ಬೆಂಗಳೂರು
Bengaluru: ಬೆಂಗಳೂರಿನ ರಸ್ತೆ ಮರಗಳ ಮೇಲಿನ ಕೇಬಲ್ ಅವ್ಯವಸ್ಥೆಗೆ ಬ್ರೇಕ್ ಸಚಿವರ ಖಡಕ್ ಸೂಚನೆ
ಬೆಂಗಳೂರು: ನಗರದ(Bengaluru) ರಸ್ತೆಗಳು, ಮರಗಳು ಹಾಗೂ ಕಟ್ಟಡಗಳ ಮೇಲೆ ಎಲ್ಲೆಂದರಲ್ಲಿ ಹರಡಿಕೊಂಡಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳ ಅವ್ಯವಸ್ಥೆಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಅನುಮತಿ ಪಡೆಯದೆ ಅಳವಡಿಸಿರುವ ಕೇಬಲ್ಗಳನ್ನು ನಿಯಮಬದ್ಧಗೊಳಿಸಲು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಸಂಸ್ಥೆಗಳಿಗೆ ಒಂದು ಬಾರಿ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಒಎಫ್ಸಿ ಕೇಬಲ್ಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಮಾತನಾಡಿದರು. ನಗರದಲ್ಲಿ ಹೆಚ್ಚುತ್ತಿರುವ ಅನಧಿಕೃತ ಕೇಬಲ್ ಅಳವಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಬಲ್ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಿ ಇಡೀ ನಗರಕ್ಕೆ ಏಕರೂಪದ ನಿಯಮ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್ಹೆಡ್ ಕೇಬಲ್ಗಳಿದ್ದು, ಸುಮಾರು 12 ಸಾವಿರ ಕಿಲೋಮೀಟರ್ ಉದ್ದದ ಅಕ್ರಮ ಭೂಗತ ಕೇಬಲ್ಗಳಿವೆ ಎಂಬ ಮಾಹಿತಿ ಸಭೆಯಲ್ಲಿ ಚರ್ಚೆಯಾಯಿತು. ಇದರ ಜತೆಗೆ ಸುಮಾರು 3,460 ಕಿಲೋಮೀಟರ್ ವ್ಯಾಪ್ತಿಯಲ್ಲಿ ಓವರ್ಹೆಡ್ ಕೇಬಲ್ಗಳನ್ನು ಅಳವಡಿಸಲಾಗಿದೆ.
Bengaluru
ಮರಗಳ ಮೇಲೆ ಹಲವು ನಿರುಪಯುಕ್ತ ಕೇಬಲ್ಗಳು ನೇತಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಮರಗಳ ಕೊಂಬೆಗಳ ನಡುವೆ ಕೇಬಲ್ಗಳು ಸಿಕ್ಕಿಕೊಂಡಿರುವುದು ಮಾತ್ರವಲ್ಲದೆ, ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ಹರಡಿಕೊಂಡಿರುವ ತಂತಿಗಳು ಸಂಚಾರ ಮತ್ತು ಸಾರ್ವಜನಿಕ ಸುರಕ್ಷತೆಗೂ ಸಮಸ್ಯೆಯಾಗಿವೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಅನುಮತಿ ಇಲ್ಲದೆ ಕೇಬಲ್ ಅಳವಡಿಸಿರುವ ಸಂಸ್ಥೆಗಳಿಗೆ ಅವುಗಳನ್ನು ಸ್ವಯಂ ಘೋಷಿಸಿಕೊಂಡು, ನಿಗದಿತ ಶುಲ್ಕ ಪಾವತಿಸುವ ಮೂಲಕ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಿರ್ದಿಷ್ಟ ಕಾಲಾವಕಾಶ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಿಗದಿತ ಗಡುವಿನೊಳಗೆ ಕೇಬಲ್ಗಳನ್ನು ನಿಯಮಬದ್ಧಗೊಳಿಸದಿದ್ದರೆ ಅಂತಹ ಕೇಬಲ್ಗಳನ್ನು ತೆರವುಗೊಳಿಸಲಾಗುವುದು. ಅಪಾಯಕಾರಿಯಾಗಿ ನೇತಾಡುತ್ತಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ತಂತಿಗಳನ್ನು ಯಾವುದೇ ಮುಲಾಜಿಲ್ಲದೆ ಕತ್ತರಿಸಿ ತೆರವುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
also read: https://hosasuddi.in/vijay-sangeetha-anirudh-kavya-reception/
Vijay: ವಿಜಯ್ ಹೋದ ಬಳಿಕ ವೇದಿಕೆಗೆ ಬಂದ ಸಂಗೀತಾ ರಿಸೆಪ್ಶನ್ನಲ್ಲಿ ಏನಿದು ವಿಶೇಷ?
ಇನ್ನು ಮುಂದೆ ಹೊಸದಾಗಿ ಕೇಬಲ್ ಅಳವಡಿಸಲು ಅನುಮತಿ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರ ಪಾಲಿಕೆಗಳ ಸಾಫ್ಟ್ವೇರ್ ಮೂಲಕವೇ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸುವ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಸೂಚಿಸಿದರು.
ಹೊಸದಾಗಿ ನಿರ್ಮಿಸಿರುವ ರಸ್ತೆಗಳನ್ನು ಕೇಬಲ್ ಅಳವಡಿಕೆಗಾಗಿ ಮತ್ತೆ ಅಗೆಯಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ. ವೈಟ್ಟಾಪಿಂಗ್ ಮತ್ತು ಟೆಂಡರ್ಶ್ಯೂರ್ ರಸ್ತೆಗಳ ನಿರ್ಮಾಣದ ವೇಳೆ ಈಗಾಗಲೇ ಅಳವಡಿಸಿರುವ ಡಕ್ಟ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಜಂಕ್ಷನ್ ಬಾಕ್ಸ್ಗಳನ್ನು ಆಸ್ತಿಯ ಅಂಚಿನಲ್ಲಿ ಹಾಗೂ ಏಳು ಅಡಿ ಎತ್ತರದಲ್ಲಿ ಅಳವಡಿಸಬೇಕು. ಅಗತ್ಯವಿದ್ದಲ್ಲಿ ಕೇಬಲ್ ಅಳವಡಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಬೈಲಾ ರೂಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಭೆಯಲ್ಲಿ ಬೆಂಗಳೂರಿನ 75 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ ಕುರಿತೂ ಚರ್ಚೆ ನಡೆಯಿತು. ಜಂಕ್ಷನ್ಗಳ ವಿನ್ಯಾಸವನ್ನು ವೈಜ್ಞಾನಿಕವಾಗಿ ರೂಪಿಸಿ, ಯಾವುದೇ ಕಾಮಗಾರಿ ಆರಂಭಿಸುವ ಮೊದಲು ಗುಡ್ ಫಾರ್ ಕನ್ಸ್ಟ್ರಕ್ಷನ್ ವಿನ್ಯಾಸವನ್ನು ಅಂತಿಮಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್, ದಿಕ್ಕು ಸೂಚಕ ಫಲಕಗಳು, ಜೀಬ್ರಾ ಕ್ರಾಸಿಂಗ್, ಫ್ರೀ ಲೆಫ್ಟ್ ರಿಫ್ಲೆಕ್ಟರ್ ಹಾಗೂ ರಸ್ತೆ ಸ್ಟಡ್ಗಳನ್ನು ಸಮರ್ಪಕವಾಗಿ ಅಳವಡಿಸಬೇಕು. ಸಂಚಾರ ದಟ್ಟಣೆ ಮತ್ತು ರಸ್ತೆ ಸುರಕ್ಷತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.