ದೇಶ
ತಿಂಗಳಿಂದ ರೈತರನ್ನು ಬೆಚ್ಚಿಬೀಳಿಸಿದ್ದ ಚಿರತೆ ಕೊನೆಗೂ ಬಲೆಗೆ!
ಹಾವೇರಿ: ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪ ಇರುವ ಜಮೀನಿನಲ್ಲಿ ಬುಧವಾರ ಬೆಳಗ್ಗೆ ಚಿರತೆ ಬಲೆಗೆ ಬಿದ್ದಿದೆ.
ಒಂದೆರಡು ವಾರಗಳಿಂದ ನಿರಂತರವಾಗಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿತ್ತು. ಗ್ರಾಮಸ್ಥರು ಬೆಳಗ್ಗಿನ ಜಾವ ಕೃಷಿ ಕೆಲಸಕ್ಕೆ ಹೋಗಲು ಹೆದರುತ್ತಿದ್ದರು. ಕೆಲವು ದಿನಗಳ ಹಿಂದೆ ತೋಟದ ಮನೆಯ ಸಿಸಿಟಿವಿಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಅರಣ್ಯ ಇಲಾಖೆ ಜಾಗೃತಗೊಂಡಿತ್ತು.
ಚಿರತೆ ಚಲನವಲನಗಳನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಸೂಕ್ತ ಸ್ಥಳದಲ್ಲಿ ಬೋನು ಅಳವಡಿಸಿದ್ದರು. ಕಳೆದ ರಾತ್ರಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಸ್ಥಳಾಂತರಿಸಿದ್ದಾರೆ.
ಚಿರತೆ ಬಂಧಿತವಾಗಿರುವುದರಿಂದ ಸುತ್ತಮುತ್ತಲಿನ ರೈತರು ಹಾಗೂ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.