದ ಸುಮಾರು 35 ವರ್ಷಗಳಿಂದ ಮುಂದುವರಿದಿತ್ತು. 1957ರ Mines and Minerals (Development and Regulation) Act (MMDR Act) ನಲ್ಲಿ ಕೇಂದ್ರದ ಖನಿಜ ಅಭಿವೃದ್ಧಿ ನಿಯಂತ್ರಣಾಧಿಕಾರ ಮತ್ತು ರಾಜ್ಯಗಳ ಖನಿಜ ಹಕ್ಕುಗಳ ಮೇಲಿನ ತೆರಿಗೆ ವಿಧಿಸುವ ಅಧಿಕಾರದ ನಡುವಿನ ಮಿತಿಗಳು ಸ್ಪಷ್ಟವಾಗಿರಲಿಲ್ಲ. ಇದರಿಂದ ಕೇಂದ್ರ ಮತ್ತು ರಾಜ್ಯಗಳ ಅಧಿಕಾರದ ಕುರಿತು ಹಲವು ವ್ಯಾಖ್ಯಾನಗಳು ಮೂಡಿ, ದೀರ್ಘಕಾಲ ಕಾನೂನು ಹೋರಾಟ ನಡೆಯಿತು.

ಸುಪ್ರೀಂ ಕೋರ್ಟ್ ತೀರ್ಪು ಬದಲಿಸಿದ ಖನಿಜ ತೆರಿಗೆ ಚಿತ್ರಣ

1989ರಲ್ಲಿ India Cements Ltd. v. State of Tamil Nadu ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ ರಾಯಲ್ಟಿಯನ್ನು ತೆರಿಗೆಯ ಸ್ವರೂಪದಲ್ಲಿ ಪರಿಗಣಿಸಿತ್ತು. ಇದರಿಂದ ರಾಜ್ಯಗಳು ಖನಿಜಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ನಿರ್ಬಂಧಿತ ವ್ಯಾಖ್ಯಾನಕ್ಕೆ ಅವಕಾಶವಾಯಿತು.

ನಂತರ 2004ರಲ್ಲಿ ಮತ್ತೊಂದು ಸಂವಿಧಾನ ಪೀಠ ಈ ನಿಲುವಿನ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿತು. ರಾಯಲ್ಟಿ ತೆರಿಗೆಯಲ್ಲ, ಬದಲಾಗಿ ಒಪ್ಪಂದದಡಿ ಪಾವತಿಸುವ ಮೊತ್ತ ಎಂದು ಹೇಳಲಾಯಿತು.

ಈ ದೀರ್ಘಕಾಲದ ಗೊಂದಲಕ್ಕೆ 2024ರಲ್ಲಿ ಸುಪ್ರೀಂ ಕೋರ್ಟ್‌ನ Mineral Area Development Authority v. SAIL ತೀರ್ಪು ಮಹತ್ವದ ಸ್ಪಷ್ಟತೆ ನೀಡಿತು. ರಾಯಲ್ಟಿ ತೆರಿಗೆಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಜೊತೆಗೆ, ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆ ಎಂಬುದನ್ನೂ ಗುರುತಿಸಿತು.

2026ರ MMDR ತಿದ್ದುಪಡಿ ಏಕೆ ಮಹತ್ವದ್ದು?

ಈ ಹಿನ್ನೆಲೆಯಲ್ಲಿ Mines and Minerals (Development and Regulation) Amendment Bill, 2026 ಮಹತ್ವ ಪಡೆದುಕೊಂಡಿದೆ. ಆಗಸ್ಟ್ 12ರಂದು ಲೋಕಸಭೆ ಹಾಗೂ ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾದ ಈ ಮಸೂದೆ ಖನಿಜ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಏಕರೂಪ, ಊಹಿಸಬಹುದಾದ ಮತ್ತು ಹೂಡಿಕೆ ಸ್ನೇಹಿಯಾಗಿಸುವ ಉದ್ದೇಶ ಹೊಂದಿದೆ.

