ಅಪರಾಧ
Delhi Explosion Update: ವೈದ್ಯ ಉಮರ್ ಕುಟುಂಬದ 13 ಮಂದಿಗೆ ವಿಚಾರಣೆ!
ನವದೆಹಲಿ: ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ (Delhi Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ವೈದ್ಯ ಉಮರ್‌ನ ತಾಯಿ ಮತ್ತು ಇಬ್ಬರು ಸಹೋದರರು ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಉಮರ್‌ನ ಇಬ್ಬರು ಸಹೋದರರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ವಶಕ್ಕೆ ಪಡೆಯಲಾಗಿದೆ. ದೆಹಲಿಯ ಲಾಡ್ಜ್‌ಗಳಲ್ಲಿ ನಡೆಸಿದ ಶೋಧಕಾರ್ಯದಲ್ಲಿ ಇನ್ನೂ ಕೆಲವು ಶಂಕಿತರನ್ನು ಬಂಧಿಸಲಾಗಿದೆ. ಈ ನಡುವೆ ಪೊಲೀಸರು 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು, ಸಂವಹನದ ಹಾದಿಗಳನ್ನು ವಿಶ್ಲೇಷಿಸುತ್ತಿದ್ದಾರೆ.
ಶಂಕಿತನ ಕುರಿತು ಮಾಹಿತಿ ಕಲೆಹಾಕಲು 200ಕ್ಕೂ ಹೆಚ್ಚು ಪೊಲೀಸರು 150ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಉಮರ್ ಹಿಂದೆ ಅನಂತನಾಗ್‌ನ ಜಿಎಂಸಿ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡಿದ್ದ. ಬಳಿಕ ದೆಹಲಿಗೆ ತೆರಳಿ, ಫರೀದಾಬಾದ್‌ನ ಅಲ್ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ.
ಇದೀಗ, ಪೊಲೀಸರು ಅಲ್ ಫಲಾಹ್ ಕಾಲೇಜಿನ ಮೇಲೆ ಸಹ ದಾಳಿ ನಡೆಸಿದ್ದು, ಧೌಜ್ ಮತ್ತು ಫತೇಪುರ್ ತಗಾ ಗ್ರಾಮಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸ್ಫೋಟದ ಬೆನ್ನಲ್ಲೇ, ಕೆಂಪುಕೋಟೆ ಪ್ರದೇಶವನ್ನು ನವೆಂಬರ್ 13ರವರೆಗೆ ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.