Connect with us

ದೇಶ

Vande Mataram ಸಂಪೂರ್ಣ ಹಾಡಲ್ಲ ಎಂದ Congress! ‘ಹೊಸ ಮುಸ್ಲಿಂ ಲೀಗ್’ ಎಂದ ಬಿಜೆಪಿ ವಾಗ್ದಾಳಿ

Published

on

ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram) ಕುರಿತ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ದೇಶದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಇದೀಗ ಹೊಸ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ತನ್ನ ಹಿಂದಿನ ನಿಲುವನ್ನೇ ಮುಂದುವರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ದೇಶಭಕ್ತಿ ಮತ್ತು ರಾಷ್ಟ್ರೀಯ ಗೀತೆಯ ಬಗ್ಗೆ ಹೊಂದಿರುವ ನಿಲುವಿನ ಕುರಿತು ಪ್ರಶ್ನೆಗಳನ್ನು ಎತ್ತಿದೆ.

‘ಹೊಸ ಮುಸ್ಲಿಂ ಲೀಗ್’ ಎಂದ ಬಿಜೆಪಿ ವಾಗ್ದಾಳಿ

ಸೋನಿಯಾ ಗಾಂಧಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಈ ನಿರ್ಧಾರವು 1930ರ ದಶಕದಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಗೆ ವಿರೋಧ ವ್ಯಕ್ತಪಡಿಸಿದ್ದ ಮುಸ್ಲಿಂ ಲೀಗ್‌ನ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಪರಂಪರೆಯ ಬಗ್ಗೆ ಮಾತನಾಡುತ್ತಿದೆಯಾದರೂ, ರಾಷ್ಟ್ರೀಯ ಗೀತೆಯ ವಿಚಾರದಲ್ಲಿ ಅದರ ನಿಲುವು ದೇಶದ ಮೇಲಿನ ನಿಷ್ಠೆ ಕುರಿತು ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ಹೇಳುವುದೇನು?

ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರಕಾರ, ಪಕ್ಷದ ನಿಲುವು 1937ರಲ್ಲಿ ಕಾಂಗ್ರೆಸ್ ನಾಯಕತ್ವ ಕೈಗೊಂಡ ಐತಿಹಾಸಿಕ ನಿರ್ಧಾರಕ್ಕೆ ಅನುಗುಣವಾಗಿದೆ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಾಲದಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಸರ್ಕಾರದ ನಿಲುವು ಮತ್ತು ವಿವಾದ

ಸಾರ್ವಜನಿಕ ಹಾಗೂ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವ ಕುರಿತು ಸರ್ಕಾರದ ನಿಲುವು ಮತ್ತು ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ನಡುವೆಯೂ ಕಾಂಗ್ರೆಸ್ ತನ್ನ ಹಿಂದಿನ ಪದ್ಧತಿಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಮ್ಮೆ ರಾಜಕೀಯ ವಾಕ್ಸಮರ ಆರಂಭವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ವಿಚಾರವೂ ಈ ವಿವಾದಕ್ಕೆ ಮತ್ತಷ್ಟು ಇಂಬು ನೀಡಿದೆ. ರಾಷ್ಟ್ರೀಯ ಗೀತೆಯ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Pakistan ಮಾಡಿದ ಕೆಲಸಕ್ಕೆ India ತಿರುಗೇಟು: ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳು ತೆರವು

Published

on

ನವದೆಹಲಿ: ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ(Pakistan High Commission) ಹೊರಭಾಗದಲ್ಲಿ ಅಳವಡಿಸಲಾಗಿದ್ದ ಭದ್ರತಾ ಬ್ಯಾರಿಕೇಡ್‌ಗಳು ಮತ್ತು ಸಂಚಾರ ಬೋಲಾರ್ಡ್‌ಗಳನ್ನು ಭಾರತೀಯ ಅಧಿಕಾರಿಗಳು ಬುಲ್ಡೋಜರ್(Bulldozer) ಬಳಸಿ ತೆರವುಗೊಳಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತೊಂದು ಬೆಳವಣಿಗೆ ಇದೀಗ ಕುತೂಹಲ ಮೂಡಿಸಿದೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ(Indian High Commission) ಮುಂಭಾಗದಲ್ಲಿ ಅಳವಡಿಸಲಾಗಿದ್ದ ಭದ್ರತಾ ಬೇಲಿಗಳನ್ನು ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ತೆರವುಗೊಳಿಸಿತ್ತು. ಪಾಕಿಸ್ತಾನದ ಈ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಇದೀಗ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಭಾಗದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದೆ ಎಂದು ವರದಿಯಾಗಿದೆ.

