ಅರಕಲಗೂಡು ಮೂಲದ ಜಯಶ್ರೀ ದಂಪತಿಗಳ ಅಪರೂಪದ ಭಕ್ತಿ ಸೇವೆ | Hosa Suddi

ದೇಶ

ಅರಕಲಗೂಡು ಮೂಲದ ಜಯಶ್ರೀ ದಂಪತಿಗಳ ಅಪರೂಪದ ಭಕ್ತಿ ಸೇವೆ

Published

on

ಬೆಂಗಳೂರು/ಅರಕಲಗೂಡು: ಬೆಂಗಳೂರು ನಿವಾಸಿಯಾಗಿರುವ ಶ್ರೀಮತಿ ಜಯಶ್ರೀ ಫಣೀಶ್ (W/o ಡಾ. ಫಣೀಶ್) ಅವರು ಭಕ್ತಿ, ಸಂಕಲ್ಪ ಮತ್ತು ತ್ಯಾಗದ ಅಪೂರ್ವ ಉದಾಹರಣೆಯಾಗಿ ಅಯೋಧ್ಯೆಯ ಶ್ರೀ ಬಾಲರಾಮ ಮೂರ್ತಿಯನ್ನು ಸ್ವಂತ ವೆಚ್ಚದಲ್ಲಿ ನಿರ್ಮಿಸಿ ದೇಶದ ಗಮನ ಸೆಳೆದಿದ್ದಾರೆ.

ಮೂಲತಃ ಅರಕಲಗೂಡು ತಾಲೂಕಿನ ಅಗ್ರಹಾರ ಗ್ರಾಮದವರು ಆಗಿರುವ ಜಯಶ್ರೀ ಅವರು ರಾಮನಾಥಪುರದ ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ, ಕೊಣನೂರಿನ ಬಿ.ಎಂ. ಶೆಟ್ಟಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಉನ್ನತ ವ್ಯಾಸಂಗವನ್ನು ಹಾಸನದಲ್ಲಿ ಪೂರ್ಣಗೊಳಿಸಿದ್ದಾರೆ.

ನಂತರ ದೊಡ್ಡ ಮಗ್ಗೆ ಗ್ರಾಮದ ಖ್ಯಾತ ಮೂಳೆ ತಜ್ಞರಾದ ಡಾ. ಫಣೀಶ್ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ದಂಪತಿಗಳು ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಖ್ಯಾತ ನೃತ್ಯಗಾರ್ತಿ ಸಂಗೀತಾ ಮತ್ತು ಶ್ರೇಯಸ್ ಎಂಬ ಇಬ್ಬರು ಮಕ್ಕಳು ಇದ್ದು, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಒಂದು ಆಧ್ಯಾತ್ಮಿಕ ಸಂಕಲ್ಪದೊಂದಿಗೆ 9 ತಿಂಗಳ ಹಿಂದೆ ಪ್ರಾರಂಭಿಸಿದ ಜಯಶ್ರೀ ಅವರು, ಪ್ರತಿದಿನ 18 ಗಂಟೆಗಳ ಶ್ರಮದೊಂದಿಗೆ (ಒಟ್ಟು 2832 ಗಂಟೆಗಳು) ಶ್ರೀರಾಮನ ಜಪ ಮಾಡುತ್ತಾ ಚಿನ್ನ, ವಜ್ರ, ವೈಡೂರ್ಯ ಮತ್ತು ನವರತ್ನಗಳಿಂದ ಶ್ರೀ ಬಾಲರಾಮ ಮೂರ್ತಿಯನ್ನು ನಿರ್ಮಿಸಿದ್ದಾರೆ. ಈ ಕಾರ್ಯಕ್ಕೆ ಅಂದಾಜು ರೂ.2 ಕೋಟಿ ವೆಚ್ಚವಾಗಿದ್ದು, ಸಂಪೂರ್ಣವಾಗಿ ಸ್ವಂತ ಖರ್ಚಿನಿಂದ ಮಾಡಲಾಗಿದೆ.

ಸುಮಾರು 6 ಅಡಿ ಎತ್ತರದ ಈ ಬಾಲರಾಮ ಮೂರ್ತಿಯ ಸುತ್ತಲೂ ಶ್ರೀ ಮಹಾವಿಷ್ಣುವಿನ ದಶಾವತಾರಗಳು, ಕೆಳಭಾಗದಲ್ಲಿ ನವಗ್ರಹ ಮೂರ್ತಿಗಳು ಅಳವಡಿಸಲ್ಪಟ್ಟಿವೆ. ಈ ಮಹತ್ಕಾರ್ಯಕ್ಕೆ ಪತಿ ಡಾ. ಫಣೀಶ್ ಸಂಪೂರ್ಣ ಸಹಕಾರ ನೀಡಿದ್ದಾರೆ.

ಈ ವಜ್ರ ಖಚಿತ ಮೂರ್ತಿಯನ್ನು ಕಳೆದ ಒಂದು ತಿಂಗಳಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದ 33,000ಕ್ಕೂ ಹೆಚ್ಚು ಭಕ್ತರು ದರ್ಶನ ಮಾಡಿ ಪುನೀತರಾಗಿದ್ದಾರೆ. ದಂಪತಿಗಳು ಪ್ರತಿದಿನ ಭಜನೆ, ಅನ್ನದಾನ ಹಾಗೂ ಫಲ–ತಾಂಬೂಲ ವಿತರಣೆ ಮಾಡಿದ್ದಾರೆ.

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಅರಕಲಗೂಡು ಶಾಸಕ ಎ. ಮಂಜಣ್ಣ, ಸಂಗೀತ ಸಾಮ್ರಾಟ್ ಆರ್.ಕೆ. ಪದ್ಮನಾಭನ್ ಸೇರಿದಂತೆ ಹಲವು ಗಣ್ಯರು ಮೂರ್ತಿಯ ದರ್ಶನ ಮಾಡಿ ದಂಪತಿಗಳನ್ನು ಸನ್ಮಾನಿಸಿದ್ದಾರೆ.

ಈ ಶ್ರೀ ಬಾಲರಾಮ ಮೂರ್ತಿಯು ಇದೇ ತಿಂಗಳ 28ರಂದು ಅಯೋಧ್ಯೆ ರಾಮಮಂದಿರದಲ್ಲಿ ಅನಾವರಣಗೊಳ್ಳಲಿದೆ. ಅಂದು ಪುತ್ರಿ ಸಂಗೀತಾರಿಂದ ನಾಟ್ಯ ಕಾರ್ಯಕ್ರಮವೂ ನಡೆಯಲಿದೆ.

Trending

Exit mobile version