ಮುಖ್ಯವಾಗಿ, ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿಗೆ ಸಂಬಂಧಿಸಿದಂತೆ ರಾಜ್ಯಗಳು ವಿಧಿಸುವ ಹೆಚ್ಚುವರಿ ತೆರಿಗೆ, ಸೆಸ್ ಹಾಗೂ ಇತರ ಲೆವಿಗಳ ಮೇಲೆ ಸ್ಪಷ್ಟ ಮಿತಿಗಳನ್ನು ರೂಪಿಸುವ ಉದ್ದೇಶವನ್ನು ತಿದ್ದುಪಡಿ ಹೊಂದಿದೆ.

ಇದರಿಂದ ಒಂದೇ ರೀತಿಯ ಖನಿಜವನ್ನು ಉತ್ಪಾದಿಸುವ ಎರಡು ರಾಜ್ಯಗಳಲ್ಲಿ ಕೇವಲ ತೆರಿಗೆ ನೀತಿಯ ವ್ಯತ್ಯಾಸದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಭಾರಿ ಅಂತರ ಉಂಟಾಗುವುದನ್ನು ತಡೆಯುವ ಪ್ರಯತ್ನ ನಡೆಯಲಿದೆ.

ಹೂಡಿಕೆದಾರರಿಗೆ ತೆರಿಗೆ ಅನಿಶ್ಚಿತತೆ ಕಡಿಮೆಯಾಗುತ್ತಾ?

ಗಣಿಗಾರಿಕೆ ಕಂಪನಿಗಳಿಗೆ ಪ್ರಮುಖ ಸಮಸ್ಯೆ ಕೇವಲ ಇಂದಿನ ತೆರಿಗೆ ಪ್ರಮಾಣವಲ್ಲ. ಭವಿಷ್ಯದಲ್ಲಿ ಹೊಸ ತೆರಿಗೆ ಅಥವಾ ಸೆಸ್ ವಿಧಿಸುವ ಸಾಧ್ಯತೆ ಕೂಡ ದೊಡ್ಡ ಅಪಾಯವಾಗಿದೆ.

ಒಂದು ಕಂಪನಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಗಣಿಗಾರಿಕೆ ಯೋಜನೆ ಆರಂಭಿಸಿದ ನಂತರ ಹಲವು ವರ್ಷಗಳ ಹಿಂದಿನ ಅವಧಿಗೆ ಹೆಚ್ಚುವರಿ ತೆರಿಗೆ ಬೇಡಿಕೆ ಬಂದರೆ, ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಯೇ ಬದಲಾಗಬಹುದು.

2024ರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೆಲವು ರಾಜ್ಯಗಳಿಗೆ 2004-05ರಿಂದ ಬಾಕಿ ಇರುವ ಖನಿಜ ಸಂಬಂಧಿತ ತೆರಿಗೆಗಳನ್ನು ವಸೂಲಿ ಮಾಡುವ ಅವಕಾಶ ದೊರೆತಿತ್ತು. ಇದರಿಂದ ಗಣಿಗಾರಿಕೆ ಕಂಪನಿಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳ ಸಂಭವನೀಯ ಹೊಣೆಗಾರಿಕೆ ಸೃಷ್ಟಿಯಾಗಿತ್ತು.

ಹೊಸ ತಿದ್ದುಪಡಿ ಕಾನೂನು ಜಾರಿಗೆ ಬರುವ ಮೊದಲು ವಿಧಿಸಲಾದ ಕೆಲವು ಬಾಕಿ ಅಥವಾ ವಸೂಲಾಗದ ರಾಜ್ಯ ಲೆವಿಗಳನ್ನು ಅಮಾನ್ಯಗೊಳಿಸುವ ವ್ಯವಸ್ಥೆಯನ್ನು ತರಲು ಉದ್ದೇಶಿಸಿದೆ. ಆದರೆ ಈಗಾಗಲೇ ಪಾವತಿಸಿರುವ ಅಥವಾ ವಸೂಲಿ ಮಾಡಿರುವ ಮೊತ್ತವನ್ನು ಮರುಪಾವತಿಸುವುದಿಲ್ಲ ಎಂಬ ವ್ಯವಸ್ಥೆಯೂ ಇದೆ.

ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯೇ?

