ನಾದಬ್ರಹ್ಮ ಹಂಸಲೇಖಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ |

ದೇಶ

ನಾದಬ್ರಹ್ಮ ಹಂಸಲೇಖಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ

Published

on

ಬೆಂಗಳೂರು:
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ಸಂಗೀತ ನಿರ್ದೇಶಕ ಹಾಗೂ ‘ನಾದಬ್ರಹ್ಮ’ ಎಂದೇ ಪ್ರಸಿದ್ಧರಾಗಿರುವ ಡಾ. ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (BIFFES) ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಫೆಬ್ರವರಿ 6ರಂದು ನಡೆಯಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. ಕಳೆದ ಒಂದು ವಾರದಿಂದ ಸಿನಿರಸಿಕರ ಮೆಚ್ಚುಗೆ ಪಡೆದ ಈ ಚಿತ್ರೋತ್ಸವದ ಅಂತಿಮ ಸಮಾರಂಭ ಲುಲು ಮಾಲ್‌ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ.

ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ ಹಾಗೂ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಚಿತ್ರೋತ್ಸವ ಸಮಿತಿ ತಿಳಿಸಿದೆ.

1987ರಲ್ಲಿ ರವಿಚಂದ್ರನ್ ಅಭಿನಯದ ‘ಪ್ರೇಮಲೋಕ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ಹಂಸಲೇಖ, ಕನ್ನಡ ಚಿತ್ರಸಂಗೀತಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಸಾಧಕರಾಗಿದ್ದಾರೆ. ಪಾಶ್ಚಾತ್ಯ ಸಂಗೀತ ಶೈಲಿಗೆ ಕನ್ನಡದ ದೇಸಿ ಸೊಗಡನ್ನು ಬೆರೆಸಿ, 80 ಮತ್ತು 90ರ ದಶಕಗಳಲ್ಲಿ ಸಂಗೀತ ಲೋಕದಲ್ಲೇ ಕ್ರಾಂತಿ ತಂದವರು.

ಸ್ವತಃ ಸಾಹಿತ್ಯ ಬರೆದು ಅದಕ್ಕೆ ರಾಗ ಸಂಯೋಜಿಸುವ ಅಪರೂಪದ ಶೈಲಿ ಅವರ ವಿಶೇಷತೆ. ‘ರಣಧೀರ’, ‘ಅಂಜದ ಗಂಡು’, ‘ರಾಮಾಚಾರಿ’, ‘ಓಂ’, ‘ಮುತ್ತಿನ ಹಾರ’ ಸೇರಿದಂತೆ ನೂರಾರು ಚಿತ್ರಗಳಿಗೆ ಅವರು ಸಂಗೀತ ನೀಡಿದ್ದು, ಅವುಗಳ ಹಾಡುಗಳು ಇಂದಿಗೂ ಜನಮನದಲ್ಲಿ ಅಜರಾಮರವಾಗಿವೆ.

ವಾಣಿಜ್ಯ ಚಿತ್ರಗಳಷ್ಟೇ ಅಲ್ಲದೆ, ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ಸಂಗೀತಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿರುವ ಹಂಸಲೇಖ ಅವರ ಸಾಧನೆ ವೈವಿಧ್ಯಮಯವಾಗಿದೆ. ಜೊತೆಗೆ ‘ಹಂಸಲೇಖ ದೇಶಿ ವಿದ್ಯಾ ಸಂಸ್ಥೆ’ ಮೂಲಕ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಉಚಿತ ಸಂಗೀತ ತರಬೇತಿ ನೀಡುತ್ತಾ ಸಮಾಜಮುಖಿ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಆರು ಬಾರಿ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾದ ಹಂಸಲೇಖ ಅವರಿಗೆ ದೊರಕಿರುವ ಈ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ, ಅವರ ದಶಕಗಳ ಅಪಾರ ಕೊಡುಗೆಗೆ ಸಿಕ್ಕ ಅತ್ಯುನ್ನತ ಗೌರವವಾಗಿದೆ.

Trending

Exit mobile version