ದೇಶ
BREAKING ಬಿಎಂಆರ್ಸಿಎಲ್ ಮೆಟ್ರೋ ದರ ಏರಿಕೆ: ಫೆಬ್ರವರಿ 9ರಿಂದ ಹೊಸ ಟಿಕೆಟ್ ದರ ಜಾರಿ
ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಬಿಎಂಆರ್ಸಿಎಲ್ (BMRCL) ನಿರೀಕ್ಷೆಯಂತೆ ಮತ್ತೆ ಮೆಟ್ರೋ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿವೆ.
ಪ್ರತೀವರ್ಷ ಸ್ವಯಂಚಾಲಿತವಾಗಿ ದರ ಪರಿಷ್ಕರಣೆ ಮಾಡುವ ದರ ನಿಗದಿ ಸಮಿತಿ (Fare Fixation Committee – FFC) ಶಿಫಾರಸ್ಸಿನಂತೆ ಈ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. 96.10 ಕಿಲೋಮೀಟರ್ಗಳ ಸಂಪೂರ್ಣ ಮೆಟ್ರೋ ಜಾಲದಲ್ಲಿ ಒಟ್ಟು 10 ದರ ವಲಯಗಳಿದ್ದು, ಪ್ರತಿ ವಲಯದಲ್ಲಿ ಕನಿಷ್ಠ ರೂ.1 ರಿಂದ ಗರಿಷ್ಠ ರೂ.5 ವರೆಗೆ ದರ ಹೆಚ್ಚಳವಾಗಿದೆ.
ಹೊಸ ಮೆಟ್ರೋ ದರ ವಲಯಗಳು
0 ರಿಂದ 2 ಕಿ.ಮೀ ದೂರದ ಪ್ರಯಾಣಕ್ಕೆ ರೂ.10 ಇದ್ದ ಟಿಕೆಟ್ ದರ ಈಗ ರೂ.11 ಆಗಿದೆ. 30 ಕಿ.ಮೀ ಮೀರುವ ಪ್ರಯಾಣಕ್ಕೆ ರೂ.90 ಇದ್ದ ದರವನ್ನು ರೂ.95ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಎಲ್ಲ ವಲಯಗಳಲ್ಲೂ ಸಣ್ಣ ಪ್ರಮಾಣದ ಏರಿಕೆ ಜಾರಿಗೆ ಬಂದಿದೆ.
ರಿಯಾಯಿತಿಗಳು ಮುಂದುವರಿಕೆ
ಬಿಎಂಆರ್ಸಿಎಲ್ ಸ್ಮಾರ್ಟ್ ಕಾರ್ಡ್ ಹಾಗೂ NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ರಿಯಾಯಿತಿಗಳು ಮುಂದುವರೆಯಲಿವೆ.
- ಪೀಕ್ ಅವಧಿಯಲ್ಲಿ ಶೇ.5 ರಿಯಾಯಿತಿ
- ಪೀಕ್ ಅಲ್ಲದ ಸಮಯದಲ್ಲಿ ಶೇ.10 ರಿಯಾಯಿತಿ
- ಭಾನುವಾರ ಹಾಗೂ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ ಶೇ.10 ರಿಯಾಯಿತಿ
ಟೂರಿಸ್ಟ್ ಪಾಸ್ ದರದಲ್ಲೂ ಬದಲಾವಣೆ
ಒಂದು ದಿನದ ಪಾಸ್ ದರವನ್ನು ಸ್ಮಾರ್ಟ್ ಕಾರ್ಡ್ಗೆ ರೂ.300 ರಿಂದ ರೂ.313ಕ್ಕೆ ಮತ್ತು ಮೊಬೈಲ್ QR ಪಾಸ್ನ್ನು ರೂ.250 ರಿಂದ ರೂ.263ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿ ಮೂರು ಮತ್ತು ಐದು ದಿನಗಳ ಪಾಸ್ ದರದಲ್ಲೂ ಏರಿಕೆ ಮಾಡಲಾಗಿದೆ.
ಬಿಎಂಆರ್ಸಿಎಲ್ ಸ್ಪಷ್ಟನೆ
ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ ಶಿಫಾರಸ್ಸಿನಂತೆ ಈ ವಾರ್ಷಿಕ ದರ ಪರಿಷ್ಕರಣೆ ಜಾರಿಗೆ ಬಂದಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. 7.5 ವರ್ಷಗಳ ನಂತರ ದೊಡ್ಡ ಪ್ರಮಾಣದ ಏರಿಕೆ ಆಗದಂತೆ ತಡೆಯಲು, ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ಅಳವಡಿಸಲಾಗಿದೆ.
ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಾರ್ಷಿಕ ವೆಚ್ಚ ಅಥವಾ ಶೇ.5—ಇವೆರಡರಲ್ಲಿ ಕಡಿಮೆ ಪ್ರಮಾಣವನ್ನು ಮಾತ್ರ ದರ ಏರಿಕೆಗೆ ಪರಿಗಣಿಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ದರ ಏರಿಕೆ ಆಗುವುದಿಲ್ಲ ಎಂದು ಬಿಎಂಆರ್ಸಿಎಲ್ ಭರವಸೆ ನೀಡಿದೆ.