ಭಕ್ತನ ಪ್ರಾಮಾಣಿಕತೆಗೆ ಮೆಚ್ಚುಗೆ: ದೇವಾಲಯ ಮಂಡಳಿಯ ಶ್ಲಾಘನೆ | Hosa Suddi

ರಾಜ್ಯ

ಭಕ್ತನ ಪ್ರಾಮಾಣಿಕತೆಗೆ ಮೆಚ್ಚುಗೆ: ದೇವಾಲಯ ಮಂಡಳಿಯ ಶ್ಲಾಘನೆ

Published

on

ಹಾಸನ: ರಾಜ್ಯದ ಪ್ರಸಿದ್ಧ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವ ಇಂದು (ಅಕ್ಟೋಬರ್ 22) ಅಂತ್ಯಗೊಳ್ಳುತ್ತಿದ್ದು, ಅಮ್ಮನ ದರ್ಶನಕ್ಕೆ ಕೊನೆಯ ದಿನವಾಗಿರುವುದರಿಂದ ಭಕ್ತರ ದಂಡು ಹಾಸನಕ್ಕೆ ಹರಿದುಬಂದಿದೆ. ಅಕ್ಟೋಬರ್ 10ರಿಂದ ಪ್ರಾರಂಭವಾದ ದರ್ಶನಾವಕಾಶದಲ್ಲಿ ಅಕ್ಟೋಬರ್ 20ರವರೆಗೆ 24 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದು, ಇದು ಇತಿಹಾಸದಲ್ಲೇ ಅತಿ ಹೆಚ್ಚು ಭಕ್ತರು ಭೇಟಿ ನೀಡಿದ ದಾಖಲೆ ಆಗಿದೆ.

ಇಂದು ಬೆಳಗ್ಗೆ 5 ಗಂಟೆಯಿಂದ ದರ್ಶನ ಪ್ರಾರಂಭವಾಗಿದ್ದು, ಸಂಜೆ 7ರವರೆಗೆ ಭಕ್ತರಿಗೆ ಅವಕಾಶವಿದೆ. ಸಂಜೆ 7 ನಂತರ ಸಾರ್ವಜನಿಕ ದರ್ಶನ ಮುಕ್ತಾಯಗೊಳ್ಳಲಿದೆ. ಗುರುವಾರ ಪೂಜಾ ವಿಧಿವಿಧಾನಗಳ ನಂತರ ಗರ್ಭಗುಡಿಯ ಬಾಗಿಲು ಮುಚ್ಚುವ ಮೂಲಕ ಹಾಸನಾಂಬೆ ಉತ್ಸವಕ್ಕೆ ತೆರೆ ಬೀಳಲಿದೆ. ಕಳೆದ ವರ್ಷ 17.46 ಲಕ್ಷ ಭಕ್ತರು ದರ್ಶನ ಪಡೆದಿದ್ದರೆ, ಈ ವರ್ಷ ದಾಖಲೆ ಬರೆದಿದ್ದಾರೆ.

ಈ ಮಧ್ಯೆ ಹಾಸನಾಂಬೆ ದೇವಾಲಯದಲ್ಲಿ ಸಂಭವಿಸಿದ ಮಾನವೀಯ ಘಟನೆ ಎಲ್ಲರ ಮನ ಗೆದ್ದಿದೆ. ಮೈಸೂರಿನಿಂದ ಬಂದ ಮಹಿಳೆಯೊಬ್ಬರು ದೇವಿ ದರ್ಶನ ಸಮಯದಲ್ಲಿ ಸುಮಾರು ₹4 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಆದರೆ ಮತ್ತೊಬ್ಬ ಭಕ್ತರಿಗೆ ಆ ಸರ ಸಿಕ್ಕಿದ್ದು, ಅವರು ಅದನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಅಧಿಕಾರಿಗಳು ಗುರುತಿನ ಚೀಟಿಗಳ ಪರಿಶೀಲನೆಯ ನಂತರ ಮಾಂಗಲ್ಯ ಸರವನ್ನು ಮೂಲ ಮಾಲಕಿಗೆ ಹಿಂತಿರುಗಿಸಿದರು.

ತಮ್ಮ ಕಳೆದುಹೋದ ಸರವನ್ನು ಮರಳಿ ಪಡೆದ ಮಹಿಳೆ ಸಂತೋಷ ವ್ಯಕ್ತಪಡಿಸಿದ್ದು, ಪ್ರಾಮಾಣಿಕ ಭಕ್ತನ ಕಾರ್ಯದ ಮೆಚ್ಚುಗೆ ವ್ಯಕ್ತವಾಗಿದೆ. ಹಾಸನಾಂಬೆ ದೇವಾಲಯದ ಆಡಳಿತ ಮಂಡಳಿ ಈ ಕೃತ್ಯವನ್ನು ಶ್ಲಾಘಿಸಿದೆ.

Trending

Exit mobile version