ಬೆಂಗಳೂರು
“ಕೋಳಿ, ಚಿನ್ನ ಕೇಳಬೇಡಿ” – ಅಧಿಕಾರಿಗಳಿಗೆ ಡಿಕೆಶಿ ಸೂಚನೆ
ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವ ನಡುವೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಸಮೀಕ್ಷೆಗೆ ಬಂದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಒತ್ತಡವಿಲ್ಲ, ಇಷ್ಟವಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.
ಇಂದು ಖಾಸಗಿ ಕಾರ್ಯಕ್ಕಾಗಿ ದೆಹಲಿಗೆ ತೆರಳುತ್ತಿದ್ದ ಡಿಕೆಶಿ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಜಾತಿಗಣತಿಯನ್ನ ನಾವು ಮಾಡಿಸುತ್ತಿಲ್ಲ. ಇದು ನ್ಯಾಯಾಲಯದ ಆದೇಶದಂತೆ ನಡೆಯುತ್ತಿದೆ. ಯಾರಿಗೂ ತೊಂದರೆ ಆಗದಂತೆ ನಾವು ಸೂಚನೆ ನೀಡಿದ್ದೇವೆ” ಎಂದು ತಿಳಿಸಿದರು.
“ಸಮೀಕ್ಷಾಧಿಕಾರಿಗಳು ಕೋಳಿ, ಕುರಿ, ಚಿನ್ನ, ಬೆಳ್ಳಿ, ವಾಚ್, ಫ್ರಿಜ್ ಇತ್ಯಾದಿ ಕುರಿತು ಕೇಳಬಾರದು” ಎಂಬ ಸಲಹೆಯನ್ನು ಅಧಿಕಾರಿಗಳಿಗೆ ಈಗಾಗಲೇ ನೀಡಿದ್ದಾಗಿ ಅವರು ಹೇಳಿದರು. “ಇದು ಖಾಸಗಿ ವಿಚಾರ. ಇಂಥ ಪ್ರಶ್ನೆಗಳಿಂದ ಜನರು ಮುಜುಗರಕ್ಕೆ ಒಳಗಾಗಬಾರದು” ಎಂದು ಹೇಳಿದರು.
ಜಾತಿಗಣತಿಯ ಅಗತ್ಯತೆ ಕುರಿತು ಮಾತನಾಡಿದ ಅವರು, “ನಾವು ಹೊಸದಾಗಿ ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ಯಾರಿಗೂ ಹಾನಿ ಆಗಲ್ಲ. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ. ಇದು ಸಮಾಜದ ಸಮೃದ್ಧಿಗಾಗಿ ಬೇಕಾದ ಮಾಹಿತಿ ಸಂಗ್ರಹ” ಎಂದು ಮನವಿ ಮಾಡಿದರು.