‘ಹೊರೆ ಆದ್ರೂ ಗ್ಯಾರಂಟಿ ಈಡೇರಿಸಬೇಕು’ – ಡಿಕೆ ಶಿವಕುಮಾರ್ ಹೇಳಿಕೆಗೆ ಡಿಕೆ ಸುರೇಶ್ ತಿರುಗೇಟು | Hosa Suddi

ದೇಶ

‘ಹೊರೆ ಆದ್ರೂ ಗ್ಯಾರಂಟಿ ಈಡೇರಿಸಬೇಕು’ – ಡಿಕೆ ಶಿವಕುಮಾರ್ ಹೇಳಿಕೆಗೆ ಡಿಕೆ ಸುರೇಶ್ ತಿರುಗೇಟು

Published

on

ಬೆಂಗಳೂರು: ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಈಡೇರಿಸಲೇಬೇಕು. ಹೊರೆ ಆಗುತ್ತದೆ ಎಂಬ ಕಾರಣ ನೀಡಿ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಸ್ಪಷ್ಟವಾಗಿ ಹೇಳಿದ್ದಾರೆ.

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಈ ಪ್ರತಿಕ್ರಿಯೆ ನೀಡಿದ್ದಾರೆ.


‘ಗ್ಯಾರಂಟಿ ನಮ್ಮ ವಾಗ್ದಾನ’

“ಗ್ಯಾರಂಟಿಗಳು ನಮ್ಮ ವಾಗ್ದಾನ. ಕರ್ನಾಟಕದ ಜನರಿಗೆ ಕೊಟ್ಟ ಮಾತು. ಅದನ್ನು ಯಾವುದೇ ಕಾರಣಕ್ಕೂ ಈಡೇರಿಸಬೇಕು. ಯಾರು ಚುನಾವಣೆಯನ್ನು ಎದುರಿಸಿದ್ದಾರೋ ಅವರೆಲ್ಲ ಜನರಿಗೆ ನಂಬಿಕೆ ಕೊಟ್ಟಿದ್ದಾರೆ. ಹೊರೆಯಾದ್ರೂ ಆಗಲಿ, ಏನಾದ್ರೂ ಆಗಲಿ, ಕೊಟ್ಟ ಮಾತನ್ನು ಈಡೇರಿಸಲೇಬೇಕು” ಎಂದು ಡಿಕೆ ಸುರೇಶ್ ಹೇಳಿದರು.


‘ಮಾತು ಕೊಡುವ ಮುನ್ನ ಯೋಚನೆ ಬೇಕಿತ್ತು’

ಹೊರೆ ಆಗುತ್ತದೆ ಎನ್ನುವುದಾದರೆ ಗ್ಯಾರಂಟಿ ಬಗ್ಗೆ ಮಾತನಾಡುವ ಮುನ್ನ, ಜನರಿಗೆ ಮಾತು ಕೊಡುವುದಕ್ಕಿಂತ ಮೊದಲು ಯೋಚನೆ ಮಾಡಬೇಕಾಗಿತ್ತು ಎಂದು ಅವರು ಹೇಳಿದರು.
“ಈಗ ಮಾತು ಕೊಟ್ಟಾಗಿದೆ. ಐದು ವರ್ಷಗಳ ಕಾಲ ಏನೇ ಕಷ್ಟ ಬಂದರೂ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಬೇಕು” ಎಂದು ಅವರು ಒತ್ತಾಯಿಸಿದರು.


‘ಸಿರಿವಂತರಿಗೆ ಗ್ಯಾರಂಟಿ ಸಿಗಬಾರದು’

ಗ್ಯಾರಂಟಿ ಯೋಜನೆಗಳ ದುರುಪಯೋಗದ ಕುರಿತು ಮಾತನಾಡಿದ ಡಿಕೆ ಸುರೇಶ್,
“ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿರುವುದು ತಪ್ಪು. ಈ ಯೋಜನೆಗಳು ಯಾರು ಅಸಹಾಯಕರು, ಜೀವನ ನಡೆಸಲು ಕಷ್ಟಪಡುತ್ತಿರುವವರು, ಬದುಕಿನಲ್ಲಿ ಹೋರಾಟ ಮಾಡುತ್ತಿರುವವರಿಗಾಗಿ ರೂಪಿಸಲಾಗಿದೆ” ಎಂದು ಹೇಳಿದರು.


ಶಾಸಕರ ಅಸಮಾಧಾನ ಅವರದ್ದೇ ಸಮಸ್ಯೆ

ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ಸಮಸ್ಯೆ ಆಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
“ಅದು ಶಾಸಕರಿಗೆ ಸಂಬಂಧಿಸಿದ ವಿಷಯ. ಅವರ ಸಮಸ್ಯೆಗಳನ್ನು ಅವರನ್ನೇ ಕೇಳಬೇಕು. ಆದರೆ ಗ್ಯಾರಂಟಿಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

Trending

Exit mobile version