ಬೆಂಗಳೂರು
ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ – ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತಲು ನೂರಾರು ಶವಗಳನ್ನು ಹೊತಿಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಮತ್ತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಡೀ ದೇಶದ ಗಮನ ಸೆಳೆದಿರುವ ಈ ಪ್ರಕರಣದ ಬಗ್ಗೆ ಮಾತನಾಡಿದ ಅವರು, “ಧರ್ಮಸ್ಥಳ ಕೇಸ್ನಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಅನಾಮಿಕ ವ್ಯಕ್ತಿಯೊಬ್ಬನು ಕೋರ್ಟ್ ಮುಂದೆ ನೀಡಿದ ಹೇಳಿಕೆಯಿಂದಲೇ ಈ ಪ್ರಕರಣ ಹುಟ್ಟಿಕೊಂಡಿದೆ. ಈ ಕುರಿತು ಎಸ್ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಅನಾಮಿಕ ದೂರುದಾರನು ತಾನೇ ಶವಗಳನ್ನು ಹೊತಿಟ್ಟಿದ್ದಾಗಿ ಹೇಳಿಕೆ ನೀಡಿದ ನಂತರ, ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ರಾಜ್ಯ ಸರ್ಕಾರ ಪ್ರಣಬ್ ಮೋಹಾಂತಿ ಅವರ ನೇತೃತ್ವದಲ್ಲಿ ಎಸ್ಐಟಿಯನ್ನು ರಚಿಸಿದ್ದು, ಬುರಡೆ ರಹಸ್ಯ ವಿಚಾರವಾಗಿ ಉತ್ಖನನ ಕಾರ್ಯ ನಡೆಯುತ್ತಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೇ, ಡಿಸಿಎಂ ಅವರ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
“ತಪ್ಪು ಮಾಡಿದವರು ಶಿಕ್ಷೆಗೆ ಒಳಗಾಗಲೇಬೇಕು. ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಪಿತೂರಿ ನಡೆದಿದೆ. ಇದರ ಹಿಂದೆ ಯಾರು ಇದ್ದಾರೋ ಈಗ ನಾನು ಹೇಳುವುದಿಲ್ಲ. ಆದರೆ ಧರ್ಮಸ್ಥಳದ ಮೇಲೆ ಕಪ್ಪು ಚುಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ನೂರಾರು ವರ್ಷಗಳಿಂದ ಇಲ್ಲಿನ ಪರಂಪರೆ ಮುಂದುವರೆದಿದೆ. ಯಾರೇ ಆಗಲಿ, ಅದನ್ನು ಹಾಳು ಮಾಡಲು ಹೊರಟಿರುವುದು ಸರಿಯಲ್ಲ” ಎಂದು ಡಿಸಿಎಂ ಹೇಳಿದರು.
ಅವರು ಮತ್ತಷ್ಟು ವಿವರಿಸಿ, “ಬುರಡೆ ರಹಸ್ಯ ಖಾಲಿ ಟ್ರಂಕ್ ಮಾತ್ರ, ಬರೀ ಸದ್ದು. ಸುಳ್ಳು ಆರೋಪ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿದ್ದೇವೆ. ಸಿಎಂ ಕೂಡ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಯಾವುದೇ ಧರ್ಮದ ಭಾವನೆಗೆ ಧಕ್ಕೆ ಬಾರದು. ತಪ್ಪು ಮಾಡಿದವರು ಶಿಕ್ಷೆಗೆ ಒಳಗಾಗಬೇಕು. ಏನು ಇಲ್ಲದೇ ವಿಷಯವನ್ನು ಸದ್ದು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.
ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯಲ್ಲಿ, ಪ್ರಕರಣ ಕೋರ್ಟ್ನಲ್ಲಿರುವುದರಿಂದ ತನಿಖೆ ಪ್ರೊಫೆಷನಲ್ ರೀತಿಯಲ್ಲಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. “ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಲವು ವ್ಯಾಖ್ಯಾನಗಳು ಬರುತ್ತಿವೆ. ಆದರೆ ಧರ್ಮಸ್ಥಳವಾಗಲಿ, ಬೇರೆ ಕ್ಷೇತ್ರವಾಗಲಿ, ಗೌರವಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ನ್ಯಾಯ ಮತ್ತು ಧರ್ಮದ ವಿಷಯದಲ್ಲಿ ಪಕ್ಷ ಹಾಗೂ ಸರ್ಕಾರ ಸರಿಸಮಾನವಾಗಿದೆ” ಎಂದು ಹೇಳಿದರು.