ಈ ತಿದ್ದುಪಡಿಯ ವಿರುದ್ಧ ಪ್ರಮುಖ ಚರ್ಚೆ ರಾಜ್ಯಗಳ ಹಣಕಾಸು ಸ್ವಾಯತ್ತತೆ ಕುರಿತು ನಡೆಯಬಹುದು. ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವಿರುವಾಗ, ಕೇಂದ್ರ ಸರ್ಕಾರ ಆ ಅಧಿಕಾರಕ್ಕೆ ಎಷ್ಟು ಮಿತಿ ವಿಧಿಸಬಹುದು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಆದರೆ ಕೇಂದ್ರದ ನಿಲುವು, ಖನಿಜ ಅಭಿವೃದ್ಧಿ ಮತ್ತು ಗಣಿಗಾರಿಕೆ ಕ್ಷೇತ್ರದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಸತ್ತಿಗೆ ಇರುವ ಅಧಿಕಾರದ ಆಧಾರದ ಮೇಲೆ ರಾಜ್ಯಗಳ ತೆರಿಗೆ ಅಧಿಕಾರಕ್ಕೆ ಮಿತಿಗಳನ್ನು ನಿಗದಿಪಡಿಸಬಹುದು ಎಂಬುದಾಗಿದೆ.

ಇದು ಕೇವಲ ಕೇಂದ್ರ-ರಾಜ್ಯಗಳ ನಡುವಿನ ಆದಾಯ ಹಂಚಿಕೆ ವಿವಾದ ಎಂದು ನೋಡುವುದು ಸರಳೀಕರಣವಾಗುತ್ತದೆ. ಮೂಲ ಉದ್ದೇಶ ಖನಿಜ ಕ್ಷೇತ್ರದಲ್ಲಿ ತೆರಿಗೆ ಮತ್ತು ಲೆವಿ ವ್ಯವಸ್ಥೆಯನ್ನು ಹೆಚ್ಚು ಸ್ಥಿರಗೊಳಿಸುವುದಾಗಿದೆ.

ರಾಯಲ್ಟಿ ಮತ್ತು ಹರಾಜು ಪ್ರೀಮಿಯಂ ಮುಂದುವರಿಕೆ

ತಿದ್ದುಪಡಿಯಿಂದ ರಾಜ್ಯಗಳಿಗೆ ದೊರೆಯುವ ಮೂಲ ಖನಿಜ ಆದಾಯ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುವುದಿಲ್ಲ. ರಾಯಲ್ಟಿ, ಹರಾಜು ಪ್ರೀಮಿಯಂ ಮತ್ತು ಇತರ ಕಾನೂನುಬದ್ಧ ಆದಾಯಗಳು ಮುಂದುವರಿಯಲಿವೆ.

ಮುಖ್ಯ ಬದಲಾವಣೆ ರಾಜ್ಯಗಳು ವಿಧಿಸಬಹುದಾದ ಹೆಚ್ಚುವರಿ ತೆರಿಗೆ, ಸೆಸ್ ಮತ್ತು ಲೆವಿಗಳ ಸುತ್ತಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡುವುದರಲ್ಲಿದೆ.

ಅಂದರೆ, ಇದನ್ನು ಕೇಂದ್ರ ಸರ್ಕಾರ ಸಂಪೂರ್ಣ ಗಣಿಗಾರಿಕೆ ಕ್ಷೇತ್ರದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಿದೆ ಎಂದು ಹೇಳುವುದು ಸರಿಯಾಗುವುದಿಲ್ಲ.

ಲಿಥಿಯಂ, ಕೋಬಾಲ್ಟ್, ನಿಕಲ್‌ಗೆ ಹೆಚ್ಚುತ್ತಿರುವ ಬೇಡಿಕೆ

ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಸಂಗ್ರಹಣೆ, ಸೌರ ಮತ್ತು ಪವನ ವಿದ್ಯುತ್ ಹಾಗೂ ಸುಧಾರಿತ ತಂತ್ರಜ್ಞಾನಗಳ ವಿಸ್ತರಣೆಯಿಂದ ಲಿಥಿಯಂ, ಕೋಬಾಲ್ಟ್, ನಿಕಲ್ ಮತ್ತು ಅಪರೂಪದ ಭೂಮಿಯ ಖನಿಜಗಳ ಬೇಡಿಕೆ ಹೆಚ್ಚುತ್ತಿದೆ.

