“ನರಿ ಕೂಗಿದ್ರೆ ಗಿರಿ ಮುಟ್ಟಲ್ಲ” – ರೆಬೆಲ್ಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ | Hosa Suddi

ದೇಶ

“ನರಿ ಕೂಗಿದ್ರೆ ಗಿರಿ ಮುಟ್ಟಲ್ಲ” – ರೆಬೆಲ್ಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Published

on

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ರೆಬೆಲ್ಸ್ ತಂಡ ಮತ್ತೆ ಸಕ್ರಿಯಗೊಂಡಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧದ ದೂರುಗಳನ್ನು ಹೊತ್ತು ಹಲವು ರೆಬೆಲ್ ನಾಯಕರು ದೆಹಲಿಗೆ ತೆರಳಿದ್ದು, ಅವರ ಸಂಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಹರಿಹರ ಶಾಸಕ ಬಿ.ಪಿ. ಹರೀಶ್, ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಕುಮಾರ ಬಂಗಾರಪ್ಪ ಸೇರಿ ಹಲವು ರೆಬೆಲ್ ಮುಖಂಡರು ಬುಧವಾರ ದೆಹಲಿಗೆ ಭೇಟಿ ನೀಡಿ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದಲ್ಲದೆ, ಕೇಂದ್ರ ಸಚಿವ ವೀ. ಸೋಮಣ್ಣ ಹಾಗೂ ಉಪ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ದೂರು ಸಲ್ಲಿಸಿರುವ ಮಾಹಿತಿ ಹೊರಬಿದ್ದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷರ ಬದಲಾವಣೆಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ರೆಬೆಲ್ ತಂಡ ಹೈಕಮಾಂಡ್‌ಗೆ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಇದರ ನಡುವೆ, ರೆಬೆಲ್ಸ್ ನಾಯಕರ ದೆಹಲಿ ಪ್ರವಾಸದ ಬಗ್ಗೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. “ವಿಜಯೇಂದ್ರ ಅವರನ್ನು ಸ್ಥಾನದಿಂದ ಇಳಿಸಿ ಏನು ಮಾಡುವರು? ಅವರು ಇಳಿಯಲಿಕ್ಕಾಗುತ್ತದೆಯಾ? ಆಗಲ್ಲ. ಯಾರಿಗೆ ಜನಬೆಂಬಲವಿದೆ ಎಂಬುದನ್ನು ನೋಡಿಕೊಂಡೇ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ನರಿ ಕೂಗಿದ್ರೆ ಗಿರಿ ಮುಟ್ಟಲ್ಲ” ಎಂದು ಅವರು ಭಿನ್ನಮತಿಗಳಿಗೆ ಟಾಂಗ್ ನೀಡಿದರು.

ರೆಬೆಲ್ ತಂಡದ ಈ ಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಒಳಒಡಕು ಮತ್ತೆ ಹೊರಮೈಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಒಳರಾಜಕೀಯದಲ್ಲಿ ಹೊಸ ಬೆಳವಣಿಗೆಗಳ ಸಾಧ್ಯತೆ ಹೆಚ್ಚಿದೆ.

Trending

Exit mobile version