Belagavi Assembly: ಬಾಡಿಗೆ ಕಾಯ್ದೆ ತಿದ್ದುಪಡಿ ಸೇರಿ 12 ಪ್ರಮುಖ ವಿಧೇಯಕಗಳಿಗೆ ವಿಧಾನಸಭೆ ಮುದ್ರೆ |

ದೇಶ

Belagavi Assembly: ಬಾಡಿಗೆ ಕಾಯ್ದೆ ತಿದ್ದುಪಡಿ ಸೇರಿ 12 ಪ್ರಮುಖ ವಿಧೇಯಕಗಳಿಗೆ ವಿಧಾನಸಭೆ ಮುದ್ರೆ

Published

on

ಬೆಳಗಾವಿ: ವಿಧಾನಸಭೆಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟು 12 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕದ ಮೂಲಕ ಬಾಡಿಗೆದಾರ–ಮಾಲೀಕರ ನಡುವಿನ ಸಣ್ಣ ಅಪರಾಧಗಳಿಗೆ ಇದ್ದ ಜೈಲು ಶಿಕ್ಷೆಯನ್ನು ರದ್ದುಪಡಿಸಿ, ದೊಡ್ಡ ಮೊತ್ತದ ದಂಡ ವಿಧಿಸುವ ವ್ಯವಸ್ಥೆ ತರಲಾಗಿದೆ. ಮಾಲೀಕರ ಅನುಮತಿ ಇಲ್ಲದೆ ಮನೆ ಉಪಬಾಡಿಗೆ ನೀಡಿದರೆ ವಿಧಿಸಲಾಗುತ್ತಿದ್ದ ದಂಡವನ್ನು ₹5,000 ರಿಂದ ₹50,000ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ, ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ ₹25,000 ದಂಡ ವಿಧಿಸುವ ಕಠಿಣ ನಿಯಮ ಜಾರಿಗೆ ಬಂದಿದೆ.

2025ರ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಮೂಲಕ ಇನ್ನು ಮುಂದೆ 10 ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಅಂಗಡಿ ಹಾಗೂ ಸಂಸ್ಥೆಗಳೂ ವಂತಿಕೆ ಪಾವತಿ ವ್ಯಾಪ್ತಿಗೆ ಬರಲಿವೆ. ಇದುವರೆಗೆ 50ಕ್ಕೂ ಹೆಚ್ಚು ಕಾರ್ಮಿಕರು ಇದ್ದಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತಿತ್ತು.

ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ ಕೊಡಗು ಜಿಲ್ಲೆಯಲ್ಲಿ ಮುಂದುವರೆದಿದ್ದ ಬ್ರಿಟಿಷ್ ಕಾಲದ ಕಂದಾಯ ಗೊಂದಲ ನಿವಾರಣೆಗೆ ತರಲಾಗಿದೆ.

ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ ಕುರಿತು ಚರ್ಚೆ ವೇಳೆ, ನಾಮನಿರ್ದೇಶಿತ ಕಾರ್ಪೊರೇಟರ್ ವಿಚಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಆ ಅಂಶ ಕೈಬಿಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಈ ವಿಧೇಯಕವೂ ಸದನದಲ್ಲಿ ಅಂಗೀಕಾರಗೊಂಡಿತು.

ಇದೇ ವೇಳೆ ದೇವಾಲಯ ಅಭಿವೃದ್ಧಿ ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯ, ಸಿನಿ ಕಾರ್ಮಿಕರ ಕ್ಷೇಮಾಭಿವೃದ್ಧಿ, ಬಯಲುಸೀಮೆ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಹಲವು ತಿದ್ದುಪಡಿ ವಿಧೇಯಕಗಳಿಗೆ ಸದನದ ಒಪ್ಪಿಗೆ ದೊರೆತಿದೆ.

Trending

Exit mobile version