ದೇಶೀಯ ಗಣಿಗಾರಿಕೆಯಲ್ಲಿ ತೆರಿಗೆ ಮತ್ತು ನಿಯಂತ್ರಣದ ಅನಿಶ್ಚಿತತೆ ಮುಂದುವರಿದರೆ, ಕಂಪನಿಗಳು ಭಾರತದಲ್ಲಿ ಅನ್ವೇಷಣೆ ಮತ್ತು ಉತ್ಪಾದನೆಗೆ ಹೂಡಿಕೆ ಮಾಡಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಆಗ ದೇಶವು ಅಗತ್ಯ ಖನಿಜಗಳಿಗಾಗಿ ವಿದೇಶಿ ಪೂರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗಬಹುದು.

ಹೀಗಾಗಿ ಖನಿಜ ಭದ್ರತೆ ನೇರವಾಗಿ ಆತ್ಮನಿರ್ಭರ ಭಾರತದ ಗುರಿಯೊಂದಿಗೆ ಸಂಪರ್ಕ ಹೊಂದಿದೆ.

2015ರಿಂದ ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ

ಕೇಂದ್ರ ಸರ್ಕಾರ 2015ರಿಂದ ಗಣಿಗಾರಿಕೆ ಕ್ಷೇತ್ರದಲ್ಲಿ ಪಾರದರ್ಶಕ ಹರಾಜು, ಅನ್ವೇಷಣೆ ಮತ್ತು ಖನಿಜ ಸಂಪನ್ಮೂಲಗಳ ವೇಗದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. 2023 ಮತ್ತು 2025ರ MMDR ಸುಧಾರಣೆಗಳ ಮೂಲಕ ಪ್ರಮುಖ ಮತ್ತು ಕಾರ್ಯತಂತ್ರದ ಖನಿಜಗಳ ಅನ್ವೇಷಣೆ ಹಾಗೂ ಉತ್ಪಾದನೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗಿದೆ.

ಕಲ್ಲಿದ್ದಲು ಕ್ಷೇತ್ರದಲ್ಲಿ Insurance Surety Bonds ಅನ್ನು ಕಾರ್ಯಕ್ಷಮತಾ ಬ್ಯಾಂಕ್ ಗ್ಯಾರಂಟಿಗೆ ಪರ್ಯಾಯವಾಗಿ ಬಳಸುವ ಕ್ರಮ, ಗಣಿಗಳ ಕಾರ್ಯಾಚರಣೆಯನ್ನು ವೇಗಗೊಳಿಸುವ ಹೊಸ ಹರಾಜು ನಿಯಮಗಳು ಹಾಗೂ ಪ್ರಮುಖ ಖನಿಜ ಬ್ಲಾಕ್‌ಗಳ ಹರಾಜು ಕೂಡ ಇದೇ ಸುಧಾರಣಾ ದಿಕ್ಕಿನ ಭಾಗವಾಗಿದೆ.

ಉಕ್ಕು ಉತ್ಪಾದನೆಗೆ ಅತ್ಯಂತ ಪ್ರಮುಖವಾದ Coking Coal ಅನ್ನು Critical and Strategic Mineral ಎಂದು ಗುರುತಿಸಿರುವುದು ಕೂಡ ಖನಿಜ ನೀತಿ ಈಗ ಕೇವಲ ಗಣಿಗಾರಿಕೆ ಆದಾಯದ ವಿಚಾರವಾಗಿರದೆ ಕೈಗಾರಿಕಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಪೂರೈಕೆ ಭದ್ರತೆಯ ಭಾಗವಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಭಾರತದ ಆರ್ಥಿಕ ಭದ್ರತೆಗೆ ಖನಿಜವೇ ಆಧಾರ

ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ, ರಕ್ಷಣಾ ಉತ್ಪಾದನೆ, ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ಖನಿಜಗಳು ಪ್ರಮುಖ ಆಧಾರವಾಗಲಿವೆ.

ಆದ್ದರಿಂದ ದೇಶದಲ್ಲಿ ಖನಿಜ ಸಂಪನ್ಮೂಲಗಳಿದ್ದರೂ ಅವುಗಳನ್ನು ಸ್ಪರ್ಧಾತ್ಮಕವಾಗಿ ಹೊರತೆಗೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಭಾರತವು ತನ್ನದೇ ಸಂಪನ್ಮೂಲಗಳಿದ್ದರೂ ಆಮದು ಅವಲಂಬಿತ ರಾಷ್ಟ್ರವಾಗುವ ಅಪಾಯವಿದೆ.

