ಬೆಂಗಳೂರು ಟ್ರಾಫಿಕ್ ದಂಡ ಶಾಕ್: 70 ಸಾವಿರ ಕಾರಿಗೆ 1.11 ಲಕ್ಷ ರೂ. ಫೈನ್, ವಿದ್ಯಾರ್ಥಿಗೆ ಬಿಗ್ ಎಚ್ಚರಿಕೆ | Hosa Suddi

ಅಪರಾಧ

ಬೆಂಗಳೂರು ಟ್ರಾಫಿಕ್ ದಂಡ ಶಾಕ್: 70 ಸಾವಿರ ಕಾರಿಗೆ 1.11 ಲಕ್ಷ ರೂ. ಫೈನ್, ವಿದ್ಯಾರ್ಥಿಗೆ ಬಿಗ್ ಎಚ್ಚರಿಕೆ

Published

on

ಬೆಂಗಳೂರು, ಜ.16: ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ (Bangalore Traffic Fine) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದು ಕಡೆ ವೇಗ ಮಿತಿ, ಸಿಗ್ನಲ್ ಜಂಪ್ ಮಾಡಿದವರಿಗೆ ದಂಡ ಬೀಳುತ್ತಿದ್ದರೆ, ಮತ್ತೊಂದು ಕಡೆ ವಾಹನಗಳನ್ನು ಅಕ್ರಮವಾಗಿ ಮಾಡಿಫೈ ಮಾಡಿದವರ ಮೇಲೂ ಕಠಿಣ ಕ್ರಮ ಜರುಗುತ್ತಿದೆ. ಇಂತಹದ್ದೇ ಪ್ರಕರಣವೊಂದರಲ್ಲಿ 70 ಸಾವಿರ ರೂ. ಮೌಲ್ಯದ ಕಾರಿಗೆ 1.11 ಲಕ್ಷ ರೂ. ದಂಡ ವಿಧಿಸಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಜನವರಿ 2 ರಂದು ನಗರದ ಹೆಣ್ಣೂರು ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದಾಗ, ಕಾರಿನ ಹಿಂದಿನಿಂದ ಬೆಂಕಿಯ ಕಿಡಿಗಳು ಹೊರಬರುತ್ತಿದ್ದವು ಹಾಗೂ ಭಾರೀ ಶಬ್ದ ಕೇಳಿಬರುತ್ತಿತ್ತು. ಈ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ವೇಳೆ ದಾರಿಹೋಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ದೂರು ಆಧರಿಸಿ ಸಂಚಾರಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾರು ಹಾಗೂ ವಿದ್ಯಾರ್ಥಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು. ಪ್ರಕರಣ ದಾಖಲಿಸುವ ಬದಲು, ನಿಯಮ ಉಲ್ಲಂಘನೆಯ ಕುರಿತು ಪ್ರಾದೇಶಿಕ ಸಾರಿಗೆ ಕಚೇರಿ (RTO)ಗೆ ದೂರು ನೀಡಲಾಯಿತು. ತನಿಖೆ ವೇಳೆ ಕಾರಿನಲ್ಲಿ ಅಕ್ರಮವಾಗಿ ಮಾಡಿಫೈ ಮಾಡಿದ ಸೈಲೆನ್ಸರ್ ಇರುವುದು ದೃಢಪಟ್ಟಿತು.

ಈ ಸೈಲೆನ್ಸರ್‌ನಿಂದ ಅತಿಯಾದ ಶಬ್ದ ಮಾಲಿನ್ಯ ಉಂಟಾಗುವುದಲ್ಲದೆ, ಇತರ ವಾಹನ ಚಾಲಕರಿಗೆ ಭಯ ಹುಟ್ಟಿಸುವಂತೆ ಬೆಂಕಿಯ ಕಿಡಿಗಳು ಹೊರಬರುತ್ತಿದ್ದವು. ಇದು ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗೆ ರಾಜಕೀಯ ಪ್ರಭಾವವಿದೆ ಎಂಬ ಆರೋಪವೂ ಕೇಳಿಬಂದಿತ್ತು. ಕಡಿಮೆ ದಂಡ ವಿಧಿಸುವಂತೆ ಒತ್ತಡ ಇದ್ದರೂ, ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ 1,11,500 ರೂ. ದಂಡ ವಿಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ದಂಡ ಪಾವತಿ ಬಳಿಕ ಕಾರನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Trending

Exit mobile version