ಭಾರತ-ಪಾಕಿಸ್ತಾನ ನಡುವೆ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ

ಇತ್ತೀಚಿನ ಬೆಳವಣಿಗೆಗಳಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸೂಕ್ಷ್ಮ ಹಂತ ತಲುಪಿದೆ. ಭದ್ರತಾ ವ್ಯವಸ್ಥೆ ಹಾಗೂ ರಾಜತಾಂತ್ರಿಕ ಕಚೇರಿಗಳ ಸುತ್ತಮುತ್ತಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಪರಸ್ಪರ ಕ್ರಮ ಕೈಗೊಳ್ಳುತ್ತಿರುವುದು ಗಮನ ಸೆಳೆದಿದೆ.

ಇದರ ನಡುವೆ ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಶ್ರೀನಗರಕ್ಕೆ ಭೇಟಿ ನೀಡಿ, ಕಾಶ್ಮೀರ ಭಾರತದ ಪ್ರಮುಖ ಹಾಗೂ ಅವಿಭಾಜ್ಯ ಅಂಗ ಎಂದು ಹೇಳಿಕೆ ನೀಡಿದ್ದರು. ಅಮೆರಿಕ ರಾಯಭಾರಿಯ ಈ ಹೇಳಿಕೆಗೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಅಮೆರಿಕ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್

ಕಾಶ್ಮೀರ ಕುರಿತ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಾಕಿಸ್ತಾನ, ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಸಮನ್ಸ್ ಜಾರಿ ಮಾಡಿ ತನ್ನ ಆಕ್ಷೇಪ ದಾಖಲಿಸಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಭಾಗದ ಭದ್ರತಾ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿರುವುದು ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಸೂಚನೆಯೇ ಎಂಬ ಚರ್ಚೆ ಆರಂಭವಾಗಿದೆ.

ಭದ್ರತಾ ಬ್ಯಾರಿಕೇಡ್‌ಗಳ ತೆರವು ವಿಚಾರವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮರಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುವ ಸಾಧ್ಯತೆ ಇದೆ.

Continue Reading

ಬೆಂಗಳೂರು

Bengaluru ಟ್ರಾಫಿಕ್‌ಗೆ ಬಿಗ್ ರಿಲೀಫ್: 28 ಕಿ.ಮೀ ಎಲಿವೇಟೆಡ್ ಕಾರಿಡಾರ್, 90 ನಿಮಿಷದ ಪ್ರಯಾಣ 30 ನಿಮಿಷಕ್ಕೆ!

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ(Bengaluru) ಸಂಚಾರ ದಟ್ಟಣೆಗೆ ಪರಿಹಾರ ನೀಡಲು ನಗರದ ಅತಿದೊಡ್ಡ ಎಲಿವೇಟೆಡ್ ಕಾರಿಡಾರ್(Elevated Corridor) ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ತುಮಕೂರು ರಸ್ತೆ(Tumakuru Road)ಯಿಂದ ಹಳೇ ಮದ್ರಾಸ್ ರಸ್ತೆ(Old Madras Road)ಯನ್ನು ಸಂಪರ್ಕಿಸುವ ಸುಮಾರು 28 ಕಿ.ಮೀ ಉದ್ದದ ಶುಲ್ಕ ಸಹಿತ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮುಂದಾಗಿದೆ.

ಸುಮಾರು ₹3,500 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ-ಖಾಸಗಿ ಸಹಭಾಗಿತ್ವದ(PPP) ಮೂಲಕ BOOT ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನಾ ವೆಚ್ಚದ ಶೇ.40ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಳಿದ ಶೇ.60ರಷ್ಟು ಮೊತ್ತವನ್ನು ಗುತ್ತಿಗೆದಾರ ಸಂಸ್ಥೆ ಹೂಡಿಕೆ ಮಾಡಲಿದೆ.

30 ವರ್ಷ ಟೋಲ್ ಸಂಗ್ರಹಕ್ಕೆ ಅವಕಾಶ

ಕಾರಿಡಾರ್ ನಿರ್ಮಾಣ ಪೂರ್ಣಗೊಂಡ ಬಳಿಕ ಗುತ್ತಿಗೆದಾರ ಸಂಸ್ಥೆಗೆ 30 ವರ್ಷಗಳ ಕಾಲ ವಾಹನಗಳಿಂದ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶ ನೀಡಲಾಗುತ್ತದೆ. ಆದರೆ, ವಾಹನಗಳಿಗೆ ವಿಧಿಸುವ ಶುಲ್ಕದ ಪ್ರಮಾಣವನ್ನು ಸರ್ಕಾರವೇ ಅಂತಿಮಗೊಳಿಸಲಿದೆ.

30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

ಯೋಜನೆಯ ಪ್ರಕಾರ ಕಾಮಗಾರಿಯನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯಶವಂತಪುರ ಫ್ಲೈಓವರ್ ಬಳಿಯಿಂದ ಆರಂಭವಾಗುವ ನಾಲ್ಕು ಪಥಗಳ ಕಾರಿಡಾರ್‌ನಲ್ಲಿ ಒಟ್ಟು 12 ಕಡೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ. ಕಾರಿಡಾರ್‌ನಲ್ಲಿ ವಾಹನಗಳು ಗರಿಷ್ಠ 60ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ.