ತೆರಿಗೆ ಅನಿಶ್ಚಿತತೆ ಕಡಿಮೆ ಮಾಡುವುದು, ಅನ್ವೇಷಣೆಯನ್ನು ಹೆಚ್ಚಿಸುವುದು, ಗಣಿಗಳನ್ನು ವೇಗವಾಗಿ ಕಾರ್ಯಾರಂಭ ಮಾಡಿಸುವುದು ಮತ್ತು ದೇಶೀಯ ಖನಿಜ ಪೂರೈಕೆಯನ್ನು ಬಲಪಡಿಸುವುದು—2026ರ ಖನಿಜ ಸುಧಾರಣೆಯ ಪ್ರಮುಖ ದಿಕ್ಕುಗಳಾಗಿವೆ.

ಒಟ್ಟಿನಲ್ಲಿ, ಭಾರತದ ಖನಿಜ ನೀತಿ ಈಗ ಕೇವಲ ಗಣಿಗಾರಿಕೆ ಕ್ಷೇತ್ರದ ಸುಧಾರಣೆಯಲ್ಲ. ಆತ್ಮನಿರ್ಭರ ಭಾರತ ಮತ್ತು Viksit Bharat 2047 ಗುರಿಗಳನ್ನು ಸಾಧಿಸಲು ಅಗತ್ಯವಿರುವ ಆರ್ಥಿಕ ಹಾಗೂ ಕಾರ್ಯತಂತ್ರದ ಭದ್ರತೆಯ ಪ್ರಮುಖ ಅಂಶವಾಗಿ ಖನಿಜ ಸಂಪನ್ಮೂಲಗಳು ರೂಪುಗೊಳ್ಳುತ್ತಿವೆ.

Continue Reading

ರಾಜ್ಯ

Fake Medicine ಜಾಲಕ್ಕೆ ಎಸ್‌ಐಟಿ ತನಿಖೆ? ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದೇನು?

Published

on

ಬೆಂಗಳೂರು: ಬೇರೆ ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಗಳನ್ನು ತಂದು ಅವುಗಳನ್ನು ಹೊಸ ಬಾಟಲಿಗಳಿಗೆ ತುಂಬಿ, ದುಬಾರಿ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಆಮದು ಮಾಡಿಕೊಂಡ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಹೆಸರಿನ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ Fake Medicine ಜಾಲದ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈ ದಂಧೆಗೆ ಅಂತರರಾಜ್ಯ ಮಟ್ಟದ ಜಾಲವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ ಅವರು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಕರ್ನಾಟಕದಲ್ಲಿ ಇಂತಹ ನಕಲಿ ಔಷಧಿ ಜಾಲ ಬೇರೆಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪತ್ತೆಹಚ್ಚುವ ಅಗತ್ಯವಿದೆ ಎಂದು ಹೇಳಿದರು.

ಕೇಂದ್ರ ಸಚಿವರಿಗೆ ಪತ್ರ, ಎಸ್‌ಐಟಿ ತನಿಖೆಗೆ ಸಿದ್ಧತೆ

ವಿಧಾನಸೌಧದಲ್ಲಿ ಮಾತನಾಡಿದ ಯು.ಟಿ. ಖಾದರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಸಂಬಂಧಪಟ್ಟ ರಾಜ್ಯಗಳ ಸಚಿವರಿಗೂ ಪತ್ರ ಕಳುಹಿಸಲಾಗಿದೆ ಎಂದರು.

ನಕಲಿ ಔಷಧಿ ತಯಾರಿಕೆ ಅಥವಾ ಪ್ಯಾಕಿಂಗ್ ನಡೆದಿರುವ ಘಟಕಗಳ ವಿರುದ್ಧ ಆಯಾ ರಾಜ್ಯಗಳು ಕ್ರಮ ಕೈಗೊಳ್ಳಬೇಕು. ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ಮೂಲಕ ತನಿಖೆ ನಡೆಸುವ ಅಗತ್ಯವಿದ್ದು, ಶೀಘ್ರದಲ್ಲೇ ಎಸ್‌ಐಟಿ ರಚನೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರಾಮನಗರ ಜಿಲ್ಲಾ ಎಸ್‌ಪಿ ಮತ್ತು ಪೊಲೀಸರು ಈಗಾಗಲೇ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

