“ರಾಜಕೀಯ ಪ್ರೇರಿತ ದಾಳಿ” – ED ರೇಡ್ ನಡುವೆ I-PAC ಕಚೇರಿಗೆ ನುಗ್ಗಿದ ಮಮತಾ |

ದೇಶ

“ರಾಜಕೀಯ ಪ್ರೇರಿತ ದಾಳಿ” – ED ರೇಡ್ ನಡುವೆ I-PAC ಕಚೇರಿಗೆ ನುಗ್ಗಿದ ಮಮತಾ

Published

on

ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ತಾಪಮಾನ ಏರಿಕೆಯಾಗಿದ್ದು, ಜಾರಿ ನಿರ್ದೇಶನಾಲಯ (ED) ಇಂದು ಕೋಲ್ಕತ್ತಾದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ನಗರದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (I-PAC) ಕಚೇರಿ, ಅದರ ಹಿರಿಯ ಅಧಿಕಾರಿ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಕನಿಷ್ಠ ಐದು ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿದೆ.

ಇಡಿ ದಾಳಿ ನಡೆಯುತ್ತಿರುವ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ, ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ I-PAC ಕಚೇರಿಗೆ ಭೇಟಿ ನೀಡಿದ್ದು, ಪ್ರಮುಖ ದಾಖಲೆಗಳಿರುವ ಹಸಿರು ಬಣ್ಣದ ಕಡತವೊಂದನ್ನು ಕೈಯಲ್ಲಿ ಹಿಡಿದು ಹೊರಡುವ ದೃಶ್ಯಗಳು ಫೋಟೋ ಹಾಗೂ ವಿಡಿಯೋ ರೂಪದಲ್ಲಿ ವೈರಲ್ ಆಗಿವೆ.

ಇದಕ್ಕೂ ಮೊದಲು ಇಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಇದು ಉದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತ ದಾಳಿ. ಬಿಜೆಪಿ ಪ್ರಜಾಸತ್ತಾತ್ಮಕವಾಗಿ ಎದುರಿಸಲು ಸಾಧ್ಯವಾಗದೆ, ಇಡಿ ಯನ್ನೇ ಅಸ್ತ್ರವಾಗಿ ಬಳಸುತ್ತಿದೆ” ಎಂದು ಕಿಡಿಕಾರಿದರು. ಪಕ್ಷದ ದಾಖಲೆಗಳು, ಚುನಾವಣಾ ಕಾರ್ಯತಂತ್ರಗಳು, ಅಭ್ಯರ್ಥಿಗಳ ಮಾಹಿತಿ ಹಾಗೂ ನಿರ್ಣಾಯಕ ಕಡತಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಈ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

“ಇದು ಸರ್ವಾಧಿಕಾರಿ ಗೃಹ ಸಚಿವರ ಸೂಚನೆಯಂತೆ ಇಡಿ ಮೂಲಕ ರೂಪಿಸಿದ ದೊಡ್ಡ ಪಿತೂರಿ. ಈ ಪಿತೂರಿಯನ್ನು ನಾವು ಪ್ರತಿಯೊಂದು ಹಂತದಲ್ಲೂ ಎದುರಿಸುತ್ತೇವೆ” ಎಂದು ಮಮತಾ ಎಚ್ಚರಿಸಿದರು. ಚುನಾವಣೆ ಸಮೀಪದಲ್ಲಿರುವ ಕಾರಣ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಉದ್ದೇಶದಿಂದಲೇ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನಡೆದ ಈ ಇಡಿ ದಾಳಿ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಹೋರಾಟ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ.

Trending

Exit mobile version