ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ – ಸಾರ್ವಜನಿಕರಿಗೆ ಮುನ್ನೆಚ್ಚರಿಕೆ! | Hosa Suddi

ಬೆಂಗಳೂರು

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ – ಸಾರ್ವಜನಿಕರಿಗೆ ಮುನ್ನೆಚ್ಚರಿಕೆ!

Published

on

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಕೈಗೊಳ್ಳಲಿರುವ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 28, ಮಂಗಳವಾರ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಸ್ಕಾಂ ಪ್ರಕಟಣೆಯ ಪ್ರಕಾರ, 66/11ಕೆವಿ ಪುಟ್ಟೇನಹಳ್ಳಿ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವೆಂಕಟಾಲ, ಕಟ್ಟಿಗೇನಹಳ್ಳಿ, ಕೋಗಿಲು, ಮಾರುತಿ ನಗರ, ಪಾಲನಹಳ್ಳಿ, ಅನಂತಪುರ ಗೇಟ್, ಮಾರಸಂದ್ರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಇದೇ ವೇಳೆ, ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕ್ ಮತ್ತು ಹೆಸ್ಕಾಂಗಳ ಆನ್‌ಲೈನ್ ಸೇವೆಗಳೂ ಸಹ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಐಟಿ ನಿರ್ವಹಣಾ ಕಾಮಗಾರಿಯಿಂದಾಗಿ ಅಕ್ಟೋಬರ್ 27 ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28 ಬೆಳಿಗ್ಗೆ 11 ಗಂಟೆಯವರೆಗೆ ಯಾವುದೇ ಆನ್‌ಲೈನ್ ಪಾವತಿ ಅಥವಾ ಸೇವೆ ಲಭ್ಯವಿರುವುದಿಲ್ಲ.

ಈ ಅವಧಿಯಲ್ಲಿ ಗ್ರಾಹಕರು ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕ ಅರ್ಜಿ, ಹೆಸರು ಅಥವಾ ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಡಿಜಿಟಲ್ ಸೇವೆಗಳನ್ನು ಬಳಸಲು ಸಾಧ್ಯವಿಲ್ಲ. ಬೆಸ್ಕಾಂ ಮಿತ್ರ ಆಪ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಬಿಲ್ ಪಾವತಿ ಸಾಧ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಸ್ಕಾಂ ಗ್ರಾಹಕರಿಗೆ ಉಂಟಾಗುವ ತಾತ್ಕಾಲಿಕ ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದ್ದು, ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Trending

Exit mobile version