‘150 ಸಿಬ್ಬಂದಿಯಿಂದ 6.5 ಕೋಟಿ ಜನರ ಔಷಧ ಮಾರುಕಟ್ಟೆ ಮೇಲ್ವಿಚಾರಣೆ ಕಷ್ಟ’

ರಾಜ್ಯದಲ್ಲಿ ಸುಮಾರು 6.5 ಕೋಟಿ ಜನಸಂಖ್ಯೆ ಇರುವ ಹಿನ್ನೆಲೆಯಲ್ಲಿ ಕೇವಲ ಆರೋಗ್ಯ ಅಥವಾ ಆಹಾರ ಇಲಾಖೆಯಿಂದ ಮಾತ್ರ ಇಂತಹ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ ಎಂದು ಯು.ಟಿ. ಖಾದರ್ ಹೇಳಿದರು. ಇಲಾಖೆಯಲ್ಲಿ ಸುಮಾರು 150 ಸಿಬ್ಬಂದಿ ಇದ್ದು, ಪ್ರತಿಯೊಂದು ಔಷಧಿ ಅಂಗಡಿ ಹಾಗೂ ಮಾರುಕಟ್ಟೆಯ ಮೇಲೆ ನಿರಂತರ ನಿಗಾ ಇಡುವುದು ಸಾಧ್ಯವಿಲ್ಲ ಎಂದು ತಿಳಿಸಿದರು.

ಒಂದೇ ಔಷಧಿಯನ್ನು ಎರಡು ಅಂಗಡಿಗಳಲ್ಲಿ ಅಸಹಜವಾಗಿ ಬೇರೆ ಬೇರೆ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

6 ಕಂಪನಿಗಳ ಲೇಬಲ್ ಪತ್ತೆ; ತನಿಖೆಯಿಂದ ಇನ್ನಷ್ಟು ಮಾಹಿತಿ

ಪ್ರಕರಣದಲ್ಲಿ ಸದ್ಯಕ್ಕೆ 6 ಕಂಪನಿಗಳ ಲೇಬಲ್‌ಗಳನ್ನು ಬಳಸಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಯಾವ ಕಂಪನಿಗಳ ಹೆಸರನ್ನು ದುರುಪಯೋಗಪಡಿಸಲಾಗಿದೆ, ಔಷಧಿಗಳನ್ನು ಯಾರು ತಂದು ಮಾರಾಟ ಮಾಡುತ್ತಿದ್ದರು ಹಾಗೂ ಈ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದರು.

ಈ ನಕಲಿ ಔಷಧಿಗಳು ಎಷ್ಟು ವರ್ಷಗಳಿಂದ ಮಾರುಕಟ್ಟೆಯಲ್ಲಿವೆ, ಯಾವ್ಯಾವ ಆಸ್ಪತ್ರೆಗಳಿಗೆ ಪೂರೈಕೆಯಾಗಿವೆ ಮತ್ತು ಎಷ್ಟು ರೋಗಿಗಳಿಗೆ ನೀಡಲಾಗಿದೆ ಎಂಬ ಪ್ರಮುಖ ಪ್ರಶ್ನೆಗಳಿಗೂ ತನಿಖೆಯ ನಂತರವೇ ಉತ್ತರ ಸಿಗಲಿದೆ ಎಂದು ಹೇಳಿದರು.

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಕಲಿ ಔಷಧಿ ದಂಧೆಯಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.

Continue Reading

ಬೆಂಗಳೂರು

Devaraja Arasu ಬಳಸುತ್ತಿದ್ದ 1972ರ ಮರ್ಸಿಡೀಸ್ ಕಾರಿನಲ್ಲಿ ಪರಮೇಶ್ವರ್-ಮುನಿಯಪ್ಪ ಸವಾರಿ; ವಿಧಾನಸೌಧದಲ್ಲಿ ಗಮನಸೆಳೆದ ವಿಂಟೇಜ್ Mercedes-Benz