90 ನಿಮಿಷದ ಪ್ರಯಾಣ ಕೇವಲ 30 ನಿಮಿಷಕ್ಕೆ?

ಪ್ರಸ್ತುತ ಯಶವಂತಪುರದಿಂದ ಕೆ.ಆರ್.ಪುರ ಸಿಗ್ನಲ್ ಬಳಿಯ ಹೂವಿನ ಮಾರುಕಟ್ಟೆ ಪ್ರದೇಶಕ್ಕೆ ಪೀಕ್ ಅವಧಿಯಲ್ಲಿ ಸುಮಾರು 90 ನಿಮಿಷಗಳವರೆಗೆ ಪ್ರಯಾಣ ಸಮಯ ಬೇಕಾಗುತ್ತದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ ಇದೇ ಪ್ರಯಾಣವನ್ನು ಸುಮಾರು 28ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇದೆ.

ಯಾವ ಮಾರ್ಗದಲ್ಲಿ ಎಲಿವೇಟೆಡ್ ಕಾರಿಡಾರ್?

ಯಶವಂತಪುರ ಫ್ಲೈಓವರ್ ಸರ್ಕಲ್‌ನಿಂದ ಆರಂಭವಾಗುವ ಕಾರಿಡಾರ್ ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಹಲಸೂರು ಕೆರೆ ಮಾರ್ಗವಾಗಿ ಸಾಗಲಿದೆ. ಬಳಿಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ ಕೆ.ಆರ್.ಪುರ ಸಿಗ್ನಲ್ ನಂತರ ಮುಕ್ತಾಯಗೊಳ್ಳಲಿದೆ.

ಎಲಿವೇಟೆಡ್ ಕಾರಿಡಾರ್ ಬಳಸಲು ಇಚ್ಛಿಸದ ವಾಹನ ಸವಾರರಿಗೆ ಈಗಿರುವ ಸಾಮಾನ್ಯ ರಸ್ತೆಗಳು ಎಂದಿನಂತೆ ಲಭ್ಯವಿರಲಿವೆ. ಹೀಗಾಗಿ ಯೋಜನೆ ಜಾರಿಯಾದರೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರದ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ.

Continue Reading

ಬೆಂಗಳೂರು

Bengaluru Cloudnine ಸೇರಿ ಹಲವು ಆಸ್ಪತ್ರೆಗಳಿಗೆ ಭಾರೀ ದಂಡ! KPME ಉಲ್ಲಂಘನೆಗೆ ಬೆಂಗಳೂರು ಜಿಲ್ಲಾಡಳಿತದ ಕ್ರಮ

Published

on

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ (KPME) ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ KPME ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ, ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸಿ ದಂಡ ಹಾಗೂ ಇತರ ಕ್ರಮಗಳಿಗೆ ಆದೇಶಿಸಿದ್ದಾರೆ.

ನಿಯಮ ಉಲ್ಲಂಘನೆ ಗಂಭೀರವಾಗಿದ್ದ ಮೂರು ವೈದ್ಯಕೀಯ ಸಂಸ್ಥೆಗಳ KPME ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್‌ಗೆ ₹50,000, ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್‌ಗೆ ₹1 ಲಕ್ಷ ಹಾಗೂ ಬಿ.ಜಿ. ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ ₹20,000 ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಲಾಗಿದೆ.

ಹಲವು ಆಸ್ಪತ್ರೆಗಳಿಗೆ ದಂಡ

KPME ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳಿಗೂ ಜಿಲ್ಲಾಡಳಿತ ದಂಡ ವಿಧಿಸಿದೆ. ಎಚ್‌ಎಎಲ್ ರಸ್ತೆಯ Cloudnine Hospital ಆಸ್ಪತ್ರೆಗೆ ₹50,000, ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್‌ಗೆ ₹1 ಲಕ್ಷ, ಮುನೇಶ್ವರ ಲೇಔಟ್‌ನ ಇಕ್ಷಾ ಕ್ಲಿನಿಕ್‌ಗೆ ₹10,000 ಹಾಗೂ ರಾಜಾಜಿನಗರದ ಎನ್‌ಯು ಹಾಸ್ಪಿಟಲ್ಸ್‌ಗೆ ₹10,000 ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನ್ಯೂನತೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮುಚ್ಚಳಿಕೆ ಪತ್ರವನ್ನೂ ಪಡೆಯಲಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದಿನಿ ಸೇರಿದಂತೆ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು KPME ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸಂದೇಶ ನೀಡಿದೆ.

Continue Reading

Trending