ಚಿತ್ರದುರ್ಗದಲ್ಲಿ ಕೇಸರಿ ಶಕ್ತಿ ಪ್ರದರ್ಶನ! ಬಿಎಸ್‌ವೈ ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಸೇರ್ಪಡೆ | Hosa Suddi

ದೇಶ

ಚಿತ್ರದುರ್ಗದಲ್ಲಿ ಕೇಸರಿ ಶಕ್ತಿ ಪ್ರದರ್ಶನ! ಬಿಎಸ್‌ವೈ ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಸೇರ್ಪಡೆ

Published

on

B. S. Yediyurappa ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸುವರ್ಣ ಸಂಭ್ರಮಕ್ಕೆ Chitradurga ಇಂದು ಐತಿಹಾಸಿಕ ಸಾಕ್ಷಿಯಾಗುತ್ತಿದೆ. ರಾಜ್ಯ ರಾಜಕಾರಣದ ಧ್ರುವತಾರೆ ಹಾಗೂ ರೈತನಾಯಕನಾಗಿ ಗುರುತಿಸಿಕೊಂಡಿರುವ ಬಿಎಸ್‌ವೈ ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮಕ್ಕಾಗಿ ಕೋಟೆನಾಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಇಂದು ನಡೆಯಲಿರುವ ಬೃಹತ್ ಕಾರ್ಯಕ್ರಮ ಕೇವಲ ಅಭಿಮಾನೋತ್ಸವವಷ್ಟೇ ಅಲ್ಲ, ಬಿಜೆಪಿಯ ಭಾರೀ ಶಕ್ತಿ ಪ್ರದರ್ಶನವಾಗಲಿದೆ. ಕೇಂದ್ರ ಗೃಹ ಸಚಿವ Amit Shah ಸೇರಿದಂತೆ ವಿವಿಧ ಮಠಾಧೀಶರು, ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸುವ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನಗರದ ಹೊರವಲಯದಲ್ಲಿ ಜರ್ಮನ್ ಮಾದರಿಯ ಬೃಹತ್ ಪೆಂಡಾಲ್ ನಿರ್ಮಿಸಲಾಗಿದ್ದು, ಏಳು ಸುತ್ತಿನ ಕೋಟೆಯ ಮಾದರಿಯ ಪ್ರವೇಶ ದ್ವಾರ ವಿಶೇಷ ಆಕರ್ಷಣೆಯಾಗಿದೆ. ಇಡೀ ಕಾರ್ಯಕ್ರಮದ ಆವರಣ ಕೇಸರಿಮಯವಾಗಿದ್ದು, ಬಿಎಸ್‌ವೈ ಕಟೌಟ್‌ಗಳು ಅಭಿಮಾನಿಗಳನ್ನು ಕೈಮುಗಿದು ಸ್ವಾಗತಿಸುತ್ತಿವೆ.

ಶುಕ್ರವಾರ ಸಂಜೆ ಕನಕ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ನಡೆದ ಅದ್ಧೂರಿ ಮೆರವಣಿಗೆ ಗಮನ ಸೆಳೆಯಿತು. ಮಹಿಳೆಯರು ಕುಂಭಮೇಳದ ಸ್ವಾಗತ ನೀಡಿದರೆ, ನಾರಿ ಶಕ್ತಿ ವಂದನ್ ಅಡಿಯಲ್ಲಿ ಒನಕೆ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು. 25ಕ್ಕೂ ಹೆಚ್ಚು ಜನಪದ ಕಲಾಮೇಳಗಳು ಹಾಗೂ ಯಡಿಯೂರಪ್ಪ ಅವರ ಜೀವನ ಕಥನ ಸಾರುವ ಎಐ ತಂತ್ರಜ್ಞಾನದ ಸ್ತಬ್ಧಚಿತ್ರಗಳು ಜನರನ್ನು ಆಕರ್ಷಿಸಿವೆ.

ಇನ್ನೂ ಬಿಎಸ್‌ವೈ ರಾಜಕೀಯ ಜೀವನದ ಅದೃಷ್ಟದ ಸಂಕೇತವೆಂದೇ ಪರಿಗಣಿಸಲ್ಪಡುವ ಅವರ ಹಳೆಯ Ambassador ಕಾರು ಕೂಡ ವಿಶೇಷ ಗಮನ ಸೆಳೆದಿದೆ. 1974ರಲ್ಲಿ ಖರೀದಿಸಿದ್ದ ಈ ಕಾರಿನಲ್ಲೇ ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಲಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

Trending

Exit mobile version