Published

on

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು (Former CM Devaraja Arasu) ಅವರು ತಮ್ಮ ಅಧಿಕಾರಾವಧಿಯಲ್ಲಿ ಬಳಸುತ್ತಿದ್ದ 1972ರ ಮಾಡೆಲ್‌ನ ಅಪರೂಪದ ಮರ್ಸಿಡೀಸ್ ಬೆಂಝ್ (Mercedes-Benz) ವಿಂಟೇಜ್ ಕಾರು ವಿಧಾನಸೌಧದ ಆವರಣದಲ್ಲಿ ಎಲ್ಲರ ಗಮನ ಸೆಳೆದಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ಕಾರಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕ ರಾಜಕಾರಣದಲ್ಲಿ ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದ ದೇವರಾಜ ಅರಸು ಅವರು ಬಳಸುತ್ತಿದ್ದ ಈ ಐಷಾರಾಮಿ ಕಾರು ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷ. ಹಲವು ದಶಕಗಳ ಇತಿಹಾಸ ಹೊಂದಿರುವ ಈ ವಿಂಟೇಜ್ ಬೆಂಝ್ ವಿಧಾನಸೌಧದ ಆವರಣದಲ್ಲಿ ಕಾಣಿಸಿಕೊಂಡಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.

ದೇವರಾಜ ಅರಸು ಅವರ ಕಾರಿನಲ್ಲಿ ಪರಮೇಶ್ವರ್, ಮುನಿಯಪ್ಪ ಸವಾರಿ

ಈ ಅಪರೂಪದ ವಿಂಟೇಜ್ ಕಾರಿನಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ಶಿವರಾಜ ತಂಗಡಗಿ ಸವಾರಿ ಮಾಡಿದರು. ಹಳೆಯ ಕಾಲದ ಐಷಾರಾಮಿ ಕಾರಿನೊಳಗೆ ಕುಳಿತು ಮೂವರು ಸಚಿವರು ಸಂಚರಿಸಿದ್ದು ವಿಧಾನಸೌಧದಲ್ಲಿ ವಿಶೇಷ ಆಕರ್ಷಣೆಯಾಯಿತು.

ಕಾರಿನ ಮುಂಭಾಗದ ಚಾಲಕನ ಪಕ್ಕದ ಸೀಟ್‌ನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕುಳಿತುಕೊಂಡಿದ್ದರು. ಹಿಂಬದಿಯ ಸೀಟಿನಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಶಿವರಾಜ ತಂಗಡಗಿ ಕುಳಿತು ಸವಾರಿ ಮಾಡಿದರು. ದೇವರಾಜ ಅರಸು ಅವರ ಕಾಲದ ಈ ಪ್ರತಿಷ್ಠಿತ ಕಾರು ಮತ್ತೆ ರಸ್ತೆಗಿಳಿದ ದೃಶ್ಯವನ್ನು ಹಲವು ಮಂದಿ ಮೊಬೈಲ್‌ನಲ್ಲಿ ಸೆರೆಹಿಡಿದರು.

ವಿಧಾನಸೌಧದಲ್ಲಿ ಗಮನಸೆಳೆದ ‘ಅರಸು ಕಾರು’

1972ರ ಮಾಡೆಲ್‌ನ ಮರ್ಸಿಡೀಸ್ ಬೆಂಝ್ ಕಾರಿನ ವಿಶಿಷ್ಟ ವಿನ್ಯಾಸ ಮತ್ತು ಹಳೆಯ ಶೈಲಿ ವಿಧಾನಸೌಧದ ಆವರಣದಲ್ಲಿ ಗಮನ ಸೆಳೆಯಿತು. ಹಲವು ವರ್ಷಗಳ ಹಿಂದಿನ ವಾಹನವಾಗಿದ್ದರೂ ಉತ್ತಮ ಸ್ಥಿತಿಯಲ್ಲಿ ಸಂರಕ್ಷಿಸಲಾಗಿರುವುದು ಕೂಡ ವಿಶೇಷವಾಗಿತ್ತು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕಾರನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಇದೀಗ ಅವರ ರಾಜಕೀಯ ನೆನಪುಗಳನ್ನು ಹೊತ್ತಿರುವ ಈ ವಿಂಟೇಜ್ ಕಾರು ಮತ್ತೆ ಸುದ್ದಿಯಾಗಿದೆ. ರಾಜ್ಯದ ಪ್ರಮುಖ ನಾಯಕರು ಇದೇ ಕಾರಿನಲ್ಲಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ‘ಅರಸು ಕಾರು’ ಎಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

Continue Reading
Advertisement

Trending