ಅಪರಾಧ
ಟ್ರಾಫಿಕ್ ಜಾಮ್ ಸಮಯದಲ್ಲಿ ಮೊಬೈಲ್ ಬಳಕೆ ಹೆಚ್ಚಳ — ಸಾರ್ವಜನಿಕರಿಂದ ಕಳವಳ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ, ವಾಹನ ಸವಾರರ ಅಜಾಗರೂಕತೆಯಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿಲ್ಲ. ವಿಶೇಷವಾಗಿ ಟ್ರಾಫಿಕ್ ಜಾಮ್ ಸಮಯದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಇದು ರಸ್ತೆ ಸುರಕ್ಷತೆಯ ವಿಷಯದಲ್ಲಿ ಹೊಸ ಆತಂಕ ಮೂಡಿಸಿದೆ.
ಆಟೋ, ಕ್ಯಾಬ್ ಹಾಗೂ ಖಾಸಗಿ ವಾಹನ ಚಾಲಕರು ಸಿಗ್ನಲ್‌ನಲ್ಲಿ ನಿಂತಿರುವಾಗ ಅಥವಾ ನಿಧಾನಗತಿಯ ಸಂಚಾರದ ವೇಳೆಯಲ್ಲೂ ಮೊಬೈಲ್ ಬಳಸುತ್ತಿದ್ದಾರೆ. ನೇವಿಗೇಷನ್‌ಗೆ ಮಾತ್ರವಲ್ಲದೆ Instagram ರೀಲ್ಸ್, YouTube ಶಾರ್ಟ್ಸ್, ವಿಡಿಯೋ ವೀಕ್ಷಣೆಗಳಲ್ಲಿ ತೊಡಗಿರುವ ಚಾಲಕರ ಸಂಖ್ಯೆ ಹೆಚ್ಚಾಗುತ್ತಿದೆ.
ಸಂಚಾರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, 2025ರ ಜನವರಿ ರಿಂದ ಅಕ್ಟೋಬರ್ ವರೆಗೆ ಚಾಲನೆ ಮಾಡುವಾಗ ಮೊಬೈಲ್ ಬಳಕೆಯ 38,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ ಸುಮಾರು 20% ಹೆಚ್ಚಾಗಿದೆ.
ರಸ್ತೆ ಮಧ್ಯೆ ಮೊಬೈಲ್ ಬಳಸುವ ಈ ಪ್ರವೃತ್ತಿ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದ್ದು, ನಾಗರಿಕರು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ. ಪೊಲೀಸರು ಇದೀಗ ಟ್ರಾಫಿಕ್ ಸಿಗ್ನಲ್ ಪ್ರದೇಶಗಳಲ್ಲಿ ಹೆಚ್ಚುವರಿ ನಿಗಾ ವಹಿಸಿ, ಮೊಬೈಲ್ ಬಳಸುವ ಚಾಲಕರಿಗೆ ಭಾರೀ ದಂಡ ವಿಧಿಸುವ ಯೋಜನೆ ಕೈಗೊಂಡಿದ್ದಾರೆ.